
ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ
ಧರ್ಮಸ್ಥಳ ಪ್ರಕರಣ| ಪ್ರಕಾಶ್ ರಾಜ್ ಹೆಸರು ಉಲ್ಲೇಖ; ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಎಂದ ಗೃಹ ಸಚಿವ
ಸುಮಾರು 200 ಕೋಟಿ ರೂ.ಷಡ್ಯಂತ್ರದ ಆರೋಪ ಕೇಳಿಬಂದಿದೆ. ಇದು ಸಣ್ಣ ಮೊತ್ತವೇನಲ್ಲ. ಆದರೆ, ಈ ಆರೋಪದಲ್ಲಿ ಎಷ್ಟು ಸತ್ಯವಿದೆ, ಎಷ್ಟು ಸುಳ್ಳಿದೆ ಎಂಬುದು ನಿಖರವಾಗಿ ತಿಳಿದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಅಸಹಜ ಸಾವುಗಳ ಪ್ರಕರಣದ ಪ್ರಮುಖ ಆರೋಪಿಯಾದ ಚಿನ್ನಯ್ಯ ಹೈಕೋರ್ಟ್ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖಿಸಿರುವುದು ಕುತೂಹಲ ಕೆರಳಿಸಿದೆ.
ಪ್ರಕರಣದ ಕುರಿತು ಗೃಹಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, "ಚಿನ್ನಯ್ಯ ಮಾಡಿರುವ ಆರೋಪಗಳು ಮತ್ತು ಆತನ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಬೇಕಿದೆ. ಆತ ಎಷ್ಟು ಸತ್ಯ ಹೇಳುತ್ತಿದ್ದಾನೆ ಅಥವಾ ಎಷ್ಟು ಸುಳ್ಳು ಹೇಳುತ್ತಿದ್ದಾನೆ ಎಂಬುದು ನಮಗೆ ಗೊತ್ತಿಲ್ಲ. ಪ್ರಕರಣ ಸದ್ಯ ನ್ಯಾಯಾಲಯದಲ್ಲಿರುವುದರಿಂದ ಕಾನೂನುಬದ್ಧವಾಗಿಯೇ ತನಿಖೆ ನಡೆಯಲಿದೆ," ಎಂದು ಸ್ಪಷ್ಟಪಡಿಸಿದರು.
"ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮತ್ತು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಮಾಹಿತಿ ಪ್ರಕಾರ ಸುಮಾರು 200 ಕೋಟಿ ರೂ.ಷಡ್ಯಂತ್ರದ ಆರೋಪ ಕೇಳಿಬಂದಿದೆ. ಇದು ಸಣ್ಣ ಮೊತ್ತವೇನಲ್ಲ. ಆದರೆ, ಈ ಆರೋಪದಲ್ಲಿ ಎಷ್ಟು ಸತ್ಯವಿದೆ, ಎಷ್ಟು ಸುಳ್ಳಿದೆ ಎಂಬುದು ನಿಖರವಾಗಿ ತಿಳಿದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಎಸ್ಐಟಿಗೆ ಕೋರ್ಟ್ ಪ್ರಶ್ನೆ
ಪ್ರಕರಣದ ಸದ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ ಗೃಹಸಚಿವರು, "ವಿಶೇಷ ತನಿಖಾ ದಳಕ್ಕೆ ನ್ಯಾಯಾಲಯವು ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳಿದೆ. ಎಸ್ಐಟಿ ಮುಖ್ಯಸ್ಥರು ಆ ಎಲ್ಲಾ ಪ್ರಶ್ನೆಗಳಿಗೆ ನೇರವಾಗಿ ನ್ಯಾಯಾಲಯಕ್ಕೇ ಉತ್ತರ ನೀಡಲಿದ್ದಾರೆ. ಇದು ಅತ್ಯಂತ ಸೂಕ್ಷ್ಮ ಹಾಗೂ ಕಾನೂನು ಪ್ರಕ್ರಿಯೆ ಆಗಿರುವುದರಿಂದ ಇದನ್ನು ನಾವು ಸಾರ್ವಜನಿಕವಾಗಿ ಚರ್ಚೆ ಮಾಡಲು ಸಾಧ್ಯವಿಲ್ಲ," ಎಂದರು.
