ದೆಹಲಿಯಲ್ಲಿ ಒಗ್ಗಟ್ಟು: ರಾಜ್ಯದ ಅಭಿವೃದ್ಧಿಗಾಗಿ ಒಂದಾದ ಆಡಳಿತ-ವಿರೋಧ ಪಕ್ಷದ ಸಂಸದರು
x

ದೆಹಲಿಯಲ್ಲಿ ಒಗ್ಗಟ್ಟು: ರಾಜ್ಯದ ಅಭಿವೃದ್ಧಿಗಾಗಿ ಒಂದಾದ ಆಡಳಿತ-ವಿರೋಧ ಪಕ್ಷದ ಸಂಸದರು

ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಾವು-ನೀವು ಎನ್ನುವ ಪ್ರಶ್ನೆಯೇ ಇಲ್ಲ. ಕೇಂದ್ರದ ಮುಂದೆ ರಾಜ್ಯದ ಹಕ್ಕುಗಳನ್ನು ಮಂಡಿಸುವಾಗ ನಾವೆಲ್ಲರೂ ಕನ್ನಡಿಗರಾಗಿ ಒಂದಾಗಿ ಧ್ವನಿ ಎತ್ತಬೇಕಿದೆ ಎಂದು ಸಿಎಂ ಹೇಳಿದ್ದಾರೆ.


Click the Play button to hear this message in audio format

ರಾಜ್ಯದ ಸಮಗ್ರ ಅಭಿವೃದ್ಧಿ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಅನುದಾನಗಳು ಮತ್ತು ಬಾಕಿ ಇರುವ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯ ಕರ್ನಾಟಕ ಭವನದಲ್ಲಿ ಕರೆದಿದ್ದ ರಾಜ್ಯದ ಎಲ್ಲಾ ಸಂಸದರ ಸಭೆಯು ಯಶಸ್ವಿಯಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ರಾಜ್ಯದ ಹಿತದೃಷ್ಟಿಯಿಂದ ಒಂದಾಗಿ ಸೇರಿದ್ದ ಈ ಸಭೆಯು, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತುಪಡಿಸಿದೆ.

ಸಭೆಯಲ್ಲಿ ಹಾಜರಿದ್ದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಸೋಮಣ್ಣ, ಮತ್ತು ಲೋಕಸಭೆ ಸದಸ್ಯರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ನಾಯಕರು, ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಕರ್ನಾಟಕದ ಅಭಿವೃದ್ಧಿ ವಿಚಾರ ಬಂದಾಗ ನಾವು-ನೀವು ಎನ್ನುವ ಪ್ರಶ್ನೆಯೇ ಇಲ್ಲ. ಕೇಂದ್ರದ ಮುಂದೆ ರಾಜ್ಯದ ಹಕ್ಕುಗಳನ್ನು ಮಂಡಿಸುವಾಗ ನಾವೆಲ್ಲರೂ ಕನ್ನಡಿಗರಾಗಿ ಒಂದಾಗಿ ಧ್ವನಿ ಎತ್ತಬೇಕು. ರಾಜ್ಯಕ್ಕೆ ಸಿಗಬೇಕಾದ ನ್ಯಾಯಯುತ ಪಾಲು ಮತ್ತು ಅನುದಾನಕ್ಕಾಗಿ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಹೋರಾಡೋಣ ಎಂದು ಕರೆ ನೀಡಿದರು. ಇದಕ್ಕೆ ವಿರೋಧ ಪಕ್ಷದ ಸಂಸದರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ಬೆಂಬಲ ಸೂಚಿಸಿದರು. ಬರ ಪರಿಸ್ಥಿತಿ ನಿರ್ವಹಣೆ ನೆರವು - ಮತ್ತಿತರ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಸ್ತಾಪಕ್ಕೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.

