ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದರೆ ಸಹಿಸಲ್ಲ: ಅಬಕಾರಿ ಇಲಾಖೆಗೆ ಸಿಎಂ ಎಚ್ಚರಿಕೆ
x

ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದರೆ ಸಹಿಸಲ್ಲ: ಅಬಕಾರಿ ಇಲಾಖೆಗೆ ಸಿಎಂ ಎಚ್ಚರಿಕೆ

ಇಲಾಖೆಯಲ್ಲಿ ಹೊಸದಾಗಿ ಜಾರಿಗೆ ತಂದಿರುವ ಎಐಬಿ ಪದ್ಧತಿಯಿಂದಾಗಿ ಉತ್ತಮ ಬೆಳವಣಿಗೆ ಕಂಡುಬರುತ್ತಿದೆ. ಇದೇ ರೀತಿಯ ವೇಗವನ್ನು ಮುಂದುವರಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.


Click the Play button to hear this message in audio format

ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತರುವ ಪ್ರಮುಖ ಇಲಾಖೆಗಳಲ್ಲಿ ಅಬಕಾರಿ ಇಲಾಖೆ ಅಗ್ರಸ್ಥಾನದಲ್ಲಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಲಾಖೆಯ ಕಾರ್ಯನಿರ್ವಹಣೆ ಮತ್ತು ಅಧಿಕಾರಿಗಳ ವರ್ತನೆಯ ಕುರಿತು ಕೇಳಿಬರುತ್ತಿರುವ ಆರೋಪಗಳು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತಿವೆ. ಈ ಹಿನ್ನೆಲೆಯಲ್ಲಿ, ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ಸಮಪರ್ಕವಾಗಿ ನಿರ್ವಹಿಸುವಂತೆ ಎಚ್ಚರಿಕೆ ನೀಡಿದರು. ನೀವು ನಿಮ್ಮ ಇಲಾಖೆಯ ಘನತೆಯನ್ನು ಕಾಪಾಡಿಕೊಂಡರೆ ಮಾತ್ರ ಸರ್ಕಾರದ ಘನತೆ ಹೆಚ್ಚಾಗುತ್ತದೆ. ಸರ್ಕಾರದ ಘನತೆಗೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನು ಸಹಿಸುವುದಿಲ್ಲ. ಅಧಿಕಾರಿಗಳು ತಮ್ಮ ಕೆಲಸದಲ್ಲಿ ವೃತ್ತಿಪರತೆಯನ್ನು ಮೆರೆಯಬೇಕು, ಇಲ್ಲವಾದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ. ಅಬಕಾರಿ ಇಲಾಖೆಯ ಸಿಬ್ಬಂದಿಯನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಯಾರೂ ಭ್ರಮಿಸಬೇಡಿ. ಅಗತ್ಯ ಬಿದ್ದರೆ ಇಂತಹ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಕಾನೂನಿನಲ್ಲಿ ತರಬೇಕಾದ ಬದಲಾವಣೆಗಳನ್ನೂ ನಾವು ತರುತ್ತೇವೆ ಎಂದು ಎಚ್ಚರಿಸಿದರು.

ಹೊಸ ನೀತಿಗಳು, ಗುರಿ ತಲುಪುವ ಸವಾಲು

ಸಭೆಯಲ್ಲಿ ಇಲಾಖೆಯ ಸಾಧನೆ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಇಲಾಖೆಯಲ್ಲಿ ಹೊಸದಾಗಿ ಜಾರಿಗೆ ತಂದಿರುವ ಎಐಬಿ (Excise Intelligence Bureau) ಪದ್ಧತಿಯಿಂದಾಗಿ ಉತ್ತಮ ಬೆಳವಣಿಗೆ ಕಂಡುಬರುತ್ತಿದೆ. ಇದೇ ರೀತಿಯ ವೇಗವನ್ನು ಮುಂದುವರಿಸುವಂತೆ ಸೂಚಿಸಿದರು. ಹೊಸದಾಗಿ 574 ಅಬಕಾರಿ ಸನ್ನದುಗಳನ್ನು ಇ-ಹರಾಜು ಮೂಲಕ ನೀಡಲು ಸರ್ಕಾರ ನಿರ್ಧರಿಸಿದೆ. ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ಸನ್ನದು ಪರವಾನಗಿ ನವೀಕರಣದ ಮೊತ್ತವನ್ನು ಒಂದೇ ಬಾರಿಗೆ ಪಾವತಿಸುವ ಬದಲು, ಅದನ್ನು ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದು ಸನ್ನದುದಾರರಿಗೆ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳುವ ಸರ್ಕಾರದ ಪ್ರಯತ್ನವಾಗಿದೆ ಎಂದರು.

ನೆರೆ ರಾಜ್ಯಗಳ ಮಾದರಿ

ನೆರೆಯ ರಾಜ್ಯಗಳಲ್ಲಿ ಅಬಕಾರಿ ಇಲಾಖೆ ಹೇಗೆ ಕಾರ್ಯನಿರ್ವಹಿಸುತ್ತಿದೆ, ಅಲ್ಲಿನ ವ್ಯವಸ್ಥೆಗಳೇನು ಎಂಬುದನ್ನು ತಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಕರ್ನಾಟಕದ ಅಬಕಾರಿ ಇಲಾಖೆಯೂ ಅದೇ ಮಟ್ಟದ ವೃತ್ತಿಪರತೆಯನ್ನು ಪ್ರದರ್ಶಿಸಬೇಕು. ಸರ್ಕಾರ ನಿಗದಿಪಡಿಸಿರುವ ಆದಾಯದ ಗುರಿಯನ್ನು ತಲುಪಲು ಅಧಿಕಾರಿಗಳು ಸಂಪೂರ್ಣವಾಗಿ ಶ್ರಮಿಸಬೇಕು. ಅಬಕಾರಿ ಇಲಾಖೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ದೂರುಗಳು ಹೊಸದಲ್ಲ. ಇಂತಹ ದೂರುಗಳಿಗೆ ತೆರೆ ಎಳೆಯಬೇಕಾದರೆ ಅಧಿಕಾರಿಗಳು ಸರ್ಕಾರದ ಮುಖವಾಡವಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನಗಳು ಎಲ್ಲಿಯೂ ನಡೆಯಬಾರದು. ವೃತ್ತಿಪರತೆಯನ್ನು ಪ್ರದರ್ಶಿಸಿ, ಇಲ್ಲದಿದ್ದರೆ ಕಠಿಣ ಕ್ರಮವನ್ನು ಎದುರಿಸಲು ಸಿದ್ಧರಾಗಿ ಎಂದು ಹೇಳಿದರು.

ಇಲಾಖೆಯಲ್ಲಿನ ಹಳೆಯ ಪದ್ಧತಿಗಳು, ಮಧ್ಯವರ್ತಿಗಳ ಹಾವಳಿ ಮತ್ತು ಭ್ರಷ್ಟಾಚಾರದ ಮಿತಿಗಳನ್ನು ಮೀರಿ, ತಾಂತ್ರಿಕವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಇ-ಹರಾಜು ಮತ್ತು ಕಂತು ಪದ್ಧತಿಯಂತಹ ಸುಧಾರಣೆಗಳು ಇಲಾಖೆಯ ಆದಾಯವನ್ನು ಹೆಚ್ಚಿಸುವುದಲ್ಲದೆ, ಮಧ್ಯವರ್ತಿಗಳ ಹಸ್ತಕ್ಷೇಪವನ್ನು ಕಡಿಮೆ ಮಾಡಲಿವೆ.

Read More
Next Story