ಉದ್ಯೋಗಿಗಳಾಗದೇ ಉದ್ಯಮಿಗಳಾಗಿ, ನಿಮ್ಮ ಊರಲ್ಲಿ ನೀವೇ ಉದ್ಯಮ ಆರಂಭಿಸಿ: ಸಿಎಂ ಕರೆ
x

ಉದ್ಯೋಗಿಗಳಾಗದೇ ಉದ್ಯಮಿಗಳಾಗಿ, ನಿಮ್ಮ ಊರಲ್ಲಿ ನೀವೇ ಉದ್ಯಮ ಆರಂಭಿಸಿ: ಸಿಎಂ ಕರೆ

ಕರಾವಳಿ, ಮಲೆನಾಡು ಪ್ರದೇಶಗಳನ್ನು ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಪ್ರತ್ಯೇಕ ನೀತಿಯನ್ನು ರೂಪಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.


Click the Play button to hear this message in audio format

"ಕರಾವಳಿ ಮತ್ತು ಮಲೆನಾಡಿನ ಪ್ರತಿಭೆಗಳು ಕೇವಲ ಉದ್ಯೋಗ ಅರಸಿ ನಗರಗಳಿಗೆ ವಲಸೆ ಬರುವ ಬದಲು, ತಮ್ಮ ಸ್ವಂತ ಊರುಗಳಲ್ಲೇ ಉದ್ಯಮಗಳನ್ನು ಆರಂಭಿಸಬೇಕು. ಅದಕ್ಕಾಗಿ ಸರ್ಕಾರವು ವಿಶೇಷ ಪ್ರವಾಸೋದ್ಯಮ ನೀತಿಯನ್ನು ರೂಪಿಸಿದೆ. ನೀವು ಉದ್ಯೋಗಿಗಳಾಗುವುದಕ್ಕಿಂತ ಉದ್ಯಮಿಗಳಾಗುವತ್ತ ಹೆಜ್ಜೆ ಇಡಬೇಕು" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.

ಬೆಂಗಳೂರಿನ ಉಳ್ಳಾಲದಲ್ಲಿರುವ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆದ 'ಕೈಲ್ ಮುಹೂರ್ತ ಜಂಬರ 2026' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕರಾವಳಿ ಮತ್ತು ಮಲೆನಾಡು ಪ್ರದೇಶಗಳನ್ನು ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿದರು. "ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಪ್ರವಾಸೋದ್ಯಮಕ್ಕೆಂದೇ ಪ್ರತ್ಯೇಕ ನೀತಿಯನ್ನು ರೂಪಿಸಲಾಗಿದೆ. ಗೋವಾ ಮತ್ತು ಕೇರಳ ಮಾದರಿಯಲ್ಲಿ ನಮ್ಮ ಕರಾವಳಿಯ 327 ಕಿ.ಮೀ ಉದ್ದದ ಪ್ರದೇಶವನ್ನು ಪ್ರವಾಸೋದ್ಯಮಕ್ಕಾಗಿ ಬಳಸಿಕೊಳ್ಳಲಾಗುವುದು" ಎಂದು ಹೇಳಿದರು. ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಹೊಸ ಉದ್ಯಮಗಳನ್ನು ಆರಂಭಿಸುವವರಿಗೆ ವಿಶೇಷ ಉತ್ತೇಜನ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, "ಪ್ರವಾಸೋದ್ಯಮ ಉದ್ಯಮ ಆರಂಭಿಸುವವರಿಗೆ ಆರ್ಥಿಕ ಶಕ್ತಿ ತುಂಬಲು, ಬ್ಯಾಂಕ್‌ಗಳಿಂದ ಪಡೆಯುವ ಸಾಲದ ಮರುಪಾವತಿ ಅವಧಿಯನ್ನು 5-6 ವರ್ಷಗಳಿಂದ 20 ವರ್ಷಗಳಿಗೆ ವಿಸ್ತರಿಸುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸಲಾಗುವುದು" ಎಂದು ತಿಳಿಸಿದರು.

