
ಸಾರ್ವಜನಿಕ ಉದ್ಯಮಗಳ ಭೂಮಿ ಹರಾಜು; ರಾಜ್ಯ ಸರ್ಕಾರ ತೀವ್ರ ಆಕ್ಷೇಪ
ರಾಷ್ಟ್ರ ನಿರ್ಮಾಣದ ಉದ್ದೇಶಕ್ಕಾಗಿ ನೀಡಲಾದ ಸಂಪನ್ಮೂಲಗಳನ್ನು ಈ ರೀತಿ ವಿಲೇವಾರಿ ಮಾಡುವುದು ದುರ್ಬಳಕೆಯಾಗಲಿದೆ. ಇಂತಹ ಭೂಮಿಯ ಬಳಕೆ ಅಥವಾ ವಿಲೇವಾರಿ ಕುರಿತು ರಾಜ್ಯ ಸರ್ಕಾರಗಳಿಗೂ ನಿರ್ಧಾರ ಕೈಗೊಳ್ಳುವ ಅವಕಾಶ ಇರಬೇಕು ಎಂದು ಡಿಕೆಶಿ ಒತ್ತಾಯಿಸಿದ್ದಾರೆ.
ಸಾರ್ವಜನಿಕ ಉದ್ಯಮಗಳಿಗೆ ರಾಜ್ಯ ಸರ್ಕಾರ ಮಂಜೂರು ಮಾಡಿರುವ ಭೂಮಿಯನ್ನು ಹರಾಜು ಹಾಕುವ ಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಉದ್ದಿಮೆ ಅಥವಾ ಸಂಸ್ಥೆ ತನ್ನ ಕಾರ್ಯಾಚರಣೆ ನಿಲ್ಲಿಸಿದಾಗ ಅಂತಹ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ಡಿ.ಕೆ. ಶಿವಕುಮಾರ್ ಅವರು ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಒತ್ತಾಯಿಸಿದ್ದಾರೆ.
ರಕ್ಷಣಾ ಭೂಮಿ ಬಳಕೆಗೆ ಸಂಬಂಧಿಸಿದ ವಿಷಯದ ಚರ್ಚೆಯ ವೇಳೆ ಈ ವಿಚಾರ ಪ್ರಸ್ತಾಪಿಸಿದ ಅವರು, ರಾಷ್ಟ್ರ ನಿರ್ಮಾಣದ ಭಾಗವಾಗಿ ರಾಜ್ಯ ಸರ್ಕಾರಗಳು ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು ಹಾಗೂ ಇತರ ಸಂಸ್ಥೆಗಳಿಗೆ ಉಚಿತವಾಗಿ ಭೂಮಿ ಮಂಜೂರು ಮಾಡುತ್ತವೆ. ಆದರೆ, ಆ ಸಂಸ್ಥೆಗಳು ಕಾರ್ಯಾಚರಣೆ ನಿಲ್ಲಿಸಿದ ನಂತರ ಸರ್ಕಾರದ ಅನುಮತಿ ಪಡೆಯದೇ ಮಾರಾಟ ಅಥವಾ ಹರಾಜು ಹಾಕುತ್ತಿವೆ. ಇದು ಸ್ವೀಕಾರಾರ್ಹ ನಡೆಯಲ್ಲ ಎಂದು ಹೇಳಿದ್ದಾರೆ.
"ಇಂದು ಬೆಳಿಗ್ಗೆ ಐಟಿಐ ಸಂಸ್ಥೆಯ ಭೂಮಿಯನ್ನು ಹರಾಜು ಹಾಕುತ್ತಿರುವ ವಿಚಾರ ಅಧಿಕಾರಿಗಳಿಂದ ತಿಳಿದುಬಂದಿತು. ನಾವು ಸಾರ್ವಜನಿಕ ಉದ್ದಿಮೆಗಳಿಗೆ ಉಚಿತವಾಗಿ ಭೂಮಿ ನೀಡುತ್ತೇವೆ. ಆದರೆ, ಅದು ಮುಚ್ಚಿದಾಗ ಅಥವಾ ಕಾರ್ಯಾಚರಣೆ ನಿಲ್ಲಿಸಿದಾಗ ಆ ಭೂಮಿಯನ್ನು ಅವರೇ ಹರಾಜು ಹಾಕಲಾಗುತ್ತದೆ. ನಾವು ಕೊಡುವ ಭೂಮಿಯನ್ನು ನಮಗೇ ವಾಪಸ್ ನೀಡಬೇಕು. ಇಲ್ಲವಾದರೆ, ನ್ಯಾಯಾಲಯಕ್ಕೆ ಹೋಗಿ ಅಂತಹ ಭೂಮಿಯನ್ನು ಹಿಂಪಡೆಯಬೇಕಾಗುತ್ತದೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಇದಲ್ಲದೇ ಆ ಭೂಮಿಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಯಾವುದೇ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಸೂಕ್ತ ರಾಜ್ಯ ಪ್ರಾಧಿಕಾರಗಳ ಅನುಮತಿ ಅಥವಾ ಸಮ್ಮತಿ ಪಡೆಯದೆ ಫಲಾನುಭವಿಗಳು ಭೂಮಿಯನ್ನು ವಿಲೇವಾರಿ ಮಾಡಿರುವ ಹಲವು ಪ್ರಕರಣಗಳಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದೇ ವೇಳೆ ಉಲ್ಲೇಖಿಸಿದ್ದಾರೆ. ರಾಷ್ಟ್ರ ನಿರ್ಮಾಣದ ದೊಡ್ಡ ಉದ್ದೇಶಕ್ಕಾಗಿ ಸಂಸ್ಥೆಗಳಿಗೆ ನೀಡಲಾದ ಸಂಪನ್ಮೂಲಗಳನ್ನು ಈ ರೀತಿಯಲ್ಲಿ ವಿಲೇವಾರಿ ಮಾಡುವುದು ದುರ್ಬಳಕೆಯಾಗಲಿದೆ. ಇಂತಹ ಭೂಮಿಯ ಬಳಕೆ ಅಥವಾ ವಿಲೇವಾರಿ ಕುರಿತು ರಾಜ್ಯ ಸರ್ಕಾರಗಳಿಗೂ ನಿರ್ಧಾರ ಕೈಗೊಳ್ಳುವ ಅವಕಾಶ ಇರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಕಳವಳಕ್ಕೆ ಪ್ರತಿಕ್ರಿಯಿಸಿದ ದಕ್ಷಿಣ ವಲಯ ಮಂಡಳಿ ಸಭೆಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇದು ನೀತಿಗೆ ಸಂಬಂಧಿಸಿದ ವಿಷಯವಾಗಿದ್ದು, ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪಿಸಬೇಕು ಎಂದು ಹೇಳಿದ್ದಾರೆ.

