ಬಿಡದಿ ಟೌನ್‌ಶಿಪ್ ವಿವಾದ: ಚರ್ಚೆಗೆ ಡಿ.ಕೆ. ಶಿವಕುಮಾರ್ ಪತ್ರ, ಬಿಡದಿಯಲ್ಲೇ ಸಭೆ ನಡೆಸಲು ಎಚ್​​ಡಿಕೆ ಪಟ್ಟು
x

ಬಿಡದಿ ಟೌನ್‌ಶಿಪ್ ವಿವಾದ: ಚರ್ಚೆಗೆ ಡಿ.ಕೆ. ಶಿವಕುಮಾರ್ ಪತ್ರ, ಬಿಡದಿಯಲ್ಲೇ ಸಭೆ ನಡೆಸಲು ಎಚ್​​ಡಿಕೆ ಪಟ್ಟು

ಕೇವಲ ಸಚಿವರು ಮಾತ್ರವಲ್ಲದೆ, ಅವರ ತಂಡದ ಐವರು ಪ್ರಮುಖ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.


Click the Play button to hear this message in audio format

ರಾಜ್ಯದ ಬೃಹತ್ ಯೋಜನೆಯಾದ ಬಿಡದಿ ಟೌನ್‌ಶಿಪ್ ಕುರಿತು ಚರ್ಚೆ ನಡೆಸಲು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತ ಪತ್ರ ಬರೆದು ಆಹ್ವಾನಿಸಿದ್ದಾರೆ. ಈ ಮೂಲಕ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಮನ್ವಯತೆಗೆ ಮುನ್ನುಡಿ ಬರೆಯಲಾಗಿದ್ದು, ಈ ಬೆಳವಣಿಗೆ ರಾಜಕೀಯ ಹಾಗೂ ಕೈಗಾರಿಕಾ ವಲಯದಲ್ಲಿ ಸಂಚಲನ ಮೂಡಿಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜೂನ್ 22ರಂದು ಬರೆದಿರುವ ಅಧಿಕೃತ ಪತ್ರದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಯ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಕುಮಾರಸ್ವಾಮಿ ಅವರು ಈ ಹಿಂದೆ ಪ್ರಾರಂಭಿಸಿದ್ದ ಈ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಅವರೊಂದಿಗೇ ಸುದೀರ್ಘವಾಗಿ ಚರ್ಚಿಸಲು ತಾವು ಅತ್ಯಂತ ಉತ್ಸುಕನಾಗಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ. ಈ ಯೋಜನೆಯ ಮುಂದಿನ ರೂಪುರೇಷೆಗಳು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ತ್ವರಿತ ಅನುಷ್ಠಾನದ ಬಗ್ಗೆ ಈ ಸಭೆಯಲ್ಲಿ ನಿರ್ಣಾಯಕ ಮಾತುಕತೆ ನಡೆಯುವ ಸಾಧ್ಯತೆಗಳಿವೆ.

ಜೂನ್ 26ರಂದು ವಿಧಾನಸೌಧದಲ್ಲಿ ಮಹತ್ವದ ಭೇಟಿ

ಈ ಮಹತ್ವದ ಚರ್ಚೆಗಾಗಿ ಇದೇ ಬರುವ ಜೂನ್ 26ರಂದು ಬೆಳಿಗ್ಗೆ 11.00 ಗಂಟೆಗೆ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿಗೆ ಆಗಮಿಸುವಂತೆ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಕೋರಿದ್ದಾರೆ. ಕೇವಲ ಸಚಿವರು ಮಾತ್ರವಲ್ಲದೆ, ಅವರ ತಂಡದ ಐವರು ಪ್ರಮುಖ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.

ಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಹೆಜ್ಜೆ

ಬೆಂಗಳೂರಿನ ಹೊರವಲಯದಲ್ಲಿ ನಿರ್ಮಾಣವಾಗಲಿರುವ ಬಿಡದಿ ಟೌನ್‌ಶಿಪ್ ಯೋಜನೆಯು ಕೈಗಾರಿಕಾ ಬೆಳವಣಿಗೆಗೆ ಹಾಗೂ ಉದ್ಯೋಗ ಸೃಷ್ಟಿಗೆ ಬಹುದೊಡ್ಡ ಕೊಡುಗೆ ನೀಡಲಿದೆ. ಕೇಂದ್ರದ ಬೃಹತ್ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಅವರ ಪಾತ್ರ ಈ ಟೌನ್‌ಶಿಪ್ ನಿರ್ಮಾಣದಲ್ಲಿ ಅತ್ಯಂತ ಪ್ರಮುಖವಾಗಲಿದೆ.

