
72 ಸಾವಿರ ಹುದ್ದೆ ಭರ್ತಿ, ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ವೃತ್ತಿ ಪರ ಕೋರ್ಸ್‌ಗಳ ಪ್ರವೇಶದಲ್ಲಿ ಮೀಸಲಾತಿ: ಸಿಎಂ ಡಿಕೆಶಿ ಘೋಷಣೆ
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಡನಾಡಿದ ಡಿ.ಕೆ.ಶಿವಕುಮಾರ್, ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಕರ್ನಾಟಕದ ಆರ್ಥಿಕತೆಯನ್ನು 2047ರ ವೇಳೆಗೆ 3 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ತಲುಪಿಸುವ ಬೃಹತ್ ಗುರಿಯನ್ನು ಸಿಎಂ ಡಿಕೆ ಶಿವಕುಮಾರ್ ಘೋಷಿಸಿದರು.
ನಾಡಿನಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದ ಬಳಿಕ ತೆರೆದ ಜೀಪಿನಲ್ಲಿ ಪರೇಡ್ ಮೈದಾನದಲ್ಲಿ ಸಂಚರಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರು ಗೌರವ ವಂದನೆ ಸ್ವೀಕರಿಸಿದರು. ಇದೇ ವೇಳೆ ರಾಜ್ಯದ ಹಾಗೂ ದೇಶದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಕೋರಿದರು.
ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ
ಸ್ವಾತಂತ್ರ್ಯ, ದೇಶದ ಐಕ್ಯತೆ ಮತ್ತು ಸಮಾನತೆಗಾಗಿ ಶ್ರಮಿಸಿದ ಮಹನೀಯರನ್ನು ಮುಖ್ಯಮಂತ್ರಿ ಸ್ಮರಿಸಿದರು. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ ಸಲ್ಲಿಸಿದರು. ಧ್ವಜಾರೋಹಣದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಿದರು.
LIVE from Manekshaw Parade Ground, Bengaluruhttps://t.co/TBqHccrNsB
— DK Shivakumar (@DKShivakumar) August 15, 2026
ಕರ್ನಾಟಕದ ಸಮಗ್ರ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಡಿಜಿಟಲ್ ಕೃಷಿ ಹಾಗೂ ಮೂಲಸೌಕರ್ಯಕ್ಕೆ ಒತ್ತು ನೀಡುವ ಹಲವು ಪ್ರಮುಖ ಕೊಡುಗೆಗಳು ಮತ್ತು ಹೊಸ ಯೋಜನೆಗಳನ್ನು ಪ್ರಕಟಿಸಿದರು. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಕರ್ನಾಟಕದ ಆರ್ಥಿಕತೆಯನ್ನು 2047ರ ವೇಳೆಗೆ 3 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ತಲುಪಿಸುವ ಬೃಹತ್ ಗುರಿಯನ್ನು ಸಿಎಂ ಘೋಷಿಸಿದರು.
ಸಿಎಂ ಭಾಷಣದ ಪ್ರಮುಖಾಂಶಗಳು
• ಸರ್ಕಾರಿ ಹುದ್ದೆಗಳು: ಸರ್ಕಾರಿ ವಲಯದಲ್ಲಿ ಖಾಲಿ ಇರುವ 72,000 ಪ್ರಮುಖ ಹುದ್ದೆಗಳ ಭರ್ತಿ ಪ್ರಕ್ರಿಯೆ ತಕ್ಷಣದಿಂದಲೇ ಆರಂಭಗೊಳ್ಳಲಿದ್ದು, ಮುಂದಿನ 6 ತಿಂಗಳಲ್ಲಿ ಎಲ್ಲಾ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗುವುದು.
• ಯುವ ಉದ್ಯೋಗ ಸೇತು: ಖಾಸಗಿ ವಲಯದ ಉದ್ಯೋಗ ಹುಡುಕುವವರು, ನೀಡುವವರು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ವಿಶೇಷ ತಂತ್ರಾಂಶ ಅಭಿವೃದ್ಧಿ.
