ಧರ್ಮಸ್ಥಳದ ಅಸಹಜ ಸಾವುಗಳ ತನಿಖೆ: ಪೊಲೀಸ್ ದಾಖಲೆಗಳಲ್ಲೇ ಭಾರಿ ವ್ಯತ್ಯಾಸ, ಎಸ್‌ಐಟಿ ವರದಿಯಲ್ಲಿ ಬಹಿರಂಗ
x

ಧರ್ಮಸ್ಥಳ ಹಾಗೂ ಉಜಿರೆ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಅಸಹಜ ಸಾವುಗಳ ಕುರಿತು ಸುದೀರ್ಘ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಧರ್ಮಸ್ಥಳದ ಅಸಹಜ ಸಾವುಗಳ ತನಿಖೆ: ಪೊಲೀಸ್ ದಾಖಲೆಗಳಲ್ಲೇ ಭಾರಿ ವ್ಯತ್ಯಾಸ, ಎಸ್‌ಐಟಿ ವರದಿಯಲ್ಲಿ ಬಹಿರಂಗ

ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ತನಿಖೆ ಹಾಗೂ ಶೋಧನಾ ಕಾರ್ಯ ನಡೆಸಿದ ಎಸ್‌ಐಟಿ ಅಧಿಕಾರಿಗಳಿಗೆ 7 ತಲೆಬುರುಡೆಗಳು ಹಾಗೂ ಮಾನವ ಶರೀರದ ಅಸ್ಥಿಪಂಜರಗಳು ಪತ್ತೆಯಾಗಿವೆ.


Click the Play button to hear this message in audio format

ಪ್ರಸಿದ್ಧ ಪುಣ್ಯಕ್ಷೇತ್ರ ಇರುವ ಧರ್ಮಸ್ಥಳ ಹಾಗೂ ಉಜಿರೆ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಅಸಹಜ ಸಾವುಗಳ ಕುರಿತು ಸುದೀರ್ಘ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ತನಿಖೆಯ ವೇಳೆ ಬೆಚ್ಚಿಬೀಳಿಸುವಂತಹ ಹಲವು ಅಂಶಗಳು ಬೆಳಕಿಗೆ ಬಂದಿದ್ದು, ಪ್ರಮುಖವಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯ ದಾಖಲೆಗಳಲ್ಲಿರುವ ಸಾವಿನ ಸಂಖ್ಯೆಗೂ ಹಾಗೂ ಇತರ ಅಧಿಕೃತ ಇಲಾಖೆಗಳ ದಾಖಲೆಗಳಲ್ಲಿರುವ ಸಾವಿನ ಸಂಖ್ಯೆಗೂ ಭಾರಿ ಪ್ರಮಾಣದ ವ್ಯತ್ಯಾಸವಿರುವುದು ಪತ್ತೆಯಾಗಿದೆ.

ಈ ಕುರಿತು ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಸಿದ್ಧಪಡಿಸಿದ ಸಮಗ್ರ ತನಿಖಾ ಪ್ರಗತಿಯ ವರದಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಮುಖಾಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಎ. ಅವರು ಮಾಹಿತಿ ಹಕ್ಕಿನಡಿ (ಆರ್‌ಟಿಐ) ಕೋರಿದ್ದ ಅರ್ಜಿಗೆ ಉತ್ತರಿಸಿರುವ ರಾಜ್ಯ ಮಹಿಳಾ ಆಯೋಗವು ಈ ಸ್ಫೋಟಕ ವರದಿಯ ಪ್ರತಿಯನ್ನು ಹಂಚಿಕೊಂಡಿದೆ.