ಬಿಡದಿಯಲ್ಲೇ ಸಭೆ ನಡೆಸಲು ಎಚ್​ಡಿಕೆ ಪಟ್ಟು

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿದ್ದ ಆಹ್ವಾನಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಜೂನ್ 22ರಂದು ಅಧಿಕೃತವಾಗಿ ಪ್ರತ್ಯುತ್ತರ ನೀಡಿದ್ದಾರೆ. ಜೂನ್ 26ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ನಿಗದಿಯಾಗಿದ್ದ ಸಭೆಗೆ ಆಹ್ವಾನಿಸಿದ್ದಕ್ಕಾಗಿ ಧನ್ಯವಾದ ತಿಳಿಸಿರುವ ಅವರು, ಸಭೆಯ ಸ್ಥಳ ಹಾಗೂ ದಿನಾಂಕ ಬದಲಾವಣೆಗೆ ಪಟ್ಟು ಹಿಡಿದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಬಿಡದಿ ಸಮಗ್ರ ಉಪ ನಗರ (ಟೌನ್‌ಶಿಪ್) ಯೋಜನೆಯ ಅನುಷ್ಠಾನದಿಂದಾಗಿ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಎಂಟು ಗ್ರಾಮಗಳು ಹಾಗೂ ಹಾರೋಹಳ್ಳಿ ತಾಲ್ಲೂಕಿನ ಒಂದು ಗ್ರಾಮದ ರೈತರು, ಗ್ರಾಮಸ್ಥರು ಮತ್ತು ಪಾಲುದಾರರು ಹಲವಾರು ಸಮಸ್ಯೆಗಳು ಮತ್ತು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ತಮ್ಮ ಪತ್ರದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಈ ಯೋಜನೆಯಿಂದಾಗಿ ಆ ಭಾಗದಲ್ಲಿರುವ ಅಪಾರವಾದ ಪರಿಸರ ಸಂಪತ್ತಿಗೂ ಹಾನಿಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಭೈರಮಂಗಲದಲ್ಲಿ ಸಭೆಗೆ ಆಗ್ರಹ

ಬಾಧಿತ ರೈತ ವರ್ಗ, ಗ್ರಾಮಸ್ಥರು ಮತ್ತು ಪಾಲುದಾರರನ್ನು ಹೊರಗಿಟ್ಟು ವಿಧಾನಸೌಧದ ಕಛೇರಿಯಲ್ಲಿ ಸಭೆ ನಡೆಸುವುದು ಯಾವುದೇ ರೀತಿಯಲ್ಲೂ ಫಲಪ್ರದವಾಗುವುದಿಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪ್ರಸ್ತಾಪಿಸಿರುವ ಸಭೆಯನ್ನು ರಾಮನಗರ ಜಿಲ್ಲೆಯ ಬಿಡದಿ ಅಥವಾ ನೇರವಾಗಿ ಬಾಧಿತ ಪ್ರದೇಶವಾಗಿರುವ ಭೈರಮಂಗಲದ ಯಾವುದಾದರೂ ಸೂಕ್ತ ಸಾರ್ವಜನಿಕ ಸ್ಥಳದಲ್ಲಿ ಕರೆಯುವುದು ಸಮಂಜಸವೆನಿಸುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

ಸಂತ್ರಸ್ತರಿಗೆ ಮುಕ್ತ ಚರ್ಚೆಗೆ ಅವಕಾಶ ನೀಡಲು ಒತ್ತಾಯ

ಸೂಚಿತ ಸ್ಥಳಗಳಲ್ಲಿ ಸಭೆ ಆಯೋಜಿಸಿ, ಯೋಜನೆಯಿಂದ ಬಾಧಿತರಾಗಿರುವ ರೈತರು, ಗ್ರಾಮಸ್ಥರು, ಕೃಷಿ ಕಾರ್ಮಿಕರು, ಹೈನುಗಾರಿಕೆ ಉದ್ಯಮದಲ್ಲಿರುವ ರೈತ ಮಹಿಳೆಯರು, ಸಣ್ಣ ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಇತರ ಪಾಲುದಾರರಿಗೆ ಭಾಗವಹಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇವರೆಲ್ಲರ ಸಮ್ಮುಖದಲ್ಲಿ ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಿದರೆ ಮಾತ್ರ ಬಾಧಿತ ವರ್ಗದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ತಮ್ಮ ಸ್ಪಷ್ಟ ಅಭಿಪ್ರಾಯ ಮತ್ತು ನಿಲುವು ಎಂದು ಕುಮಾರಸ್ವಾಮಿ ವಿವರಿಸಿದ್ದಾರೆ. ಅಲ್ಲದೆ, ಈ ಯೋಜನೆಯ ರಚನೆ ಮತ್ತು ಅನುಷ್ಠಾನದಲ್ಲಿ ತಮಗೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂಬುದನ್ನೂ ಅವರು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ದಿನಾಂಕ 27ಕ್ಕೆ ಸಭೆ ಮುಂದೂಡಲು ಕೋರಿಕೆ

ಮುಖ್ಯಮಂತ್ರಿಗಳು ನಿಗದಿಪಡಿಸಿದ್ದ ಜೂನ್ 26ರಂದು ತಮಗೆ ಈಗಾಗಲೇ ಬೇರೆ ಪೂರ್ವ ನಿಯೋಜಿತ ಕಾರ್ಯಕ್ರಮಗಳು ಇರುವುದರಿಂದ, ಆ ದಿನಾಂಕದಂದು ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಕಾರಣಕ್ಕಾಗಿ ಉದ್ದೇಶಿತ ಸಭೆಯನ್ನು ಜೂನ್ 27ರಂದು ಬಿಡದಿ ಅಥವಾ ಭೈರಮಂಗಲದ ಸೂಕ್ತ ಸ್ಥಳದಲ್ಲಿ ಆಯೋಜಿಸಿ ಬಾಧಿತ ಜನರನ್ನು ಆಹ್ವಾನಿಸಿ ಸಭೆ ನಡೆಸಬೇಕೆಂದು ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕೋರಿದ್ದಾರೆ.

Read More
Next Story