ಸಭೆಯ ಪ್ರಮುಖಾಂಶಗಳು

ಜಲಸಂಪನ್ಮೂಲ ಇಲಾಖೆಯ ವಿಚಾರಗಳನ್ನು ಹೊರತುಪಡಿಸಿ, ರಾಜ್ಯದ ಅಭಿವೃದ್ಧಿಗೆ ಅತ್ಯಗತ್ಯವಾಗಿರುವ 13 ಪ್ರಮುಖ ವಿಷಯಗಳನ್ನು ಸಭೆಯ ಮುಂದಿಡಲಾಯಿತು. ಈ ಯೋಜನೆಗಳು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ನನೆಗುದಿಗೆ ಬಿದ್ದಿದ್ದು, ಅವುಗಳಿಗೆ ತಕ್ಷಣದ ಅನುಮೋದನೆ ಮತ್ತು ಅನುದಾನ ಬಿಡುಗಡೆಗೆ ಒತ್ತಾಯಿಸಲಾಯಿತು.

ಗ್ರಾಮ ಪಂಚಾಯಿತಿಗಳ ಬಾಕಿ ಅನುದಾನ: 15ನೇ ಹಣಕಾಸು ಆಯೋಗದಡಿ 2025–26ನೇ ಸಾಲಿಗೆ ಕರ್ನಾಟಕಕ್ಕೆ ಬರಬೇಕಿದ್ದ 2,186.20 ಕೋಟಿ ರೂ. ನೆರವು ಬಾಕಿ ಇದೆ. ಪಂಚಾಯತ್ ರಾಜ್ ಇಲಾಖೆಯು ನಿರಂತರವಾಗಿ ಪತ್ರ ಬರೆದರೂ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಮೇಲೆ ಒತ್ತಡ ಹೇರಲು ಸಭೆಯಲ್ಲಿ ನಿರ್ಧರಿಸಲಾಯಿತು.

ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ: ಬೆಂಗಳೂರನ್ನು ಸುತ್ತುವರೆದಿರುವ 288 ಕಿ.ಮೀ. ಉದ್ದದ ಈ ಯೋಜನೆಯು ರಾಜ್ಯದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಅತ್ಯಗತ್ಯ. ಯೋಜನೆಗಾಗಿ ಭೂಸ್ವಾಧೀನ ವೆಚ್ಚದ ಶೇ.30 ಅನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. 9,613 ಕೋಟಿ ರೂ. ಮೌಲ್ಯದ ಉಳಿದ ಕಾಮಗಾರಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಬಾಕಿಯಿದ್ದು, ಇದನ್ನು ಶೀಘ್ರವೇ ಪಡೆದುಕೊಳ್ಳಲು ಸಂಸದರೆಲ್ಲರೂ ಜಂಟಿಯಾಗಿ ಪ್ರಯತ್ನಿಸಬೇಕಾಗಿದೆ.

