ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ: ವಿದ್ಯುತ್ ಖಾಸಗೀಕರಣ ಕುರಿತು ಸಿಎಂ ಸ್ಪಷ್ಟನೆ
x

ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ: ವಿದ್ಯುತ್ ಖಾಸಗೀಕರಣ ಕುರಿತು ಸಿಎಂ ಸ್ಪಷ್ಟನೆ

ವಿದ್ಯುತ್ ನಿಗಮಗಳ ಖಾಸಗೀಕರಣದ ಪ್ರಸ್ತಾಪ ಹುಟ್ಟಿಕೊಂಡಿದ್ದು 2003ರಲ್ಲಿ. ಆ ಸಂದರ್ಭದಲ್ಲಿ ಕಾನೂನು ತಂದಿದ್ದು ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.


Click the Play button to hear this message in audio format

ರಾಜ್ಯದ ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡಬಾರದು ಎಂಬುದು ನೌಕರರ ಒಕ್ಕೂಟದ ಪ್ರಮುಖ ಬೇಡಿಕೆಯಾಗಿದ್ದು, ಈ ವಿಚಾರದಲ್ಲಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಿ, ನೌಕರರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್‌) ನೌಕರರ ಸಂಘ ಹಾಗೂ ಅಸೋಸಿಯೇಷನ್ ಒಕ್ಕೂಟದವರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯುತ್ ನಿಗಮಗಳ ಖಾಸಗೀಕರಣದ ಪ್ರಸ್ತಾಪ ಹುಟ್ಟಿಕೊಂಡಿದ್ದು 2003ರಲ್ಲಿ. ಆ ಸಂದರ್ಭದಲ್ಲಿ ಕಾನೂನು ತಂದಿದ್ದು ಬಿಜೆಪಿ ಸರ್ಕಾರ. ಅಂದು ನೀವು ಯಾರು ಕೂಡ ಅದರ ವಿರುದ್ಧ ದನಿ ಎತ್ತಲಿಲ್ಲ, ಪ್ರತಿಭಟನೆ ಮಾಡಲಿಲ್ಲ. ಆದರೆ ಇಂದು, ನನ್ನ ಬಳಿ ಮತ್ತು ಸಚಿವ ಜಾರ್ಜ್ ಅವರ ಬಳಿ ಬಂದು ಖಾಸಗೀಕರಣಕ್ಕೆ ಅವಕಾಶ ನೀಡಬೇಡಿ ಎಂಬುದಾಗಿ ಕೇಳುತ್ತಿದ್ದೀರಿ. ಬಿಜೆಪಿ ಸರ್ಕಾರ ವಿದ್ಯುತ್ ಉತ್ಪಾದನೆಯಾಗಲಿ ಅಥವಾ ಮೂಲಸೌಕರ್ಯ ಅಭಿವೃದ್ಧಿಯಾಗಲಿ ಯಾವುದೇ ಕ್ರಾಂತಿಕಾರಿ ಯೋಜನೆಗಳನ್ನು ತರಲಿಲ್ಲ. ತಪ್ಪು ಮಾಡಿದವರ ವಿರುದ್ಧ ಧಿಕ್ಕಾರ ಕೂಗುವ, ಒಳ್ಳೆಯ ಕೆಲಸ ಮಾಡಿದವರಿಗೆ ಜೈಕಾರ ಹಾಕುವ ಸಂಸ್ಕೃತಿ ಬೆಳೆಸಿಕೊಳ್ಳಿ. ಆಗ ಮಾತ್ರ ಹೋರಾಟಗಳಿಗೆ ಗೌರವ ಸಿಗುತ್ತದೆ. ನಮ್ಮ ಕೆಲಸಗಳೇ ನಮ್ಮ ಪರವಾಗಿ ಮಾತನಾಡುತ್ತವೆ, ಬಿಜೆಪಿಯ ಟೀಕೆಗಳು ಕಾಲಕ್ರಮೇಣ ಸಾಯುತ್ತವೆ ಎಂದು ಟೀಕಾಪ್ರಹಾರ ನಡೆಸಿದರು.

"ನಮ್ಮದು ಗೀವ್ ಅಂಡ್ ಟೇಕ್ ಸಂಬಂಧ"

