ಎಬೋಲಾ ಭೀತಿ: ಜನರು ಆತಂಕಪಡಬೇಡಿ, ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದ ಸರ್ಕಾರ
x

ಎಬೋಲಾ ಭೀತಿ: ಜನರು ಆತಂಕಪಡಬೇಡಿ, ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದ ಸರ್ಕಾರ

ಕೆಲ ದೇಶಗಳಲ್ಲಿ ಎಬೋಲಾ ವೈರಸ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡಿದೆ. ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದೆ.


Click the Play button to hear this message in audio format

ಪ್ರಸ್ತುತ ದೇಶದಲ್ಲಿ ಒಂದೆಡೆ ಆರೋಗ್ಯದ ಸವಾಲುಗಳು ಎದುರಾಗಿದ್ದರೆ, ಮತ್ತೊಂದೆಡೆ ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿನ ಅನಿಶ್ಚಿತತೆಯು ಜನಸಾಮಾನ್ಯರನ್ನು ಕಂಗಾಲಾಗಿಸಿದೆ. ಎಬೋಲಾ ವೈರಸ್‌ನಂತಹ ಸೋಂಕುಗಳ ಭೀತಿ, ಗಗನಕ್ಕೆ ಏರುತ್ತಿರುವ ಪೆಟ್ರೋಲ್ ದರ ಮತ್ತು ನೀಟ್ ಪರೀಕ್ಷಾ ವ್ಯವಸ್ಥೆಯ ವೈಫಲ್ಯಗಳು ಸರ್ಕಾರದ ಮುಂದಿರುವ ಪ್ರಮುಖ ಸವಾಲುಗಳಾಗಿವೆ.

ಆಫ್ರಿಕಾದ ಕೆಲ ದೇಶಗಳಲ್ಲಿ ಎಬೋಲಾ ವೈರಸ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡಿದೆ. ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದೆ. ದೇಶದಲ್ಲಿ ಇದುವರೆಗೆ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲವಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಉಗಾಂಡಾ, ಕಾಂಗೋ ಮುಂತಾದ ದೇಶಗಳಿಂದ ಬರುವ ಪ್ರಯಾಣಿಕರನ್ನು 21 ದಿನಗಳ ಕಾಲ ಕಡ್ಡಾಯ ನಿಗಾದಲ್ಲಿ ಇರಿಸಲು ನಿರ್ಧರಿಸಲಾಗಿದೆ. ಯಾವುದೇ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳಿಗೆ ಕಿವಿಗೊಡಬಾರದೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

ಪೆಟ್ರೋಲ್ ದರ ಏರಿಕೆ: ಆರ್ಥಿಕ ನೀತಿಯ ವೈಫಲ್ಯದ ಆರೋಪ

ಇಂಧನ ಬೆಲೆ ಏರಿಕೆಯು ಇದೀಗ ರಾಷ್ಟ್ರೀಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಯುದ್ಧದ ನೆಪವೊಡ್ಡಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯನ್ನು ನೆಪ ಮಾಡಿಕೊಂಡು ಸರ್ಕಾರವು ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ವರಿಷ್ಠ ರಾಹುಲ್ ಗಾಂಧಿಯವರು ಆರು ತಿಂಗಳ ಹಿಂದೆಯೇ ಎಚ್ಚರಿಸಿದ್ದ ಆರ್ಥಿಕ ಸಂಕಷ್ಟವು ಇದೀಗ ವಾಸ್ತವಕ್ಕೆ ಇಳಿದಿದೆ. ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 120 ಡಾಲರ್‌ಗೆ ಏರಿದ್ದರೂ, ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗಿತ್ತು. ಆದರೆ, ಪ್ರಸ್ತುತ ಕೇಂದ್ರ ಸರ್ಕಾರವು ಇಂಧನ ದರ ಕಡಿಮೆ ಇದ್ದಾಗಲೂ ತೆರಿಗೆ ಕಡಿತಗೊಳಿಸಿ ಜನರಿಗೆ ಲಾಭ ವರ್ಗಾಯಿಸಲಿಲ್ಲ. ಬದಲಾಗಿ ಬೊಕ್ಕಸ ತುಂಬಿಸಿಕೊಂಡಿದೆ. ಇದೀಗ ಯುದ್ಧದ ನೆಪದಲ್ಲಿ ಬೆಲೆ ಏರಿಕೆ ಮಾಡುತ್ತಿರುವುದು ಸರ್ಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಚುನಾವಣೆ ಗೆಲ್ಲುವುದರಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸುವುದರಲ್ಲಿ ನಿರತರಾಗಿದ್ದಾರೆ ಹೊರತು, ಜನಸಾಮಾನ್ಯರ ಕಷ್ಟಗಳನ್ನು ಪರಿಹರಿಸುವಲ್ಲಿ ಸೋತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ನೀಟ್ ಪರೀಕ್ಷಾ ಅವ್ಯವಸ್ಥೆ

ಶೈಕ್ಷಣಿಕ ಕ್ಷೇತ್ರದಲ್ಲೂ ಕೇಂದ್ರ ಸರ್ಕಾರವು ಅಧ್ವಾನಗಳನ್ನು ಸೃಷ್ಟಿಸಿದೆ. ಪ್ರತಿ ವರ್ಷ ನೀಟ್ ಪರೀಕ್ಷೆಯಲ್ಲಿ ಒಂದಲ್ಲ ಒಂದು ಎಡವಟ್ಟುಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಪರೀಕ್ಷಾ ವ್ಯವಸ್ಥೆಯಲ್ಲಿನ ದೋಷಗಳಿಂದಾಗಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆಯಂತಹ ತೀವ್ರ ನಿರ್ಧಾರಗಳಿಗೆ ಮುಂದಾಗಿರುವುದು ದುರಂತ. ಇಂತಹ ಹೊಣೆಗೇಡಿತನವನ್ನು ಸಹಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವು ಅನುಮತಿ ನೀಡಿದಲ್ಲಿ, ರಾಜ್ಯ ಸರ್ಕಾರವು ರಾಜ್ಯಮಟ್ಟದಲ್ಲೇ ನೀಟ್ ಮಾದರಿಯ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಸಿದ್ಧವಿದೆ. ಈ ಹಿಂದೆ ರಾಜ್ಯವು ಜಾರಿಗೊಳಿಸಿದ್ದ ಸಿಇಟಿ ಮಾದರಿಯು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದೇ ಮಾದರಿಯಲ್ಲಿ ಪರೀಕ್ಷೆ ನಡೆಸುವ ಸಾಮರ್ಥ್ಯ ನಮಗಿದೆ ಎಂದು ಹೇಳಿದ್ದಾರೆ.

Read More
Next Story