x

‘ಬಸವ ಮಂಟಪ’ ಕೃತಿ ವಿವಾದ: ಶಂಕರ್ ಬಿದರಿ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ, ಈಶ್ವರ್ ಖಂಡ್ರೆಗೆ ಪತ್ರ

ಒಂದು ವೇಳೆ ಅವರು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡದಿದ್ದರೆ ಅಥವಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ್ ಖಂಡ್ರೆ ಅವರು ಬಿದರಿ ಅವರನ್ನು ವಜಾಗೊಳಿಸದಿದ್ದರೆ, ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


Click the Play button to hear this message in audio format

ವಿವಾದಿತ ‘ಬಸವ ಮಂಟಪ’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮಹಾಸಭಾದ ಉಪ ಪೋಷಕ ಸದಸ್ಯ ಎಂ.ಟಿ. ಸುಭಾಷ್ ಚಂದ್ರ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಪತ್ರ ಬರೆದಿದ್ದು, ‘ದ ಫೆಡರಲ್ ಕರ್ನಾಟಕ’ಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಶಂಕರ್ ಬಿದರಿ ಅವರಿಗೆ ಮಾನ ಮರ್ಯಾದೆ ಇದ್ದರೆ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸುಭಾಷ್ ಚಂದ್ರ ಒತ್ತಾಯಿಸಿದರು. ಒಂದು ವೇಳೆ ಅವರು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡದಿದ್ದರೆ ಅಥವಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ್ ಖಂಡ್ರೆ ಅವರು ಬಿದರಿ ಅವರನ್ನು ವಜಾಗೊಳಿಸದಿದ್ದರೆ, ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರಾಜ್ಯಾಧ್ಯಕ್ಷರಾದ ಬಳಿಕ ಶಂಕರ್ ಬಿದರಿ ಅವರು ಸಮುದಾಯದ ಸಂಘಟನೆಗಾಗಿ ಯಾವುದೇ ಮಹತ್ವದ ಕೆಲಸ ಮಾಡಿಲ್ಲ ಎಂದು ದೂರಿದ ಅವರು, ಬಸವಣ್ಣನವರನ್ನು ಅವಹೇಳನ ಮಾಡುವ ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.

ಈಶ್ವರ್ ಖಂಡ್ರೆ ಅವರಿಗೆ ಬರೆದ ಪತ್ರದಲ್ಲೇನಿದೆ?

ವಿವಾದಿತ ‘ಬಸವ ಮಂಟಪ’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿರುವ ಶಂಕರ್ ಬಿದರಿ ಅವರು, ಲೇಖಕ ರವಿ ಹಂಜ್ ಅವರನ್ನು ಹೊಗಳಿದ್ದಲ್ಲದೆ, ಮಹಾಸಭಾದ ಪರವಾಗಿಯೂ ಅಭಿನಂದನೆ ಸಲ್ಲಿಸಿರುವುದು ಮಹಾಸಭಾಕ್ಕೆ ಬಗೆದ ದ್ರೋಹವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವೈಯಕ್ತಿಕ ವಿಶ್ವಾಸಕ್ಕೆ ಕಟ್ಟುಬಿದ್ದು ಮಹಾಸಭಾದ ಘನತೆ ಮತ್ತು ಗೌರವಕ್ಕೆ ಕುಂದು ಬರುವ ರೀತಿಯಲ್ಲಿ ಬಿದರಿ ನಡೆದುಕೊಂಡಿದ್ದಾರೆ. ಕೃತಿಯ ಪ್ರಕಾಶಕರ ಕಪಿಮುಷ್ಟಿಗೆ ಸಿಲುಕಿರುವ ಇಂಥವರಿಂದ ಮಹಾಸಭಾಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಸುಭಾಷ್ ಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಘಟಕದ ಅಧ್ಯಕ್ಷರಾದ ನಂತರ ಮಹಾಸಭಾದ ಸಂಘಟನೆಗೆ ಒತ್ತು ನೀಡದೆ, ವಿವಾದಾತ್ಮಕ ವಿಷಯಗಳಿಗೆ ಆದ್ಯತೆ ನೀಡುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಧಕ್ಕೆ ತರುತ್ತಿದ್ದಾರೆ. ಇವರಿಂದ ಇನ್ನಷ್ಟು ಹಾನಿಯಾಗುವ ಮುನ್ನವೇ ತಕ್ಷಣ ವಜಾಗೊಳಿಸಬೇಕು. ಒಂದು ವೇಳೆ ಕ್ರಮ ಕೈಗೊಳ್ಳಲು ವಿಳಂಬ ಮಾಡಿದರೆ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧವೂ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

ಸರ್ಕಾರದ ಕ್ರಮಕ್ಕೆ ಸ್ವಾಗತ

ಬಸವ ಪರ ಮತ್ತು ಸಮಾಜ ಪರ ಸಂಘಟನೆಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರವು ವಿವಾದಿತ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ. ಕೃತಿಯನ್ನು ಓದದೆಯೇ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮೂರ್ಖತನದ ಪರಮಾವಧಿಯಾಗಿದ್ದು, ಅಂತಹ ಕೃತಿಗೆ ಪ್ರಮಾಣಪತ್ರ ನೀಡುವುದು ಅವಿವೇಕತನ ಎಂದು ಸುಭಾಷ್ ಚಂದ್ರ ಟೀಕಿಸಿದ್ದಾರೆ.

Read More
Next Story