x

ಡಿಕೆಶಿ ಸರ್ಕಾರಕ್ಕೆ 100 ದಿನ ; ಸಾಧನೆಯ ಜತೆಗೆ ಸವಾಲುಗಳ ಪಟ್ಟಿ ʼಸಿದ್ಧʼ

ಬಿಡದಿ ಟೌನ್‌ಶಿಪ್‌, ನೈಸ್ ಅಕ್ರಮ ಹಾಗೂ ಕೆಪಿಎಸ್ಸಿ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ನಿರಂತರ ಸಮರ ಸಾರಿವೆ. ಇದರ ನಡುವೆಯೂ ಸರ್ಕಾರವು ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಇಂದು ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿದೆ. ಈ ನೂರು ದಿನಗಳ ಆಡಳಿತವು ಒಂದೆಡೆ ಸುಧಾರಣೆಗಳು ಹಾಗೂ ಮತ್ತೊಂದೆಡೆ ವಿಪಕ್ಷಗಳ ತೀವ್ರ ವಾಗ್ದಾಳಿ, ಹಗರಣಗಳ ಆರೋಪಗಳಿಂದಾಗಿ ರಾಜಕೀಯ ಕಾವಿನಿಂದ ಕೂಡಿದೆ.

ವಾಲ್ಮೀಕಿ ನಿಗಮದ ಹಗರಣದಲ್ಲಿ ಆರೋಪ ಎದುರಿಸುತ್ತಿದ್ದ ಬಿ. ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದು ಸರ್ಕಾರಕ್ಕೆ ಮೊದಲ ಪೆಟ್ಟಾಯಿತು. ವಿಪಕ್ಷಗಳ ಹೋರಾಟದಿಂದಾಗಿ ಅವರು ಮತ್ತೆ ರಾಜೀನಾಮೆ ನೀಡಬೇಕಾಯಿತು. ಬಿಡದಿ ಟೌನ್‌ಶಿಪ್‌, ನೈಸ್ ಅಕ್ರಮ ಹಾಗೂ ಕೆಪಿಎಸ್ಸಿ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ನಿರಂತರ ಸಮರ ಸಾರಿವೆ.

ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ ವಿರುದ್ಧ ರೈತರೊಂದಿಗೆ ಹೋರಾಡಿ ಭೂಸ್ವಾಧೀನ ಪ್ರಕ್ರಿಯೆಗೆ ನ್ಯಾಯಾಲಯದಿಂದ ತಡೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಒಕ್ಕಲಿಗ ಸಮುದಾಯದ ಮೇಲಿನ ಹಿಡಿತದ ವಿಚಾರದಲ್ಲೂ ಇಬ್ಬರ ನಡುವಿನ ರಾಜಕೀಯ ತಂತ್ರಗಾರಿಕೆ ಮುಂದುವರಿದಿದೆ.

ಇನ್ನು ಸಚಿವರಾದ ಯು.ಟಿ.ಖಾದರ್, ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿ ಹಾಗೂ ಬೈರತಿ ಸುರೇಶ್ ಅವರು ಸುಧಾರಣೆಗಳಿಗೆ ಯತ್ನಿಸಿದರೂ, ಕೆಲ ನಿರ್ಧಾರಗಳು ಹಿನ್ನಡೆ ತಂದಿವೆ. ಬೆಂಗಳೂರಿನಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುವ ತೀರ್ಮಾನ ಹಾಗೂ ಉದ್ಯಾನದ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಸರ್ಕಾರ ಈ ನಿರ್ಧಾರಗಳನ್ನು ಹಿಂಪಡೆಯಿತು.

ಈ ಎಲ್ಲಾ ಆರೋಪಗಳ ನಡುವೆ ಸರ್ಕಾರವು ಸ್ಮರಣೀಯ ಹಾಗೂ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. 75,000 ಸರ್ಕಾರಿ ಹುದ್ದೆಗಳ ಭರ್ತಿಗೆ ಚಾಲನೆ, ಆಡಳಿತವನ್ನು ನೇರವಾಗಿ ಜನರ ಮನೆ ಬಾಗಿಲಿಗೆ ತಲುಪಿಸಲು ಪ್ರಜಾಸೇವೆ ಇಲಾಖೆ ಆರಂಭ, ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ಹಾಗೂ ಕಾಲೇಜು ಚುನಾವಣೆ ಪುನರಾರಂಭದ ಚಿಂತನೆ ನಡೆಸಿರುವುದು ಉತ್ತಮ ಬೆಳವಣಿಗೆ ಎನಿಸಿದೆ. 2,500 ಅಡಿವರೆಗಿನ ಕಟ್ಟಡಗಳಿಗೆ 'ಒಸಿ' ವಿನಾಯಿತಿ ಮತ್ತು 'ಬಿ ಖಾತಾ'ದಿಂದ 'ಎ ಖಾತಾ' ಪರಿವರ್ತನೆ, ಭ್ರಷ್ಟಾಚಾರ ವಿರುದ್ಧ ದೂರು ಸಂಖ್ಯೆ ಬಿಡುಗಡೆ, ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಗೂ ನೂತನ CSR ನೀತಿ ತರುವ ಕುರಿತು ನಿರ್ಧಾರಗಳು ಸುಧಾರಣಾ ಕ್ರಮಗಳಾಗಿವೆ.

ಡಿಕೆಶಿ ಅವರ ಎದುರಿರುವ ಸವಾಲುಗಳನ್ನು ನೋಡುವುದಾದರೆ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಜಾರಿಗೆ ತಂದರೂ ಸಂಪುಟದಲ್ಲಿ ಒಬ್ಬೇ ಒಬ್ಬ ಮಹಿಳಾ ಸಚಿವೆ ಇಲ್ಲದಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಪರಿಸ್ಥಿತಿ, ಕಾವೇರಿ ನೀರಿನ ಬಿಕ್ಕಟ್ಟು ಹಾಗೂ ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡಿನ ವಿರೋಧ ಮತ್ತು ಕೇಂದ್ರದ ಅನುಮೋದನೆ ಸಿಗದಿರುವುದು ಡಿಕೆಶಿಗೆ ಸವಾಲಾಗಿದೆ.

ಗ್ಯಾರಂಟಿ ಯೋಜನೆಗಳಿಗಾಗಿ ವಾರ್ಷಿಕ 60 ಸಾವಿರ ಕೋಟಿ ರೂ. ಖರ್ಚಾಗುವ ಜೊತೆಗೆ ನೂತನ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಸರಿದೂಗಿಸುವುದು ಕೂಡ ಚಾಲೆಂಜ್‌ ಆಗಿದೆ. ಒಟ್ಟಾರೆ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ 100 ದಿನಗಳ ಆಡಳಿತವು ವೇಗದ ಅಭಿವೃದ್ಧಿ ಮತ್ತು ರಾಜಕೀಯ ತಾಪಮಾನದ ಸಮ್ಮಿಶ್ರಣವಾಗಿದೆ. ಮುಂದಿನ ದಿನಗಳಲ್ಲಿ ಈ ಸವಾಲುಗಳನ್ನು ಹೇಗೆ ಎದುರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Read More
Next Story