ಡಿಕೆಶಿ ಮೊದಲ ಸಂಪುಟ ಸಭೆಯಲ್ಲೇ 6 ಮಹತ್ವದ ಘೋಷಣೆ; ಸಿದ್ಧರಾಮಯ್ಯಗೆ ಕೃತಜ್ಞತೆ ಸಲ್ಲಿಸಿದ ಸಿಎಂ
x

ಡಿಕೆಶಿ ಮೊದಲ ಸಂಪುಟ ಸಭೆಯಲ್ಲೇ 6 ಮಹತ್ವದ ಘೋಷಣೆ; ಸಿದ್ಧರಾಮಯ್ಯಗೆ ಕೃತಜ್ಞತೆ ಸಲ್ಲಿಸಿದ ಸಿಎಂ

ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ 'ಭಾರತ್ ಜೋಡೋ ಯುವಕ ಸಂಘ'ಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುವುದು ಹಾಗೂ ಪ್ರತಿ ಸಂಘಕ್ಕೆ ತಲಾ 10‌ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ ಘೋಷಿಸಲಾಗಿದೆ.


ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲೇ, ರಾಜ್ಯದ ಜನತೆಗೆ ಆರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಇಂದು ಸಂಜೆ 4.15ಕ್ಕೆ ಆ ಶುಭ ಮುಹೂರ್ತ ಬಂದಿದೆ. ಇದು ಹೊಸ ದಿನ, ಹೊಸ ಕೆಲಸ ಹಾಗೂ ಹೊಸ ಅವಕಾಶಗಳ ಆರಂಭ. ರೈತರು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರಿಗಾಗಿ ಕಳೆದ 6 ತಿಂಗಳಿಂದಲೇ ನಾನು ಕಾರ್ಯಕ್ರಮಗಳನ್ನು ರೂಪಿಸಿದ್ದೇನೆ," ಎಂದು ಪ್ರಕಟಿಸಿದರು.

ಡಿಕೆಶಿ ಮಹತ್ವದ ಘೋಷಣೆಗಳೇನು?

ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಮಹತ್ವದ ನಿರ್ಧಾರವನ್ನು ಡಿಕೆ ಶಿವಕುಮಾರ್ ಘೋಷಿಸಿದರು. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ದೊಡ್ಡ ರಿಲೀಫ್ ಸಿಗಲಿದೆ.

ರಾಜ್ಯದ ಮೂಲಸೌಕರ್ಯ ಹಾಗೂ ರಸ್ತೆಗಳ ಸುಧಾರಣೆಗಾಗಿ ಬರೋಬ್ಬರಿ 2,000 ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್ ಘೋಷಿಸಲಾಗಿದೆ.

ಈವರೆಗೆ ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ಬಿ-ಖಾತೆಯನ್ನು ಎ-ಖಾತೆಯನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಇನ್ಮುಂದೆ ಇಡೀ ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಸಿಎಂ ಪ್ರಕಟಿಸಿದರು.

2,500 ಚದರ ಅಡಿ ವಿಸ್ತೀರ್ಣದವರೆಗೆ ಜಾಗ ಹೊಂದಿರುವ ಕಟ್ಟಡಗಳಿಗೆ 'ಆಕ್ಯುಪೆನ್ಸಿ ಸರ್ಟಿಫಿಕೇಟ್' (OC) ನಿಯಮದಿಂದ ವಿನಾಯಿತಿ ನೀಡಲಾಗಿದ್ದು, ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ದೊಡ್ಡ ನೆಮ್ಮದಿ ಸಿಕ್ಕಂತಾಗಿದೆ.

ಉದ್ಯೋಗದ ಸಮಸ್ಯೆ ನಿವಾರಿಸಲು ಹಾಗೂ ಸೂಕ್ತ ಕೆಲಸದ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ವಿಶೇಷವಾಗಿ ಖಾಸಗಿ ಉದ್ಯೋಗ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ 'ಭಾರತ್ ಜೋಡೋ ಯುವಕ ಸಂಘ'ಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುವುದು ಹಾಗೂ ಪ್ರತಿ ಸಂಘಕ್ಕೆ ತಲಾ 10‌ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ ಘೋಷಿಸಲಾಗಿದೆ.

