
ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆ: ಕೆಎಂಎಫ್‌ಗೆ ದೂರು ಸಲ್ಲಿಕೆ
ದಿನನಿತ್ಯ ಲಕ್ಷಾಂತರ ಕುಟುಂಬಗಳು, ರೋಗಿಗಳು ಸೇವಿಸುವ ನಂದಿನಿ ಹಾಲಿನ ಪ್ಯಾಕೆಟ್ ಒಂದರಲ್ಲಿ ಮೃತ ಜೇಡ ಪತ್ತೆಯಾಗಿದ್ದು, ಗ್ರಾಹಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಮನೆಮಾತಾಗಿರುವ, ರಾಜ್ಯದ ಕೋಟ್ಯಂತರ ಜನ ನಂಬಿರುವ ನಂದಿನಿ ಹಾಲಿನ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ತೀವ್ರ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ದಿನನಿತ್ಯ ಲಕ್ಷಾಂತರ ಕುಟುಂಬಗಳು, ಮಕ್ಕಳು, ವೃದ್ಧರು ಮತ್ತು ರೋಗಿಗಳು ಕುಡಿಯುವ ನಂದಿನಿ ಹಾಲಿನ ಪ್ಯಾಕೆಟ್ ಒಂದರಲ್ಲಿ ಮೃತ ಜೇಡ ಪತ್ತೆಯಾಗಿದ್ದು, ಗ್ರಾಹಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಎರಡು ದಶಕಗಳಿಂದ ನಂದಿನಿ ಹಾಲಿನ ನಿಷ್ಠಾವಂತ ಗ್ರಾಹಕರಾಗಿರುವ ಬೆಂಗಳೂರಿನ ಕೇಂದ್ರೀಯ ವಿಹಾರದ ನಿವಾಸಿ ವಕೀಲರಾದ ನಾಗೂರ್ ರೋಜಾ ಅವರು ತಮಗಾದ ಈ ಕಹಿ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಕರ್ನಾಟಕ ಹಾಲು ಮಹಾಮಂಡಳಿ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ. ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿರುವ ಅವರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಗ್ರಾಹಕರ ಹಿತರಕ್ಷಣಾ ವೇದಿಕೆ ಹಾಗೂ ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ ಅಧಿಕೃತ ದೂರು ನೀಡುವುದಾಗಿ 3 ದಿನಗಳ ಖಡಕ್ ಗಡುವು ನೀಡಿದ್ದಾರೆ.
ದೂರುದಾರ ನಾಗೂರ್ ರೋಜಾ ಅವರು, ಹಲವು ವರ್ಷಗಳಿಂದ ನಿರಂತರವಾಗಿ ನಂದಿನಿ ಹಾಲು ಮತ್ತು ಕೆಎಂಎಫ್‌ನ ಇತರ ಹಾಲಿನ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಎಂದಿನಂತೆ ಬಳಕೆಗಾಗಿ ತಂದಿದ್ದ ನಂದಿನಿ ಹಾಲಿನ ಪ್ಯಾಕೆಟ್ ಅನ್ನು ಕತ್ತರಿಸಿ ಪಾತ್ರೆಗೆ ಸುರಿಯುವಾಗ, ಹಾಲಿನೊಂದಿಗೆ ಕಪ್ಪು ಬಣ್ಣದ ಕಲ್ಮಶವೊಂದು ಹೊರಬಂದಿದೆ. ಸೂಕ್ಷ್ಮವಾಗಿ ಗಮನಿಸಿದಾಗ, ಅದು ಹಾಲಿನಲ್ಲಿ ತೇಲುತ್ತಿದ್ದ ಒಂದು ದೊಡ್ಡ ಗಾತ್ರದ ಸತ್ತ ಜೇಡ ಎಂಬುದು ತಿಳಿದುಬಂದಿದೆ.
