ಕಬಿನಿ ಭರ್ತಿ: ಬಂದ್ ಕರೆ ಹಿಂಪಡೆಯಲು ಹೋರಾಟಗಾರರಿಗೆ ಸಿಎಂ ಮನವಿ
x

ಕಬಿನಿ ಭರ್ತಿ: ಬಂದ್ ಕರೆ ಹಿಂಪಡೆಯಲು ಹೋರಾಟಗಾರರಿಗೆ ಸಿಎಂ ಮನವಿ

ಕಬಿನಿ ಜಲಾಶಯಕ್ಕೆ 40 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದೆ. ತಮಿಳುನಾಡಿಗೆ ನೀರು ಹರಿಸುವ ವಿಚಾರವಾಗಿ ಭಾನುವಾರ ಸರ್ವಪಕ್ಷ ಸಭೆ ಕರೆದಿದ್ದು, ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.


ಕಬಿನಿ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದು, ನೈಸರ್ಗಿಕವಾಗಿ ಹರಿದು ಹೋಗುವ ಕಾವೇರಿ ನೀರನ್ನು ತಡೆದು ಹಿಡಿಯಲು ಸಾಧ್ಯವಿಲ್ಲ. ಆದ್ದರಿಂದ ಕನ್ನಡ ಪರ ಹೋರಾಟಗಾರರು ಹಾಗೂ ರೈತರು ರಾಜ್ಯದ ಹಿತಾಸಕ್ತಿ ಮತ್ತು ಗೌರವ ಕಾಪಾಡುವ ನಿಟ್ಟಿನಲ್ಲಿ ಬಂದ್ ಕರೆಯನ್ನು ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಶನಿವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆ, ಪ್ರತಿಭಟನೆಗಳು ಹಾಗೂ ಜಲಾಶಯ ಯೋಜನೆಗಳ ಕುರಿತು ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಒಮ್ಮತದ ತೀರ್ಮಾನ

ಸದ್ಯ ಕಬಿನಿ ಜಲಾಶಯಕ್ಕೆ 40 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದೆ. ತಮಿಳುನಾಡಿಗೆ ನೀರು ಹರಿಸುವ ವಿಚಾರವಾಗಿ ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದ್ದು, ಅಲ್ಲಿ ರಾಜ್ಯದ ಹಿತ ಕಾಯುವ ಕುರಿತು ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಪ್ರತಿಯೊಬ್ಬರೂ ಶಾಂತಿ ಕಾಪಾಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ತಮಿಳುನಾಡು ಸಿಎಂಗೆ ಮತ್ತೊಮ್ಮೆ ಆಹ್ವಾನ

ಕಾವೇರಿ ನೀರು ಹಂಚಿಕೆ ಕುರಿತು ಸೌಹಾರ್ದಯುತ ಮಾತುಕತೆಗಾಗಿ ಆ.3 ರಂದು ಆಗಮಿಸಬೇಕಾಗಿದ್ದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಮತ್ತೊಮ್ಮೆ ಆಹ್ವಾನ ನೀಡುವುದಾಗಿ ಸಿಎಂ ಹೇಳಿದ್ದಾರೆ. ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ. ಪರಿಸ್ಥಿತಿ ತಿಳಿಯಾದ ನಂತರ ಮತ್ತೊಮ್ಮೆ ದಿನಾಂಕ ನಿಗದಿಪಡಿಸಿ ಬರುವಂತೆ ಕೋರಲಾಗಿದೆ ಎಂದಿದ್ದಾರೆ.

ಆತಂಕ ಪಡುವ ಅಗತ್ಯವಿಲ್ಲ

ಕಳೆದ ವರ್ಷ ಇದೇ ಅವಧಿಯಲ್ಲಿ ತಮಿಳುನಾಡಿಗೆ ಸುಮಾರು 16 ಟಿಎಂಸಿ ಅಡಿ ನೀರು ಹರಿದುಹೋಗಿತ್ತು. ಈ ಬಾರಿ ಸಂಕಷ್ಟದ ಪರಿಸ್ಥಿತಿಯಿದ್ದ ಕಾರಣ ತಮಿಳುನಾಡು ಸರ್ಕಾರ ದಿನಕ್ಕೆ 9 ಸಾವಿರ ಕ್ಯುಸೆಕ್ ನೀರಿಗೆ ಬೇಡಿಕೆ ಇಟ್ಟಿತ್ತು. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ದಿನಕ್ಕೆ ಕೇವಲ 3,500 ಕ್ಯುಸೆಕ್ ನೀರು ಹರಿಸಲು ಆದೇಶಿಸಿದೆ. ಹೀಗಾಗಿ ಕನ್ನಡಿಗರು ಮತ್ತು ರೈತರು ಅನಗತ್ಯವಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಎಂ ಅಭಯ ನೀಡಿದ್ದಾರೆ.

