
ಬೆಂಗಳೂರು ಅಭಿವೃದ್ಧಿಗಾಗಿ ಸಚಿವ ರಾಜನಾಥ್ ಸಿಂಗ್ಗೆ 7 ಬೇಡಿಕೆ ಸಲ್ಲಿಸಿದ ಸಿಎಂ
ಬೆಂಗಳೂರಿನಲ್ಲಿ ರಕ್ಷಣಾ ಇಲಾಖೆಯ ವ್ಯಾಪ್ತಿಗೆ ಬರುವ ಜಮೀನುಗಳು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕೆಲವು ಬೇಡಿಕೆಗಳನ್ನು ಕೇಂದ್ರದ ಮುಂದೆ ಇಡಲಾಗಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆ ಮತ್ತು ನಗರದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ, ಬೆಂಗಳೂರಿನಲ್ಲಿ ರಕ್ಷಣಾ ಇಲಾಖೆಗೆ ಸೇರಿದ ಜಮೀನುಗಳನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಲು ಅಗತ್ಯವಿರುವ ಅನುಮತಿ ಮತ್ತು ಸಹಕಾರ ಕೋರಿದ್ದಾರೆ. ಬೆಂಗಳೂರಿನಲ್ಲಿ ರಕ್ಷಣಾ ಇಲಾಖೆಯ ವ್ಯಾಪ್ತಿಗೆ ಬರುವ ಅತೀ ದೊಡ್ಡ ಜಮೀನುಗಳು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿವೆ ಎಂಬ ದೀರ್ಘಕಾಲದ ದೂರುಗಳ ಹಿನ್ನೆಲೆಯಲ್ಲಿ, ಶಿವಕುಮಾರ್ ಅವರು ಏಳು ಪ್ರಮುಖ ಯೋಜನೆಗಳ ಪಟ್ಟಿಯನ್ನು ಸಚಿವರ ಮುಂದಿಟ್ಟಿದ್ದಾರೆ.
ಇಬ್ಬಲೂರು ಫೈರಿಂಗ್ ರೇಂಜ್ನಲ್ಲಿ ಉದ್ಯಾನವನ
ನಗರದ ಹೃದಯಭಾಗದಲ್ಲಿರುವ ಇಬ್ಬಲೂರು ಫೈರಿಂಗ್ ರೇಂಜ್ ಬಳಿ ರಕ್ಷಣಾ ಇಲಾಖೆಗೆ ಸೇರಿದ ಸುಮಾರು 730 ಎಕರೆ ಜಮೀನು ಪ್ರಸ್ತುತ ಬಳಕೆಯಾಗದೆ ಖಾಲಿ ಇದೆ. ಇದನ್ನೇ ಉದ್ಯಾನವನ ಅಥವಾ ಹಸಿರು ವಲಯವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. "ನಾವು ಈ ಜಮೀನಿನ ಮಾಲಿಕತ್ವ ಕೇಳುತ್ತಿಲ್ಲ, ವಾರಣಾಸಿಯಲ್ಲಿ ಆರ್.ಬಿ.ಐ. ತನ್ನ ಜಾಗವನ್ನು ಹೇಗೆ ಸಾರ್ವಜನಿಕ ಉದ್ಯಾನವನಕ್ಕೆ ನೀಡಿದೆಯೋ, ಅದೇ ಮಾದರಿಯಲ್ಲಿ ಬೆಂಗಳೂರಿನ ಜನರಿಗಾಗಿ ಬಳಸಲು ಅವಕಾಶ ನೀಡಬೇಕು" ಎಂದು ಶಿವಕುಮಾರ್ ಕೋರಿದ್ದಾರೆ.
