ನೀರಿಗೆ ಬರ: ದೆಹಲಿಯಲ್ಲಿ ʼರಾಜ್ಯʼ ಸಭೆ, ಬಡವರ ಅವಕಾಶ ಕಸಿದ KPSC ಸಾಹುಕಾರ್‌ಗೆ ಹೈಕೋರ್ಟ್ ಚಾಟಿ, ಸಿಮೆಂಟ್ ಸುಳಿ: ಮುಧೋಳ ಗ್ರಾಮಸ್ಥರ ಪ್ರತಿಭಟನೆ
ರಾಜ್ಯದ ಹಕ್ಕಿಗಾಗಿ ಸಂಸದರೊಂದಿಗೆ ಸಿಎಂ ಮಹತ್ವದ ಸಭೆ, ಸಿಬಿಐ ತನಿಖೆಗೆ ನೀಡುವಂತೆ ಬಿಜೆಪಿ ನಾಯಕರ ಆಗ್ರಹ, ಜೆಕೆ ಕಾರ್ಖಾನೆ ವಿರುದ್ಧ ರೈತರ ಸಮರ
ರಾಜ್ಯವು ಪ್ರಸ್ತುತ ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದರ ಜೊತೆಗೆ ಮೇಕೆದಾಟು, ಮಹದಾಯಿ (ಕಳಸಾ-ಬಂಡೂರಿ), ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ಜೀವನಾಡಿಯಾಗಿರುವ ನೀರಾವರಿ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿವೆ. ಈ ಜಟಿಲ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ರಾಜ್ಯದ ಹಿತಾಸಕ್ತಿಯನ್ನು ಕೇಂದ್ರದ ಮಟ್ಟದಲ್ಲಿ ಪ್ರತಿಪಾದಿಸಲು ಇವತ್ತು ರಾಜ್ಯದ ಸಂಸದರೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಚರ್ಚೆ ನಡೆಸಲಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಜಲ ಸಂಪನ್ಮೂಲ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ರಾಜ್ಯದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ತಾಂತ್ರಿಕ ಸಲಹೆಗಾರ ಜೈಪ್ರಕಾಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಅಧಿಕಾರಿಗಳ ಸಭೆಯಲ್ಲಿ ಮೇಕೆದಾಟು ಯೋಜನೆಯ ಕಾನೂನಾತ್ಮಕ ಅಡೆತಡೆಗಳ ನಿವಾರಣೆ ಮತ್ತು ಡಿಪಿಆರ್ ಅನುಮೋದನೆಯ ವೇಗವರ್ಧನೆ. ಮಹದಾಯಿ ಯೋಜನೆ ನ್ಯಾಯಾಲಯದ ತೀರ್ಪಿನ ನಂತರವೂ ವಿಳಂಬವಾಗುತ್ತಿರುವ ಕಾಮಗಾರಿಯ ಕುರಿತು ಕೇಂದ್ರದ ಮೇಲೆ ಒತ್ತಡ ಹೇರುವುದು. ಮಳೆ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿನ ನೀರಿನ ಮಟ್ಟ ಕುಸಿದಿದ್ದು, ಕುಡಿಯುವ ನೀರಿಗೆ ಆದ್ಯತೆ ನೀಡುವ ಕುರಿತು ಚರ್ಚೆ ನಡೆಸಿದರು. ಈ ಎಲ್ಲಾ ಮಾಹಿತಿಗಳ ಕುರಿತು ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಧಿವೇಶನದಲ್ಲಿ ರಾಜ್ಯದ ಹಿತಾಸಕ್ತಿಯಿಂದ ಈ ಕುರಿತು ಪ್ರಸ್ತಾಪಿಸಿ ಕೇಂದ್ರದ ಗಮನಸೆಳೆಯುವ ಕುರಿತು ಮಾತುಕತೆ ನಡೆಸಲಿದ್ದಾರೆ.
ಸುಮಾ ಸಾಹುಕಾರ್‌ಗೆ ಹೈಕೋರ್ಟ್ ತರಾಟೆ
ಕೆಪಿಎಸ್‌ಸಿಯ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಎಸ್. ಸಾಹುಕಾರ್, ಸರ್ಕಾರಿ ನೌಕರಿ ಪಡೆಯಲು ಸುಳ್ಳು ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ಆರೋಪವು ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣವು ಇದೀಗ ಹೈಕೋರ್ಟ್‌ಮೆಟ್ಟಿಲೇರಿದೆ. ಪ್ರಕರಣದ ವಿಚಾರಣೆಯನ್ನು ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಅರ್ಜಿದಾರರಾದ ಸುಮಾ ಸಾಹುಕಾರ್ ಅವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿತು. ವರ್ಷಕ್ಕೆ 30 ಲಕ್ಷ ರೂ. ಆದಾಯವಿರುವ ನೀವು, 40 ಸಾವಿರ ರೂ. ಆದಾಯ ಎಂದು ಪ್ರಮಾಣಪತ್ರ ಸಲ್ಲಿಸಿದ್ದೀರಿ. ಇದು ಮೇಲ್ನೋಟಕ್ಕೇ ವಂಚನೆ ಎಂಬುದು ಸ್ಪಷ್ಟವಾಗುತ್ತಿದೆ. ಕೆಪಿಎಸ್‌ಸಿಯ ಪ್ರತಿ ನೇಮಕವೂ ವಿವಾದಗಳಿಂದ ಕೂಡಿದೆ. ನೀವು ಒಬ್ಬ ಬಡ ವಿದ್ಯಾರ್ಥಿಗೆ ಸಿಗಬೇಕಾದ ಆಯ್ಕೆಯನ್ನು ಕಸಿದುಕೊಂಡಿದ್ದೀರಿ ಎಂದು ನ್ಯಾಯಮೂರ್ತಿಗಳು ತರಾಟೆಗಳು ತೆಗೆದುಕೊಂಡರು.