ಅಂಕಿ-ಅಂಶಗಳಲ್ಲಿ ಭಾರಿ ವ್ಯತ್ಯಾಸ

ಎಸ್‌ಐಟಿ ಸಲ್ಲಿಸಿರುವ ವರದಿಯ ಪ್ರಕಾರ, 1998ರಿಂದ 2014ರ ಅವಧಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 1,480 ಅಸ್ವಾಭಾವಿಕ ಸಾವುಗಳು ಸಂಭವಿಸಿವೆ ಎಂದು ಠಾಣೆಯ ದಾಖಲೆಗಳು ಹೇಳುತ್ತವೆ. ಆದರೆ, ಇದೇ ಅವಧಿಯಲ್ಲಿ ರಾಜ್ಯ ಅಪರಾಧ ದಾಖಲಾತಿ ಘಟಕ (ಎಸ್‌ಸಿಆರ್‌ಬಿ) ಹಾಗೂ ಧರ್ಮಸ್ಥಳ ಗ್ರಾಮ ಪಂಚಾಯಿತಿಯ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿದಾಗ ಒಟ್ಟು 1,510 ಅಸಹಜ ಸಾವುಗಳು ಸಂಭವಿಸಿರುವುದು ದೃಢಪಟ್ಟಿದೆ. ಸಾವಿನ ಸಂಖ್ಯೆಗಳ ನಡುವಿನ ಈ ವ್ಯತ್ಯಾಸವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಎಸ್‌ಐಟಿ ತಂಡವು ಇದುವರೆಗೆ 73 ಪ್ರತ್ಯೇಕ ದೂರು ಅರ್ಜಿಗಳನ್ನು ಸ್ವೀಕರಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ತೀವ್ರಗೊಳಿಸಿದೆ.

ಅಸ್ಥಿಪಂಜರಗಳ ಪತ್ತೆ ಹಾಗೂ ತಜ್ಞರ ಪರಿಶೀಲನೆ

ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ತನಿಖೆ ಹಾಗೂ ಶೋಧನಾ ಕಾರ್ಯ ನಡೆಸಿದ ಎಸ್‌ಐಟಿ ಅಧಿಕಾರಿಗಳಿಗೆ 7 ತಲೆಬುರುಡೆಗಳು ಹಾಗೂ ಮಾನವ ಶರೀರದ ಅಸ್ಥಿಪಂಜರಗಳು ಪತ್ತೆಯಾಗಿವೆ. ಇವುಗಳನ್ನು ವಿಧಿವಿಜ್ಞಾನ ತಜ್ಞರ ಪರಿಶೀಲನೆಗೆ ಕಳುಹಿಸಲಾಗಿದ್ದು, ಅವು ಮಹಿಳೆಯರದೇ ಅಥವಾ ಪುರುಷರದೇ ಹಾಗೂ ಸಾವಿಗೆ ನಿಖರ ಕಾರಣಗಳೇನು ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ದೂರುದಾರ ಚಿನ್ನಯ್ಯ ಎಂಬಾತ ನೀಡಿದ ಹೇಳಿಕೆಯ ಆಧಾರದ ಮೇಲೆ, 2009ರಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಮೀಪ ಮುಖಕ್ಕೆ ಆ್ಯಸಿಡ್ ಹಾಕಿ ಕೊಲೆ ಮಾಡಲಾಗಿದ್ದ ಮಹಿಳೆಯೊಬ್ಬಳ ಶವವನ್ನು ಹೂತುಹಾಕಿದ್ದ ಪ್ರಕರಣದ ಬಗ್ಗೆಯೂ ತನಿಖೆ ಚುರುಕುಗೊಂಡಿದೆ. ಕೇವಲ ಒಬ್ಬ ದೂರುದಾರನ ಹೇಳಿಕೆಗೆ ಸೀಮಿತವಾಗದೆ, ಎಸ್‌ಐಟಿಯು ಉಪವಿಭಾಗಾಧಿಕಾರಿ ಕಚೇರಿ, ದೇವಸ್ಥಾನದ ಟ್ರಸ್ಟ್ ಕಚೇರಿ ಸೇರಿದಂತೆ ವಿವಿಧ ಮೂಲಗಳಿಂದ ಮಾಹಿತಿ ಕಲೆಹಾಕುತ್ತಿದೆ.

