
ದಾವಣಗೆರೆ ದಕ್ಷಿಣ ಉಪಚುನಾವಣೆ: 'ಕೈ' ಹಿಡಿದ ಮತದಾರ, ಗೆಲುವಿನ ಅಂತರದಲ್ಲಿ ʼಮುಸ್ಲಿಂ' ಆತಂಕ!
2023ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಮತಗಳ ಗೆಲುವಿನ ಅಂತರ ಅಷ್ಟೇನೂ ತೃಪ್ತಿದಾಯವಾಗಿರದಿದ್ದರೂ ಪ್ರಯಾಸದ ಗೆಲುವು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಅವರಿಗೆ ದಕ್ಕಿದೆ.
ಕುಟುಂಬ ರಾಜಕಾರಣದ ಆರೋಪ, ಮುಸ್ಲಿಮರ ಬಂಡಾಯ ಹಾಗೂ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಕಾಂಗ್ರೆಸ್ ಬಹಿಷ್ಕಾರದಂತಹ ಜನಾಂದೋಲನದ ನಡುವೆಯೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಕೊರಳಿಗೆ ವಿಜಯಮಾಲೆ ಬಿದ್ದಿದೆ.
2023ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಮತಗಳ ಗೆಲುವಿನ ಅಂತರ ಅಷ್ಟೇನೂ ತೃಪ್ತಿದಾಯವಾಗಿರದಿದ್ದರೂ ಪ್ರಯಾಸದ ಗೆಲುವು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಅವರಿಗೆ ದಕ್ಕಿದೆ.
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ಸೃಷ್ಟಿಸಿದ್ದ ಮುಸ್ಲಿಮರ ಬಂಡಾಯ, ಅದರಿಂದಾಗುವ ಮತ ವಿಭಜನೆಯು ಕಾಂಗ್ರೆಸ್ಗೆ ಕಂಟಕವಾಗಲಿದೆ ಎಂಬ ಭೀತಿ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿತ್ತು. ತದನಂತರ ಬೆಳವಣಿಗೆಗಳಲ್ಲಿ ಮುಸ್ಲಿಮರು, ಪರಿಶಿಷ್ಟರು ಹಾಗೂ ಪ್ರಬಲ ಲಿಂಗಾಯತ ಸಮುದಾಯ ಶಾಮನೂರು ಕುಟುಂಬದ ಕುಡಿಯನ್ನು ಅಧಿಕಾರಕ್ಕೆ ಬರುವಂತೆ ಮಾಡಿದೆ. ಶಾಮನೂರು ಶಿವಶಂಕರಪ್ಪ ನಿಧನದ ನಂತರ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ ಅವರು 6,340 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸಮರ್ಥ್ ಅವರಿಗೆ ಒಟ್ಟು 68,948 ಮತಗಳು ಚಲಾವಣೆಯಾದರೆ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಣ್ಣ ಅವರಿಗೆ 63,747 ಮತಗಳು ಚಲಾವಣೆಯಾಗಿವೆ.
20 ಸಾವಿರ ಮತಗಳ ವಿಭಜನೆ?
ಕಾಂಗ್ರೆಸ್ ಪಕ್ಷದಿಂದ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡದ ಹಿನ್ನೆಲೆ ಬಂಡಾಯ ಸಾರಿದ್ದ ಮುಸ್ಲಿಮರು ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದರಿಂದ ಸುಮಾರು 20 ಸಾವಿರ ಮತಗಳು ಕಾಂಗ್ರೆಸ್ನಿಂದ ದೂರ ಸರಿದಿವೆ.
ಎಸ್ಡಿಪಿಐ ಅಭ್ಯರ್ಥಿಯೊಬ್ಬರೇ 18 ಸಾವಿರ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಗೆಲುವಿನ ಅಂತರ ತಗ್ಗಿಸಿದ್ದಾರೆ. ಇನ್ನು ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡಿದ್ದ ಪರಿಶಿಷ್ಟ ಜಾತಿಯವರ ಮತಗಳು ಕೂಡ ಬಿಜೆಪಿ ಅಭ್ಯರ್ಥಿ ಪಾಲಾಗಿದೆ. 2023ರಲ್ಲಿ ಬಿಜೆಪಿ ಅಭ್ಯರ್ಥಿ 56,410 ಮತಗಳನ್ನು ಪಡೆದಿದ್ದರು. ಪ್ರಸಕ್ತ ಉಪ ಚುನಾವಣೆಯಲ್ಲಿ ಶ್ರೀನಿವಾಸ ದಾಸ ಕರಿಯಣ್ಣ ಅವರು ಒಟ್ಟು 63,747ಮತಗಳನ್ನು ಪಡೆದು, ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರ ಭದ್ರಕೋಟೆಯಂತಿರುವ ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಸೋಲಿನ ಭೀತಿ ಮೂಡಿಸಿದ್ದ ಅಂತರ
ಆರಂಭಿಕ ಸುತ್ತುಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ನಡುಕ ಹುಟ್ಟಿಸಿತ್ತು. ಅಂತಿಮ ಸುತ್ತುಗಳಲ್ಲಿ ಕಾಂಗ್ರೆಸ್ ಪುಟಿದೇಳುವ ಮೂಲಕ ಗೆಲುವಿನ ದಡ ಸೇರಿತು. ಶಾಮನೂರು ಕುಟುಂಬದ ಮೂರನೇ ತಲೆಮಾರಿನ ರಾಜಕೀಯ ಪ್ರವೇಶಕ್ಕೆ ಮತದಾರರು ಸಮ್ಮತಿ ಸೂಚಿಸಿದ್ದರೂ ಕಡಿಮೆಯಾಗಿರುವ ಗೆಲುವಿನ ಅಂತರ ಕಾಂಗ್ರೆಸ್ ವಲಯದಲ್ಲಿ ಗಂಭೀರ ಆತ್ಮಾವಲೋಕನಕ್ಕೆ ಎಡೆ ಮಾಡಿಕೊಟ್ಟಿದೆ.