• ಉದ್ಯೋಗ ನಿಧಿ ಯೋಜನೆ: ರಾಜ್ಯದ ಹಿಂದುಳಿದ 10 ಜಿಲ್ಲೆಗಳಲ್ಲಿ ನವೋದ್ಯಮಿಗಳಿಗೆ ಪ್ರತಿ ಹೊಸ ಉದ್ಯೋಗ ಸೃಷ್ಟಿಗೆ ತಿಂಗಳಿಗೆ 2,500 ರೂ. ಪ್ರೋತ್ಸಾಹ ಧನ (2 ವರ್ಷಗಳ ಅವಧಿಗೆ) ನೀಡುವ ಮೂಲಕ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ.
• ರೈತ ಮಿತ್ರ: 3 ಎಕರೆವರೆಗಿನ ಸಣ್ಣ ರೈತರಿಗೆ ಟ್ರ್ಯಾಕ್ಟರ್, ರೋಟವೇಟರ್ ಸೇರಿದಂತೆ ಕೃಷಿ ಉಪಕರಣಗಳ ಬಾಡಿಗೆ ಶುಲ್ಕದಲ್ಲಿ ಶೇ. 50 ರಷ್ಟು ಸಬ್ಸಿಡಿ.
• ಡಿಜಿಟಲ್ ಕೃಷಿ: ಡ್ರೋನ್ ಮತ್ತು ಉಪಗ್ರಹ ತಂತ್ರಜ್ಞಾನದ ಮೂಲಕ ಬೆಳೆ ಸಮೀಕ್ಷೆ, ಕೀಟ-ರೋಗ ಭಾದೆ ಮತ್ತು ಮಾರುಕಟ್ಟೆ ಮಾಹಿತಿಯನ್ನು ರೈತರಿಗೆ ನೇರವಾಗಿ ತಲುಪಿಸಲಾಗುವುದು.
• ಎಐ ವಿಶ್ವವಿದ್ಯಾಲಯ: ಬೆಂಗಳೂರಿನಲ್ಲಿ ದೇಶದ ಪ್ರಪ್ರಥಮ ಸರ್ಕಾರಿ ಸ್ವಾಮ್ಯದ AI ವಿಶ್ವವಿದ್ಯಾಲಯ ಸ್ಥಾಪನೆ.
• AI & ಕೋಡಿಂಗ್ ಶಿಕ್ಷಣ: 6ನೇ ತರಗತಿಯಿಂದಲೇ ಶಾಲಾ ಹಂತದಲ್ಲಿ AI ಹಾಗೂ ಉಚಿತ ಕೋಡಿಂಗ್ ತರಗತಿಗಳ ಪ್ರಾರಂಭ.
• ವೃತ್ತಿಪರ ಕೋರ್ಸ್‌ಗಳಲ್ಲಿ ಸೀಟು: 1ರಿಂದ 10ನೇ ತರಗತಿವರೆಗೆ ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿದ್ದ ಶೇ. 15 ಗ್ರಾಮೀಣ ಮೀಸಲಾತಿಯೊಳಗೆ ಶೇ. 7.5 ರಷ್ಟು ಒಳಮೀಸಲಾತಿ.
• ಕೆಪಿಎಸ್ ಶಾಲೆಗಳು: ಮುಂದಿನ 2 ವರ್ಷಗಳಲ್ಲಿ 1,000 ಶಾಲೆಗಳನ್ನು 'ಕರ್ನಾಟಕ ಪಬ್ಲಿಕ್ ಶಾಲೆ'ಗಳಾಗಿ (LKGಯಿಂದ 12ನೇ ತರಗತಿ) ಮೇಲ್ದರ್ಜೆಗೇರಿಸಲಾಗುವುದು.
ಬೆಂಗಳೂರು ಅಭಿವೃದ್ಧಿಗೆ 'ಬಿಸಿನೆಸ್ ಕಾರಿಡಾರ್' ಹಾಗೂ 5 ಹೊಸ ಕಮಿಷನರೇಟ್‌ಗಳು
• ಬೆಂಗಳೂರು ಬಿಸಿನೆಸ್ ಕಾರಿಡಾರ್ (BBC): 26,000 ಕೋಟಿ ರೂ. ವೆಚ್ಚದಲ್ಲಿ 117 KM ಉದ್ದದ ರಿಂಗ್ ರಸ್ತೆ ಯೋಜನೆಗೆ ಚಾಲನೆ.
