
ಬಿಡದಿ ಟೌನ್ಶಿಪ್| ನನಗೆ ಯಾವುದೇ ಪ್ರತಿಷ್ಠೆ ಇಲ್ಲ; ಎಚ್ಡಿಕೆ ಮಾಡಿದ್ದನ್ನೇ ಮುಂದುವರಿಸಿದ್ದೇನೆ ಎಂದ ಸಿಎಂ
"ಭೂಮಿ ನೀಡುವಂತೆ ಯಾರನ್ನೂ ನಾವು ಒತ್ತಾಯ ಮಾಡಿಲ್ಲ. ಇಷ್ಟವಿದ್ದವರು ಜಮೀನು ಕೊಡುತ್ತಾರೆ, ಇಲ್ಲದಿದ್ದರೆ ಬಿಡಬಹುದು. ಪಾಪ ಬದುಕಬೇಕಾದವರು, ದುಡ್ಡು ಬೇಕಾದವರು ಜಮೀನು ಮಾರಾಟ ಮಾಡುತ್ತಾರೆ, ಬೇಡ ಅಂದವರು ಬಿಡುತ್ತಾರೆ." ಎಂದು ಸಿಎಂ ಹೇಳಿದ್ದಾರೆ.
ರಾಜ್ಯದಲ್ಲಿ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿರುವ ಬಿಡದಿ ಟೌನ್ಶಿಪ್ ಯೋಜನೆ ಕುರಿತಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನನಗೆ ಈ ವಿಷಯದಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಈ ಹಿಂದೆ ಏನು ಮಾಡಿದ್ದಾರೋ, ಅದನ್ನೇ ಮುಂದುವರಿಸುತ್ತಿದ್ದೇನಷ್ಟೇ" ಎಂದು ತಿಳಿಸಿದ್ದಾರೆ. ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ರಸ್ತೆ ತಡೆ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ನಾವು ಯಾರನ್ನೂ ಜಮೀನು ನೀಡುವಂತೆ ಒತ್ತಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಭೂಮಿ ನೀಡುವಂತೆ ಯಾರನ್ನೂ ನಾವು ಒತ್ತಾಯ ಮಾಡಿಲ್ಲ. ಇಷ್ಟವಿದ್ದವರು ಜಮೀನು ಕೊಡುತ್ತಾರೆ, ಇಲ್ಲದಿದ್ದರೆ ಬಿಡಬಹುದು. ಪಾಪ ಬದುಕಬೇಕಾದವರು, ದುಡ್ಡು ಬೇಕಾದವರು ಜಮೀನು ಮಾರಾಟ ಮಾಡುತ್ತಾರೆ, ಬೇಡ ಅಂದವರು ಬಿಡುತ್ತಾರೆ." ಎಂದು ಹೇಳಿದ್ದಾರೆ.
ರಸ್ತೆ ತಡೆ ಪ್ರತಿಭಟನೆಗೆ ಅಸಮಾಧಾನ
ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, "ಯಾರೂ ಕೂಡ ರಸ್ತೆ ತಡೆ ಮಾಡಬಾರದು. ರಸ್ತೆ ಯಾಕೆ ತಡೆ ಮಾಡಬೇಕು? ರಸ್ತೆ ತಡೆ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕುಮಾರಸ್ವಾಮಿ ಯೋಜನೆ ಮುಂದುವರಿಕೆ
ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ತಮ್ಮ ಮೇಲೆ ಆರೋಪ ಮಾಡುತ್ತಿರುವ ವಿಪಕ್ಷಗಳ ನಾಯಕರಿಗೆ ತಿರುಗೇಟು ನೀಡಿರುವ ಡಿ.ಕೆ. ಶಿವಕುಮಾರ್, ತಮ್ಮದೇನು ವಿಶೇಷ ಹಠವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
"ನನಗೇನು ಪ್ರೆಸ್ಟೀಜ್ ಇಲ್ಲ. ಕುಮಾರಸ್ವಾಮಿ ಏನು ಮಾಡಿದ್ದರೋ, ಅದನ್ನೇ ನಾವು ಮುಂದುವರಿಸುತ್ತಿದ್ದೇವೆ ಅಷ್ಟೇ" ಎಂದು ತಿಳಿಸುವ ಮೂಲಕ, ಈ ಹಿಂದಿನ ಸರ್ಕಾರದ ನಿರ್ಣಯಗಳೇ ಈಗಿನ ಬೆಳವಣಿಗೆಗೆ ಕಾರಣ ಎಂಬುದನ್ನು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.

