x

ಡಿಕೆಶಿಗೆ ಮೊದಲ ಅಧಿವೇಶನವೇ ಅಗ್ನಿಪರೀಕ್ಷೆ; ಸಿದ್ದರಾಮಯ್ಯರ ಸದ್ದಡಗೀತೇ?

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ನಡೆಸುತ್ತಿರುವ ಮೊದಲ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ರಾಜ್ಯ ಸರ್ಕಾರವನ್ನು ಕಟ್ಟಿಹಾಕಲು ದೊಡ್ಡ ಅಸ್ತ್ರಗಳನ್ನೇ ಸಜ್ಜುಗೊಳಿಸಿಕೊಂಡಿವೆ.


ಆಗಸ್ಟ್ 13ರಿಂದ ಆರಂಭವಾಗಲಿರುವ ಕರ್ನಾಟಕ ವಿಧಾನಮಂಡಲ ಅಧಿವೇಶನ ಈ ಬಾರಿ ಹಲವು ಕಾರಣಗಳಿಂದಾಗಿ ಮಹತ್ವ ಪಡೆದುಕೊಂಡಿದೆ. ನೂತನ ಸಂಪುಟದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇದು ದೊಡ್ಡ ರಾಜಕೀಯ ಅಗ್ನಿಪರೀಕ್ಷೆಯೂ ಆಗಿದೆ. ಇಷ್ಟು ದಿನ ಪಕ್ಷದ ಮುನ್ನಡೆ, ಸರ್ಕಾರ ರಚನೆಯಲ್ಲಿ ತಂತ್ರಗಾರಿಕೆ ಪ್ರದರ್ಶಿಸಿದ್ದ ಡಿ.ಕೆ. ಶಿವಕುಮಾರ್ ಅವರು, ಈಗ ಸದನದ ಒಳಗೆ ವಿರೋಧ ಪಕ್ಷಗಳ ಪ್ರಹಾರವನ್ನು ಹೇಗೆ ಎದುರಿಸಲಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಕೇವಲ ವಿರೋಧ ಪಕ್ಷಗಳ ದಾಳಿ ಮಾತ್ರವಲ್ಲ, ಆಡಳಿತ ಪಕ್ಷದ ಒಳಗಿನ ಆಂತರಿಕ ಸಮೀಕರಣಗಳೂ ಕೂಡ ತೀವ್ರ ಕುತೂಹಲ ಕೆರಳಿಸಿವೆ.

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ನಡೆಸುತ್ತಿರುವ ಮೊದಲ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ರಾಜ್ಯ ಸರ್ಕಾರವನ್ನು ಕಟ್ಟಿಹಾಕಲು ದೊಡ್ಡ ಅಸ್ತ್ರಗಳನ್ನೇ ಸಜ್ಜುಗೊಳಿಸಿಕೊಂಡಿವೆ. ಅವುಗಳಲ್ಲಿ ಬಿಡದಿ ಟೌನ್‌ಶಿಪ್‌ ಮತ್ತು ಜಮೀನು ವಿವಾದ, ಬರ ಪರಿಹಾರ, ಕಾವೇರಿ ಮತ್ತು ಮೇಕೆದಾಟು ಬಿಕ್ಕಟ್ಟು, ಬಿ. ನಾಗೇಂದ್ರ ಅವರ ಮರುಸೇರ್ಪಡೆ, ಸಂವಿಧಾನಾತ್ಮಕ ಹುದ್ದೆಗಳಿಗೆ ಹೈಕಮಾಂಡ್ ಶಿಫಾರಸು ಪತ್ರದ ಬಗ್ಗೆಯೂ ಜೋರು ಚರ್ಚೆ ನಡೆಯುವ ಸಾಧ್ಯತೆ ಇದೆ.