ಕೊಳಚೆ ಪ್ರದೇಶಗಳ ಪುನರಾಭಿವೃದ್ಧಿ
ಬೆಂಗಳೂರಿನ ವಿವಿಧ ಭಾಗಗಳಲ್ಲಿರುವ ರಕ್ಷಣಾ ಇಲಾಖೆಯ ಭೂಮಿಯಲ್ಲಿ ಸುಮಾರು 43 ಎಕರೆ ವಿಸ್ತೀರ್ಣದ 10 ಅಧಿಸೂಚಿತ ಕೊಳಚೆ ಪ್ರದೇಶಗಳಿವೆ. ಇಲ್ಲಿನ ನಿವಾಸಿಗಳ ಜೀವನ ಸುಧಾರಿಸಲು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಸಮಾನ ವಿಸ್ತೀರ್ಣದ ಪರ್ಯಾಯ ಜಮೀನು ನೀಡಲು ರಾಜ್ಯ ಸರ್ಕಾರ ಸಿದ್ಧವಿದ್ದು, ಮಿಲಿಟರಿ ಅಧಿಕಾರಿಗಳೊಂದಿಗೆ ಜಂಟಿಯಾಗಿ ಸೂಕ್ತ ಜಾಗ ಗುರುತಿಸಲು ಪಟ್ಟಿ ಹಂಚಿಕೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಸುತ್ತ ಕಟ್ಟಡ ನಿರ್ಮಾಣ ನಿಯಮ ಸಡಿಲಿಕೆ
ಎಚ್ಎಎಲ್ ಮತ್ತು ಯಲಹಂಕ ವಾಯುನೆಲೆಗಳ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿರುವ ನಿರ್ಬಂಧಗಳು ಬೆಂಗಳೂರಿನ ಅಭಿವೃದ್ಧಿಗೆ ಮಾರಕವಾಗಿವೆ. ಜಾಗತಿಕ ಟೆಕ್ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಈ ನಿಯಮಗಳಿಂದಾಗಿ ಕಟ್ಟಡ ನಿರ್ಮಾಣಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಎನ್ಒಸಿ ನಿಯಮವನ್ನು 20 ಕಿ.ಮೀ ನಿಂದ 15 ಕಿ.ಮೀ ಗೆ ಸೀಮಿತಗೊಳಿಸಬೇಕು ಮತ್ತು ಹೆಲಿಕಾಪ್ಟರ್ ಪರೀಕ್ಷಾ ಚಟುವಟಿಕೆಗಳನ್ನು ತುಮಕೂರಿಗೆ ಸ್ಥಳಾಂತರಿಸುವ ಮೂಲಕ ನಗರದ ಮಧ್ಯಭಾಗದಲ್ಲಿರುವ ವಾಯುನೆಲೆಯ ಮೇಲಿನ ಒತ್ತಡ ಕಡಿಮೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಅಗರ-ಸರ್ಜಾಪುರ ರಸ್ತೆ ವಿಸ್ತರಣೆ
ಬೆಳ್ಳಂದೂರು ಕೆರೆಯ ಪಕ್ಕದ ರಸ್ತೆಯನ್ನು ವಿಸ್ತರಿಸುವ ಮೂಲಕ ಹೊರ ವರ್ತುಲ ರಸ್ತೆಯ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವುದು ಈ ಯೋಜನೆಯ ಗುರಿಯಾಗಿದೆ. 13.709 ಎಕರೆ ರಕ್ಷಣಾ ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ಪೂರ್ಣಗೊಂಡಿದ್ದು, ಈ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಸಿಎಂ ಒತ್ತಾಯಿಸಿದ್ದಾರೆ.
ಅವಳಿ ಸುರಂಗ ಯೋಜನೆ
ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗೆ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಭೂಗತ ಸುರಂಗ ಮಾರ್ಗಕ್ಕೆ ಮೇಕ್ರಿ ಸರ್ಕಲ್ ಭಾಗದಲ್ಲಿ ರಕ್ಷಣಾ ಇಲಾಖೆಯ 2.039 ಎಕರೆ ಜಮೀನು ಅಗತ್ಯವಿದೆ. ಆದರೆ, ಇದಕ್ಕೆ ರಕ್ಷಣಾ ಇಲಾಖೆ ವಿಧಿಸಿರುವ 60.72 ಕೋಟಿ ರೂ.ಗಳ ಲೈಸೆನ್ಸ್ ಶುಲ್ಕ ಅತ್ಯಂತ ದುಬಾರಿಯಾಗಿದ್ದು, ಅದನ್ನು ಜಮೀನಿನ ಮೌಲ್ಯದ ಶೇ. 2ಕ್ಕೆ ಇಳಿಸಬೇಕೆಂದು ಕೋರಿದ್ದಾರೆ.
