Karnataka Prisons| ಕೈದಿಗಳ ದರ್ಶನʼ:  ವಿಐಪಿ ಸಂಸ್ಕೃತಿಗೆ ಪೂರ್ಣ ಕಡಿವಾಣ
x

Karnataka Prisons| ಕೈದಿಗಳ 'ದರ್ಶನʼ: ವಿಐಪಿ ಸಂಸ್ಕೃತಿಗೆ ಪೂರ್ಣ ಕಡಿವಾಣ

ಇತ್ತೀಚಿನ ದಿನಗಳಲ್ಲಿ ಜೈಲಿನ ಆವರಣದಲ್ಲಿದರ್ಶನ್ ರೌಡಿ ಶೀಟರ್‌ಗಳಾದ ವಿಲ್ಸನ್ ಗಾರ್ಡನ್ ನಾಗ ಮತ್ತು ಇತರರೊಂದಿಗೆ ಕುಳಿತು ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಿರುವ ಫೋಟೋ ವೈರಲ್ ಆಗಿತ್ತು.


Click the Play button to hear this message in audio format

ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳನ್ನು ಭೇಟಿ ಮಾಡುವ ಪ್ರಕ್ರಿಯೆಯಲ್ಲಿ ನಡೆಯುತ್ತಿದ್ದ ಪಾರದರ್ಶಕತೆಯ ಕೊರತೆ ಮತ್ತು ನಿಯಮಗಳ ದುರುಪಯೋಗಕ್ಕೆ ಕಡಿವಾಣ ಹಾಕಲು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಮುಂದಾಗಿದೆ. ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ.

ತುರ್ತು ಮತ್ತು ವಿಶೇಷ ಸಂದರ್ಭಗಳಲ್ಲಿ ಕೈದಿಗಳ ಭೇಟಿಗೆ ಸಂಬಂಧಿಸಿದಂತೆ ಕಠಿಣ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದಾರೆ. ಈ ಹೊಸ ನಿಯಮಗಳು ಜೈಲುಗಳಲ್ಲಿನ ವಿಐಪಿ ಸಂಸ್ಕೃತಿಗೆ ಕಡಿವಾಣ ಬೀಳುವ ಸಾಧ್ಯತೆ ಇದೆ.

ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಕೈಪಿಡಿ 2021ರ ಅಧ್ಯಾಯ 31ರ ಅಡಿಯಲ್ಲಿ ತುರ್ತು ಮತ್ತು ವಿಶೇಷ ಸಂದರ್ಭಗಳಲ್ಲಿ ಕೈದಿಗಳಿಗೆ ವಿಶೇಷ ಭೇಟಿಯ ಅವಕಾಶ ನೀಡಲು ಜೈಲು ಅಧೀಕ್ಷಕರಿಗೆ ಅಧಿಕಾರವಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ನಿಯಮವನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಪ್ರಭಾವಿ ಕೈದಿಗಳು ಸಾಮಾನ್ಯ ನಿಯಮಗಳನ್ನು ಮೀರಿ ಪದೇ ಪದೇ ಭೇಟಿಗೆ ಅವಕಾಶ ಪಡೆಯುತ್ತಿರುವುದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಭೇಟಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸ್ಪಷ್ಟತೆ ತರಲು ಈ ಹೊಸ ಆದೇಶ ಹೊರಡಿಸಲಾಗಿದೆ.