ಕಳೆದ ವಿಧಾನಸಭೆ ಅಧಿವೇಶನದಲ್ಲಿ ಡಿಸಿಎಂ ಆಗಿದ್ದ ಡಿ,ಕೆ. ಶಿವಕುಮಾರ್ ಹಾಗೂ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರು ಪರಸ್ಪರ ವೈಯಕ್ತಿಕ ನಿಂದನೆ ಮೂಲಕ ಸಂಸದೀಯ ವ್ಯವಸ್ಥೆಗೆ ಅಗೌರವ ತಂದಿದ್ದ ಸಂಗತಿ ಎಲ್ಲರಿಗೂ ಗೊತ್ತಿದೆ. ಈಗ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಮೊದಲ ಅಧಿವೇಶನ ಎದುರಿಸುತ್ತಿದ್ದಾರೆ. ಆರ್.ಆರ್. ನಗರ ಕ್ಷೇತ್ರದ ರಾಜಕೀಯ ಪ್ರಾಬಲ್ಯ, ವೈಯಕ್ತಿಕ ವೈಷಮ್ಯ ಹಾಗೂ ಪ್ರಚಲಿತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಅಧಿವೇಶನವು ಇಬ್ಬರ ಮಧ್ಯೆ ಮತ್ತೊಂಮೆ ಕಿಚ್ಚು ಹಚ್ಚಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ, ಈ ಹಿಂದಿನಂತೆ ಅತಿರೇಕದ ವರ್ತನೆ ಅಸಾಧ್ಯ ಎಂಬುದು ಇಲ್ಲಿನ ಮನಗಾಣಬಹುದು. ಏಕೆಂದರೆ, ಸದನದಲ್ಲಿ ನಡೆಯುವ ಯಾವುದೇ ಚರ್ಚೆಗಳು ಅಥವಾ ವಿರೋಧ ಪಕ್ಷಗಳು ತರುವ ಅವಿಶ್ವಾಸ ನಿರ್ಣಯಗಳಿಗೆ ಸರ್ಕಾರದ ಪರ ಅಂತಿಮವಾಗಿ ಉತ್ತರಿಸುವ ಸರ್ವೋಚ್ಚ ಹಕ್ಕು ಮುಖ್ಯಮಂತ್ರಿಗೆ ಇರಲಿದೆ. ಸದನದ ನಾಯಕರಾಗಿರುವ ಕಾರಣ ಅವರಿಗೆ ವಿಶೇಷ ಪ್ರೋಟೋಕಾಲ್ ಭದ್ರತೆ ಮತ್ತು ಗೌರವ ಇದ್ದೇ ಇರುತ್ತದೆ. ಸದನದ ನಿಯಂತ್ರಣ ಸ್ಪೀಕರ್ ಕೈಯಲ್ಲಿದ್ದರೂ, ಪ್ರಜಾಪ್ರಭುತ್ವದ ನಿಯಮಾವಳಿಗಳ ಪ್ರಕಾರ ಸರ್ಕಾರದ ರಥವನ್ನು ಮುನ್ನಡೆಸುವ ಮುಖ್ಯಮಂತ್ರಿಗೆ ಅಧಿವೇಶನದ ಉದ್ದಕ್ಕೂ ಅತ್ಯುನ್ನತ ಮರ್ಯಾದೆ ಮತ್ತು ಪ್ರಾಧಾನ್ಯತೆ ನೀಡಲಾಗುತ್ತದೆ. ಹಾಗಾಗಿ, ಸಿ.ಎಂ ಡಿ.ಕೆ. ಶಿವಕುಮಾರ್‌ ಅವರ ಮೇಲೆ ವಿಪಕ್ಷ ನಾಯಕರು ಬೇಕಾಬಿಟ್ಟಿ ಮಾತನಾಡುವಂತಿಲ್ಲ. ಅದೇ ರೀತಿ ಮುಖ್ಯಮಂತ್ರಿಗಳು ಕೂಡ ಸದನದ ಗೌರವ ಕಾಪಾಡುವ ಸಲುವಾಗಿ ಸ್ವಯಂ ನಿಯಂತ್ರಣ ಕಾಯ್ದುಕೊಳ್ಳಬೇಕು. ಇದು ಕೂಡ ಡಿ.ಕೆ. ಶಿವಕುಮಾರ್‌ ಎದುರಿಗಿರುವ ದೊಡ್ಡ ಸವಾಲು ಅಂತಲೇ ಹೇಳಬಹುದು.

ಸಿದ್ಧರಾಮಯ್ಯ ಅವರ ರಾಜಕೀಯ ಶೈಲಿಯೇ ಭಿನ್ನ. ಅವರು ಸದನದಲ್ಲಿ ಎದ್ದು ನಿಂತರೆ, ನಿಯಮಾವಳಿಗಳು, ಅಂಕಿ-ಅಂಶಗಳು, ಹಳೆಯ ಘಟನೆಗಳ ಉಲ್ಲೇಖಗಳೊಂದಿಗೆ ವಿಪಕ್ಷಗಳನ್ನು ಧೂಳೀಪಟ ಮಾಡುತ್ತಿದ್ದರು. ಅಷ್ಟೇ ಅಲ್ಲ, ಸದನದ ಒಳಗಡೆ ಸಿದ್ಧರಾಮಯ್ಯ ಅವರಿಗೆ ಬೆಂಬಲವಾಗಿ ನಿಂತು ವಿಪಕ್ಷಗಳ ಮೇಲೆ ಮುಗಿಬೀಳುವ ಶಾಸಕರ ದಂಡೇ ಇತ್ತು. ಆದರೆ, ಡಿ.ಕೆ. ಶಿವಕುಮಾರ್ ಅವರ ವಿಷಯಕ್ಕೆ ಬಂದರೆ, ಸಂಘಟನಾತ್ಮಕವಾಗಿ ಅವರು ಎಷ್ಟೇ ಪ್ರಬಲರಾಗಿದ್ದರೂ, ಸದನದ ಒಳಗಡೆ ರಾಜಕೀಯ ದಾಳಿಗಳನ್ನು ಎದುರಿಸಲು ಅವರು ಸಿದ್ಧರಾಮಯ್ಯ ಗರಡಿಯಲ್ಲಿ ಬೆಳೆದ ನಾಯಕರನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿ ಇದೆ.

