ಧರ್ಮಸ್ಥಳ ಕೇಸ್: ವಿಠಲ ಗೌಡ ವಿರುದ್ಧ ಅರೆಸ್ಟ್ ವಾರೆಂಟ್
x

ಸೌಜನ್ಯಳ ಮಾವ ವಿಠಲ ಗೌಡ ವಿರುದ್ಧ ಬೆಂಗಳೂರಿನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಬಂಧನದ ಆದೇಶ ಹೊರಡಿಸಿದೆ.

ಧರ್ಮಸ್ಥಳ ಕೇಸ್: ವಿಠಲ ಗೌಡ ವಿರುದ್ಧ ಅರೆಸ್ಟ್ ವಾರೆಂಟ್

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಕೋರ್ಟ್ ಆದೇಶ ಉಲ್ಲಂಘಿಸಿದ ಸೌಜನ್ಯ ಮಾವ ವಿಠಲ ಗೌಡಗೆ ನ್ಯಾಯಾಂಗ ನಿಂದನೆ ಅಡಿ ಬಂಧನ ವಾರೆಂಟ್ ಜಾರಿಯಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ.


Click the Play button to hear this message in audio format

ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ನಿರಂತರವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದ ಆರೋಪದ ಮೇಲೆ, ಸೌಜನ್ಯಳ ಮಾವ ವಿಠಲ ಗೌಡ ವಿರುದ್ಧ ಬೆಂಗಳೂರಿನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಬಂಧನದ ಆದೇಶ ಹೊರಡಿಸಿದೆ.

ನ್ಯಾಯಾಲಯವು ಈ ಹಿಂದೆ ಧರ್ಮಸ್ಥಳದ ಕುರಿತು ಯಾವುದೇ ಅವಹೇಳನಕಾರಿ ಮಾತುಗಳನ್ನಾಡದಂತೆ ವಿಠಲ ಗೌಡ ಅವರಿಗೆ ನಿರ್ಬಂಧ ವಿಧಿಸಿ ತಡೆಯಾಜ್ಞೆ ನೀಡಿತ್ತು. ಆದರೆ, ಕೋರ್ಟ್ ಆದೇಶವನ್ನು ಲೆಕ್ಕಿಸದೆ ನಿರಂತರವಾಗಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇದೀಗ ನ್ಯಾಯಾಂಗ ನಿಂದನೆ ಅಡಿಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ನ್ಯಾಯಾಲಯದ ವಾರೆಂಟ್ ಜಾರಿಯಾಗುತ್ತಿದ್ದಂತೆ ಎಚ್ಚೆತ್ತ ವಿಠಲ ಗೌಡ ಸದ್ಯ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಕೋರ್ಟ್ ಅಧಿಕಾರಿಗಳು ಬೆಳ್ತಂಗಡಿ ಪೊಲೀಸರ ಜೊತೆಗೂಡಿ ಆರೋಪಿಯ ಪತ್ತೆಗಾಗಿ ದೊಡ್ಡ ಮಟ್ಟದ ಕಾರ್ಯಾಚರಣೆ ಕೈಗೊಂಡಿದ್ದಾರೆ. ವಿಠಲ ಗೌಡ ಅವರ ಸ್ವಗೃಹ, ಅವರ ಸಹೋದರಿ ಕುಸುಮಾವತಿ ಅವರ ನಿವಾಸ ಹಾಗೂ ಈ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗಳ ಮೇಲೂ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ನ್ಯಾಯಾಲಯವು ಜೂನ್ 30ರ ಒಳಗಾಗಿ ಆರೋಪಿಯನ್ನು ತನಿಖಾ ಕಟಕಟೆಯ ಮುಂದೆ ಹಾಜರುಪಡಿಸುವಂತೆ ಗಡುವು ನೀಡಿದ್ದು, ಇಲಾಖೆಯು ಹುಡುಕಾಟವನ್ನು ತೀವ್ರಗೊಳಿಸಿದೆ.

ಧರ್ಮಸ್ಥಳದ ವಿರುದ್ಧ ಕೇಳಿಬಂದಿದ್ದ ಈ ವ್ಯವಸ್ಥಿತ ಆರೋಪಗಳ ಸರಣಿ ಸದ್ಯ ತನಿಖಾ ಸಂಸ್ಥೆಗಳ ಮುಂದೆ ಸತ್ಯಾಂಶ ಹೊರಬೀಳುತ್ತಿದ್ದಂತೆ ಮುಖಭಂಗ ಅನುಭವಿಸಿದೆ. ಈ ಹಿಂದೆ ಚಿನ್ನಯ್ಯ ಎಂಬಾತ ಧರ್ಮಸ್ಥಳದ ಪರಿಸರದಲ್ಲಿ ನೂರಾರು ಮಹಿಳೆಯರ ಶವಗಳನ್ನು ಹೂತುಹಾಕಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದರಿಂದ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.

ಆದರೆ ಜೆಸಿಬಿಗಳ ಮೂಲಕ ಕಠಿಣ ಹವಾಮಾನದಲ್ಲೂ ನಡೆಸಿದ ಉತ್ಖನನದಲ್ಲಿ ಯಾವುದೇ ಸಾಕ್ಷ್ಯಗಳು ಸಿಕ್ಕಿರಲಿಲ್ಲ. ಬಳಿಕ ಪೊಲೀಸರು ಚಿನ್ನಯ್ಯನನ್ನು ವಿಚಾರಣೆಗೊಳಪಡಿಸಿದಾಗ, ತನಗೆ ಹಣದ ಆಮಿಷ ಒಡ್ಡಿ ಇಂತಹ ಸುಳ್ಳು ಹೇಳಿಕೆಗಳನ್ನು ನೀಡುವಂತೆ ಕೆಲವರು ಪ್ರಚೋದಿಸಿದ್ದರು ಎಂಬ ಆಘಾತಕಾರಿ ಸತ್ಯವನ್ನು ಆತ ಒಪ್ಪಿಕೊಂಡಿದ್ದ. ಮತ್ತೊಬ್ಬ ಮಹಿಳೆ ಸುಜಾತಾ ಭಟ್ ಕೂಡ ತನ್ನ ಮಗಳ ಸಾವಿನ ಕುರಿತು ನೀಡಿದ್ದ ಸುಳ್ಳು ಹೇಳಿಕೆಯನ್ನು ವಾಪಸ್ ಪಡೆದಿದ್ದರು. ಸದ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಭೀತಿಯಿಂದ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲವಾದರೆ, ಇತ್ತ ವಿಠಲ ಗೌಡ ಕೂಡ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಪರಾರಿಯಾಗಿದ್ದಾರೆ.

Read More
Next Story