
ವೈರಲ್ ಆಗಿರುವ ವಿಡಿಯೋ
ಬೆಂಗಳೂರಿನ ಡೇ ಕೇರ್‌ನಲ್ಲಿ ಕ್ರೌರ್ಯ! ಪುಟ್ಟ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿಟ್ಟು ವಿಕೃತಿ
ಬೆಂಗಳೂರಿನ ಡೇ ಕೇರ್‌ನಲ್ಲಿ ಪುಟ್ಟ ಮಕ್ಕಳನ್ನು ವಾಷಿಂಗ್ ಮೆಷಿನ್‌ನಲ್ಲಿ ಇಟ್ಟು ದೌರ್ಜನ್ಯ ಎಸಗಿದ ದೃಶ್ಯ ವೈರಲ್ ಆಗಿದೆ. ವಿಷಯ ಹೊರಹಾಕಿದ ಸಿಬ್ಬಂದಿಯನ್ನು ವಜಾ ಮಾಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಬೆಂಗಳೂರು ನಗರದ ಎಚ್‌ಎಎಲ್ ಆವರಣದಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕಂಪನಿಯ ಶಿಶುಪಾಲನಾ ಕೇಂದ್ರದಲ್ಲಿ (ಡೇ ಕೇರ್) ಪುಟ್ಟ ಮಕ್ಕಳ ಮೇಲೆ ನಡೆದಿರುವ ಭೀಕರ ದೌರ್ಜನ್ಯ ತಡವಾಗಿ ಬೆಳಕಿಗೆ ಬಂದಿದೆ. ಈ ಕೇಂದ್ರದಲ್ಲಿ ಅಕ್ಕಪಕ್ಕದ ಐಟಿ ಉದ್ಯೋಗಿಗಳು ತಮ್ಮ ಮಕ್ಕಳನ್ನು ನಂಬಿ ಬಿಟ್ಟು ಹೋಗುತ್ತಿದ್ದರು. ಆದರೆ, ಅಲ್ಲಿ ಮಕ್ಕಳ ಮೇಲೆ ನಡೆದಿರುವ ಅಮಾನವೀಯ ದೌರ್ಜನ್ಯದ ಸಿಸಿಟಿವಿ ವಿಡಿಯೋಗಳು ಈಗ ವೈರಲ್ ಆಗಿದ್ದು, ಪೋಷಕರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.
ಎದೆಝಲ್ಲೆನಿಸುವ ಸಿಸಿಟಿವಿ ವಿಡಿಯೋಗಳು
ಡೇ ಕೇರ್‌ನಲ್ಲಿದ್ದ ಎದೆಝಲ್ಲೆನಿಸುವ ಸಿಸಿಟಿವಿ ವಿಡಿಯೋಗಳ ಆಧಾರದ ಮೇಲೆ ಸದ್ಯ ಪೊಲೀಸರಿಗೆ ದೂರು ನೀಡಲಾಗಿದ್ದು, ಎರಡು ಮತ್ತು ಮೂರು ವರ್ಷದ ಪುಟ್ಟ ಮಕ್ಕಳು ಅತ್ತಾಗ ಅಥವಾ ತುಂಟಾಟ ಮಾಡಿದಾಗ ಅವರನ್ನು ಸುಮ್ಮನಿರಿಸಲು ಅಲ್ಲಿದ್ದ ಮಹಿಳಾ ಸಿಬ್ಬಂದಿ ಅತ್ಯಂತ ಕ್ರೂರ ಹಾದಿ ಹಿಡಿಯುತ್ತಿದ್ದರು ಎಂಬ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.