ನೌಕರರ ಒಕ್ಕೂಟದೊಂದಿಗೆ ಭಾವನಾತ್ಮಕ ಸಂಬಂಧವನ್ನು ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ನಮ್ಮದು 'ಗೀವ್ ಅಂಡ್ ಟೇಕ್', 'ಶೇರಿಂಗ್ ಅಂಡ್ ಕೇರಿಂಗ್' ಪದ್ಧತಿ. ನೀವು ನಮಗೆ ಕಾಳಜಿ ತೋರಿಸಿದರೆ, ನಾವು ನಿಮಗೆ ಕಾಳಜಿ ತೋರಿಸುತ್ತೇವೆ. ಈ ಒಪ್ಪಂದಕ್ಕೆ ನೀವು ಬದ್ಧರಾಗಿರಬೇಕು. ನಂಬಿಕೆ ಎಂಬುದು ಮನುಷ್ಯನ ಶ್ರೇಷ್ಠ ಗುಣ. ನಿಮ್ಮ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ, ನೀವು ನನ್ನ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಒಂದು ವೇಳೆ ನೀವು ನನಗೆ ಮೋಸ ಮಾಡಿದರೆ, ನಾನು ನನ್ನ ರಾಜಕೀಯ ನಿಲುವುಗಳನ್ನು ಬದಲಿಸಬೇಕಾಗುತ್ತದೆ ಎಂದು ಪರೋಕ್ಷವಾಗಿ ಎಚ್ಚರಿಸಿದರು. ತಾವು ಇಂಧನ ಸಚಿವನಾಗಿದ್ದಾಗ ಜಾರಿಗೊಳಿಸಿದ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ನಾನು ಇಲಾಖೆಯ ಜವಾಬ್ದಾರಿ ವಹಿಸಿಕೊಂಡಾಗ, ಅನೇಕರು ಈ ಖಾತೆ ಬೇಡ ಎಂದು ಸಲಹೆ ನೀಡಿದ್ದರು. ಆದರೆ ಇತಿಹಾಸವನ್ನು ಓದುವುದಕ್ಕಿಂತ ಇತಿಹಾಸ ಸೃಷ್ಟಿಸುವುದರಲ್ಲಿ ನನಗೆ ನಂಬಿಕೆಯಿದೆ. 13 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ, ರೈತರ ಸಹಭಾಗಿತ್ವದಲ್ಲಿ 2,400 ಮೆ.ವ್ಯಾಟ್ ಸೋಲಾರ್ ಪಾರ್ಕ್ ನಿರ್ಮಿಸಿದ್ದು ಅಂದಿನ ಅತಿದೊಡ್ಡ ಇತಿಹಾಸ. ಇಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕುಸುಮ್ ಯೋಜನೆಗೆ ನಮ್ಮ ಅಂದಿನ ಕಾರ್ಯವೇ ಸ್ಫೂರ್ತಿ ಎಂದು ಹೇಳಿದರು.

ನೇಮಕಾತಿಯಲ್ಲಿ ಪಾರದರ್ಶಕತೆ

ನೌಕರರ ನೇಮಕಾತಿಯಲ್ಲಿ ತಾವು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ. ನಾನು ಇಂಜಿನಿಯರ್‌ಗಳ ಮೂಲಕ ಪೆನ್ಸಿಲ್‌ನಲ್ಲಿ ಬರೆಸಿ ನಂತರ ಅದನ್ನು ತಿದ್ದುವ ಕೆಲಸ ಎಂದೂ ಮಾಡಿಲ್ಲ. ಒಂದು ರೂಪಾಯಿ ಲಂಚ ಪಡೆಯದೆ 25 ಸಾವಿರ ಜನರನ್ನು ಇಲಾಖೆಗೆ ನೇಮಕ ಮಾಡಿದ್ದೇನೆ. ಕಳೆದ ಸರ್ಕಾರದ ಅವಧಿಯಲ್ಲಿ ನೌಕರರ ವೇತನ ಪರಿಷ್ಕರಣೆಯನ್ನು 7 ವರ್ಷದಿಂದ 5 ವರ್ಷಕ್ಕೆ ಇಳಿಸಿದ್ದು ನಮ್ಮ ಸರ್ಕಾರವೇ. ನಿಮ್ಮ ಬದುಕಿಗೆ ಅನುಕೂಲವಾಗುವ ಇಂತಹ ತೀರ್ಮಾನಗಳನ್ನು ಕೈಗೊಂಡಿದ್ದೇವೆ. ಇಂಧನ ಇಲಾಖೆಯ ಸಿಬ್ಬಂದಿಯನ್ನು ಕಾಯಕ ಜೀವಿಗಳು. ದೀಪ ಬೆಳಗುವಾಗ ಅದರ ಬೆಳಕು ಕಾಣುತ್ತದೆ, ಆದರೆ ಅದರ ಹಿಂದೆ ಇರುವ ಬತ್ತಿ ಮತ್ತು ಎಣ್ಣೆ ಕಾಣುವುದಿಲ್ಲ. ನೀವು ಕತ್ತಲನ್ನು ದೂರ ಮಾಡುವವರು. ಕ್ಷೇತ್ರದ ಶಾಸಕರ ಸಂಖ್ಯೆ ಗೊತ್ತಿಲ್ಲದಿದ್ದರೂ, ಜನರು ನಿಮ್ಮ ನಂಬರ್ ಇಟ್ಟುಕೊಂಡಿರುತ್ತಾರೆ. ಸರ್ಕಾರವನ್ನು ಅಧಿಕಾರಕ್ಕೆ ತರುವ ಹಾಗೂ ಇಳಿಸುವ ಶಕ್ತಿ ನಿಮಗಿದೆ ಎಂಬ ಅರಿವು ನನಗಿದೆ ಎಂದರು.

Read More
Next Story