ನ್ಯಾಯಾಲಯದ ಈ ಮೌಖಿಕ ಟೀಕೆಗಳು ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಸಾರ್ವಜನಿಕರಲ್ಲಿದ್ದ ಅನುಮಾನಗಳನ್ನು ದೃಢಪಡಿಸಿದಂತಾಗಿದೆ. ನ್ಯಾಯಾಲಯದ ಈ ಕಠಿಣ ನಿಲುವಿನ ಬಳಿಕ, ಸುಮಾ ಸಾಹುಕಾರ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ಅವರು, ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ವಾಪಸ್ ಪಡೆಯಲು ನ್ಯಾಯಾಲಯದ ಅನುಮತಿ ಕೋರಿದರು. ನ್ಯಾಯಾಲಯವು ಆರೋಪಪಟ್ಟಿ ಸಲ್ಲಿಕೆಯಾದ ನಂತರವೇ ಅರ್ಜಿ ಸಲ್ಲಿಸುವಂತೆ ಸೂಚಿಸಿ, ಅರ್ಜಿ ವಾಪಸ್ ಪಡೆಯಲು ಅನುಮತಿ ನೀಡಿತು.
ಜೆ.ಕೆ ಸಿಮೆಂಟ್ ಕಾರ್ಖಾನೆ ವಿರುದ್ಧ ರೈತರ ಹೋರಾಟ
ಇತ್ತೀಚೆಗೆ ರಾಜ್ಯದ ರೈತರು ಸರ್ಕಾರ ವಿರುದ್ಧ ಬೀದಿಗಿಳಿಯುವ ಪ್ರಸಂಗ ಹೆಚ್ಚಾಗುತ್ತಿದೆ. ಬಿಡದಿ ಟೌನ್‌ಶಿಪ್‌ವಿರೋಧಿಸಿ ಬಿಡದಿ ಭಾಗದಲ್ಲಿ ರೈತರು ಹೋರಾಟಕ್ಕಿಳಿದರೆ, ಕೊಪ್ಪಳ ಜಿಲ್ಲೆಯಲ್ಲಿ ಬಲ್ಡೋಟಾ ಕಂಪನಿ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಇದೀಗ ಬಾಗಲಕೋಟೆಯಲ್ಲೂ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಮುಧೋಳ ತಾಲೂಕಿನಲ್ಲಿನ ಜೆ.ಕೆ. ಸಿಮೆಂಟ್ ಕಾರ್ಖಾನೆಯಿಂದ ಹೊರಸೂಸುತ್ತಿರುವ ಕಪ್ಪು ಧೂಳು ಮತ್ತು ಹಾನಿಕಾರಕ ಕಣಗಳು, ಸುತ್ತಮುತ್ತಲಿನ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಬಂಜರು ಮಾಡುತ್ತಿದ್ದು, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಅಮಾನವೀಯ ಪರಿಸ್ಥಿತಿಯ ವಿರುದ್ಧ ಇದೀಗ ರೈತರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.
ಈ ಸಂಬಂಧ ಇವತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದ್ದಾರೆ ಕಂಪನಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯು ಕೃಷಿ ಪ್ರಧಾನವಾದ ಪ್ರದೇಶ. ಮುಧೋಳ ತಾಲೂಕು ತನ್ನ ಫಲವತ್ತಾದ ಮಣ್ಣು ಮತ್ತು ಕಬ್ಬು, ದ್ರಾಕ್ಷಿ, ಪಪ್ಪಾಯಿಯಂತಹ ವಾಣಿಜ್ಯ ಬೆಳೆಗಳಿಗೆ ಹೆಸರುವಾಸಿ. ಇಂತಹ ಪ್ರದೇಶದಲ್ಲಿ ಸ್ಥಾಪನೆಯಾದ ಜೆ.ಕೆ. ಸಿಮೆಂಟ್ ಕಾರ್ಖಾನೆಯು ಆರಂಭದಲ್ಲಿ ಉದ್ಯೋಗ ಸೃಷ್ಟಿಯ ಆಶಾಕಿರಣವಾಗಿ ಕಂಡಿತ್ತು. ಆದರೆ, ಕಾಲಕ್ರಮೇಣ ಕಾರ್ಖಾನೆಯ ಕಾರ್ಯನಿರ್ವಹಣೆಯಲ್ಲಿನ ಲೋಪಗಳು, ಪರಿಸರ ನಿಯಮಗಳ ಉಲ್ಲಂಘನೆ ಮತ್ತು ಮಾಲಿನ್ಯ ನಿಯಂತ್ರಣ ಉಪಕರಣಗಳ ನಿರ್ಲಕ್ಷ್ಯವು ರೈತರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ.

