
ನೈಸ್ ಯೋಜನೆ ನಿವೇಶನ ಹಂಚಿಕೆ ವಿವಾದ: ನ್ಯಾಯಾಲಯದ ಆದೇಶ ಉಲ್ಲಂಘನೆ ಎಂದ ಎಚ್‌ಡಿಡಿ
ನೈಸ್ ಯೋಜನೆಯಲ್ಲಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರವಾಗಿ 1,453 ನಿವೇಶನಗಳನ್ನು ಹಂಚಿಕೆಗೆ ಅನುಮತಿ ನೀಡಿರುವುದಕ್ಕೆ ಮಾಜಿ ಪ್ರಧಾನಿ ದೇವೇಗೌಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನೈಸ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಹೊರವಲಯದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ 1,453 ನಿವೇಶನಗಳನ್ನು ಹಂಚಿಕೆ ಮಾಡಲು ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ನಿರ್ಧಾರಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮೂರು ಪುಟಗಳ ಬಹಿರಂಗ ಪತ್ರ ಬರೆದಿದ್ದು, ಸರ್ಕಾರದ ಈ ನಡೆ ಕಾನೂನುಬಾಹಿರ ಮತ್ತು ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ, ನೈಸ್ ಸಂಸ್ಥೆಯ ಯೋಜನೆಯಲ್ಲಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರವಾಗಿ 1,453 ನಿವೇಶನಗಳನ್ನು ಹಂಚಿಕೆ ಮಾಡಲು ಅನುಮತಿ ನೀಡಲಾಗಿದೆ. ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಸರ್ಕಾರವು ಸುಪ್ರೀಂ ಕೋರ್ಟ್‌ನ ತೀರ್ಪಿನ ಬೆಂಬಲವಿದೆ ಎಂದು ಹೇಳಿಕೊಂಡಿದೆ. ಆದರೆ, ದೇವೇಗೌಡರು ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ನ್ಯಾಯಾಲಯದ ಆದೇಶಗಳ ಸ್ಪಷ್ಟ ಉಲ್ಲಂಘನೆ
1997ರಲ್ಲಿ ಅಂದಿನ ಸರ್ಕಾರ ನೈಸ್ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ 'ಫ್ರೇಮ್ ವರ್ಕ್ ಅಗ್ರೀಮೆಂಟ್' ಅನ್ವಯ, ರಸ್ತೆ ಮತ್ತು ಮೂಲಸೌಕರ್ಯಕ್ಕಾಗಿ ವಶಪಡಿಸಿಕೊಳ್ಳಲಾದ ಜಾಗದಲ್ಲಿ ಯಾವುದೇ ನಿವೇಶನಗಳನ್ನು ನಿರ್ಮಿಸಲು ಅವಕಾಶವಿಲ್ಲ. 2016ರಲ್ಲಿ ಡಿ.ಕೆ. ಶಿವಕುಮಾರ್ ಅವರದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದಾಗ, ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ, ಇಂಟರ್‌ಚೇಂಜ್ ಜಾಗಗಳಲ್ಲಿ ನಿವೇಶನ ನಿರ್ಮಾಣ ಮಾಡುವುದು ಒಪ್ಪಂದಕ್ಕೆ ವಿರುದ್ಧ ಮತ್ತು ನ್ಯಾಯಾಲಯದ ಆದೇಶಗಳಿಗೆ ಅವಮಾನ ಎಂದು ಸ್ಪಷ್ಟಪಡಿಸಿತ್ತು. ಈಗ ಅದೇ ಸರ್ಕಾರ ತನ್ನ ಹಳೆಯ ನಿಲುವಿಗೆ ವಿರುದ್ಧವಾಗಿ ನಿರ್ಧಾರ ಕೈಗೊಂಡಿರುವುದು ಅಚ್ಚರಿಯನ್ನು ಉಂಟುಮಾಡಿದೆ ಎಂದು ದೇವೇಗೌಡರು ಕಿಡಿಕಾರಿದ್ದಾರೆ.