ಇದನ್ನು ಕಂಡು ಮನೆಯವರೆಲ್ಲರೂ ಒಮ್ಮೆಲೆ ಬೆಚ್ಚಿಬಿದ್ದಿದ್ದಾರೆ. ಹಾಲು ಎಂದರೆ ನಾವು ಅಮೃತಕ್ಕೆ ಸಮಾನ ಎಂದು ಭಾವಿಸುತ್ತೇವೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರೂ ಇದನ್ನು ಸೇವಿಸುತ್ತಾರೆ. ಹಾಲನ್ನು ಬಿಸಿ ಮಾಡುವ ಮುನ್ನವೇ ಜೇಡ ಕಣ್ಣಿಗೆ ಬಿದ್ದಿದ್ದರಿಂದ ಪ್ರಾಣಾಪಾಯ ತಪ್ಪಿದೆ. ಒಂದು ವೇಳೆ ಗಮನಿಸದೆ ಆ ಹಾಲನ್ನು ಮಕ್ಕಳಿಗೆ ನೀಡಿದ್ದರೆ ಅವರ ಗತಿಯೇನಾಗುತ್ತಿತ್ತು? ಎಂದು ನಾಗೂರ್ ರೋಜಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ಕಾನೂನು ಹೋರಾಟ ಮತ್ತು ತನಿಖೆಗೆ ಸಾಕ್ಷಿಯಾಗಿರಲಿ ಎಂಬ ಕಾರಣಕ್ಕೆ ದೂರುದಾರರು ಸತ್ತ ಜೇಡ ಬಿದ್ದಿರುವ ಹಾಲನ್ನು ಹಾಗೆಯೇ ಸಂರಕ್ಷಿಸಿ ಇಟ್ಟಿದ್ದಾರೆ.
ಇದು ಕೇವಲ ಒಂದು ಪ್ಯಾಕೆಟ್ ಸಮಸ್ಯೆಯಲ್ಲ
ಈ ಘಟನೆಯನ್ನು ಕೇವಲ ಒಂದು ಪ್ರತ್ಯೇಕ ಘಟನೆ ಎಂದು ತಳ್ಳಿಹಾಕಲು ಸಾಧ್ಯವಿಲ್ಲ ಎಂಬುದು ದೂರುದಾರರ ಗಂಭೀರ ವಾದವಾಗಿದೆ. ಡೈರಿಗಳಲ್ಲಿ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್ ಪ್ರಕ್ರಿಯೆಯು ಬೃಹತ್ ಟ್ಯಾಂಕರ್‌ಗಳ ಮೂಲಕ ನಡೆಯುತ್ತದೆ. ಒಂದು ಪ್ಯಾಕೆಟ್‌ನಲ್ಲಿ ಜೇಡ ಸಿಕ್ಕಿದೆ ಎಂದರೆ, ಆ ಜೇಡ ಬಿದ್ದಿದ್ದ ಇಡೀ ಬೃಹತ್ ಹಾಲಿನ ಟ್ಯಾಂಕರ್ ಕಲುಷಿತಗೊಂಡಿರಲೇಬೇಕು. ಆ ಟ್ಯಾಂಕರ್‌ನಿಂದ ಸಾವಿರಾರು ಪ್ಯಾಕೆಟ್‌ಗಳಿಗೆ ಹಾಲು ತುಂಬಿಸಿ, ಇಡೀ ಕರ್ನಾಟಕದಾದ್ಯಂತ ಸರಬರಾಜು ಮಾಡಲಾಗಿರುತ್ತದೆ. ಹಾಗಾದರೆ, ಅದೇ ಬ್ಯಾಚ್‌ನ ಹಾಲನ್ನು ಕುಡಿದ ಇತರ ಲಕ್ಷಾಂತರ ಮುಗ್ಧ ಜನರ, ವಿಶೇಷವಾಗಿ ಎಳೆ ಮಕ್ಕಳ ಮತ್ತು ರೋಗಿಗಳ ಜೀವಕ್ಕೆ ಹೊಣೆ ಯಾರು? ಕೆಎಂಎಫ್‌ನ ಹಾಲಿನ ಟ್ಯಾಂಕರ್‌ಗಳು ಮತ್ತು ಪ್ಯಾಕಿಂಗ್ ಮೆಷಿನ್‌ಗಳಲ್ಲಿ ಇಂತಹ ಬಾಹ್ಯ ಕೀಟಗಳು, ಜೇಡಗಳು ಬೀಳುವಷ್ಟು ನಿರ್ಲಕ್ಷ್ಯದ ವಾತಾವರಣವಿದೆಯೇ? ಎಂಬ ಗಂಭೀರ ಸಂಶಯಗಳು ಈಗ ಸಾರ್ವಜನಿಕರಲ್ಲಿ ಎದ್ದಿವೆ.