ಮುಸ್ಲಿಮರ ಬಂಡಾಯ, ಪಕ್ಷದಲ್ಲಿ ಒಡಕು
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 80 ಸಾವಿರ ಅಲ್ಪಸಂಖ್ಯಾತ ಮತಗಳು ನಿರ್ಣಾಯಕವಾಗಿದ್ದವು. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಈ ಬಾರಿ ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಮತ್ತೆ ಶಾಮನೂರು ಕುಟುಂಬದ ಕುಡಿಗೆ ಟಿಕೆಟ್ ನೀಡಿದ್ದರಿಂದ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನ ಭುಗಿಲೆದ್ದಿತ್ತು.
ಟಿಕೆಟ್ ಸಿಗದ ಕಾರಣ ಹಲವು ಮುಸ್ಲಿಂ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿದರೆ, ಸಮುದಾಯದಿಂದಲೇ ಎಸ್ಡಿಪಿಐಯನ್ನೂ ಕಣಕ್ಕಿಳಿಸಲಾಗಿತ್ತು. ಇದರಿಂದ ಗಣನೀಯ ಪ್ರಮಾಣದಲ್ಲಿ ಮುಸ್ಲಿಂ ಮತಗಳನ್ನು ವಿಭಜಿಸಿತು. ಇದಲ್ಲದೇ ಕಾಂಗ್ರೆಸ್ನ ಮುಸ್ಲಿಂ ನಾಯಕರಲ್ಲೂ ಭಿನ್ನಮತಕ್ಕೆ ಕಾರಣವಾಯಿತು. ಒಂದೆಡೆ ಶಾಸಕ ರಿಜ್ವಾನ್ ಅರ್ಷದ್ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ನೇತೃತ್ವದ ಬಣ, ಮತ್ತೊಂದೆಡೆ ಸಚಿವ ಜಮೀರ್ ಅಹಮದ್ ನೇತೃತ್ವದ ಬಣದ ಮಧ್ಯೆ, ತೀವ್ರ ಭಿನ್ನಮತ ಸೃಷ್ಟಿಯಾಗಲು ಕಾರಣವಾಗಿತ್ತು. ಪಕ್ಷದ ನಾಯಕರೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರ ತಲೆದಂಡ ನೀಡಬೇಕಾಯಿತು.
ಕೈಕೊಟ್ಟ ದಲಿತ ಮತದಾರರು?
ಉಪ ಚುನಾವಣೆ ಹೊತ್ತಿನಲ್ಲಿ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವಿಷಯವು ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ಗೆ ಭಾರೀ ಪೆಟ್ಟು ನೀಡಿದೆ. ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತಕ್ಷಣವೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದ ಕಾರಣ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಗಳು ಕಾಂಗ್ರೆಸ್ನಿಂದ ದೂರ ಸರಿದವು. ದಲಿತ ಮತಗಳ ಈ ಧ್ರುವೀಕರಣವು ಬಿಜೆಪಿಗೆ ನೆರವಾಯಿತು. ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಅಂತರ ಕುಸಿಯಿತು ಎಂದು ವಿಶ್ಲೇಷಸಿಲಾಗಿದೆ.
ಒಟ್ಟಾರೆ, ಶಾಮನೂರು ಕುಟುಂಬದ ಹಿಡಿತದಲ್ಲಿದ್ದ ಕ್ಷೇತ್ರವನ್ನು ಉಳಿಸಿಕೊಂಡಿರುವುದು ಸಮಾಧಾನದ ಸಂಗತಿಯಾದರೂ, ಅಲ್ಪಸಂಖ್ಯಾತರು ಮತ್ತು ದಲಿತ ಮತದಾರರ ಅಸಮಾಧಾನ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ಈ ಚುನಾವಣೆ ನೀಡಿದೆ.