• ಪೊಲೀಸ್ ಕಮಿಷನರೇಟ್‌ಗಳು: ಬೆಂಗಳೂರು ಪೊಲೀಸ್ ವ್ಯವಸ್ಥೆಯನ್ನು ಸುಗಮಗೊಳಿಸಲು ನಗರವನ್ನು 5 ಪ್ರತ್ಯೇಕ ಕಮಿಷನರೇಟ್‌ಗಳಾಗಿ ವಿಂಗಡಣೆ ಹಾಗೂ 'ರೌಡಿ ನಿಗ್ರಹ ದಳ' ರಚನೆ.
• ಹಸಿರು & ಕೆರೆ ಪುನಶ್ಚೇತನ: ಲಾಲ್‌ಬಾಗ್ ಮಾದರಿಯಲ್ಲಿ 5 ಹೊಸ 'ವೃಕ್ಷ ಉದ್ಯಾನ'ಗಳ (Tree Parks) ನಿರ್ಮಾಣ ಹಾಗೂ ಹೆಸರಘಟ್ಟ, ಹೊಸಕೋಟೆ ಸೇರಿದಂತೆ 7 ಬೃಹತ್ ಕೆರೆಗಳ ಅಭಿವೃದ್ಧಿ.
ಬಿಯಾಂಡ್ ಬೆಂಗಳೂರು ಮತ್ತು ಇತರೆ ಪ್ರಮುಖ ಘೋಷಣೆಗಳು
• GTCs ಸ್ಥಾಪನೆ: ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳಲ್ಲಿ 'ಜಾಗತಿಕ ತಂತ್ರಜ್ಞಾನ ಕೇಂದ್ರ'ಗಳ (Global Technology Centres) ಸ್ಥಾಪನೆ.
• ಭೂ-ಗ್ಯಾರಂಟಿ & ಇ-ಖಾತಾ: ಆಸ್ತಿ ಮಾಲೀಕತ್ವದ ಗೊಂದಲ ನಿವಾರಿಸಲು ಡಿಜಿಟಲ್ 'ಇ-ಖಾತಾ' ಹಾಗೂ 'ಭೂ-ಗ್ಯಾರಂಟಿ' ಜಾರಿ.
• ಭಾರತ್ ಜೋಡೋ ಯುವ ಸಂಘ: ಯುವ ಜನರಲ್ಲಿ ನಾಯಕತ್ವ ಬೆಳೆಸಲು 10,000 ಯುವ ಸಂಘಗಳ ಸ್ಥಾಪನೆ (ವಾರ್ಷಿಕ 1,000 ಕೋಟಿ ರೂ. ಅನುದಾನ).
2025-26ರಲ್ಲಿ ರಾಜ್ಯದ ತಲಾ ಆದಾಯ 4.33 ಲಕ್ಷ ರೂ.ಕ್ಕೇರಿದ್ದು, ರಾಷ್ಟ್ರೀಯ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಕೃಷಿ, ಯುವಜನತೆ ಮತ್ತು ಮೂಲಸೌಕರ್ಯ ವಲಯಕ್ಕೆ ಆದ್ಯತೆ ನೀಡಿ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಂದೇಶ ನೀಡಿದ್ದಾರೆ.
ಸದಾಶಿವನಗರದ ನಿವಾಸದಲ್ಲೂ ಧ್ವಜಾರೋಹಣ
ಇದಕ್ಕೂ ಮುನ್ನ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲೂ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಗೌರವ ಸಲ್ಲಿಸಿದರು. ಈ ವೇಳೆ ಅವರ ಪತ್ನಿ ಉಷಾ ಶಿವಕುಮಾರ್ ಉಪಸ್ಥಿತರಿದ್ದರು. ಡಿಕೆ ಶಿವಕುಮಾರ್ ಅವರ ಬೆಂಬಲಿಗರು ಸಿಹಿ ಹಂಚಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು.

