
ಕೃಷಿ ವಿವಿಗಳು ಹೊಸ ಆವಿಷ್ಕಾರಗಳಿಗೆ ಒತ್ತು ನೀಡಬೇಕು - ಪಿ.ಎಂ. ನರೇಂದ್ರಸ್ವಾಮಿ
ರೈತರು ಪ್ರಕೃತಿಯ ಹಲವು ಸವಾಲುಗಳನ್ನು ಎದುರಿಸುತ್ತಲೇ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಂದು ಯಾವ ರೈತರೂ ಕೃಷಿಯಿಂದ ಲಾಭ ಗಳಿಸುತ್ತಿದ್ದೇವೆ ಎಂದು ಹೇಳುವ ಸ್ಥಿತಿಯಲ್ಲಿಲ್ಲ.
ಎಲ್‌ನಿನೊ ಪರಿಣಾಮದಿಂದಾಗಿ ದೇಶಾದ್ಯಂತ ಆವರಿಸಿರುವ ಬರಗಾಲದ ಸಂಕಷ್ಟ ಪರಿಸ್ಥಿತಿಯಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸುವಂತಹ ನೂತನ ತಳಿಗಳನ್ನು ಆವಿಷ್ಕರಿಸುವ ಮಹತ್ತರ ಜವಾಬ್ದಾರಿ ಕೃಷಿ ವಿಶ್ವವಿದ್ಯಾಲಯಗಳ ಮೇಲಿದೆ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಹೇಳಿದ್ದಾರೆ. ಹೊಸ ಆವಿಷ್ಕಾರಗಳು ಹಾಗೂ ರೈತರ ಬೆವರಿಗೆ ತಕ್ಕ ಬೆಲೆ ಸಿಗುವಂತಹ ಸಂಶೋಧನೆಗಳ ಮೂಲಕ ದೇಶದ ಶೇ. 80ರಷ್ಟು ರೈತರಿಗೆ ಕೃಷಿ ವಿಶ್ವವಿದ್ಯಾಲಯಗಳು ನೆಮ್ಮದಿ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ 40ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ, ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿದ್ದ ವಿವಿಧ ಬೆಳೆ ತಳಿಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನವನ್ನು ಸಚಿವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ದಿನಗಳಲ್ಲಿ ರೈತರು ಪ್ರಕೃತಿಯ ಹಲವು ಸವಾಲುಗಳನ್ನು ಎದುರಿಸುತ್ತಲೇ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಂದು ಯಾವ ರೈತರೂ ತಾವು ಕೃಷಿಯಿಂದ ಲಾಭ ಗಳಿಸುತ್ತಿದ್ದೇವೆ ಎಂದು ಹೇಳುವ ಸ್ಥಿತಿಯಲ್ಲಿಲ್ಲ. ಕಬ್ಬಿನ ಬೆಲೆಗಾಗಿ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕೇವಲ ಸುಗ್ಗಿಯ ದಿನ ಮಾತ್ರ ರೈತ ಹಸನ್ಮುಖಿಯಾಗಿರುತ್ತಾನೆ, ಉಳಿದ ದಿನಗಳಲ್ಲಿ ಚಿಂತೆಯಲ್ಲೇ ಮುಳುಗಿರುತ್ತಾನೆ. ಆದಾಯವಿಲ್ಲದ ಕೃಷಿಯಿಂದ ಏನು ಪ್ರಯೋಜನ ಎಂಬುದು ನಮ್ಮ ಕಣ್ಣೆದುರಿರುವ ಕಟು ಸತ್ಯವಾಗಿದೆ ಎಂದು ಹೇಳಿದರು.
ಸಣ್ಣ ಹಿಡುವಳಿದಾರರ ಸಮಸ್ಯೆಗಳ ಕುರಿತು ಅಂಕಿಅಂಶಗಳೊಂದಿಗೆ ಮಾತನಾಡಿದ ಅವರು, "ಧಾರವಾಡ ಜಿಲ್ಲೆಯಲ್ಲೇ 5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು ಕೇವಲ ಶೇ. 30ರಷ್ಟು ರೈತರು ಮಾತ್ರ. ಉಳಿದ ಶೇ. 70ರಷ್ಟು ರೈತರು ಕಡಿಮೆ ವಿಸ್ತೀರ್ಣದ ಭೂಮಿಯನ್ನು ಹೊಂದಿದ್ದಾರೆ. ಆದ್ದರಿಂದ ಕಡಿಮೆ ಭೂಮಿಯಲ್ಲೇ ಹೆಚ್ಚಿನ ಆದಾಯ ತಂದುಕೊಡುವಂತಹ ತಂತ್ರಜ್ಞಾನ ಮತ್ತು ಸಂಶೋಧನೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕೃಷಿ ವಿಶ್ವವಿದ್ಯಾಲಯಗಳು ಈ ಸವಾಲುಗಳಿಗೆ ಉತ್ತರ ನೀಡಬೇಕಿದೆ ಎಂದು ಸಲಹೆ ನೀಡಿದರು.
