
ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಅವಘಡ: ಎಲ್ಇಡಿ ಕಮಾನು ಕುಸಿದು ಹಲವರಿಗೆ ಗಾಯ
ದಾವಣಗೆರೆಯಲ್ಲಿ ಗಣಪತಿ ಮೆರವಣಿಗೆ ವೇಳೆ ಅಳವಡಿಸಲಾಗಿದ್ದ ಬೃಹತ್ ಎಲ್ಇಡಿ ಕಮಾನಿನ ಮೇಲೆ ಸುರಕ್ಷತೆಯನ್ನೂ ಲೆಕ್ಕಿಸದೆ ಹತ್ತಾರು ಯುವಕರು ಹತ್ತಿ ಕುಳಿತಿದ್ದರು. ಪರಿಣಾಮ ಕುಸಿದು ಬಿದ್ದಿದ್ದೆ.
ದಾವಣಗೆರೆ ನಗರದಲ್ಲಿ ನಡೆದ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆಯ ಸಂದರ್ಭದಲ್ಲಿ ಎಲ್ಇಡಿ ಕಮಾನು ಕುಸಿದು ಬಿದ್ದ ಪರಿಣಾಮ ವೃದ್ಧರೊಬ್ಬರು ಸೇರಿದಂತೆ ಹಲವು ಯುವಕರು ಗಾಯಗೊಂಡಿರುವ ಘಟನೆ ನಡೆದಿದೆ. ಶೋಭಾಯಾತ್ರೆಯ ಸಂಭ್ರಮದ ನಡುವೆ ನಡೆದ ಈ ಅನಿರೀಕ್ಷಿತ ಅವಘಡ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು.
ನಗರದ ಹೈಸ್ಕೂಲ್ ಮೈದಾನದಿಂದ ಆರಂಭವಾದ ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆಯು ನಗರದ ಪ್ರಮುಖ ರಸ್ತೆಗಳಾದ ಎವಿಕೆ ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ ಮತ್ತು ಲಾಯರ್ ರಸ್ತೆ ಮಾರ್ಗವಾಗಿ ಪಿ.ಬಿ. ರಸ್ತೆಯನ್ನು ತಲುಪಿತ್ತು. ಖಾಸಗಿ ಬಸ್ ನಿಲ್ದಾಣದ ಸಮೀಪ ಮೆರವಣಿಗೆ ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮೆರವಣಿಗೆಯಲ್ಲಿ ಅಳವಡಿಸಲಾಗಿದ್ದ ಬೃಹತ್ ಎಲ್ಇಡಿ ಕಮಾನು ಕಲಾತ್ಮಕವಾಗಿತ್ತು. ಆದರೆ, ಆ ಕಮಾನಿನ ಮೇಲೆ ಸುರಕ್ಷತೆಯನ್ನೂ ಲೆಕ್ಕಿಸದೆ ಹತ್ತಾರು ಯುವಕರು ಹತ್ತಿ ಕುಳಿತಿದ್ದರು. ಯುವಕರ ಭಾರವನ್ನು ತಡೆಯಲಾರದೆ ಆ ಕಮಾನು ಇದ್ದಕ್ಕಿದ್ದಂತೆ ಮುರಿದು ಬಿದ್ದಿದೆ. ಕಮಾನು ಬೀಳುತ್ತಿರುವ ದೃಶ್ಯ ಮತ್ತು ಅದರ ಮೇಲೆ ಕುಳಿತಿದ್ದ ಯುವಕರು ಕೆಳಗೆ ನಿಂತಿದ್ದವರ ಮೇಲೆ ಧರೆಗುರುಳಿದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗಾಯಾಳುಗಳಿಗೆ ಚಿಕಿತ್ಸೆ
ಕಮಾನು ಬಿದ್ದ ರಭಸಕ್ಕೆ ಅದರ ಅಡಿಯಲ್ಲಿದ್ದ ವೃದ್ಧ ಸಿದ್ದಲಿಂಗಪ್ಪ ಅವರಿಗೆ ಗಂಭೀರ ಗಾಯಗಳಾಗಿವೆ. ಅವರೊಂದಿಗೆ ಕೆಲವು ಯುವಕರಿಗೂ ಪೆಟ್ಟು ಬಿದ್ದಿದೆ. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಾರ್ವಜನಿಕರು ಕೂಡಲೇ ಕಾರ್ಯಪ್ರವೃತ್ತರಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸಮಯಪ್ರಜ್ಞೆಯಿಂದ ತಕ್ಷಣ ಸ್ಪಂದಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಘಟನೆಯ ಬೆನ್ನಲ್ಲೇ ಆ ಎಲ್ಇಡಿ ಕಮಾನನ್ನು ತೆರವುಗೊಳಿಸಲಾಗಿದ್ದು, ಡಿಜೆ ಸದ್ದನ್ನು ಸ್ಥಗಿತಗೊಳಿಸಲಾಯಿತು. ದಾವಣಗೆರೆಯ ಹಿಂದೂ ಮಹಾಗಣಪತಿಯ ಶೋಭಾಯಾತ್ರೆಯು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮುಕ್ತಾಯಗೊಂಡಿತು. ಬಳಿಕ ಭಕ್ತರು ಮೂರ್ತಿಯನ್ನು ಮೆರವಣಿಗೆಯ ಮೂಲಕ ಬಾತಿ ಕೆರೆ ಬಳಿ ಕೃತಕವಾಗಿ ನಿರ್ಮಿಸಲಾಗಿದ್ದ ಬಾವಿಗೆ ತೆಗೆದುಕೊಂಡು ಹೋಗಿ ಶಾಸ್ತ್ರೋಕ್ತವಾಗಿ ನಿಮಜ್ಜನ ಮಾಡಿದರು. ಈ ಬೃಹತ್ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಗಣಪತಿಯ ಕೃಪೆಗೆ ಪಾತ್ರರಾದರು. ಯುವಕ-ಯುವತಿಯರು ಡಿಜೆ ಸದ್ದಿಗೆ ಮೈಮರೆತು ಕುಣಿದು ಸಂಭ್ರಮಿಸಿದರು.
ಡಿಜೆ ನಿಷೇಧಕ್ಕೆ ಯುವಕರ ಆಕ್ರೋಶ
ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ನಿಯಮದಂತೆ, ರಾತ್ರಿ 9 ಗಂಟೆಯಾಗುತ್ತಿದ್ದಂತೆಯೇ ಎಲ್ಲಾ ಡಿಜೆ ಸೌಂಡ್ಗಳನ್ನು ಬಂದ್ ಮಾಡಿಸಲಾಯಿತು. ನಿಗದಿತ ಸಮಯದ ನಂತರವೂ ಡಿಜೆ ಸದ್ದು ಮುಂದುವರಿಯಬಾರದು ಎಂಬ ಕಠಿಣ ನಿಯಮವನ್ನು ಪೊಲೀಸರು ಜಾರಿಗೊಳಿಸಿದ್ದರು. ಈ ಕ್ರಮವು ಅಲ್ಲಿನ ಯುವಕರು ಮತ್ತು ಆಯೋಜಕರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಮೆರವಣಿಗೆಯು ಸಂಪೂರ್ಣವಾಗಿ ಕೊನೆಗೊಳ್ಳುವ ಮುನ್ನವೇ ಡಿಜೆ ಬಂದ್ ಮಾಡಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೆಲ ಯುವಕರು, ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

