ಧರ್ಮಸ್ಥಳ ಪ್ರಕರಣದ ತನಿಖೆಗೆ ಎಸ್‌ಐಟಿ ಅಂತ್ಯ: ಅಂತಿಮ ವರದಿ ಸಲ್ಲಿಕೆಗೆ ಸಿದ್ಧತೆ
x

ಧರ್ಮಸ್ಥಳ ಪ್ರಕರಣದ ತನಿಖೆಗೆ ಎಸ್‌ಐಟಿ ಅಂತ್ಯ: ಅಂತಿಮ ವರದಿ ಸಲ್ಲಿಕೆಗೆ ಸಿದ್ಧತೆ

ತನಿಖಾ ತಂಡಕ್ಕೆ ಲಭ್ಯವಿರುವ ಎಲ್ಲ ಮಾಹಿತಿ, ಸಾಕ್ಷ್ಯಾಧಾರಗಳನ್ನು ಅಂತಿಮ ವರದಿ ಸಿದ್ಧಪಡಿಸಲಾಗಿದೆ. ಈ ವಿಷಯದಲ್ಲಿ ತನಿಖೆಗೆ ಬಾಕಿ ಉಳಿದಿರುವ ವಿಚಾರಗಳೇನೂ ಇಲ್ಲ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಲಾಗಿದೆ.


Click the Play button to hear this message in audio format

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಹಲವು ಅಪರಾಧ ಪ್ರಕರಣಗಳು ಮತ್ತು ಸೌಜನ್ಯಾ ಪ್ರಕರಣದ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ), ಇದೀಗ ತನ್ನ ಸುದೀರ್ಘ ತನಿಖಾ ಪ್ರಕ್ರಿಯೆಯನ್ನು ಅಧಿಕೃತವಾಗಿ ಅಂತ್ಯಗೊಳಿಸಿದೆ. ತನಿಖೆಯ ಅಂತಿಮ ವರದಿಯನ್ನು ಸಿದ್ಧಪಡಿಸಿರುವ ಎಸ್‌ಐಟಿ, ಬೆಳ್ತಂಗಡಿ ನ್ಯಾಯಾಲಯದ ಅನುಮತಿಯೊಂದಿಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದೆ. ಈ ಮೂಲಕ ಹಲವು ವರ್ಷಗಳಿಂದ ರಾಜ್ಯದ ಜನತೆಯ ಗಮನ ಸೆಳೆದಿದ್ದ ಈ ಪ್ರಕರಣಕ್ಕೆ ಒಂದು ಹಂತದ ಅಂತ್ಯ ಸಿಕ್ಕಂತಾಗಿದೆ.

ಎಸ್‌ಐಟಿಯ ಹಿರಿಯ ಅಧಿಕಾರಿಯೊಬ್ಬರು “ಈ ಪ್ರಕರಣದಲ್ಲಿ ನಮ್ಮ ಕೆಲಸ ಮುಗಿದಿದೆ. ತನಿಖೆ ಸಂಪೂರ್ಣಗೊಂಡಿದೆ. ತನಿಖಾ ತಂಡಕ್ಕೆ ಲಭ್ಯವಿರುವ ಎಲ್ಲ ಮಾಹಿತಿ ಮತ್ತು ಸಾಕ್ಷ್ಯಾಧಾರಗಳನ್ನು ಕ್ರೋಢೀಕರಿಸಿ ಅಂತಿಮ ವರದಿ ಸಿದ್ಧಪಡಿಸಲಾಗಿದೆ. ಇನ್ನು ಈ ವಿಷಯದಲ್ಲಿ ತನಿಖೆಗೆ ಬಾಕಿ ಉಳಿದಿರುವ ವಿಚಾರಗಳೇನೂ ಇಲ್ಲ ಎಂಬುವುದನ್ನು ನ್ಯಾಯಾಲಯಕ್ಕೆ ತಿಳಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ವರದಿಯಲ್ಲಿರುವ ಪ್ರಮುಖ ಅಂಶಗಳು