ಬೆಂಗಳೂರು ಉಪನಗರ ರೈಲು ಯೋಜನೆ: ಬೆಂಗಳೂರು ಜನರ ಬಹುನಿರೀಕ್ಷಿತ ಉಪನಗರ ರೈಲು ಯೋಜನೆಯ ಪರಿಷ್ಕೃತ ವೆಚ್ಚ 23,343 ಕೋಟಿ ರೂ. ಈ ಯೋಜನೆಗೆ 153 ಹೊಸ ಕೋಚ್‌ಗಳ ಖರೀದಿಗೆ ಕೇಂದ್ರದ ಅನುಮೋದನೆ ಅಗತ್ಯವಿದೆ. ಈ ಯೋಜನೆ ವಿಳಂಬವಾದರೆ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಕೋಲಾರ ರೈಲ್ವೆ ಕೋಚ್ ಕಾರ್ಖಾನೆ: 2014ರಲ್ಲಿಯೇ ಘೋಷಣೆಯಾಗಿದ್ದ ಈ ಯೋಜನೆ, ರಾಜ್ಯ ಸರ್ಕಾರ ಭೂಮಿ ನೀಡಿದರೂ ಇನ್ನೂ ಜಾರಿಗೆ ಬಂದಿಲ್ಲ. 50:50 ವೆಚ್ಚದ ಆಧಾರದಲ್ಲಿ ನಡೆಯಬೇಕಿದ್ದ ಈ ಯೋಜನೆ ಏಕೆ ಸ್ಥಗಿತಗೊಂಡಿದೆ ಎಂಬುದರ ಬಗ್ಗೆ ಕೇಂದ್ರದೊಂದಿಗೆ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಾಗರಮಾಲಾ 2.0 ಮತ್ತು ಕರಾವಳಿ ಅಭಿವೃದ್ಧಿ: ಕರ್ನಾಟಕ ಕರಾವಳಿ ಅಭಿವೃದ್ಧಿಗೆ ಸಂಬಂಧಿಸಿದಂತೆ 16,561 ಕೋಟಿ ರೂ. ಮೌಲ್ಯದ 176 ಯೋಜನೆಗಳನ್ನು ಸಾಗರಮಾಲಾ 2.0 ಅಡಿಯಲ್ಲಿ ಸಲ್ಲಿಸಲಾಗಿದೆ. ಬಂದರು ಸಂಪರ್ಕ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಇದು ದೊಡ್ಡ ಉತ್ತೇಜನ ನೀಡಲಿದೆ. ಕೇಂದ್ರ ಸರ್ಕಾರ ಸಾಗರಮಾಲಾ 2.0 ಯೋಜನೆಗೆ ಅಂಕಿತ ಹಾಕದ ಕಾರಣ ರಾಜ್ಯದ ಕರಾವಳಿ ಯೋಜನೆಗಳು ಸ್ಥಗಿತಗೊಂಡಿವೆ.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ: ಉತ್ತರ ಕರ್ನಾಟಕದ ಆರೋಗ್ಯ ಸೇವೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಏಮ್ಸ್ ಅಗತ್ಯವಾಗಿದೆ. 2023ರಲ್ಲೇ ಪ್ರಸ್ತಾವನೆ ಸಲ್ಲಿಸಿದ್ದರೂ, ಆರೋಗ್ಯ ಸಚಿವಾಲಯ ಇನ್ನೂ ಅನುಮೋದನೆ ನೀಡಿಲ್ಲ. ಸಂಸದರು ದೆಹಲಿಯಲ್ಲಿ ಈ ಬಗ್ಗೆ ಸಚಿವರನ್ನು ಭೇಟಿ ಮಾಡಲು ನಿರ್ಧರಿಸಿದರು.

ಇತರ ಪ್ರಮುಖ ಬೇಡಿಕೆಗಳು: ಎಚ್‌ಎಎಲ್‌ ವಿಮಾನ ನಿಲ್ದಾಣವನ್ನು ವಾಣಿಜ್ಯ ಬಳಕೆಗೆ ಪುನರಾರಂಭಿಸುವುದು. ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರ. ರಕ್ಷಣಾ ಇಲಾಖೆಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ವರ್ಗಾವಣೆ ಮಾಡುವುದು. ಬೆಂಗಳೂರು–ಮುಂಬೈ ಅತಿ ವೇಗದ ರೈಲು ಮಾರ್ಗ. ತೆಂಗು ಮತ್ತು ಅಡಿಕೆ ಬೆಳೆಗಳ ಕೀಟ ನಿಯಂತ್ರಣಕ್ಕೆ ಹೆಚ್ಚಿನ ನೆರವು. ಪೊಲೀಸ್ ಆಧುನೀಕರಣಕ್ಕೆ ಹೆಚ್ಚಿನ ಅನುದಾನ ಸೇರಿದಂತೆ ಇತರೆ ಬೇಡಿಕೆಗಳನ್ನು ಕೇಂದ್ರದ ಮುಂದೆ ಇಟ್ಟು ಅಂಗೀಕರಿಸುವ ಕುರಿತು ಚರ್ಚೆ ನಡೆಸಲಾಯಿತು.

Read More
Next Story