ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಭೀಕರ ಬರಗಾಲ: ಡಿಸಿಎಂ ಡಾ. ಜಿ. ಪರಮೇಶ್ವರ್ ಆತಂಕ
x

ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಭೀಕರ ಬರಗಾಲ: ಡಿಸಿಎಂ ಡಾ. ಜಿ. ಪರಮೇಶ್ವರ್ ಆತಂಕ

ಮೆಕ್ಕೆಜೋಳ, ಸೂರ್ಯಕಾಂತಿ, ಕಬ್ಬು ಸೇರಿದಂತೆ ವಿಶೇಷ ಬೆಳೆಯಾದ ನಂಜನಗೂಡು ಬಾಳೆ ಸಂಪೂರ್ಣವಾಗಿ ಒಣಗಿದೆ. ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಗುಂಡ್ಲುಪೇಟೆಯಲ್ಲಿ ಬೆಳೆಹಾನಿ ಅತ್ಯಂತ ಭೀಕರವಾಗಿದೆ.


Click the Play button to hear this message in audio format

ರಾಜ್ಯಾದ್ಯಂತ ಮಳೆ ಅಭಾವದಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕೃಷಿ ನಾಶ ಮತ್ತು ಮೇವಿನ ಕೊರತೆಯನ್ನು ಪರಿಶೀಲನೆ ನಡೆಸಿದರು.

ಗುಂಡ್ಲುಪೇಟೆ ತಾಲ್ಲೂಕಿನ ರಂಗನಾಥಪುರ, ನಿಟ್ರೆ, ಸೋಮಹಳ್ಳಿ, ಶೀಗೆವಾಡಿ ಹಾಗೂ ಚಾಮರಾಜನಗರ ತಾಲ್ಲೂಕಿನ ಮುಕ್ಕಡಹಳ್ಳಿ ಮತ್ತು ಹೆಗ್ಗೋಠಾರ ಗ್ರಾಮಗಳಲ್ಲಿ ಪರಿಶೀಲನೆ ಕೈಗೊಂಡರು. ಕೇವಲ ಅಧಿಕಾರಿಗಳ ವರದಿಗೆ ಸೀಮಿತವಾಗದೆ, ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ಮಳೆ ಕೊರತೆಯಿಂದಾಗಿ ಒಣಗಿರುವ ಬೆಳೆಗಳನ್ನು ವೀಕ್ಷಿಸಿದರು. ಈ ವೇಳೆ ರೈತರು ತಮ್ಮ ನೋವು ತೋಡಿಕೊಂಡರು.

ಜಾನುವಾರುಗಳಿಗೆ ಮೇವಿನ ತೀವ್ರ ಕೊರತೆಯಿದೆ ಎಂದು ರೈತರು ದೂರುತ್ತಿದ್ದಂತೆಯೇ, ಸ್ಥಳದಲ್ಲಿದ್ದ ಕೃಷಿ ಮತ್ತು ಪಶುಸಂಗೋಪನಾ ಇಲಾಖೆ ಅಧಿಕಾರಿಗಳನ್ನು ಉಪಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು. ಮೇವಿನ ಸಂಗ್ರಹದ ಕುರಿತು ವಿವರಣೆ ಕೇಳಿದಾಗ, ಅಧಿಕಾರಿಗಳು ಮುಂದಿನ 16 ವಾರಗಳಿಗೆ ಸಾಕಾಗುವಷ್ಟು ಮೇವು ದಾಸ್ತಾನಿದೆ ಎಂದು ಮಾಹಿತಿ ನೀಡಿದರು. ಆದರೂ, ಯಾವುದೇ ಕಾರಣಕ್ಕೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಲು ಮತ್ತು ತಕ್ಷಣವೇ ಅಗತ್ಯವಿದ್ದಲ್ಲಿ ಮೇವು ವಿತರಣಾ ಕೇಂದ್ರಗಳನ್ನು ತೆರೆಯಲು ಸೂಚನೆ ನೀಡಿದರು.

