
ಬಿಡದಿ ಟೌನ್‌ಶಿಪ್ ಕದನ: ಬಹಿರಂಗ ಚರ್ಚೆಗೆ ಕುಮಾರಸ್ವಾಮಿ-ಶಿವಕುಮಾರ್ ಸಮರ
ಎಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಹಿರಂಗ ಚರ್ಚೆಗೆ ನೀಡಿದ ಪಂಥಾಹ್ವಾನಕ್ಕೆ ಡಿ.ಕೆ.ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಸ್ಥಳ, ಸಮಯ ನಿಗದಿಗೊಳಿಸಲಿ ಎಂದಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಇದೀಗ ಪಂಥಾಹ್ವಾನದ್ದೇ ಚರ್ಚೆ ನಡೆಯುತ್ತಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಅಭಿವೃದ್ಧಿ ಯೋಜನೆಗಳ ಕುರಿತು ನಡೆಯುತ್ತಿರುವ ವಾಕ್ಸಮರ ತಾರಕಕ್ಕೇರಿದೆ. ಬಿಡದಿ ಟೌನ್‌ಶಿಪ್, ನರೇಗಾ ಯೋಜನೆ ಮತ್ತು ಬೆಂಗಳೂರು ಉಪನಗರ ಯೋಜನೆಗಳ ಕುರಿತು ಬಹಿರಂಗ ಚರ್ಚೆಗೆ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಸವಾಲನ್ನು ಡಿ.ಕೆ. ಶಿವಕುಮಾರ್ ಅಧಿಕೃತವಾಗಿ ಸ್ವೀಕರಿಸಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳಾದ ಬಿಡದಿ ಟೌನ್‌ಶಿಪ್, ನರೇಗಾ ಅನುಷ್ಠಾನ ಮತ್ತು ಬೆಂಗಳೂರು ಉಪನಗರ ರೈಲು ಯೋಜನೆಗಳ ಬಗ್ಗೆ ಹಲವಾರು ಅನುಮಾನಗಳನ್ನು ವ್ಯಕ್ತಪಡಿಸಿ, ಬಹಿರಂಗ ಚರ್ಚೆಗೆ ಡಿ.ಕೆ.ಶಿವಕುಮಾರ್‌ಗೆ ಪಂಥಾಹ್ವಾನ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಡಿ.ಕೆ. ಶಿವಕುಮಾರ್ ಅವರು, ಕುಮಾರಸ್ವಾಮಿ ಅವರು ಹೇಳಿದ ಸ್ಥಳ ಮತ್ತು ಸಮಯಕ್ಕೆ ನಾನು ಚರ್ಚೆಗೆ ಬರಲು ಸಿದ್ಧ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಈ ರಾಜಕೀಯ ಜಟಾಪಟಿಯ ಕೇಂದ್ರಬಿಂದುವಾಗಿರುವುದು ಬಿಡದಿ ಟೌನ್‌ಶಿಪ್ ಯೋಜನೆಯಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಬಿಡದಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಟೌನ್‌ಶಿಪ್ ಯೋಜನೆಯನ್ನು ಕುಮಾರಸ್ವಾಮಿ ತೀವ್ರವಾಗಿ ವಿರೋಧಿಸಿದ್ದಾರೆ. ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಒಪ್ಪಿಸಲು ಕಾಂಗ್ರೆಸ್ ಸರ್ಕಾರ ದಲ್ಲಾಳಿಯಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ಈ ಯೋಜನೆ ಪ್ರಾರಂಭವಾಗಿದ್ದು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ. ಅವರ ಅವಧಿಯಲ್ಲೇ ಜಮೀನನ್ನು ರೆಡ್‌ಝೋನ್ ಎಂದು ಘೋಷಿಸಲಾಗಿತ್ತು. ಈಗ ಅವರು ಅದನ್ನು ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ನಾನು ಪರಿಹಾರ ಘೋಷಣೆ ಮಾಡಿದ್ದಕ್ಕೆ ಶೇ. 80ರಷ್ಟು ರೈತರು ಒಪ್ಪಿಕೊಂಡಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ನೋಟಿಫಿಕೇಷನ್ ಹೊರಡಿಸಿ ಹಣ ವಿತರಣೆ ಮಾಡುತ್ತೇವೆ. ರೈತರನ್ನು ಈ ಚರ್ಚೆಗೆ ಎಳೆದು ತರುವುದು ಸರಿಯಲ್ಲ ಎಂದಿದ್ದಾರೆ.
ಕುಮಾರಸ್ವಾಮಿ ಅವರ ಸವಾಲನ್ನು ಸ್ವೀಕರಿಸಿರುವ ಡಿ.ಕೆ.ಶಿವಕುಮಾರ್, ಉಕ್ಕು ಮತ್ತು ಕಬ್ಬಿಣ ಸಚಿವರಿಗೆ ತಿಳಿಸಿ ಕಬ್ಬಿಣ ಮತ್ತು ಸಿಮೆಂಟ್ ದರ ಕಡಿಮೆ ಮಾಡಿಸಲಿ ಎಂಬುದಾಗಿ ರೈತರು ನನಗೆ ಹೇಳಿದ್ದಾರೆ. ಕುಮಾರಸ್ವಾಮಿ ಅವರು ದಂಡು ದಾಳಿ ಕರೆದುಕೊಂಡು ಬಂದರೆ, ನಾನು ಒಬ್ಬನೇ ಬಂದು ಚರ್ಚಿಸುತ್ತೇನೆ. ಅಸಂಬದ್ಧ ಪದ ಬಳಸದೆ ಆರೋಗ್ಯಕರವಾಗಿ ಚರ್ಚೆ ನಡೆಸೋಣ ಎಂದು ತಿರುಗೇಟು ನೀಡಿದ್ದಾರೆ.
ಆಡಳಿತದ ಬಗ್ಗೆ ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಆಡಳಿತ ನಡೆಸುವಾಗ ಕುಮಾರಸ್ವಾಮಿ ಅವರಿಂದ ಕಲಿಯಲು ನನಗೆ ಏನೂ ಇಲ್ಲ. ಅವರು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. 17 ಜನ ಶಾಸಕರನ್ನು ಇಟ್ಟುಕೊಂಡು ಅವರಿಗೆ ಏನು ಮಾಡಲು ಸಾಧ್ಯ? ಎಂದು ಲೇವಡಿ ಮಾಡಿದ್ದಾರೆ.
ಇಬ್ಬರೂ ಪ್ರಭಾವಿ ನಾಯಕರು ಮುಖಾಮುಖಿಯಾದರೆ, ಅದು ಕರ್ನಾಟಕ ರಾಜಕಾರಣದಲ್ಲಿ ದೊಡ್ಡ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಒಬ್ಬರು ಮಾಜಿ ಮುಖ್ಯಮಂತ್ರಿ, ಇನ್ನೊಬ್ಬರು ಉಪಮುಖ್ಯಮಂತ್ರಿಯಾಗಿರುವುದರಿಂದ ಜನರ ಮುಂದೆ ಸತ್ಯಾಸತ್ಯತೆಗಳನ್ನು ಸಾಬೀತುಪಡಿಸುವುದು ಎರಡೂ ಪಕ್ಷಗಳಿಗೂ ಅನಿವಾರ್ಯವಾಗಿದೆ.