ಆಹಾರ ಪದಾರ್ಥಗಳಲ್ಲಿ ಯಾವುದೇ ರೀತಿಯ ವಿಷಕಾರಿ ಜೀವಿಗಳು, ಕೀಟಗಳು ಅಥವಾ ಬಾಹ್ಯ ವಸ್ತುಗಳು ಕಂಡುಬರುವುದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಪ್ರಕಾರ ಅತ್ಯಂತ ಗಂಭೀರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ.
ಮೂರು ಪ್ರಮುಖ ಸೆಕ್ಷನ್‌ಗಳ ಉಲ್ಲೇಖ
ಸೆಕ್ಷನ್ 26 (ಆಹಾರ ವ್ಯಾಪಾರಿಗಳ ಜವಾಬ್ದಾರಿ) - ಸುರಕ್ಷಿತವಲ್ಲದ, ಕಲುಷಿತಗೊಂಡ ಅಥವಾ ಮಾನವ ಬಳಕೆಗೆ ಯೋಗ್ಯವಲ್ಲದ ಯಾವುದೇ ಆಹಾರವನ್ನು ತಯಾರಿಸುವುದು, ಸಂಗ್ರಹಿಸುವುದು ಅಥವಾ ಮಾರಾಟ ಮಾಡುವುದನ್ನು ಇದು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಸೆಕ್ಷನ್ 27 (ಮಾರಾಟಗಾರರ ಹೊಣೆಗಾರಿಕೆ) - ಗ್ರಾಹಕರಿಗೆ ಮಾರಾಟ ಮಾಡುವ ಆಹಾರವು ನಿಗದಿತ ಗುಣಮಟ್ಟವನ್ನು ಹೊಂದಿರಬೇಕು ಮತ್ತು ಯಾವುದೇ ವಿಷಕಾರಿ ಅಂಶಗಳಿಂದ ಮುಕ್ತವಾಗಿರಬೇಕು. ಸೆಕ್ಷನ್ 54 (ಬಾಹ್ಯ ವಸ್ತುಗಳನ್ನು ಹೊಂದಿರುವ ಆಹಾರ ಮಾರಾಟಕ್ಕೆ ದಂಡ) - ಆಹಾರದಲ್ಲಿ ಕೀಟ, ಜೇಡ ಅಥವಾ ಅನ್ಯ ವಸ್ತುಗಳು ಕಂಡುಬಂದರೆ ಅಂತಹ ಸಂಸ್ಥೆಯ ಮೇಲೆ ಲಕ್ಷಾಂತರ ರೂಪಾಯಿ ದಂಡ ಮತ್ತು ಜವಾಬ್ದಾರಿಯುತ ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಲು ಈ ಸೆಕ್ಷನ್ ಅವಕಾಶ ನೀಡುತ್ತದೆ.
