ಸಿಎಂ ಡಿಕೆ ಶಿವಕುಮಾರ್ ನೂತನ ನಿವಾಸಕ್ಕೆ ‘ಗಂಗಾ’ ಎಂದು ನಾಮಕರಣ
x

160 ವರ್ಷಗಳ ಐತಿಹಾಸಿಕ ಕುಮಾರ ಕೃಪ ಬಂಗಲೆ ಈಗ ಸಿಎಂ ಡಿಕೆ ಶಿವಕುಮಾರ್ ಅವರ ಅಧಿಕೃತ ನಿವಾಸ. ‘ಗಂಗಾ’ ಎಂದು ಮರುನಾಮಕರಣಗೊಂಡ ಕಟ್ಟಡದಲ್ಲಿ ಇಂದು ಗೃಹಪ್ರವೇಶ ನಡೆಯಲಿದೆ.

ಸಿಎಂ ಡಿಕೆ ಶಿವಕುಮಾರ್ ನೂತನ ನಿವಾಸಕ್ಕೆ ‘ಗಂಗಾ’ ಎಂದು ನಾಮಕರಣ

ಲೋಕೋಪಯೋಗಿ ಇಲಾಖೆಯ ವತಿಯಿಂದ ಕಟ್ಟಡದ ದುರಸ್ತಿ ಮತ್ತು ನವೀಕರಣ ಕಾರ್ಯ ಕೈಗೊಳ್ಳಲಾಗಿತ್ತು. ಫ್ಲೋರಿಂಗ್, ವಿದ್ಯುತ್ ವ್ಯವಸ್ಥೆ, ಪೇಂಟಿಂಗ್ ಹಾಗೂ ಕಾರ್ಪೆಟ್‌ಗಳ ದುರಸ್ತಿ ಮಾಡಲಾಗಿದೆ.


Click the Play button to hear this message in audio format

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ಅಧಿಕೃತ ಸರ್ಕಾರಿ ನಿವಾಸಕ್ಕೆ ‘ಗಂಗಾ’ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನ ಐತಿಹಾಸಿಕ ಕುಮಾರ ಕೃಪ ಅತಿಥಿ ಗೃಹವನ್ನು ನವೀಕರಿಸಿ ಮುಖ್ಯಮಂತ್ರಿಗಳ ನಿವಾಸ ಮತ್ತು ಕಚೇರಿಯನ್ನಾಗಿ ಪರಿವರ್ತಿಸಲಾಗಿದ್ದು, ಕಾರ್ತಿಕ ಮಾಸದ ಮೊದಲ ಸೋಮವಾರವಾದ ಇಂದು ಗೃಹಪ್ರವೇಶ ಕಾರ್ಯಕ್ರಮ ನಡೆಯಲಿದೆ.

ಸುಮಾರು 160 ವರ್ಷಗಳಷ್ಟು ಹಳೆಯದಾದ ಕುಮಾರ ಕೃಪ ಬಂಗಲೆಗೆ ‘ಗಂಗಾ’ ಎಂದು ಮರುನಾಮಕರಣ ಮಾಡಲಾಗಿದೆ. ಈಗಾಗಲೇ ಕಟ್ಟಡದ ಮುಂಭಾಗದಲ್ಲಿ ‘ಗಂಗಾ’ ಎಂಬ ನಾಮಫಲಕ ಅಳವಡಿಸಲಾಗಿದೆ. ನಿನ್ನೆ ರಾತ್ರಿ ನವೀಕೃತ ನಿವಾಸದಲ್ಲಿ ಹೋಮ-ಹವನ ಕಾರ್ಯಕ್ರಮಗಳು ನಡೆದಿದ್ದು, ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಗೃಹಪ್ರವೇಶ ನಡೆಯಲಿದೆ.

ಗೃಹಪ್ರವೇಶದ ಹಿನ್ನೆಲೆಯಲ್ಲಿ ನಿವಾಸದ ಸುತ್ತಮುತ್ತ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಕುಟುಂಬಸ್ಥರು ಹಾಗೂ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಗೇಟ್ ಬಳಿಯೇ ಪೊಲೀಸರು ಮಾಧ್ಯಮದವರನ್ನು ತಡೆದಿದ್ದಾರೆ.

160 ವರ್ಷಗಳ ಇತಿಹಾಸ ಹೊಂದಿರುವ ಕುಮಾರ ಕೃಪ

ಕುಮಾರ ಕೃಪ ಬಂಗಲೆಗೆ ಐತಿಹಾಸಿಕ ಹಿನ್ನೆಲೆಯಿದೆ. ಮೈಸೂರು ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ (1883–1901) ಅವರ ಖಾಸಗಿ ನಿವಾಸವಾಗಿದ್ದ ಈ ಕಟ್ಟಡಕ್ಕೆ ಅವರು ಕುಮಾರಸ್ವಾಮಿ ಭಕ್ತರಾಗಿದ್ದ ಕಾರಣ ‘ಕುಮಾರ ಕೃಪ’ ಎಂದು ಹೆಸರಿಟ್ಟಿದ್ದರು ಎನ್ನಲಾಗಿದೆ.

1927ರಲ್ಲಿ ಮಹಾತ್ಮ ಗಾಂಧೀಜಿ ಬೆಂಗಳೂರಿಗೆ ಭೇಟಿ ನೀಡಿದ್ದಾಗ ಇದೇ ಕಟ್ಟಡದಲ್ಲಿ ತಂಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಕೂಡ ಈ ನಿವಾಸದಲ್ಲಿ ವಾಸವಿದ್ದರು. ಇದೀಗ ಈ ಐತಿಹಾಸಿಕ ಕಟ್ಟಡ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ರೂಪಾಂತರಗೊಂಡಿದೆ.

ನವೀಕರಣದ ಬಳಿಕ ಸಿಎಂ ನಿವಾಸವಾಗಿ ಪರಿವರ್ತನೆ

ಲೋಕೋಪಯೋಗಿ ಇಲಾಖೆಯ ವತಿಯಿಂದ ಕಟ್ಟಡದ ದುರಸ್ತಿ ಮತ್ತು ನವೀಕರಣ ಕಾರ್ಯ ಕೈಗೊಳ್ಳಲಾಗಿತ್ತು. ಫ್ಲೋರಿಂಗ್, ವಿದ್ಯುತ್ ವ್ಯವಸ್ಥೆ, ಪೇಂಟಿಂಗ್ ಹಾಗೂ ಕಾರ್ಪೆಟ್‌ಗಳ ದುರಸ್ತಿ ಮಾಡಲಾಗಿದೆ. ಬಂಗಲೆಯ ಪೂರ್ವಾಭಿಮುಖವಾಗಿ ಹೊಸ ದ್ವಾರವನ್ನೂ ನಿರ್ಮಿಸಲಾಗಿದೆ.

ಈ ಕಟ್ಟಡದಲ್ಲಿ ಒಟ್ಟು 12 ಕೊಠಡಿಗಳು, ದೊಡ್ಡ ಹಾಲ್ ಹಾಗೂ ಅಡುಗೆಮನೆ ಇದೆ. ಇತ್ತೀಚಿನವರೆಗೂ ಈ ನಿವಾಸದಲ್ಲಿದ್ದ ಉಪಸಭಾಪತಿ ರುದ್ರಪ್ಪ ಲಮಾಣಿ, ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಕೆಕೆ ಗೆಸ್ಟ್ ಹೌಸ್‌ನ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದರು. ನವೀಕರಣ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಗಂಗಾ’ ನಿವಾಸಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ.

Read More
Next Story