ಡಿ.ಕೆ,. ಶಿವಕುಮಾರ್ ಪರ ದನಿಯೆತ್ತಲು ಸಚಿವರಾದ ಶಿವಲಿಂಗೇಗೌಡ, ಎಚ್.ಸಿ. ಬಾಲಕೃಷ್ಣ , ಶಾಸಕರಾದ ಡಾ. ರಂಗನಾಥ್ ಸೇರಿದಂತೆ ಹಲವರ ಪಡೆಯನ್ನು ಹೊಂದಿದ್ದರೂ ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ವಿಶ್ವಾಸಕ್ಕೆ ಪಡೆದುಕೊಂಡರೆ ಮಾತ್ರ ವಿಪಕ್ಷಗಳನ್ನು ಸಮರ್ಥವಾಗಿ ಎದುರಿಸಿ, ಸುಗಮ ಕಲಾಪ ನಡೆಸಲು ಸಾಧ್ಯವಾಗಲಿದೆ. ಸದನದಲ್ಲಿ ಸಿದ್ಧರಾಮಯ್ಯ ಅವರು ಎಲ್ಲಿ ಕುಳಿತುಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಸಿದ್ದರಾಮಯ್ಯ ಅವರು ಮುಂಭಾಗದ ಸಾಲಿನಲ್ಲಿಯೇ ಆಸೀನರಾಗಿ ಮುಖ್ಯಮಂತ್ರಿಯವರಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆಯೇ? ಅಥವಾ ಹಿಂಬದಿಯ ಸಾಲಿಗೆ ಸರಿದು ಮೌನ ಪ್ರೇಕ್ಷಕರಾಗಲಿದ್ದಾರೆಯೇ? ಎಂಬುದು ಕುತೂಹಲ ಮೂಡಿಸಿದೆ.

ಸಾಮಾನ್ಯವಾಗಿ ಮುಂದಿನ ಸಾಲಿನಲ್ಲಿ ಸಿಎಂ, ಡಿಸಿಎಂ ಹಾಗೂ ಸಚಿವರು ಆಸನರಾಗುತ್ತಾರೆ. ಹಿರಿಯ ಶಾಸಕರು ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುವುದು ವಾಡಿಕೆ. ಸಿದ್ಧರಾಮಯ್ಯ ಅವರು ಹಿಂಬದಿಯ ಆಸನದಲ್ಲಿದ್ದರೂ, ಅವರ ಪ್ರಭಾವ ನಿರ್ಲಕ್ಷಿಸುವುದು ಸಾಧ್ಯವಿಲ್ಲ. ವಿಪಕ್ಷಗಳು ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದಾಗ, ಸಿದ್ಧರಾಮಯ್ಯ ಅವರು ತಮ್ಮ ಹಳೆಯ ಶೈಲಿಯಲ್ಲಿ ಎದ್ದುನಿಂತು ಗರ್ಜಿಸಿ ಸರ್ಕಾರದ ರಕ್ಷಣೆಗೆ ಬರುತ್ತಾರೋ ಅಥವಾ ಶಿವಕುಮಾರ್ ಅವರೇ ಸ್ವತಃ ಈ ರಾಜಕೀಯ ಸುಳಿಯಿಂದ ಹೇಗೆ ಹೊರಬರುತ್ತಾರೆ ಎಂಬುದನ್ನು ವೀಕ್ಷಿಸುತ್ತಾರೋ ಎಂಬ ಕುತೂಹಲವೂ ಇದೆ. ಸಿದ್ಧರಾಮಯ್ಯ ಅವರ ಪ್ರತಿಯೊಂದು ನಡೆ, ಅವರು ಸದನದಲ್ಲಿ ಆಡುವ ಪ್ರತಿಯೊಂದು ಮಾತು ಈ ಅಧಿವೇಶನದ ದಿಕ್ಕನ್ನು ನಿರ್ಧರಿಸಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.

