
ಅಕ್ರಮ ಬಂದೂಕು, ಶಸ್ತ್ರಾಸ್ತ್ರಗಳನ್ನು ನ.1 ರೊಳಗೆ ಸರ್ಕಾರಕ್ಕೆ ಒಪ್ಪಿಸಿ: ಸಿಎಂ
ತಾವಾಗಿಯೇ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಆದರೆ, ಗಡುವು ಮುಗಿದ ನಂತರವೂ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ಹೊಂದಿರುವವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಟ್ಟುನಿಟ್ಟಾದ ಸಂದೇಶ ರವಾನಿಸಿದ್ದು, ನವೆಂಬರ್ 1ನೇ ತಾರೀಕಿನೊಳಗೆ ಪರವಾನಗಿ ಇಲ್ಲದ ಅಕ್ರಮ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು. ತಾವಾಗಿಯೇ ಬಂದು ಶಸ್ತ್ರಾಸ್ತ್ರಗಳನ್ನು ಒಪ್ಪಿಸುವವರ ಮೇಲೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಆದರೆ, ಗಡುವು ಮುಗಿದ ನಂತರವೂ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿರುವುದು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಶುಕ್ರವಾರ ನಡೆದ 'ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ'ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ಕ್ಷೇತ್ರದಲ್ಲಿ ಹಿಂದೆ ತಾವು 300ಕ್ಕೂ ಹೆಚ್ಚು ಅಕ್ರಮ ಬಂದೂಕುಗಳನ್ನು ಜನರು ಸರ್ಕಾರಕ್ಕೆ ಒಪ್ಪಿಸಿದ್ದರು. ತಮ್ಮ ಹಾಗೂ ತಮ್ಮ ಜಾನುವಾರುಗಳ ರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳುವುದಾದರೆ ಕಾನೂನುಬದ್ಧವಾಗಿ ಪರವಾನಗಿ ಪಡೆಯಿರಿ, ಅಕ್ರಮಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.
ಸಿಬ್ಬಂದಿ ಭತ್ಯೆ ಹಾಗೂ ಕ್ಷೇಮಾಭಿವೃದ್ಧಿ
ಅರಣ್ಯ ಇಲಾಖೆಯ ಸಿಬ್ಬಂದಿ ವನ್ಯಜೀವಿಗಳ ಸಂಘರ್ಷದ ನಡುವೆ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅರಣ್ಯ ಸಿಬ್ಬಂದಿ ಭತ್ಯೆಯ ವಿಚಾರ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ, ಪೊಲೀಸ್ ಇಲಾಖೆಯ ಸಿಬ್ಬಂದಿ ಭತ್ಯೆಯ ಮಾದರಿಯಲ್ಲೇ ತೀರ್ಮಾನ ಕೈಗೊಳ್ಳಲಾಗುವುದು. ಜನಸಾಮಾನ್ಯರು ಪೊಲೀಸರನ್ನು ಸ್ವೀಕರಿಸುವ ಮಟ್ಟಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ನೋಡುವುದಿಲ್ಲ. ಇಲಾಖೆಯ ಅಧಿಕಾರಿಗಳು ಜನರೊಂದಿಗೆ ಸ್ನೇಹಪರ ವಾತಾವರಣ ನಿರ್ಮಿಸಿಕೊಳ್ಳಬೇಕು. ಅರಣ್ಯ ಒತ್ತುವರಿ ಸಮಸ್ಯೆಯನ್ನು ಕಾನೂನುಬದ್ಧವಾಗಿ ಬಗೆಹರಿಸೋಣ, ಆದರೆ ಜನರ ಮೇಲೆ ಅತಿಯಾದ ಒತ್ತಡ ಹೇರುವುದು ಬೇಡ. ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗದೆ, ನಿಯಮಗಳ ಚೌಕಟ್ಟಿನಲ್ಲಿ ವಿನಾಯಿತಿಗಳನ್ನು ನೀಡುವ ಮೂಲಕ ಸಮನ್ವಯ ಸಾಧಿಸಿ ಎಂದು ಸಲಹೆ ನೀಡಿದರು.
ಅರಣ್ಯ ಇಲಾಖೆಯೊಂದಿಗಿನ ಒಲವು
ನನ್ನ ಊರು, ಮನೆ ಮತ್ತು ರಾಜಕೀಯ ಕ್ಷೇತ್ರವೆಲ್ಲವೂ ಅರಣ್ಯವನ್ನೇ ಹೊಂದಿಕೊಂಡಿವೆ. ಅರ್ಕಾವತಿಯಲ್ಲಿ ಮೀನು ಹಿಡಿಯುತ್ತಿದ್ದ ದಿನಗಳ ನೆನಪು ನನಗಿದೆ. ಹಾಗಾಗಿ, ಅರಣ್ಯ ಸಚಿವನಾಗಬೇಕು ಎಂಬ ಆಸೆ ನನಗಿತ್ತು. ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಈ ಅವಕಾಶ ಕೇಳಿದ್ದೆ, ಆದರೆ ಕೃಷಿ ಇಲಾಖೆ ದೊರೆಯಿತು. ನಂತರದ ದಿನಗಳಲ್ಲಿ ನಗರಾಭಿವೃದ್ಧಿ ಇಲಾಖೆ ಸಿಕ್ಕಾಗ ಡಾ. ರಾಜ್‌ಕುಮಾರ್ ಅವರ ಅಪಹರಣದಂತಹ ಸಂಕಷ್ಟದ ಘಟನೆಗಳು ನಡೆದವು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು. ಅರಣ್ಯ ಇಲಾಖೆಯ ಆದಾಯ ಹೆಚ್ಚಿಸಲು ತೇಗದ ಸಿರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ರೈತರಿಗೆ ಲಾಭವಾಗುವಂತಹ ಯೋಜನೆಗಳಿಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ನಗರ ಪ್ರದೇಶಗಳಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗಗಳಲ್ಲಿ 'ಟ್ರೀ ಪಾರ್ಕ್' ನಿರ್ಮಿಸಿ, ನಗರದ ಶ್ವಾಸಕೋಶವನ್ನು ಹಿಗ್ಗಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಕಸ್ತೂರಿ ರಂಗನ್ ವರದಿಯ ವಿಚಾರದಲ್ಲಿ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಿದ ಅವರು, "ಈ ವರದಿಯನ್ನು ಸರ್ಕಾರ ಮೂರ್ನಾಲ್ಕು ಬಾರಿ ವಾಪಸ್ ಕಳುಹಿಸಿದೆ. ನಮಗೊಂದು ನ್ಯಾಯ, ಕೇರಳಕ್ಕೆ ಇನ್ನೊಂದು ನ್ಯಾಯ ಎಂಬ ತಾರತಮ್ಯವನ್ನು ನಾವು ಒಪ್ಪುವುದಿಲ್ಲ. ಈ ಕುರಿತು ಚರ್ಚಿಸಲು ರಾಜ್ಯದಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದರು.

