ನೂತನ ಶಿಕ್ಷಣ ನೀತಿ ರೂಪಿಸಲು ಕಾಂಗ್ರೆಸ್ ಸಿದ್ಧ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ
x

ನೂತನ ಶಿಕ್ಷಣ ನೀತಿ ರೂಪಿಸಲು ಕಾಂಗ್ರೆಸ್ ಸಿದ್ಧ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಶಿಕ್ಷಣ ನೀತಿಯಲ್ಲಿ ಬದಲಾವಣೆ ತರಲು ಬದ್ಧರಾಗಿದ್ದು, ಕಾಂಗ್ರೆಸ್ ಆಡಳಿತವಿರುವ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ದೆಹಲಿಯಲ್ಲಿ ಸಭೆ ನಡೆಸಲು ನಿಶ್ಚಯಿಸಲಾಗಿತ್ತು ಎಂದು ಸಿಎಂ ಹೇಳಿದ್ದಾರೆ.


Click the Play button to hear this message in audio format

ನವ ಯುವ ಪೀಳಿಗೆಯ ಅಗತ್ಯತೆ ಮತ್ತು ಭವಿಷ್ಯದ ಆಲೋಚನೆಗಳಿಗೆ ಪೂರಕವಾಗಿ, ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ನ ಸೂಚನೆಯಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಪ್ರತ್ಯೇಕ ನೂತನ ಶಿಕ್ಷಣ ನೀತಿಯನ್ನು ರೂಪಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಆಯೋಜಿಸಿದ್ದ 'ರಾಮಯ್ಯ ವಿಜ್ಞಾನ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆ'ಯ ಉದ್ಘಾಟನೆ ಹಾಗೂ 'ನಾರಾಯಣ ಪ್ರಜ್ಞಾಲಯ'ದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣ ನೀತಿಯಲ್ಲಿ ಬದಲಾವಣೆ ತರಲು ನಾವು ಬದ್ಧರಾಗಿದ್ದೇವೆ. ಈ ಸಂಬಂಧ ಕಾಂಗ್ರೆಸ್ ಆಡಳಿತವಿರುವ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ದೆಹಲಿಯಲ್ಲಿ ಸಭೆ ನಡೆಸಲು ನಿಶ್ಚಯಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಅದು ರದ್ದಾಯಿತು. ವಿದ್ಯಾರ್ಥಿಗಳು ಕೇವಲ ಡಿಗ್ರಿ ಪಡೆದು ಉದ್ಯೋಗದ ಹುಡುಕಾಟದಲ್ಲಿ ಕಾಲಹರಣ ಮಾಡಬಾರದು. ಬದಲಾಗಿ, ಅವರು ಸ್ವಯಂ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು ಎಂಬುದು ನಮ್ಮ ಸರ್ಕಾರದ ಆಶಯ ಎಂದರು.

ಬೆಂಗಳೂರು ಜಾಗತಿಕ ಹೂಡಿಕೆಯ ನೆಚ್ಚಿನ ಆಯ್ಕೆ

ಅಮೆರಿಕದ 9/11 ದುರಂತದ ನಂತರ, ಸುರಕ್ಷಿತ ಸ್ಥಳಕ್ಕಾಗಿ ಅಮೆರಿಕವು ದೆಹಲಿ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ನಗರಗಳನ್ನು ಸಮೀಕ್ಷೆ ನಡೆಸಿತ್ತು. ಅಂತಿಮವಾಗಿ ಜ್ಞಾನ, ಸಂಸ್ಕೃತಿ ಮತ್ತು ಪ್ರತಿಭೆಯ ತಾಣವಾದ ಬೆಂಗಳೂರನ್ನು ಅದು ಆಯ್ಕೆ ಮಾಡಿಕೊಂಡಿತು. ದಾವೋಸ್‌ನಂತಹ ಜಾಗತಿಕ ವೇದಿಕೆಗಳಲ್ಲಿಯೂ ಬೆಂಗಳೂರಿಗೆ ಮೊದಲ ಆದ್ಯತೆಯಿದೆ. ಮುಂಬೈನ ವೆಚ್ಚಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಲಾಭದಾಯಕವಾಗಿದೆ. ಸಿಲಿಕಾನ್ ವ್ಯಾಲಿಯಲ್ಲಿ 1.6 ಮಿಲಿಯನ್ ಐಟಿ ಉದ್ಯೋಗಿಗಳಿದ್ದರೆ, ಬೆಂಗಳೂರಿನಲ್ಲಿ 2.6 ಮಿಲಿಯನ್ ಐಟಿ ವೃತ್ತಿಪರರು ಕಾರ್ಯನಿರ್ವಹಿಸುತ್ತಿದ್ದಾರೆ. ಇದು ನಮ್ಮ ನಗರದ ಹೆಗ್ಗಳಿಕೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ

ಭಾರತದಲ್ಲಿರುವ ಒಟ್ಟು 138 ಅಂತಾರಾಷ್ಟ್ರೀಯ ಶಾಲೆಗಳಲ್ಲಿ 37 ಶಾಲೆಗಳು ಕರ್ನಾಟಕದಲ್ಲೇ ಇವೆ. ನಮ್ಮಲ್ಲಿ ಪ್ರತಿ ವರ್ಷ 20 ಸಾವಿರ ಎಂಜಿನಿಯರ್‌ಗಳು, 59 ವೈದ್ಯಕೀಯ ಕಾಲೇಜುಗಳಿಂದ 13,940 ವೈದ್ಯರು ಮತ್ತು 1.2 ಲಕ್ಷಕ್ಕೂ ಹೆಚ್ಚು ಪ್ಯಾರಾಮೆಡಿಕಲ್ ಸಿಬ್ಬಂದಿ ಸಿದ್ಧಗೊಳ್ಳುತ್ತಿದ್ದಾರೆ. ಫಾಕ್ಸ್‌ಕಾನ್‌ನಂತಹ ಬೃಹತ್ ಸಂಸ್ಥೆಗಳು 50 ಸಾವಿರಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡಿವೆ. ಉದ್ಯಮಿಗಳು ಭಾರತದ ಪೈಕಿ ಬೆಂಗಳೂರನ್ನು ಅತಿ ಸುರಕ್ಷಿತ ಎಂದು ಭಾವಿಸಿದ್ದಾರೆ ಎಂದು ನುಡಿದರು.

ಎಂ.ಎಸ್. ರಾಮಯ್ಯ ಅವರ ಕೊಡುಗೆ

ಎಂ.ಎಸ್. ರಾಮಯ್ಯ ಅವರು ಬೆಂಗಳೂರು ಮತ್ತು ಕರ್ನಾಟಕದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಜಯರಾಂ ಅವರು ನನಗೆ ಗುರು ಸಮಾನರು, ಅವರಿಂದ ನಾನು ಅನೇಕ ವಿಷಯಗಳನ್ನು ಕಲಿತಿದ್ದೇನೆ. ರಾಮಯ್ಯ ಸಂಸ್ಥೆಯು ಸಜ್ಜನ್ ಜಿಂದಾಲ್ ಅವರಂತಹ ಹಲವು ಬೃಹತ್ ಉದ್ಯಮಿಗಳನ್ನು ಸೃಷ್ಟಿಸಿದೆ. ಪರೋಪಕಾರಕ್ಕಾಗಿ ಬಾಳುವ ಮರ, ನದಿ ಮತ್ತು ಹಸುವಿನಂತೆ ರಾಮಯ್ಯ ಅವರ ಕುಟುಂಬವೂ ಜ್ಞಾನವಂತ ಸಮಾಜ ನಿರ್ಮಾಣಕ್ಕೆ ತಮ್ಮನ್ನು ಅರ್ಪಿಸಿಕೊಂಡಿದೆ. ಜಯರಾಂ ಅವರು ಇತಿಹಾಸ ಓದುವವರಲ್ಲ, ಇತಿಹಾಸ ಸೃಷ್ಟಿಸುವವರು ಎಂದು ಶ್ಲಾಘಿಸಿದರು.

ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಒತ್ತು

ನ್ಯೂಜಿಲೆಂಡ್‌ನಲ್ಲಿನ ವ್ಯವಸ್ಥೆಯಲ್ಲಿ ಪದವಿಗಿಂತ ಕೌಶಲ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ನಮ್ಮ ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೆ, ಕೌಶಲ್ಯಗಳನ್ನು ಮೈಗೂಡಿಸಿಕೊಂಡು ದೇಶದ ಏಳಿಗೆಗೆ ಕೊಡುಗೆ ನೀಡಬೇಕು. ನಾನು ಹುಟ್ಟಿನಿಂದ ರೈತ, ವೃತ್ತಿಯಿಂದ ಉದ್ಯಮಿ, ಆಯ್ಕೆಯಿಂದ ಶಿಕ್ಷಣತಜ್ಞ ಹಾಗೂ ಆಸಕ್ತಿಯಿಂದ ರಾಜಕಾರಣಿ. ನನ್ನ ಹೃದಯ ಯಾವಾಗಲೂ ಶಿಕ್ಷಣ ಕ್ಷೇತ್ರದಲ್ಲೇ ಇರುತ್ತದೆ ಎಂದು ಭಾವುಕರಾಗಿ ನುಡಿದರು. "ಸ್ವಾಮಿ ವಿವೇಕಾನಂದ, ಜಮ್‌ಶೆಟ್‌ಜಿ ಟಾಟಾ ಹಾಗೂ ಅಂದಿನ ಮೈಸೂರು ಮಹಾರಾಜರ ದೂರದೃಷ್ಟಿಯಿಂದಾಗಿ ನಮ್ಮ ಬೆಂಗಳೂರಿನಲ್ಲಿ ಐಐಎಸ್ಸಿಯಂತಹ ದೊಡ್ಡ ವಿಜ್ಞಾನ ಸಂಸ್ಥೆ ತಲೆಎತ್ತಿದೆ. ಟಾಟಾ ಮತ್ತು ವಿವೇಕಾನಂದರ ನಡುವಿನ ಸಂವಾದಕ್ಕೆ ಮೈಸೂರು ಮಹಾರಾಜರು ಜಾಗ ನೀಡದಿದ್ದರೆ ಇಂದು ನಾವು ಈ ಮಟ್ಟದ ವೈಜ್ಞಾನಿಕ ಪ್ರಗತಿಯನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ" ಎಂದು ತಿಳಿಸಿದರು.

Read More
Next Story