ಕಾನೂನಿನ ಕಣ್ಣಿಗೆ ಮಣ್ಣೆರಚುವ ಕೆಲಸ
ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಈ ಹಿಂದೆ ಹಲವು ಬಾರಿ ನೈಸ್ ಸಂಸ್ಥೆಗೆ ಎಚ್ಚರಿಕೆ ನೀಡಿವೆ. ಈ ಜಾಗಗಳಲ್ಲಿ ನಿವೇಶನಗಳನ್ನು ನಿರ್ಮಿಸುವುದು ಕಾನೂನುಬಾಹಿರ ಎಂದು ನ್ಯಾಯಾಲಯಗಳು ಸ್ಪಷ್ಟಪಡಿಸಿದ್ದರೂ, ಸರ್ಕಾರ ಇಂತಹ ನಿರ್ಧಾರ ಕೈಗೊಂಡಿರುವುದು ನ್ಯಾಯಾಂಗ ನಿಂದನೆಗೆ ಸಮಾನ ಎಂದು ಎಚ್ಚರಿಸಿದ್ದಾರೆ. ರಸ್ತೆ ನಿರ್ಮಾಣದ ನೆಪದಲ್ಲಿ ಪಡೆದ ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ಸಾಧ್ಯವಿಲ್ಲ ಎಂಬ ನ್ಯಾಯಾಲಯದ ಆದೇಶವನ್ನು ಸರ್ಕಾರ ಕಡೆಗಣಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನಿವೇಶನ ಹಂಚಿಕೆಗೆ ಆಯ್ಕೆ ಮಾಡಿರುವ ಜಾಗಗಳು (ಮಾದಾವರ, ಕೆಂಗೇರಿ, ಸೋಂಪುರ, ಪಾಂತರಪಾಳ್ಯ ಇತ್ಯಾದಿ) ರಸ್ತೆ ಮೂಲಸೌಕರ್ಯದ ಭಾಗವಾಗಿವೆ. ಈ ಭೂಮಿಯಲ್ಲಿ ನಿವೇಶನಗಳನ್ನು ನಿರ್ಮಿಸಿ ಮಾರಾಟ ಮಾಡುವುದು ಅಥವಾ ಹಂಚಿಕೆ ಮಾಡುವುದು ಕಂಪನಿಯ ವಾಣಿಜ್ಯ ಲಾಭದ ತಂತ್ರವಾಗಿದೆ. ಜುಲೈ ತಿಂಗಳಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು, ನೈಸ್ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿಯನ್ನು ಮರೆತು ವೈಯಕ್ತಿಕ ಲಾಭ ಮಾಡಿಕೊಳ್ಳುತ್ತಿದೆ ಎಂದು ಗಂಭೀರವಾಗಿ ಗಮನಿಸಿತ್ತು. ಈಗ ಸರ್ಕಾರವೇ ನೇರವಾಗಿ ಈ ಕಂಪನಿಗೆ ಅನುಕೂಲ ಮಾಡಿಕೊಡುತ್ತಿರುವುದು ಏಕೆ? ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.
ಸಂಪುಟದಲ್ಲೇ ಹೂಡಿಕೆದಾರರಿದ್ದಾರೆಯೇ?
ಈ ಹಂಚಿಕೆಯ ನಿಜವಾದ ಫಲಾನುಭವಿಗಳು ಸಂತ್ರಸ್ತ ರೈತರೇ ಅಥವಾ ನೈಸ್ ಸಂಸ್ಥೆಯ ಹೂಡಿಕೆದಾರರೇ? ಸಂಸ್ಥೆಯ ಲೆಕ್ಕಪತ್ರಗಳ ಫೋರೆನ್ಸಿಕ್ ಆಡಿಟ್ ನಡೆಸಲು ಕೋರ್ಟ್ ಸೂಚಿಸಿದ್ದರೂ, ಸರ್ಕಾರ ಏಕೆ ಮೌನವಾಗಿದೆ? ನಿಮ್ಮ ಸಂಪುಟದಲ್ಲೇ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದವರು ಯಾರಾದರೂ ಇದ್ದಾರೆಯೇ?" ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ದೇವೇಗೌಡರು ಖಾರವಾಗಿ ಪ್ರಶ್ನಿಸಿದ್ದಾರೆ.