ದೆಹಲಿ ನಿಯೋಗಕ್ಕೆ ಅಭಿನಂದನೆ

ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕುರಿತು ಪ್ರತಿಕ್ರಿಯಿಸಿದ ಅವರು, "ಈಗಲೇ ಏನೂ ಇಲ್ಲದೆಯೇ ಬಿಜೆಪಿಯವರು ನನ್ನ ಶರ್ಟ್-ಪ್ಯಾಂಟ್ ಹರಿಯುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಆರ್. ಅಶೋಕ್ ಎಲ್ಲರೂ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ, ಕರ್ನಾಟಕದ ಹಿತಾಸಕ್ತಿ ರಕ್ಷಿಸಲು ಬಿಜೆಪಿ ಸಚಿವರು ಹಾಗೂ ಸಂಸದರು ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅವರ ಈ ಪ್ರಯತ್ನವನ್ನು ಸ್ವಾಗತಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಬಂದ್‌ನಿಂದ ಸಾರ್ವಜನಿಕ ಆಸ್ತಿಗೆ ಧಕ್ಕೆ ಬಾರದಿರಲಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು. ಆದರೆ, ಹೋರಾಟಗಳು ಕೇವಲ ಮಾಧ್ಯಮಗಳ ಮುಂಭಾಗಕ್ಕೆ ಸೀಮಿತವಾಗಬಾರದು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವುದನ್ನು ಸರ್ಕಾರ ಸಹಿಸುವುದಿಲ್ಲ. ನಾವೆಲ್ಲರೂ ಒಂದೇ ದೇಶದವರು, ತಮಿಳುನಾಡಿಗೂ ತೊಂದರೆಯಾಗಬಾರದು. ನ್ಯಾಯಾಲಯ ನೀಡಿರುವ ತೀರ್ಪಿಗೆ ಬದ್ಧರಾಗಿ, ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ನಾವು ಮುಕ್ತವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೇಕೆದಾಟು-ತುಂಗಭದ್ರಾ ಸಮತೋಲನ ಜಲಾಶಯ

ಸುಪ್ರೀಂ ಕೋರ್ಟ್ ಹಾಗೂ ಪ್ರಾಧಿಕಾರದ ತೀರ್ಪುಗಳು ಎರಡೂ ರಾಜ್ಯಗಳಿಗೆ ವರವಾಗಿದೆ. ಮೇಕೆದಾಟು ಸಮನಾಂತರ ಜಲಾಶಯ ನಿರ್ಮಾಣ ವಿಚಾರದಲ್ಲಿ ಸುಪ್ರೀಂಕೋರ್ಟ್ನಲ್ಲಿ ನಮಗೆ ದೊಡ್ಡ ಜಯವಾಗಿದ್ದು, ಕೇಂದ್ರ ಸರ್ಕಾರವೂ ಯೋಜನೆಗೆ ಹಸಿರು ನಿಶಾನೆ ತೋರಿದೆ. ತಮಿಳುನಾಡಿನ ರಾಜಕಾರಣಿಗಳು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆಯೇ ಹೊರತು, ಹಿಂದೆ ಅವರ ಸರ್ಕಾರವೇ ಈ ಜಲಾಶಯಕ್ಕೆ ಒಪ್ಪಿಗೆ ನೀಡಿ ಅಫಿಡವಿಟ್ ಸಲ್ಲಿಸಿತ್ತು.

ತುಂಗಭದ್ರಾ ನದಿಗೆ ಸಮತೋಲನ ಜಲಾಶಯ ನಿರ್ಮಿಸಲು ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ತಜ್ಞರ ಸಮಿತಿ ರಚಿಸಲಾಗುತ್ತಿದ್ದು, ಇದು ದೇಶದಲ್ಲೇ ಒಂದು ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ವಿವರಿಸಿದ್ದಾರೆ.

Read More
Next Story