ಸಂಸ್ಕೃತಿಯೇ ದೊಡ್ಡ ಆಸ್ತಿ

ಕೊಡಗು ಜಿಲ್ಲೆಯ ಶೌರ್ಯ, ಸಾಂಸ್ಕೃತಿಕ ಪರಂಪರೆ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಕೊಂಡಾಡಿದ ಸಿಎಂ, "ಕೊಡಗು ಕರ್ನಾಟಕದ ಕಾಶ್ಮೀರ. ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಳ್ಳುವುದು ಮನುಷ್ಯತ್ವದ ದೊಡ್ಡ ಗುಣ. ನಗರಗಳಿಗೆ ವಲಸೆ ಬಂದಿದ್ದರೂ ತಮ್ಮ ಮೂಲವನ್ನು ಮರೆಯಬಾರದು. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ತನ್ನ ಊರು, ನಂಬಿಕೆ ಮತ್ತು ಪರಂಪರೆ ಅಷ್ಟೇ ಮುಖ್ಯ. ನಮ್ಮ ತಾಯಿ ಕಾವೇರಿ ಈ ನೆಲದಲ್ಲೇ ಹುಟ್ಟಿದ್ದು, ಆಕೆ ಕೇವಲ ಕರ್ನಾಟಕವಲ್ಲದೆ ಪಾಂಡಿಚೇರಿಯವರೆಗೂ ನೀರಾವರಿಯಾಗಿ ಆಸರೆಯಾಗಿದ್ದಾಳೆ. ದಸರಾ ಸಂದರ್ಭದಲ್ಲಿ ಪ್ರತಿವರ್ಷ ಕಾವೇರಿ ಆರತಿ ನಡೆಸಲು ನಿರ್ದೇಶನ ನೀಡಲಾಗಿದೆ. ಈ ಬಾರಿಯೂ ಅದನ್ನು ವಿಜೃಂಭಣೆಯಿಂದ ಆಚರಿಸಲಾಗುವುದು" ಎಂದು ತಿಳಿಸಿದರು.

ಮಂಗಳೂರಿನಲ್ಲಿ ಟಿಟಿಡಿ ದೇವಾಲಯಕ್ಕೆ 10 ಎಕರೆ ಜಾಗ

ಕರಾವಳಿ ಭಾಗದ ಧಾರ್ಮಿಕ ಮಹತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ ಅವರು, "ತಿರುಪತಿ ದೇವಾಲಯ ಟ್ರಸ್ಟ್ ನವರು ಮಂಗಳೂರಿನಲ್ಲಿ ದೇವಾಲಯ ನಿರ್ಮಿಸಲು ಜಾಗದ ಬೇಡಿಕೆ ಇಟ್ಟಿದ್ದರು. ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ, ಕೊಲ್ಲೂರು ಮೂಕಾಂಬಿಕೆಯಂತಹ ಪುಣ್ಯ ಕ್ಷೇತ್ರಗಳಿರುವ ಆ ಭಾಗದಲ್ಲಿ, ತಿರುಪತಿಗೆ ತೆರಳಲು ಸಾಧ್ಯವಾಗದವರಿಗಾಗಿ ವೆಂಕಟರಮಣ ದೇವಾಲಯ ನಿರ್ಮಾಣವಾಗಲಿ ಎಂಬ ಉದ್ದೇಶದಿಂದ 10 ಎಕರೆ ಜಾಗವನ್ನು ಟಿಟಿಡಿ ಮಂಡಳಿಗೆ ನೀಡಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ" ಎಂದು ಮಾಹಿತಿ ನೀಡಿದರು.

ಇದೇ ವೇಳೆ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾಗಿ ಮಾತನಾಡಿದ ಅವರು, "ಮತದಾನದ ಹಕ್ಕು ಎಂದರೆ ಬದುಕಿನ ಹಕ್ಕು. ಸಂವಿಧಾನ ನೀಡಿರುವ ಈ ಶಕ್ತಿಯನ್ನು ಯಾರೂ ಕಸಿದುಕೊಳ್ಳಬಾರದು. ಚುನಾವಣಾ ಆಯೋಗವು ಅರ್ಹ ಮತದಾರರ ಹಕ್ಕನ್ನು ಉಳಿಸಬೇಕು ಮತ್ತು ಅನಾವಶ್ಯಕವಾಗಿ ಯಾರ ಹೆಸರನ್ನೂ ಪಟ್ಟಿಯಿಂದ ತೆಗೆಯಬಾರದು ಎಂದು ಸೂಚಿಸಲಾಗಿದೆ. ನ್ಯಾಯಯುತ ಮತದಾರರ ಹಕ್ಕು ರಕ್ಷಿಸಲು ನಾವು ಸದಾ ಬದ್ಧರಿದ್ದೇವೆ," ಎಂದು ಸ್ಪಷ್ಟಪಡಿಸಿದರು. "ದೇವರು ರಾಜಕಾರಣದಲ್ಲಿ ಶಾಶ್ವತವಾದ ಅವಕಾಶವನ್ನು ಯಾರಿಗೂ ನೀಡುವುದಿಲ್ಲ. ಸಿಕ್ಕ ಅವಕಾಶದಲ್ಲಿ ನಾವು ಜನರಿಗೆ ಏನು ಕೊಡುಗೆ ನೀಡುತ್ತೇವೆ ಎಂಬುದು ಮುಖ್ಯ. ದೇವರು ವರ ಅಥವಾ ಶಾಪ ನೀಡುವುದಿಲ್ಲ, ಕೇವಲ ಅವಕಾಶ ನೀಡುತ್ತಾನೆ. ಆ ಅವಕಾಶವನ್ನು ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದು ನಮ್ಮ ಕರ್ತವ್ಯ" ಎಂದು ಅಭಿಪ್ರಾಯಪಟ್ಟರು.

Read More
Next Story