'ತಿಹಾರ್ ಜೈಲಿಗೂ ಹೋಗಿ ಬಂದಿದ್ದೇನೆ'

ಸುದ್ದಿಗೋಷ್ಠಿಯಲ್ಲಿ ಹಳೆಯ ದಿನಗಳನ್ನು ನೆನೆದು ಭಾವುಕರಾದ ಸಿಎಂ ಡಿಕೆಶಿ, "ರಾಜ್ಯದ ಜನತೆ ನನ್ನ ಮೇಲೆ ಅಪಾರ ವಿಶ್ವಾಸ ಮತ್ತು ನಂಬಿಕೆ ಇಟ್ಟಿದ್ದಾರೆ. ಈ ಹಿಂದೆ ನನ್ನ ವಿರುದ್ಧ ಅನೇಕ ಟೀಕೆಗಳು ಬಂದಿದ್ದವು. ರಾಜಕೀಯ ತಂತ್ರಗಳಿಗೂ ನಾನು ಸಿಲುಕಿದ್ದೇನೆ, ತಿಹಾರ್ ಜೈಲಿಗೂ ಹೋಗಿ ಬಂದಿದ್ದೇನೆ. ಆದರೆ ನನ್ನ ಸುದೀರ್ಘ ರಾಜಕೀಯ ಅನುಭವವನ್ನು ನಾನು ರಾಜ್ಯದ ಅಭಿವೃದ್ಧಿಗಾಗಿ ಬಳಸಿಕೊಳ್ಳುತ್ತೇನೆ. ಈ ಸಿಎಂ ಕುರ್ಚಿ ನನ್ನದಲ್ಲ, ಇದು ನಾಡಿನ ಜನತೆಯದ್ದು. ಹೈಕಮಾಂಡ್ ನಾಯಕರು ನನಗೆ ಈ ಜವಾಬ್ದಾರಿಯುತ ಅವಕಾಶ ನೀಡಿದ್ದಾರೆ," ಎಂದರು.

ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಿದ ಡಿಕೆಶಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತ್ಯಾಗವನ್ನು ಸ್ಮರಿಸಿದ ಶಿವಕುಮಾರ್, "ಹೈಕಮಾಂಡ್ ಮತ್ತು ವರಿಷ್ಠರು ಹೇಳಿದರೆ ಐದು ನಿಮಿಷವೂ ಕಾಯಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು. ಅದರಂತೆ ವರಿಷ್ಠರ ಸೂಚನೆ ಮೇರೆಗೆ ಸಿದ್ದರಾಮಯ್ಯ ಅವರು ಸ್ಥಾನವನ್ನು ನನಗೆ ಬಿಟ್ಟುಕೊಟ್ಟಿದ್ದಾರೆ," ಎಂದು ಸ್ಪಷ್ಟಪಡಿಸಿದರು.

"ನನಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರ ಸಮಸ್ಯೆಗಳ ಸಂಪೂರ್ಣ ಅರಿವಿದೆ. ಮುಂದೆ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವೂ ಕೇವಲ ನನ್ನೊಬ್ಬನ ನಿರ್ಧಾರವಾಗಿರುವುದಿಲ್ಲ. ಬದಲಾಗಿ ಅದು ಇಡೀ ಸಂಪುಟದ ಸಾಮೂಹಿಕ ನಿರ್ಧಾರ ಆಗಿರುತ್ತದೆ. ಇಂದು ನಮ್ಮ ಸಚಿವ ಸಂಪುಟಕ್ಕೆ 13 ಜನ ಸೇರ್ಪಡೆಯಾಗಿದ್ದಾರೆ. ನಮ್ಮ ಸಂಪುಟವು ಕುವೆಂಪು ಅವರು ಹೇಳಿದ 'ಸರ್ವ ಜನಾಂಗದ ಶಾಂತಿಯ ತೋಟ'ವನ್ನು ಬಿಂಬಿಸುತ್ತಿದೆ. ರಾಜ್ಯದಲ್ಲಿ ಅತ್ಯಂತ ಬಲಿಷ್ಠ ಹಾಗೂ ಭ್ರಷ್ಟಾಚಾರ ರಹಿತ ನಾಯಕತ್ವ ಕೊಟ್ಟು ಕೆಲಸ ಮಾಡುತ್ತೇವೆ," ಎಂದು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಡಿಕೆಶಿ ಅವರ ಈ ವೇಗದ ನಡೆಗಳು ಜನಸಾಮಾನ್ಯರಲ್ಲಿ ಭಾರಿ ನಿರೀಕ್ಷೆಗಳನ್ನು ಮೂಡಿಸಿವೆ.

Read More
Next Story