ಈ ಹಿಂದೆ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ಹಿರಿಯ ಸದಸ್ಯ ಎಲ್.ಕೆ. ಆಡ್ವಾಣಿ ಅವರನ್ನು ಮುಂದಿನ ಸಾಲಿನಲ್ಲಿ ಕೂರಿಸಿ ಗೌರವ ಕೊಟ್ಟಿದ್ದರು. ಆದರೆ, ಕರ್ನಾಟಕದ ವಿಷಯ ಬಂದಾಗ ಸಿದ್ದರಾಮಯ್ಯ ಅವರು ತಾವೇ ಖುದ್ದು ಹಿಂದಿನ ಸಾಲಿಗೆ ತೆರಳುವ ಸಾಧ್ಯತೆ ಇದೆ. ಏಕೆಂದರೆ, ಎಂಟು ವರ್ಷ ಮುಖ್ಯಮಂತ್ರಿಯಾಗಿ, ಸಭಾ ನಾಯಕರಾಗಿ ಅಧಿವೇಶನ ನಡೆಸಿದ್ದ ಸಿದ್ದರಾಮಯ್ಯ ಅವರು ಈಗ ಮುಂದಿನ ಸಾಲಿನಲ್ಲಿ ಕುಳಿತು, ಮುಜುಗರ ಅನುಭವಿಸುವುದಕ್ಕಿಂತ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಲಿದ್ದಾರೆ. ಮುಂದಿನ ಎರಡು ಸಾಲು ಸಚಿವರಿಗೆ ಮೀಸಲಿರುವ ಕಾರಣ ಸಿದ್ದರಾಮಯ್ಯ ಅವರು ಮುಂದೆ ಕುಳಿತುಕೊಳ್ಳುವುದು ಅನುಮಾನ. ಇನ್ನು ಸರ್ಕಾರದೊಂದಿಗೆ ಸೌಹಾರ್ದವಾಗಿ ವರ್ತಿಸುವುದು ಕೂಡ ಅನುಮಾನವೇ ಇದೆ. ಏಕೆಂದರೆ ಕಳೆದ ಸೋಮವಾರ ನಡೆದ ಸಂಪುಟ ಸಚಿವರ ಪ್ರಮಾಣವಚನಕ್ಕೆ ಗೈರಾಗುವ ಮೂಲಕವೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಹಾಗಾಗಿ, ಸರ್ಕಾರದ ಪರವಾಗಿ ನಿಂತು ಮಾತನಾಡುವುದು ಕೂಡ ಡೌಟು ಎಂದು ವಿಶ್ಲೇಷಿಸಲಾಗುತ್ತಿದೆ.

ಒಟ್ಟಾರೆ ಆಗಸ್ಟ್ 13ರಿಂದ ಶುರುವಾಗುವ ಈ ಅಧಿವೇಶನ ಕೇವಲ ಕಾಯ್ದೆ-ಕಾನೂನುಗಳನ್ನು ಪಾಸ್ ಮಾಡುವ ಆಡಳಿತಾತ್ಮಕ ಸಭೆಯಲ್ಲ. ಇದು ಡಿ.ಕೆ. ಶಿವಕುಮಾರ್ ಅವರಿಗೆ ತಮ್ಮ ಆಡಳಿತ ಸಾಮರ್ಥ್ಯ ಮತ್ತು ಸಂಸದೀಯ ಚಾಣಾಕ್ಷತೆಯನ್ನು ಸಾಬೀತುಪಡಿಸಲು ಸಿಕ್ಕಿರುವ ದೊಡ್ಡ ವೇದಿಕೆ ಅಂತಲೇ ಹೇಳಬಹುದು. ಒಂದೆಡೆ ವಿಪಕ್ಷಗಳ ತೀಕ್ಷ್ಣ ದಾಳಿ, ಇನ್ನೊಂದೆಡೆ ಪಕ್ಷದೊಳಗಿನ ಆಂತರಿಕ ಸಮೀಕರಣಗಳು. ಈ ಎರಡನ್ನೂ ಸರಿದೂಗಿಸಿಕೊಂಡು ಡಿ.ಕೆ. ಶಿವಕುಮಾರ್ ಸದನವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರಾ? ಅಥವಾ ಸಿದ್ಧರಾಮಯ್ಯ ಅವರ ನೆರಳಿನಲ್ಲೇ ಕಾರ್ಯನಿರ್ವಹಿಸುತ್ತಾರಾ? ಎಂಬುದಕ್ಕೆ ಅಧಿವೇಶನ ಆರಂಭವಾದ ಬಳಿಕವೇ ಸ್ಪಷ್ಟ ಉತ್ತರ ಸಿಗಲಿದೆ.

Read More
Next Story