ವಿಶೇಷ ಭೇಟಿಗೆ ಅವಕಾಶ ನೀಡುವ 4 ಪ್ರಮುಖ ಸಂದರ್ಭಗಳು

ಇನ್ನು ಮುಂದೆ ಎಲ್ಲರಿಗೂ ವಿಶೇಷ ಭೇಟಿಯ ಅವಕಾಶ ಸಿಗುವುದಿಲ್ಲ. ಕೇವಲ ಈ ಕೆಳಗಿನ ನಾಲ್ಕು ಸಂದರ್ಭಗಳಲ್ಲಿ ಮಾತ್ರ ಜೈಲು ಮುಖ್ಯಸ್ಥರು ಅನುಮತಿ ನೀಡಬಹುದಾಗಿದೆ. ಕೈದಿಯು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ ಅಥವಾ ಗಾಯಗೊಂಡು ಚಲನವಲನ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದರೆ ತಿಂಗಳಿಗೊಮ್ಮೆ ಮಾತ್ರ ವಿಶೇಷ ಭೇಟಿಗೆ ಅವಕಾಶ ನೀಡಬಹುದು. ಕೈದಿಯ ಹತ್ತಿರದ ಕುಟುಂಬ ಸದಸ್ಯರು ಮರಣ ಹೊಂದಿದಾಗ ಅಥವಾ ಕುಟುಂಬದಲ್ಲಿ ತುರ್ತು ವೈದ್ಯಕೀಯ ಪರಿಸ್ಥಿತಿ ಎದುರಾದಾಗ ಮಾನವೀಯ ನೆಲೆಯಲ್ಲಿ ಭೇಟಿಗೆ ಅವಕಾಶ ನೀಡಬಹುದು. ಶಿಕ್ಷೆ ಮುಗಿದು ಅಥವಾ ಅವಧಿಗೆ ಮುನ್ನ ಬಿಡುಗಡೆಯಾಗುವ ಅರ್ಹತೆ ಹೊಂದಿರುವ ಕೈದಿಗಳಿಗೆ, ಅವರ ಬಿಡುಗಡೆಯ ಎರಡು ತಿಂಗಳ ಮೊದಲು ಭೇಟಿಗೆ ಅವಕಾಶ ನೀಡಬಹುದು. ಇದು ಕೈದಿಯ ಪುನರ್ವಸತಿ, ಉದ್ಯೋಗ, ಆಪ್ತಸಮಾಲೋಚನೆ ಮತ್ತು ವಾಸಸ್ಥಳದ ಸಿದ್ಧತೆಗಾಗಿ ಮಾತ್ರ ಸೀಮಿತವಾಗಿರುತ್ತದೆ. ಭೇಟಿ ಮಾಡಲು ಬರುವವರು ವಿಕಲಚೇತನರಾಗಿದ್ದರೆ ಅಥವಾ ಗರ್ಭಿಣಿ ಮಹಿಳೆಯಾಗಿದ್ದರೆ ಅಂತಹ ಸಂದರ್ಭಗಳಲ್ಲಿ ವಿಶೇಷ ಭೇಟಿಗೆ ಅವಕಾಶ ನೀಡಬಹುದು ಎಂದು ತಿಳಿಸಲಾಗಿದೆ.

ಅನುಸರಿಸಬೇಕಾದ ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳು

ವಿಶೇಷ ಭೇಟಿಗೆ ಅನುಮತಿ ನೀಡುವಾಗ ಜೈಲು ಅಧಿಕಾರಿಗಳು 7 ಪ್ರಮುಖ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಭೇಟಿಗೂ ಮುನ್ನ ಜೈಲು ಮುಖ್ಯಸ್ಥರಿಂದ ಕಡ್ಡಾಯವಾಗಿ ಲಿಖಿತ ಅನುಮತಿ ಪಡೆಯಬೇಕು. ಭೇಟಿಯಿಂದ ಜೈಲಿನ ಭದ್ರತೆ ಅಥವಾ ಶಿಸ್ತಿಗೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಬೇಕು. ಭೇಟಿಯು ಜೈಲಿನ ಆವರಣದೊಳಗಿರುವ ನಿಗದಿತ ಸಂದರ್ಶನ ಕೊಠಡಿಯಲ್ಲಿಯೇ ನಡೆಯಬೇಕು. ಈ ಸಮಯದಲ್ಲಿ ಜೈಲು ಅಧಿಕಾರಿಯೊಬ್ಬರ ಮೇಲ್ವಿಚಾರಣೆ ಇರಲೇಬೇಕು. ವಿಶೇಷ ಭೇಟಿಯ ಅವಧಿಯು ಯಾವುದೇ ಕಾರಣಕ್ಕೂ 30 ನಿಮಿಷಗಳನ್ನು ಮೀರಬಾರದು.