ಕೃಷಿ ಮೇಳಕ್ಕೆ 26 ಲಕ್ಷ ಜನ: ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿ
ಇತ್ತೀಚೆಗೆ ನಡೆದ ಧಾರವಾಡ ಕೃಷಿ ಮೇಳಕ್ಕೆ 26 ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡಿದ್ದು, ಆ ಸಾಧನೆಯನ್ನು ಗಿನ್ನಿಸ್ ದಾಖಲೆಯ ಪ್ರಸ್ತಾವಕ್ಕೆ ಸಲ್ಲಿಸಿರುವುದು ಅತ್ಯಂತ ಸಂತಸದ ವಿಚಾರ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು. "ಕೃಷಿ ಮೇಳಕ್ಕೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿರುವುದು, ಜನರು ಕೃಷಿ ವಿಶ್ವವಿದ್ಯಾಲಯದ ಮೇಲೆ ಇಟ್ಟಿರುವ ಅಪಾರ ನಂಬಿಕೆಗೆ ಸಾಕ್ಷಿಯಾಗಿದೆ. ನಮ್ಮಲ್ಲಿ ನಂಬಿಕೆಯೇ ದೇವರು; ಆ ನಂಬಿಕೆಯನ್ನು ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ವಿಶ್ವವಿದ್ಯಾಲಯದ ಮೇಲಿದೆ. ಇಡೀ ದೇಶವೇ ಈ ನಂಬಿಕೆಯ ಆಧಾರದ ಮೇಲೆ ನಿಂತಿದೆ. ನಾಡಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗಳು ಎಷ್ಟೇ ಬೆಳೆದರೂ ಅವುಗಳಿಂದ ಆಹಾರವನ್ನು ತಯಾರಿಸಲು ಸಾಧ್ಯವಿಲ್ಲ. ಅನ್ನದಾತನಿಂದ ಮಾತ್ರ ಆಹಾರ ಉತ್ಪಾದನೆ ಸಾಧ್ಯ" ಎಂದರು.
ಆಧುನಿಕ ಕೃಷಿ ಪದ್ಧತಿಯ ಕುರಿತು ಮಾತನಾಡಿದ ಅವರು, "ಇತ್ತೀಚೆಗೆ ಐಟಿ ಕಂಪನಿಯ ಉದ್ಯೋಗಿಗಳು ಸಹ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಅವರು ಸ್ಟಾರ್ಟ್‌ಅಪ್‌ಗಳು ಮತ್ತು ಸಮಗ್ರ ಬೇಸಾಯದ ಮೂಲಕ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರೈತ ಉತ್ಪಾದಕ ಸಂಘಗಳನ್ನು (ಎಫ್‌ಪಿಒ) ರಚಿಸಿಕೊಂಡು ಗುಂಪು ಕೃಷಿ ಮಾಡುವ ಮೂಲಕ, ಒಂದೇ ಬಗೆಯ ಬೆಳೆಯನ್ನು ಬೆಳೆದು ಅದಕ್ಕೆ ಮೌಲ್ಯವರ್ಧನೆ ಮಾಡಿ ವಿದೇಶಗಳಿಗೂ ರಫ್ತು ಮಾಡುತ್ತಿದ್ದಾರೆ. ಸಾಮಾನ್ಯ ರೈತರು ಕೂಡ ಇಂತಹ ಗುಂಪು ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಉತ್ತಮ ಲಾಭ ಗಳಿಸಬಹುದಾಗಿದೆ ಎಂದು ಹೇಳಿದರು.
ನೈಸರ್ಗಿಕ ಕೃಷಿ ಪದವಿ ಮತ್ತು ಮಾಸಿಕ ರೈತ ಸಂತೆ ಆರಂಭಿಸಲು ಸೂಚನೆ
ಕೃಷಿ ಶಿಕ್ಷಣ ಮತ್ತು ರೈತರಿಗೆ ನೇರ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಸಚಿವರು ಎರಡು ಪ್ರಮುಖ ಸೂಚನೆಗಳನ್ನು ನೀಡಿದರು. ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದಲೇ ನೈಸರ್ಗಿಕ ಕೃಷಿ ವಿಷಯದಲ್ಲಿ ಬಿ.ಎಸ್ಸಿ (ಹಾನರ್ಸ್) ಪದವಿ ಪ್ರವೇಶವನ್ನು ಆರಂಭಿಸುವಂತೆ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸೂಚನೆ ನೀಡಿದರು. ಇದರ ಜೊತೆಗೆ, ರಾಜ್ಯದ ಇತರ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಇರುವಂತೆ ಧಾರವಾಡ ವಿಶ್ವವಿದ್ಯಾಲಯದಲ್ಲೂ ಮಾಸಿಕ ರೈತ ಸಂತೆ ಆರಂಭಿಸುವಂತೆಯೂ ತಾಕೀತು ಮಾಡಿದರು.
ಸಿಬ್ಬಂದಿ ಕೊರತೆ ನೀಗಿಸಲು ಆರ್ಥಿಕ ಸಬಲತೆ ಅಗತ್ಯ
ಇದೇ ವೇಳೆ ಕೃಷಿ ವಿಶ್ವವಿದ್ಯಾಲಯದಲ್ಲಿ ಇರುವ ಸಿಬ್ಬಂದಿ ಕೊರತೆಯ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ವಿಶ್ವವಿದ್ಯಾಲಯವು ಆರ್ಥಿಕವಾಗಿ ಸದೃಢವಾಗಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. "ವಿಶ್ವವಿದ್ಯಾಲಯವು ತಾನು ಆರ್ಥಿಕವಾಗಿ ಸಬಲವಾಗಿದೆ ಎಂಬುದನ್ನು ಸಾಬೀತುಪಡಿಸಿದರೆ, ಅಗತ್ಯ ಸಿಬ್ಬಂದಿ ನೇಮಕಾತಿಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಕೊಡಿಸಲಾಗುವುದು. ವಿಶ್ವವಿದ್ಯಾಲಯಗಳು 'ಓಡುವ ಕುದುರೆಗಳಾದರೆ' ಮಾತ್ರ ಜನರು ನಿಮ್ಮ ಬಳಿಗೆ ಬರುತ್ತಾರೆ" ಎಂದರು.