ಲಿಂಕ್ ರಸ್ತೆ ನಿರ್ಮಾಣ
ಬಳ್ಳಾರಿ ರಸ್ತೆಯಿಂದ ಸರೋವರ ಲೇಔಟ್ಗೆ ನೇರ ಸಂಪರ್ಕ ಕಲ್ಪಿಸುವ 18 ಮೀಟರ್ ಅಗಲದ ರಸ್ತೆಗೆ 6.837 ಎಕರೆ ಜಮೀನು ಅಗತ್ಯವಿದೆ. ಇದು ಉತ್ತರ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ರಕ್ಷಣಾ ಪೋರ್ಟಲ್ ಮೂಲಕ ಈಗಾಗಲೇ ಸಲ್ಲಿಸಿರುವ ಅರ್ಜಿಗೆ ಅನುಮೋದನೆ ಕೋರಲಾಗಿದೆ.
ಮೇಕ್ರಿ ಸರ್ಕಲ್ ರಸ್ತೆ ಅಗಲೀಕರಣ
ಬಳ್ಳಾರಿ ರಸ್ತೆಯ ಮೇಕ್ರಿ ಸರ್ಕಲ್ನಲ್ಲಿ ಸಂಚಾರ ದಟ್ಟಣೆ ನಗರದ ಅತ್ಯಂತ ಪ್ರಮುಖ ಸಮಸ್ಯೆಯಾಗಿದೆ. ಇಲ್ಲಿ ದ್ವಿಪಥದ ರಸ್ತೆಯನ್ನು ಮೂರು ಪಥದ ರಸ್ತೆಯಾಗಿ ಬದಲಾಯಿಸಲು 0.775 ಎಕರೆ ಜಮೀನು ಅಗತ್ಯವಿದ್ದು, ರಕ್ಷಣಾ ಇಲಾಖೆ ಇದಕ್ಕೆ ಸಹಕಾರ ನೀಡಬೇಕೆಂದು ಸಿಎಂ ಕೋರಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಖ್ಯಮಂತ್ರಿ ಶಿವಕುಮಾರ್ ಅವರ ಪ್ರಸ್ತಾವನೆಗಳನ್ನು ಆಲಿಸಿದ್ದು, ಬೆಂಗಳೂರಿನ ಅಭಿವೃದ್ಧಿ ಮತ್ತು ರಕ್ಷಣಾ ಇಲಾಖೆಯ ನಿಯಮಗಳ ನಡುವಿನ ಸಮತೋಲನ ಕಾಯ್ದುಕೊಳ್ಳುವ ಭರವಸೆ ನೀಡಿದ್ದಾರೆ. ಈ ಯೋಜನೆಗಳು ಸಾಕಾರಗೊಂಡರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತು ಮೂಲಸೌಕರ್ಯದ ಕೊರತೆಗೆ ದೊಡ್ಡ ಪರಿಹಾರ ಸಿಗಲಿದೆ. ಈ ಭೇಟಿಯು ರಾಜ್ಯ ಮತ್ತು ಕೇಂದ್ರದ ನಡುವಿನ ಸೌಹಾರ್ದಯುತ ಸಂಬಂಧಕ್ಕೆ ಸಾಕ್ಷಿಯಾಗಿದ್ದು, ರಕ್ಷಣಾ ಇಲಾಖೆಯ ಜಾಗಗಳನ್ನು ರಾಷ್ಟ್ರೀಯ ಹಿತಾಸಕ್ತಿ ಹಾಗೂ ನಗರದ ಅಭಿವೃದ್ಧಿಗಾಗಿ ಸಮರ್ಥವಾಗಿ ಬಳಸಿಕೊಳ್ಳುವ ಆಶಾಭಾವನೆಯನ್ನು ಡಿ.ಕೆ. ಶಿವಕುಮಾರ್ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ನಗರವಾಗಿದ್ದು, ಇದಕ್ಕೆ ಅಗತ್ಯವಿರುವ ರಕ್ಷಣಾ ಇಲಾಖೆಯ ಸಹಕಾರ ಅತ್ಯಗತ್ಯವಾಗಿದೆ.