ಒಬ್ಬ ಕೈದಿಯನ್ನು ಭೇಟಿ ಮಾಡಲು ಗರಿಷ್ಠ 5 ಜನರಿಗೆ ಮಾತ್ರ ಅವಕಾಶವಿರುತ್ತದೆ. ಇದರಲ್ಲಿ ಕುಟುಂಬದವರು, ಸಂಬಂಧಿಕರು ಅಥವಾ ಸ್ನೇಹಿತರು ಸೇರಿರಬಹುದು. ಭೇಟಿಯ ಸಮಯದಲ್ಲಿ ಯಾವುದೇ ಅಶಿಸ್ತು ಅಥವಾ ಭದ್ರತಾ ಲೋಪ ಕಂಡುಬಂದಲ್ಲಿ, ಭೇಟಿಯನ್ನು ತಕ್ಷಣವೇ ರದ್ದುಗೊಳಿಸುವ ಅಧಿಕಾರ ಜೈಲು ಮುಖ್ಯಸ್ಥರಿಗೆ ಇರುತ್ತದೆ. ಇದಕ್ಕೆ ಕಾರಣವನ್ನು ಅವರು ಲಿಖಿತವಾಗಿ ದಾಖಲಿಸಬೇಕು. ನೀಡಲಾದ ಪ್ರತಿಯೊಂದು ವಿಶೇಷ ಭೇಟಿಯ ಪ್ರಕರಣವನ್ನು ಉನ್ನತ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸುತ್ತಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಡಿಜಿಪಿ ಅನುಮತಿ ಕಡ್ಡಾಯ

ಒಂದು ವೇಳೆ ಯಾವುದೇ ಭೇಟಿಯು ನಾಲ್ಕು ಸಂದರ್ಭಗಳಿಗೆ ಒಳಪಡದಿದ್ದರೆ ಮತ್ತು ಅಂತಹ ಭೇಟಿ ಅತ್ಯಂತ ಅನಿವಾರ್ಯವೆಂದು ಕಂಡುಬಂದಲ್ಲಿ, ಅಂತಹವರು ನೇರವಾಗಿ ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಿಗೆ ಅರ್ಜಿಯನ್ನು ಸಲ್ಲಿಸಬೇಕು. ಭೇಟಿ ನೀಡಲು ಉದ್ದೇಶಿಸಿರುವ ದಿನಾಂಕಕ್ಕಿಂತ ಕನಿಷ್ಠ 2 ಕೆಲಸದ ದಿನಗಳ ಮೊದಲೇ ಈ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಈ ಸುತ್ತೋಲೆಯನ್ನು ಡಿಜಿಪಿ ಅಲೋಕ್ ಕುಮಾರ್ ರಾಜ್ಯದ ಎಲ್ಲಾ ಕೇಂದ್ರ ಕಾರಾಗೃಹಗಳು, ಜಿಲ್ಲಾ ಕಾರಾಗೃಹಗಳ ಅಧೀಕ್ಷಕರಿಗೆ ರವಾನಿಸಿದ್ದಾರೆ. ಈ ಆದೇಶದ ಪಾಲನೆಯಲ್ಲಿ ಯಾವುದೇ ಲೋಪವಾದಲ್ಲಿ ಆಯಾ ವ್ಯಾಪ್ತಿಯ ಡಿಐಜಿಗಳು ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಸಲಾಗಿದೆ.

ಜೈಲಿನಲ್ಲಿ ನಿಯಮಗಳ ದುರುಪಯೋಗದ ಘಟನೆಗಳು

ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿದೆ ಮತ್ತು ಪ್ರಭಾವಿ ವ್ಯಕ್ತಿಗಳು ನಿಯಮ ಮೀರಿ ಕೈದಿಗಳನ್ನು ಭೇಟಿಯಾಗುತ್ತಿದ್ದಾರೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ವಿಐಪಿ ಸಂದರ್ಶನಗಳು ಚರ್ಚೆಗೆ ಕಾರಣವಾಗಿವೆ. ಇತ್ತೀಚಿನ ದಿನಗಳಲ್ಲಿ ಕಾರಾಗೃಹ ಇಲಾಖೆಗೆ ದೊಡ್ಡ ಮುಜುಗರ ತಂದ ಘಟನೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಭೇಟಿಗಳಾಗಿವೆ ಎಂದು ಹೇಳಲಾಗಿದೆ. ದರ್ಶನ್ ಜೈಲಿನ ಆವರಣದಲ್ಲಿ ರೌಡಿ ಶೀಟರ್‌ಗಳಾದ ವಿಲ್ಸನ್ ಗಾರ್ಡನ್ ನಾಗ ಮತ್ತು ಇತರರೊಂದಿಗೆ ಕುಳಿತು ಸಿಗರೇಟ್ ಸೇದುತ್ತಾ, ಕಾಫಿ ಕುಡಿಯುತ್ತಿರುವ ಫೋಟೋ ವೈರಲ್ ಆಗಿತ್ತು. ಇದು ಜೈಲಿನಲ್ಲಿ ವಿಐಪಿ ಸಂಸ್ಕೃತಿ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು.

ದರ್ಶನ್ ಅವರನ್ನು ಭೇಟಿ ಮಾಡಲು ಚಿತ್ರರಂಗದ ಹಲವು ನಟ-ನಟಿಯರು ಹಾಗೂ ಗಣ್ಯರು ಸತತವಾಗಿ ಜೈಲಿಗೆ ಭೇಟಿ ನೀಡುತ್ತಿದ್ದರು. ಸಾಮಾನ್ಯ ಕೈದಿಗಳಿಗೆ ಇರುವ ಭೇಟಿಯ ಸಮಯ ಮತ್ತು ಮಿತಿ ದರ್ಶನ್ ವಿಷಯದಲ್ಲಿ ಉಲ್ಲಂಘನೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

ಅಲ್ಲದೇ, ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ಇತರೆ ಜೈಲಿನಲ್ಲಿರುವ ಪ್ರಭಾವಿ ರೌಡಿ ಶೀಟರ್‌ಗಳನ್ನು ಭೇಟಿ ಮಾಡಲು ಅವರ ಬೆಂಬಲಿಗರು, ಕೆಲವು ರಾಜಕೀಯ ನಾಯಕರ ವಿಶೇಷ ಅನುಮತಿಯ ಮೇಲೆ ಭೇಟಿ ನೀಡುತ್ತಿದ್ದರು. ಇದು ಕೇವಲ ಸಂದರ್ಶನವಾಗಿರದೆ, ಜೈಲಿನ ಒಳಗಿನಿಂದಲೇ ಅಪರಾಧ ಚಟುವಟಿಕೆಗಳು ನಡೆಸಲು ಅವಕಾಶ ನೀಡುತ್ತಿದೆ ಎಂಬ ಆರೋಪಗಳು ಕೇಳಿಬಂದಿತ್ತು.

ವಿವಿಧ ಹಗರಣಗಳಲ್ಲಿ ಜೈಲು ಪಾಲಾಗಿರುವ ರಾಜಕಾರಣಿಗಳನ್ನು ಅಥವಾ ಅವರ ಆಪ್ತರನ್ನು ಭೇಟಿ ಮಾಡಲು ಬರುವ ನಾಯಕರ ಸಂದರ್ಶನದ ಅವಧಿಯು ನಿಯಮಿತ 15-20 ನಿಮಿಷಗಳಿಗಿಂತ ಹೆಚ್ಚಾಗಿ ಗಂಟೆಗಟ್ಟಲೆ ಇರುತ್ತಿತ್ತು. ಜೈಲು ಅಧಿಕಾರಿಗಳ ಕೊಠಡಿಯಲ್ಲೇ ಈ ಭೇಟಿಗೆ ಅವಕಾಶ ಮಾಡಿಕೊಡಲಾಗುತ್ತಿತ್ತು ಎಂಬ ದೂರುಗಳು ಬಂದಿದ್ದವು. ಕೇಳಿ ಬಂದ ಆರೋಪಗಳಿಗೆ ಕಡಿವಾಣ ಹಾಕಲು ಅಲೋಕ್‌ ಕುಮಾರ್‌ ಇಂತಹೊಂದು ಹೊಸ ನಿಯಮ ಜಾರಿಗೊಳಿಸಿದ್ದಾರೆ ಎಂದು ಹೇಳಲಾಗಿದೆ.

Read More
Next Story