ದೂರಿನ ಪ್ರಕಾರ, ಅಳುತ್ತಿದ್ದ ಪುಟ್ಟ ಮಕ್ಕಳನ್ನು ಬಲವಂತವಾಗಿ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಒಳಗೆ ಕೂರಿಸಿ ಭಯ ಪಡಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ, ಮಕ್ಕಳನ್ನು ಬಲವಂತವಾಗಿ ವೆಸ್ಟರ್ನ್ ಶೌಚಾಲಯದ ಕಮೋಡ್ ಮೇಲೆ ಕೂರಿಸಿ, ಅವರ ಬಾಯಿಗೆ ಶೌಚಾಲಯದ ಜೆಟ್ ಸ್ಪ್ರೇ ಮೂಲಕ ನೀರು ಹೊಡೆದು ಹಿಂಸಿಸಲಾಗುತ್ತಿತ್ತು. ತೀರಾ ಹಠ ಮಾಡುವ ಮಕ್ಕಳನ್ನು ಕತ್ತಲೆಯ ಬಾತ್‌ರೂಮ್‌ನಲ್ಲಿ ಗಂಟೆಗಟ್ಟಲೆ ಕೂಡಿ ಹಾಕಿ ಬೆದರಿಸುವುದು ಮತ್ತು ಅವರಿಗೆ ದೈಹಿಕವಾಗಿ ದೌರ್ಜನ್ಯ ಎಸಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಿಬ್ಬಂದಿಯ ಈ ವರ್ತನೆ ಮಕ್ಕಳ ಮೇಲಿನ ಕ್ರೌರ್ಯದ ಪರಾಕಾಷ್ಠೆಯನ್ನು ಎತ್ತಿ ತೋರಿಸುತ್ತದೆ.
#WATCH | Bengaluru, Karnataka | Commissioner of Police for Bengaluru City, Seemanth Kumar Singh says, " In the HAL police station limits, we received a complaint yesterday from the Child Protection Officer. As per the complaint, five names have been mentioned of the women staff… https://t.co/q2IfAw1UqA pic.twitter.com/AypUKh8rPJ
— ANI (@ANI) July 2, 2026
ಇನ್ನು ಈ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಕರಾಳ ಸತ್ಯವೊಂದು ಹೊರಬಿದ್ದಿದೆ. ಮಕ್ಕಳ ಮೇಲಿನ ದೌರ್ಜನ್ಯವನ್ನು ಪೋಷಕರ ಗಮನಕ್ಕೆ ತರಲು ಯತ್ನಿಸಿದ್ದ ಹಿಂದಿನ ವಿಸ್ಲ್‌ಬ್ಲೋವರ್ (ಮಾಹಿತಿ ನೀಡಿದ ವ್ಯಕ್ತಿ) ಅವರನ್ನು ಡೇ ಕೇರ್ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿತ್ತು ಎಂಬ ಆಘಾತಕಾರಿ ವಿಷಯವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಈ ಕೇಂದ್ರದಲ್ಲಿ ಸುಮಾರು ಐವತ್ತರಿಂದ ಅರವತ್ತು ಮಕ್ಕಳು ನೋಂದಾಯಿಸಿಕೊಂಡಿದ್ದು, ಪ್ರತಿದಿನ ಹದಿನೈದರಿಂದ ಇಪ್ಪತ್ತು ಮಕ್ಕಳು ಇಲ್ಲಿಗೆ ಬರುತ್ತಿದ್ದರು ಎಂದು ಪ್ರೊಬೇಷನ್ ಅಧಿಕಾರಿ ತಿಲಕೇಶ್ ಕುಮಾರ್ ಅವರು ತಿಳಿಸಿದ್ದಾರೆ. ಈ ದೌರ್ಜನ್ಯ ದೀರ್ಘಕಾಲದಿಂದ ನಡೆಯುತ್ತಿದ್ದು, ಈ ಹಿಂದೆ ಸಿಬ್ಬಂದಿಯೊಬ್ಬರು ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಐವರು ಆರೋಪಿ ಕೇರ್‌ಟೇಕರ್‌ಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದ್ದು, ಈ ಕುರಿತ ವಿಡಿಯೋ ಪುರಾವೆಗಳನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಇತ್ತ ಜಾಗತಿಕ ಕನ್ಸಲ್ಟಿಂಗ್ ಸಂಸ್ಥೆಯಾದ ಕ್ಯಾಪ್‌ಜೆಮಿನಿ, ತನ್ನ ಉದ್ಯೋಗಿಗಳ ಮತ್ತು ಅವರ ಕುಟುಂಬದ ಸುರಕ್ಷತೆಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಡೇ ಕೇರ್ ಕೇಂದ್ರವನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