ನಾಪತ್ತೆಯಾದ ಶವ ಪರೀಕ್ಷೆಯ ವರದಿ

ತನಿಖೆಯ ವೇಳೆ ಇನ್ನೊಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದ್ದು, ಕೊಲೆ ಪ್ರಕರಣವೊಂದರ ಮರಣೋತ್ತರ ಪರೀಕ್ಷೆಯ (ಪೋಸ್ಟ್ ಮಾರ್ಟಂ) ವರದಿಯೇ ದಾಖಲೆಗಳಿಂದ ನಾಪತ್ತೆಯಾಗಿದೆ. 2010ರ ಏಪ್ರಿಲ್ ತಿಂಗಳಲ್ಲಿ ಧರ್ಮಸ್ಥಳದ ಶರಾವತಿ ವಸತಿ ಗೃಹದ ಕೊಠಡಿ ಸಂಖ್ಯೆ 246ರಲ್ಲಿ ಅಪರಿಚಿತ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ನರಸಿಂಹ ರಾಜು ಎಂಬ ಹೆಸರಿನ ವ್ಯಕ್ತಿ ಈ ಕೃತ್ಯ ಎಸಗಿದ್ದ ಬಗ್ಗೆ ರಜತಗಿರಿ ವಸತಿ ಗೃಹದ ವ್ಯವಸ್ಥಾಪಕ ಸುರೇಂದ್ರ ಬಳ್ಳಾಲ್ ದೂರು ನೀಡಿದ್ದರು. ಈ ಪ್ರಕರಣದ ಶವ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸ್ ದಾಖಲೆಗಳಲ್ಲಿದ್ದರೂ, ಅದರ ಅಧಿಕೃತ ವರದಿಯು ಠಾಣೆಯಲ್ಲಿ ಲಭ್ಯವಿಲ್ಲ. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಅಗತ್ಯ ದಾಖಲೆಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ದಫನ ಪ್ರಕ್ರಿಯೆ ದಾಖಲೆಗಳಲ್ಲೂ ಗೋಲ್‌ಮಾಲ್

2003ರ ಸೆಪ್ಟೆಂಬರ್‌ನಲ್ಲಿ ನೇತ್ರಾವತಿ ನದಿಯ ಸ್ನಾನಘಟ್ಟದ ಕಿಂಡಿ ಅಣೆಕಟ್ಟೆ ಬಳಿ 10ರಿಂದ 12 ವರ್ಷದ ಬಾಲಕಿ ಹಾಗೂ 45 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಶವಗಳನ್ನು ದಫನ ಮಾಡಿದ್ದರು. ಆದರೆ, ಪೊಲೀಸ್ ಠಾಣೆಯ ಯುಡಿಆರ್ (UDR) ರಿಜಿಸ್ಟರ್‌ನಲ್ಲಿ ನಮೂದಾಗಿರುವ ದಫನದ ವಿವರಗಳಿಗೂ ಮತ್ತು ಗ್ರಾಮ ಪಂಚಾಯಿತಿ ನಿರ್ವಹಿಸಿರುವ ದಫನ ದಾಖಲೆಗಳಿಗೂ ತಾಳೆಯಾಗುತ್ತಿಲ್ಲ. ಅಂಕಿ-ಅಂಶಗಳಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದ್ದು, ಎಸ್‌‌ಐಟಿ ಈ ಪ್ರಕರಣದ ಬಗ್ಗೆಯೂ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದೆ. ಒಟ್ಟಾರೆಯಾಗಿ ಎರಡು ದಶಕಗಳ ಹಿಂದಿನ ಪ್ರಕರಣಗಳನ್ನು ಎಸ್‌ಐಟಿ ಕೆದಕುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸತ್ಯಾಸತ್ಯತೆಗಳು ಹೊರಬರುವ ಸಾಧ್ಯತೆಯಿದೆ.

Read More
Next Story