
ಪೊಲೀಸ್ ಸಿಬ್ಬಂದಿಗೆ ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಸಮ್ಮತಿ
ರಾಜ್ಯದ ಪೊಲೀಸರ ಆರ್ಥಿಕ ಸ್ಥಿತಿಗತಿ ಸುಧಾರಣೆ ಮತ್ತು ವೃತ್ತಿಪರ ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ನಾಡಿನ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಸಿಬ್ಬಂದಿಯ ಸಂಕಷ್ಟ ಭತ್ಯೆಯನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮಾದರಿಯಲ್ಲಿ ಶೇ.50ರಷ್ಟು ಹೆಚ್ಚಿಸಲು ಸರ್ಕಾರ ಸಮ್ಮತಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೊಲೀಸರ ಆರ್ಥಿಕ ಸ್ಥಿತಿಗತಿ ಸುಧಾರಣೆ ಮತ್ತು ವೃತ್ತಿಪರ ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಪೊಲೀಸ್ ಇಲಾಖೆಯನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಗಡಿಯಲ್ಲಿ ಸೈನಿಕರು ದೇಶ ಕಾಯುತ್ತಿದ್ದರೆ, ಗಡಿಯ ಒಳಗೆ ಆರಕ್ಷಕರು ನಾಡಿನ ಶಾಂತಿ ಕಾಪಾಡುತ್ತಿದ್ದಾರೆ. ಸಜ್ಜನರನ್ನು ರಕ್ಷಿಸುವುದು ಮತ್ತು ದುರ್ಜನರನ್ನು ಶಿಕ್ಷಿಸುವುದು ಧರ್ಮದ ಕೆಲಸ. ಈ ಕಾರ್ಯವನ್ನು ಕರ್ನಾಟಕದ ಪೊಲೀಸರು ಅತ್ಯಂತ ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಪೊಲೀಸರ ಕರ್ತವ್ಯದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ನುಡಿದರು.
ಎನ್‌ಎಸ್‌ಜಿಯಿಂದ ತರಬೇತಿ
ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ರಾಜ್ಯ ಪೊಲೀಸರಿಗೆ ನೀಡುತ್ತಿರುವ ತರಬೇತಿಯನ್ನು ಉಲ್ಲೇಖಿಸಿದ ಅವರು, ಎನ್‌ಎಸ್‌ಜಿ ತರಬೇತಿ ನಮ್ಮ ಪೊಲೀಸರನ್ನು ಹೆಚ್ಚು ಕೌಶಲ್ಯವಂತರನ್ನಾಗಿಸುತ್ತದೆ. ಈ ತರಬೇತಿಯನ್ನು ಸಾರ್ಥಕಗೊಳಿಸಿ, ಜನರ ರಕ್ಷಣೆಗೆ ಬಳಸಿಕೊಳ್ಳಬೇಕು. ಬೆಂಗಳೂರು ಜಾಗತಿಕ ನಗರವಾಗಿ ಬೆಳೆಯುತ್ತಿದ್ದು, ಇಲ್ಲಿನ ಸೈಬರ್ ಅಪರಾಧಗಳು ಮತ್ತು ಭದ್ರತಾ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನದ ಬಳಕೆಯು ಅನಿವಾರ್ಯವಾಗಿದೆ ಎಂದರು.
ಗಗನಚುಂಬಿ ಕಟ್ಟಡಗಳ ಮೇಲೆ ಹೆಲಿಪ್ಯಾಡ್
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಗಗನಚುಂಬಿ ಕಟ್ಟಡಗಳ ಮೇಲೆ ಹೆಲಿಪ್ಯಾಡ್ ನಿರ್ಮಾಣಕ್ಕೆ ಸರ್ಕಾರ ಒತ್ತು ನೀಡಲಿದೆ. ಬೆಂಕಿ ಅನಾಹುತ ಅಥವಾ ಭಯೋತ್ಪಾದಕ ದಾಳಿಯಂತಹ ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣೆಗಾಗಿ ಹೆಲಿಪ್ಯಾಡ್‌ಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಮಿಲಿಟರಿ ಮತ್ತು ವಾಯುಸೇನೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಬಿಲ್ಡರ್‌ಗಳು ಮತ್ತು ಡೆವಲಪರ್‌ಗಳು ಕಾನೂನಿನ ಚೌಕಟ್ಟಿನಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳ ಒದಗಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ರೌಡಿಗಳನ್ನು ನಿಯಂತ್ರಿಸಲು ಪ್ರತ್ಯೇಕ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ರೌಡಿ ನಿಗ್ರಹ ಪಡೆ ರಚಿಸಲಾಗುತ್ತಿದೆ. ಈ ತಂಡ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕೆಲಸ ಮಾಡಲಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಆಧುನೀಕರಣಗೊಳ್ಳುತ್ತಿರುವ ಪೊಲೀಸ್ ಇಲಾಖೆ
ಡಿಜಿಟಲ್ ಅಪರಾಧಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆಯನ್ನು ಆಧುನೀಕರಣಗೊಳಿಸಲಾಗುತ್ತಿದೆ. ವಿಶ್ವದ ಅತ್ಯುತ್ತಮ ಕಂಪನಿಗಳು ಮತ್ತು ವಿದೇಶಿಯರು ನಮ್ಮ ರಾಜ್ಯವನ್ನು ನಂಬಿ ಬಂದಿದ್ದಾರೆ. ಅವರಿಗೆ ರಕ್ಷಣೆ ಒದಗಿಸುವುದು ನಮ್ಮ ಹೊಣೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಇಲಾಖೆಯನ್ನು ತಾಂತ್ರಿಕವಾಗಿ ಸಬಲಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ತಿಳಿಸಿದರು.
ಬೆಂಬಲ ಮತ್ತು ಸೌಲಭ್ಯಗಳ ಭರವಸೆ
35 ವರ್ಷಗಳ ಹಿಂದೆ ಬಂಧಿಖಾನೆ ಸಚಿವನಾಗಿದ್ದಾಗ ಪೊಲೀಸರ ಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ. ಹಗಲು ರಾತ್ರಿ ಎನ್ನದೆ ಅವರು ಮಾಡುವ ಸೇವೆ ಅಪಾರ. ಕೆಲವೊಮ್ಮೆ ರಾಜಕೀಯ ಒತ್ತಡ ಅಥವಾ ಸಂದರ್ಭಗಳಿಂದ ನಿಮ್ಮನ್ನು ದೂಷಿಸುವವರಿದ್ದಾರೆ, ಆದರೆ ನಿಮ್ಮ ನಿಷ್ಠೆ ದೇಶದ ಸಮಗ್ರತೆ ಕಾಪಾಡುವುದರಲ್ಲಿರಲಿ. ನಿಮ್ಮ ಮೇಲಿರುವ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಮತ್ತು ವಸತಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಅಶ್ವಾಸನೆ ನೀಡಿದರು.