ನ್ಯಾಯಾಲಯಕ್ಕೆ ಅಧಿಕೃತವಾಗಿ ಉತ್ತರ ಸಲ್ಲಿಕೆಯಾದ ಬಳಿಕವೇ ಸರ್ಕಾರ ಮತ್ತು ತನಿಖಾ ಸಂಸ್ಥೆ ಈ ಬಗ್ಗೆ ಮುಂದಿನ ಮಾಹಿತಿ ನೀಡಲಿದೆ ಎಂದು ತಿಳಿಸಿದರು.
"ಹೆಸರು ಪ್ರಸ್ತಾಪವಾದ ತಕ್ಷಣ ಕ್ರಿಮಿನಲ್‌ಗಳಲ್ಲʼʼ
ನಟ ಪ್ರಕಾಶ್ ರಾಜ್ ಹೆಸರು ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ಈಗ ಆರೋಪ ಮಾಡುತ್ತಿರುವ ವ್ಯಕ್ತಿ (ಚಿನ್ನಯ್ಯ), ಈ ಹಿಂದೆ ಮತ್ತು ಈಗ ಬೇರೆ ಬೇರೆ ಹೇಳಿಕೆ ನೀಡುತ್ತಾ ಬಂದಿದ್ದಾನೆ. ಹೀಗಾಗಿ ಆತನ ಹಿಂದಿನ ಹಾಗೂ ಈಗಿನ ಹೇಳಿಕೆಗಳಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಕೇವಲ ಒಂದು ಅರ್ಜಿಯಲ್ಲಿ ಯಾರದ್ದೋ ಹೆಸರು ಪ್ರಸ್ತಾಪವಾಯಿತು ಎಂದ ತಕ್ಷಣವೇ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಕ್ರಿಮಿನಲ್‌ಗಳಾಗುವುದಿಲ್ಲ," ಎಂದು ಮಾರ್ಮಿಕವಾಗಿ ನುಡಿದರು.
ಎಸ್ಐಟಿ ಮುಖ್ಯಸ್ಥರು ಮೊದಲು ಹೈಕೋರ್ಟ್‌ಗೆ ವರದಿ ಸಲ್ಲಿಸಲಿದ್ದಾರೆ. ಪ್ರಕರಣದ ಸೂಕ್ಷ್ಮತೆ ಅರಿತು ಮಾಧ್ಯಮಗಳು ಹಾಗೂ ಸಾರ್ವಜನಿಕರು ಅನಗತ್ಯ ಊಹಾಪೋಹಗಳ ಚರ್ಚೆ ನಡೆಸದಂತೆ ಗೃಹಸಚಿವರು ಮನವಿ ಮಾಡಿದರು.
ಧರ್ಮಸ್ಥಳದ ಘನತೆಗೆ ಕುಂದು ತರಲು ಮತ್ತು ಧರ್ಮಾಧಿಕಾರಿಗಳ ವಿರುದ್ಧ ಷಡ್ಯಂತ್ರ ರೂಪಿಸಲು ಕೇರಳ ಸೇರಿದಂತೆ ಅನ್ಯ ರಾಜ್ಯಗಳಿಂದ ಕೋಟ್ಯಂತರ ರೂಪಾಯಿ ಹರಿದುಬಂದಿದೆ ಎಂದು ಆರೋಪಿ ಚಿನ್ನಯ್ಯ ಹೈಕೋರ್ಟ್ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಪ್ರಕರಣ ಈಗ ಹೈಕೋರ್ಟ್ ಅಂಗಳದಲ್ಲಿದೆ.