ಬೆಳೆ ಹಾನಿಯ ಭೀಕರ ಚಿತ್ರಣ

ಪರಿಶೀಲನೆಯ ನಂತರ ಮಾತನಾಡಿದ ಡಾ. ಪರಮೇಶ್ವರ್, "ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ರೈತರು ಅನುಭವಿಸುತ್ತಿರುವ ನೋವು ಅತೀವವಾಗಿದೆ. ಮೆಕ್ಕೆಜೋಳ, ಸೂರ್ಯಕಾಂತಿ, ಕಬ್ಬು ಸೇರಿದಂತೆ ಈ ಭಾಗದ ವಿಶೇಷ ಬೆಳೆಯಾದ ನಂಜನಗೂಡು ಬಾಳೆ ಸಂಪೂರ್ಣವಾಗಿ ಒಣಗಿದೆ. ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಗುಂಡ್ಲುಪೇಟೆಯಲ್ಲಿ ಬೆಳೆಹಾನಿ ಅತ್ಯಂತ ಭೀಕರವಾಗಿದೆ" ಎಂದು ಕಳವಳ ವ್ಯಕ್ತಪಡಿಸಿದರು. ಅನೇಕ ರೈತರು ಬೆಳೆ ವಿಮೆಯನ್ನು ಮಾಡಿಸಿಲ್ಲ ಎಂಬ ಸಂಗತಿಯೂ ಗಮನಕ್ಕೆ ಬಂದಿದೆ. ಅಂತಹ ಸಂಕಷ್ಟದಲ್ಲಿರುವ ರೈತರಿಗೆ ಮಾನವೀಯತೆಯ ಆಧಾರದ ಮೇಲೆ ಸೂಕ್ತ ಪರಿಹಾರ ಕಲ್ಪಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಭರವಸೆ ನೀಡಿದರು.

ಕೇಂದ್ರದ ವಿರುದ್ಧ ಅಸಮಾಧಾನ

ಕಳೆದ ವರ್ಷ ರಾಜ್ಯದಲ್ಲಿ ಬರದಿಂದಾಗಿ ಸುಮಾರು 39 ಸಾವಿರ ಕೋಟಿ ರೂಪಾಯಿಗಳ ಬೆಳೆ ನಷ್ಟ ಉಂಟಾಗಿತ್ತು. ರಾಜ್ಯ ಸರ್ಕಾರವು ಕೇಂದ್ರಕ್ಕೆ 18 ಸಾವಿರ ಕೋಟಿ ರೂಪಾಯಿಗಳ ಪರಿಹಾರ ನೀಡುವಂತೆ ಬೇಡಿಕೆ ಸಲ್ಲಿಸಿತ್ತು. ಆದರೆ, ಕೇಂದ್ರ ಸರ್ಕಾರವು ಕನಿಷ್ಠ ಸ್ಪಂದನೆಯನ್ನೂ ತೋರಿಸಲಿಲ್ಲ. ಅನಿವಾರ್ಯವಾಗಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು. ನ್ಯಾಯಾಲಯದ ಆದೇಶದ ನಂತರವಷ್ಟೇ ಕೇಂದ್ರವು ಕೇವಲ 3,500 ಕೋಟಿ ರೂಪಾಯಿಗಳ ಅನುದಾನ ನೀಡಿತು. ಈ ಬಾರಿಯೂ ಬರ ಪರಿಸ್ಥಿತಿ ಗಂಭೀರವಾಗಿದೆ. ಅಕ್ಟೋಬರ್ 15ರ ಒಳಗಾಗಿ ರಾಜ್ಯಾದ್ಯಂತ ಬರ ವೀಕ್ಷಣೆ ಪೂರ್ಣಗೊಳಿಸಿ, ವೈಜ್ಞಾನಿಕ ವರದಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ರಾಜಕೀಯ ಮಾಡದೆ, ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಮುಂದಿರುವ ಸವಾಲುಗಳು

ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕಿದೆ. ಗ್ರಾಮೀಣ ಜನತೆ ವಲಸೆ ಹೋಗುವುದನ್ನು ತಡೆಯಲು ವಿಬಿಜಿ ರಾಮ್‌ ಜಿ ಅಡಿಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ, ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡದಂತೆ ಕಡಿಮೆ ದರದಲ್ಲಿ ಮೇವು ಮತ್ತು ನೀರಿನ ಪೂರೈಕೆ ಮಾಡಬೇಕಿದೆ. ಬರಗಾಲದ ಹೊಡೆತದಿಂದ ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸಾಲದ ಸುಳಿಗೆ ಸಿಲುಕಿರುವ ರೈತರಿಗೆ ಸರ್ಕಾರಿ ಪರಿಹಾರವೇ ಆಶಾಕಿರಣ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ರಾಜಕೀಯ ಜಿದ್ದಾಜಿದ್ದಿನಲ್ಲಿ ರೈತರು ಬಲಿಪಶುವಾಗಬಾರದು ಎಂಬುದು ಸಾರ್ವಜನಿಕರ ಒತ್ತಾಯ. ಡಿಸಿಎಂ ಅವರ ಈ ಪ್ರವಾಸವು ಕೇವಲ ಭೇಟಿಗೆ ಸೀಮಿತವಾಗದೆ, ತಕ್ಷಣದ ಪರಿಹಾರ ಕಾರ್ಯಗಳಿಗೆ ಮುನ್ನುಡಿಯಾಗಬೇಕು ಎಂಬುದು ಜನರ ನಿರೀಕ್ಷೆ.

Read More
Next Story