ಭದ್ರಾ ಯೋಜನೆಗೆ ಅನುದಾನ, ಸಿಎಸ್‌ಆರ್‌ ನಿಧಿ ಬಳಕೆ ನೀತಿಗೆ ಡಿಕೆಶಿ ಒತ್ತಾಯ
x

ಭದ್ರಾ ಯೋಜನೆಗೆ ಅನುದಾನ, ಸಿಎಸ್‌ಆರ್‌ ನಿಧಿ ಬಳಕೆ ನೀತಿಗೆ ಡಿಕೆಶಿ ಒತ್ತಾಯ

ರಾಜ್ಯದ ಸ್ಥಳೀಯ ಆದ್ಯತೆಗಳಿಗೆ ಅನುಗುಣವಾಗಿ ಸಿಎಸ್ಆರ್ ನಿಧಿಯನ್ನು ಎಲ್ಲಿ ಬಳಸಬೇಕು ಎಂಬುದನ್ನು ರಾಜ್ಯ ಸರ್ಕಾರಗಳು ನಿರ್ಧರಿಸುವಂತಾಗಬೇಕು. ಇದಕ್ಕಾಗಿ ಸೂಕ್ತ ನೀತಿ ಅಥವಾ ನಿಯಮ ರೂಪಿಸಬೇಕು ಎಂದು ಡಿ.ಕೆ.ಶಿವಕುಮಾರ್‌ ಸಲಹೆ ನೀಡಿದ್ದಾರೆ.


ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂ. ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.

ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವರು ಕೇಂದ್ರ ಬಜೆಟ್‌ನಲ್ಲಿ 5,300 ಕೋಟಿ ಅನುದಾನ ಘೋಷಿಸಿದ್ದರು. ಆದರೆ, ಈವರೆಗೆ ಹಣ ಬಿಡುಗಡೆಯಾಗಿಲ್ಲ. ಇದರಿಂದ ಯೋಜನೆಯ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಸಿಎಸ್ಆರ್ ನಿಧಿ ಬಳಕೆಗೆ ನೀತಿ ಅಗತ್ಯ

ಖಾಸಗಿ ವಲಯದ ಕಂಪನಿಗಳು ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಬಳಸುವುದಕ್ಕೆ ಪ್ರತ್ಯೇಕ ನೀತಿ ಅಗತ್ಯ ಎಂದು ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದ್ದಾರೆ.

ರಾಜ್ಯದ ಸ್ಥಳೀಯ ಆದ್ಯತೆಗಳಿಗೆ ಅನುಗುಣವಾಗಿ ಸಿಎಸ್ಆರ್ ನಿಧಿಯನ್ನು ಎಲ್ಲಿ ಬಳಸಬೇಕು ಎಂಬುದನ್ನು ರಾಜ್ಯ ಸರ್ಕಾರಗಳು ನಿರ್ಧರಿಸುವಂತಾಗಬೇಕು. ಇದಕ್ಕಾಗಿ ಸೂಕ್ತ ನೀತಿ ಅಥವಾ ನಿಯಮ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಒಂದು ಕಂಪೆನಿ ಒಂದು ರಾಜ್ಯದಲ್ಲಿ ವ್ಯವಹಾರ ಮಾಡುತ್ತದೆ. ಆದರೆ, ಲಾಭಾಂಶದ ಹಣವನ್ನು ಬೇರೆಡೆ ಹೂಡಿಕೆ ಮಾಡಲಾಗುತ್ತದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ನಾವು ಆದ್ಯತೆ ನೀಡಬೇಕಾಗಿದೆ. ಹೀಗಾಗಿ ಸಿಎಸ್ಆರ್ ನಿಧಿಯನ್ನು ಎಲ್ಲಿ ಮತ್ತು ಹೇಗೆ ಖರ್ಚು ಮಾಡಬೇಕು ಎಂಬುದನ್ನು ರಾಜ್ಯ ಸರ್ಕಾರಗಳು ನಿರ್ಧರಿಸುವಂತಾಗಬೇಕು,” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ ಅವರು, ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇವೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ. ನಾವು ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಯಾವುದೇ ರಾಜಕೀಯ ನೇಮಕಾತಿ ಮಾಡಿಲ್ಲ. ಐಎಎಸ್ ಅಧಿಕಾರಿಗಳೇ ಅವುಗಳ ಮುಖ್ಯಸ್ಥರಾಗಿದ್ದಾರೆ. ನಿಮಗೆ ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ನೀವು ಅವರೊಂದಿಗೆ ಮಾತನಾಡಿ” ಎಂದು ಅಮಿತ್ ಶಾ ಹೇಳಿದ್ದಾರೆ.

Read More
Next Story