ಕೆಎಂಎಫ್‌ಗೆ 4 ಪ್ರಮುಖ ಆಗ್ರಹಗಳು
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ದೂರುದಾರರಾದ ನಾಗೂರ್ ರೋಜಾ ಅವರು ಕೆಎಂಎಫ್ ಆಡಳಿತ ಮಂಡಳಿಗೆ ನಾಲ್ಕು ಕಟ್ಟುನಿಟ್ಟಿನ ಒತ್ತಾಯಗಳನ್ನು ಮುಂದಿಟ್ಟಿದ್ದಾರೆ. ಕಲುಷಿತ ಹಾಲಿನಿಂದ ವಂಚಿತರಾದ ತಮಗೆ ಹಾಗೂ ಕೇಂದ್ರೀಯ ವಿಹಾರದ ಎಲ್ಲಾ ನಂದಿನಿ ಗ್ರಾಹಕರಿಗೆ ಸೂಕ್ತ ಪರಿಹಾರ ರೂಪದಲ್ಲಿ ಶುದ್ಧ ಹಾಲಿನ ಪ್ಯಾಕೆಟ್‌ಗಳನ್ನು ಪೂರೈಸಬೇಕು. ಈ ಭದ್ರತಾ ಲೋಪ ಹೇಗೆ ಸಂಭವಿಸಿತು ಎಂಬುದರ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ವಿಡಿಯೋ ಮತ್ತು ಫೋಟೋ ಸಾಕ್ಷ್ಯಗಳ ಸಮೇತ ವಿವರವಾದ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವ ಇಂತಹ ಬೇಜವಾಬ್ದಾರಿ ಕೆಲಸಕ್ಕೆ ಕಾರಣರಾದ ಸಂಬಂಧಪಟ್ಟ ಪ್ಯಾಕಿಂಗ್ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು. ಈ ಕಲುಷಿತ ಹಾಲು ಪ್ಯಾಕ್ ಆದ ನಿರ್ದಿಷ್ಟ ಘಟಕದಿಂದ ಗುಣಮಟ್ಟ ಪರೀಕ್ಷೆ ಪೂರ್ಣಗೊಳ್ಳುವವರೆಗೆ ಹಾಲಿನ ಪೂರೈಕೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುಂದಿನ ಮೂರು ದಿನಗಳ ಒಳಗಾಗಿ ಕೆಎಂಎಫ್ ಈ ಬೇಡಿಕೆಗಳಿಗೆ ಸ್ಪಂದಿಸಿ, ಲಿಖಿತ ಉತ್ತರ ಮತ್ತು ಕ್ರಮ ಕೈಗೊಳ್ಳದಿದ್ದರೆ, ವ್ಯಾಪ್ತಿಯ ಆಹಾರ ಸುರಕ್ಷತಾ ಪ್ರಾಧಿಕಾರಕ್ಕೆ ದೂರು ನೀಡಲಾಗುವುದು. ಜೊತೆಗೆ, ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಂದಿನಿ ಬ್ರ್ಯಾಂಡ್‌ನ ವಿಶ್ವಾಸಾರ್ಹತೆಗೆ ಬಿದ್ದ ದೊಡ್ಡ ಹೊಡೆತ
ಕರ್ನಾಟಕದಲ್ಲಿ ನಂದಿನಿ ಕೇವಲ ಒಂದು ಹಾಲಿನ ಬ್ರ್ಯಾಂಡ್ ಅಲ್ಲ, ಅದು ಕನ್ನಡಿಗರ ಭಾವನೆ ಮತ್ತು ನಂಬಿಕೆ. ಪ್ರತಿದಿನ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಕೆಎಂಎಫ್, ತನ್ನ ಅತ್ಯಾಧುನಿಕ ತಂತ್ರಜ್ಞಾನ, ಸ್ವಯಂಚಾಲಿತ ಯಂತ್ರಗಳು ಮತ್ತು ಕಟ್ಟುನಿಟ್ಟಿನ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಜಾಹೀರಾತುಗಳಲ್ಲಿ ಹೇಳಿಕೊಳ್ಳುತ್ತದೆ. ಆದರೆ, ಈ ರೀತಿಯ ಘಟನೆಗಳು ನಡೆದಾಗ ಆ ಎಲ್ಲಾ ಹೇಳಿಕೆಗಳು ಕೇವಲ ಪ್ರಚಾರಕ್ಕಷ್ಟೇ ಸೀಮಿತವೇ ಎಂಬ ಪ್ರಶ್ನೆ ಮೂಡುತ್ತದೆ.

