
ವೈದ್ಯರಿಗೆ ʼDrʼ ನೀಡುವಂತೆ ಶಿಕ್ಷಕರಿಗೆ ಇನ್ಮುಂದೆ ‘Tr’ ಗೌರವ: ಸಿಎಂ ಡಿ.ಕೆ. ಶಿವಕುಮಾರ್
ಇಂದಿರಾಗಾಂಧಿ ಹೆಸರಲ್ಲಿ ನಡೆಯುತ್ತಿರುವ ಅನುದಾನಿತ ಶಾಲೆಯನ್ನು ಉಳಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಇಒಗೆ ಸಿಎಂ ಡಿ.ಕೆ.ಶಿವಕುಮಾರ್ ಸ್ಥಳದಲ್ಲೇ ಆದೇಶಿಸಿದರು.
ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಶಿಕ್ಷಕರಿಗೆ ವೃತ್ತಿಪರ ಗೌರವ ನೀಡುವುದು ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದ 'ಪ್ರಜಾಸೇವಾ ಅಭಿಯಾನ'ಕ್ಕೆ ಚಾಲನೆ ನೀಡಿದ ಅವರು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ನಾಡಿಗೆ ಪರಿಚಯಿಸಿದರು.
"ಅಕ್ಷರ ಸೇವೆಯೇ ಪರಮಾತ್ಮನ ಸೇವೆ. ಸಮಾಜವನ್ನು ರೂಪಿಸುವ ಶಿಕ್ಷಕರಿಗೆ ಸೂಕ್ತ ಗೌರವ ದೊರೆಯಬೇಕು. ವೈದ್ಯರ ಹೆಸರಿನ ಮುಂದೆ ‘Dr’ ಎಂದು ಬಳಸುವಂತೆ, ಇನ್ಮುಂದೆ ಪ್ರತಿ ಶಿಕ್ಷಕರ ಹೆಸರಿನ ಮುಂದೆ ‘Tr’ (Teacher) ಎಂಬ ಗೌರವಾರ್ಥ ಪದ ಬಳಸಲು ಸರ್ಕಾರ ತೀರ್ಮಾನಿಸಿದೆ" ಎಂದು ಘೋಷಿಸಿದರು. ಇದು ಶಿಕ್ಷಕ ಸಮುದಾಯದಲ್ಲಿ ಸಂಭ್ರಮಕ್ಕೆ ಕಾರಣವಾಯಿತು. ಅಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಲು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 7ರಷ್ಟು ಆಂತರಿಕ ಮೀಸಲಾತಿ ನೀಡುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ.
‘ಪ್ರಜಾಸೇವಾ ಅಭಿಯಾನ’
'ಬಾಗಿಲಿಗೆ ಬಂದಿದೆ ನಿಮ್ಮ ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ' ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭವಾಗಿರುವ ಈ ಅಭಿಯಾನವು ಆಡಳಿತ ವ್ಯವಸ್ಥೆಯನ್ನು ಜನರ ಬಳಿಗೇ ಕೊಂಡೊಯ್ಯುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ. ಇನ್ನು ಮುಂದೆ ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಜಿಲ್ಲಾ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಖುದ್ದು ಗ್ರಾಮ ಪಂಚಾಯಿತಿ, ಹೋಬಳಿ ಹಾಗೂ ತಾಲೂಕು ಮಟ್ಟಕ್ಕೆ ಭೇಟಿ ನೀಡಲಿದ್ದಾರೆ. ವಿಧಾನಸೌಧ ಅಥವಾ ಜಿಲ್ಲಾಧಿಕಾರಿ ಕಚೇರಿಗಳಿಗೆ ಅಲೆಯಲಾಗದ ಬಡವರು, ವೃದ್ಧರು ಮತ್ತು ಅಂಗವಿಕಲರಿಗೆ ಸ್ಥಳದಲ್ಲೇ ನ್ಯಾಯ ಒದಗಿಸುವುದು ಇದರ ಮೂಲ ಉದ್ದೇಶವಾಗಿದೆ. ಈಗಾಗಲೇ ಅಭಿಯಾನದ ಅಡಿಯಲ್ಲಿ 50 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಕೇವಲ ಅರ್ಜಿ ಸ್ವೀಕರಿಸುವುದಷ್ಟೇ ಅಲ್ಲದೆ, ಅವುಗಳಿಗೆ ಪರಿಹಾರ ಸಿಗುವವರೆಗೂ ಸರ್ಕಾರ ಬೆನ್ನಿಗೆ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಇಂದಿರಾಗಾಂಧಿ ಹೆಸರಿನ ಶಾಲೆ ಮುಚ್ಚುವುದಿಲ್ಲ"
ಕೂಡ್ಲಿಗಿಯ ಕಾರ್ಯಕ್ರಮವು ಅನೇಕ ಭಾವುಕ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಇಂದಿರಾಗಾಂಧಿ ಅವರ ಹೆಸರಿನಲ್ಲಿ ನಡೆಯುತ್ತಿರುವ ಏಕೈಕ ಅನುದಾನಿತ ಪ್ರೌಢಶಾಲೆ ಮುಚ್ಚುವ ಭೀತಿಯಲ್ಲಿದ್ದಾಗ, ಶಿಕ್ಷಕಿಯರು ಸಿಎಂ ಮುಂದೆ ಕಣ್ಣೀರು ಹಾಕಿದರು. ಕೂಡಲೇ ಸ್ಪಂದಿಸಿದ ಸಿಎಂ, ಆ ಶಾಲೆಯನ್ನು ಉಳಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಇಒ ಅವರಿಗೆ ಸ್ಥಳದಲ್ಲೇ ಆದೇಶಿಸಿದರು. ಹಕ್ಕುಪತ್ರ ಮತ್ತು ಉಳುಮೆ ಭೂಮಿಗಾಗಿ ಬೇಡಿಕೆಯಿಟ್ಟ ತಾಯವ್ವನಹಳ್ಳಿಯ ಮಂಗಳ ಅವರಿಗೆ, ಉಳುವವನಿಗೆ ಭೂಮಿ ಕೊಟ್ಟ ಪಕ್ಷ ನಮ್ಮದು ಎಂದು ಭರವಸೆ ನೀಡಿ ತಹಶಿಲ್ದಾರ್‌ಗೆ ತಕ್ಷಣ ಪರಿಹಾರ ನೀಡುವಂತೆ ಸೂಚಿಸಿದರು. ತೃತೀಯ ಲಿಂಗಿಗಳಾದ ಮಂಜಮ್ಮ ಜೋಗತಿ ಅವರ ಮನವಿಗೆ ಸ್ಪಂದಿಸಿದ ಸಿಎಂ, ಪ್ರತಿ ಜಿಲ್ಲೆಯಲ್ಲೂ ನಿವೇಶನ ರಹಿತರಿಗೆ 50 ಸಾವಿರ ಮನೆಗಳನ್ನು ನೀಡುವ ಯೋಜನೆಯಡಿ ಇವರಿಗೂ ಮನೆ ಒದಗಿಸುವ ಭರವಸೆ ನೀಡಿದರು.
ಸಮಗ್ರ ಪರಿಶೀಲನೆ, 60ಕ್ಕೂ ಹೆಚ್ಚು ಕೌಂಟರ್‌ಗಳು
ಜನರ ಸಮಸ್ಯೆಗಳನ್ನು ಆಲಿಸಲು ಸುಮಾರು 60ಕ್ಕೂ ಹೆಚ್ಚು ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಇದರಲ್ಲಿ 32 ಪಂಚಾಯತಿ ಕೌಂಟರ್‌ಗಳು ಹಾಗೂ 28ಕ್ಕೂ ಹೆಚ್ಚು ವಿವಿಧ ಇಲಾಖೆಗಳು ಮತ್ತು ಗ್ಯಾರಂಟಿ ಯೋಜನೆಗಳ ಕೌಂಟರ್‌ಗಳಿದ್ದವು. ಪ್ರತಿಯೊಂದು ಕೌಂಟರ್‌ಗೆ ತೆರಳಿದ ಡಿ.ಕೆ. ಶಿವಕುಮಾರ್, ಅಲ್ಲಿನ ಅಧಿಕಾರಿಗಳ ಕಾರ್ಯವೈಖರಿ ಮತ್ತು ಬಂದಿರುವ ದೂರುಗಳ ಕುರಿತು ಖುದ್ದಾಗಿ ಮಾಹಿತಿ ಪಡೆದರು. ಒಳಮೀಸಲಾತಿ ಮತ್ತು ಭೂಮಿ ಹಂಚಿಕೆ ಸಂಬಂಧ ಹಲವು ಮನವಿಗಳು ಬಂದವು. ಕೆರೆ ಅಕ್ರಮ ಒತ್ತುವರಿ ವಿರುದ್ಧ ಸಾರ್ವಜನಿಕರು ದೂರು ನೀಡಿದರು. ರಾಯಚೂರಿನಲ್ಲಿ ನಡೆದ ದಲಿತರ ಹತ್ಯೆ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲು ದಲಿತ ರಕ್ಷಣಾ ವೇದಿಕೆ ಮನವಿ ಮಾಡಿತು.