ಅಂತಿಮ ವರದಿಯು ಕೇವಲ ಹೇಳಿಕೆಗಳಿಗೆ ಸೀಮಿತವಾಗದೆ, ವೈಜ್ಞಾನಿಕ ಮತ್ತು ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಹೊಂದಿದೆ. ಪ್ರಾಥಮಿಕ ವರದಿಯಲ್ಲಿನ ಪ್ರಮುಖಾಂಶಗಳನ್ನು ಒಳಗೊಂಡಂತೆ, ಅಂತಿಮ ವರದಿಯಲ್ಲಿ ವಿಧಿವಿಜ್ಞಾನ ಸಾಕ್ಷ್ಯಗಳು ಮತ್ತು ಪೂರಕ ಮಾಹಿತಿಗಳು ಎದ್ದು ಕಾಣುತ್ತವೆ. ತನಿಖಾ ತಂಡವು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು, ಡಿಜಿಟಲ್ ಸಾಕ್ಷ್ಯಗಳು, ದೃಶ್ಯ ಮತ್ತು ಧ್ವನಿಮುದ್ರಣಗಳು ಹಾಗೂ ದಾಖಲೆಪತ್ರಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿ ವರದಿಯೊಂದಿಗೆ ಲಗತ್ತಿಸಿದೆ ಎಂದು ಹೇಳಲಾಗಿದೆ. ಪ್ರಕರಣದ ತನಿಖೆಯನ್ನು ಬಹುಆಯಾಮಗಳಲ್ಲಿ ನಡೆಸಿದ ಎಸ್‌ಐಟಿ, ಸೌಜನ್ಯಾ ಪರ ಹೋರಾಟಗಾರರಾದ ಗಿರೀಶ್ ಮಟ್ಟೆಣ್ಣನವರ, ಟಿ. ಜಯಂತ್ ಮತ್ತು ದೂರುದಾರ ಚಿನ್ನಯ್ಯ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಸೆಕ್ಷನ್ 35(3)ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಿ, ಇವರಿಂದ ಕಡ್ಡಾಯವಾಗಿ ಮಾಹಿತಿ ಪಡೆಯಲಾಗಿತ್ತು. ಆದರೆ, ಈ ಹಾದಿಯಲ್ಲಿ ಎಸ್‌ಐಟಿಗೆ ಕೆಲವು ಅಡೆತಡೆಗಳೂ ಎದುರಾಗಿವೆ. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸೌಜನ್ಯಾ ಅವರ ಮಾವ ವಿಠಲ ಗೌಡ ಅವರು ತಲೆಮರೆಸಿಕೊಂಡಿದ್ದರಿಂದ, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಎಸ್‌ಐಟಿಗೆ ಸಾಧ್ಯವಾಗಲಿಲ್ಲ. ಇದು ತನಿಖೆಯ ಪೂರ್ಣತೆಗೆ ಒಂದು ರೀತಿಯ ಸವಾಲಾಗಿ ಉಳಿದಿದೆ ಎನ್ನಲಾಗಿದೆ.

ಶೋಧ ಕಾರ್ಯದ ಸವಾಲುಗಳು ಮತ್ತು ವೈಜ್ಞಾನಿಕ ಮಿತಿ

ಪ್ರಕರಣದ ಅತ್ಯಂತ ಗಂಭೀರವಾದ ಆರೋಪವೆಂದರೆ, ಕೊಲೆ ಮಾಡಿ ಶವಗಳನ್ನು ಧರ್ಮಸ್ಥಳದ ಸುತ್ತಮುತ್ತ ಹೂತು ಹಾಕಲಾಗಿದೆ ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಧರ್ಮಸ್ಥಳದ ವಿವಿಧ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಿತು. ಈ ವೇಳೆ ತಲೆಬುರುಡೆಯ ತುಂಡುಗಳು, ಎಲುಬುಗಳು ಮತ್ತು ಹಲ್ಲುಗಳು ಪತ್ತೆಯಾದವು. ಆದರೆ, ಇವುಗಳ ವೈಜ್ಞಾನಿಕ ಪರೀಕ್ಷೆಯು ಎಸ್‌ಐಟಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಈ ಕುರಿತು ಪೊಲೀಸ್‌ ಮೂಲಗಳು “ಪತ್ತೆಯಾದ ಅಸ್ಥಿಗಳು ಅತಿ ಹೆಚ್ಚು ಶಿಥಿಲಗೊಂಡಿದ್ದವು. ಇಷ್ಟು ಹಳೆಯ ಅವಶೇಷಗಳನ್ನು ನಾಪತ್ತೆಯಾದ ವ್ಯಕ್ತಿಗಳ ಡಿಎನ್‌ಎ ಅಥವಾ ಇತರ ಗುರುತುಗಳೊಂದಿಗೆ ತಾಳೆ ಹಾಕುವುದು ವೈಜ್ಞಾನಿಕವಾಗಿ ಅತ್ಯಂತ ಕಷ್ಟಕರವಾಗಿದೆ. ಅನೇಕ ಅಸ್ಥಿಗಳನ್ನು ಒಟ್ಟಾಗಿ ಸಂಗ್ರಹಿಸಿದಾಗ, ಅವುಗಳನ್ನು ಪ್ರತ್ಯೇಕಿಸಿ ಯಾರದ್ದು ಎಂದು ಗುರುತಿಸುವುದು ಅಸಾಧ್ಯದ ಕೆಲಸ. ಹಲವು ತಿಂಗಳುಗಳ ಕಾಲ ಪರಿಶ್ರಮ ಪಟ್ಟರೂ, ವೈಜ್ಞಾನಿಕ ಮಿತಿಗಳಿಂದಾಗಿ ಅಸ್ಥಿಗಳ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ” ಎಂದು ಹೇಳಿವೆ.

Read More
Next Story