ಕರ್ನಾಟಕ-ಝೆಕ್ ಗಣರಾಜ್ಯ ಕೈಗಾರಿಕಾ ಮೈತ್ರಿ: ಹೂಡಿಕೆಗೆ ಆಹ್ವಾನ ನೀಡಿದ ಸಿಎಂ
x

ಕರ್ನಾಟಕ-ಝೆಕ್ ಗಣರಾಜ್ಯ ಕೈಗಾರಿಕಾ ಮೈತ್ರಿ: ಹೂಡಿಕೆಗೆ ಆಹ್ವಾನ ನೀಡಿದ ಸಿಎಂ

ಝೆಕ್ ಗಣರಾಜ್ಯದ ಯಂತ್ರೋಪಕರಣಗಳು, ಸಾರಿಗೆ ತಂತ್ರಜ್ಞಾನದ ಸಾಮರ್ಥ್ಯವು ಕರ್ನಾಟಕದ ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಿಗೆ ಪೂರಕವಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.


Click the Play button to hear this message in audio format

ಭಾರತ ಮತ್ತು ಝೆಕ್ ಗಣರಾಜ್ಯದ ನಡುವಿನ ಆರ್ಥಿಕ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಝೆಕ್ ಗಣರಾಜ್ಯದ ಉಪ ಪ್ರಧಾನಮಂತ್ರಿ ಕಾರೆಲ್ ಹಾವ್ಲಿಕ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿನ ಹೂಡಿಕೆ ಅವಕಾಶಗಳು ಮತ್ತು ಕೈಗಾರಿಕಾ ಸಹಕಾರದ ಕುರಿತು ವಿಸ್ತೃತ ಸಮಾಲೋಚನೆ ನಡೆಸಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಕರ್ನಾಟಕ ಮತ್ತು ಝೆಕ್ ಗಣರಾಜ್ಯದ ನಡುವಿನ ಸಂಬಂಧ ದೀರ್ಘಕಾಲೀನ ಪಾಲುದಾರಿಕೆಯಾಗಿ ಬೆಳೆಯಬೇಕು. ಝೆಕ್ ಕಂಪನಿಗಳು ಕೇವಲ ಬೆಂಗಳೂರಿಗೆ ಸೀಮಿತವಾಗದೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಮ್ಮ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಬೇಕು" ಎಂದು ಆಹ್ವಾನಿಸಿದರು. ರಾಜ್ಯದ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಲಯದಲ್ಲಿನ ಅಭಿವೃದ್ಧಿಯನ್ನು ಉಲ್ಲೇಖಿಸಿದ ಅವರು, ಈ ವಲಯಗಳಲ್ಲಿ ಹೂಡಿಕೆಗೆ ರಾಜ್ಯವು ಅತ್ಯಂತ ಸುರಕ್ಷಿತ ಮತ್ತು ಲಾಭದಾಯಕ ತಾಣವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. "ಕರ್ನಾಟಕವು ದೇಶದ ಅತಿ ದೊಡ್ಡ ಸೌರ ವಿದ್ಯುತ್ ಸ್ಥಾವರಗಳು ಮತ್ತು ಹಳೆಯ ಜಲವಿದ್ಯುತ್ ಯೋಜನೆಗಳ ತವರು. ಇಂಧನ ಕ್ಷೇತ್ರದಲ್ಲಿ ಅಪಾರ ಹೂಡಿಕೆಯ ಅಗತ್ಯವಿದೆ. ಜಾಗತಿಕ ಮಟ್ಟದ ಇಂಧನ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಇದು ಸುವರ್ಣಾವಕಾಶ" ಎಂದು ತಿಳಿಸಿದರು. ರಾಜ್ಯವು ಅಳವಡಿಸಿಕೊಂಡಿರುವ ಸುಧಾರಿತ ಇಂಧನ ನೀತಿಗಳು ಹೂಡಿಕೆದಾರರಿಗೆ ಪೂರಕವಾಗಿವೆ ಎಂದು ವಿವರಿಸಿದರು.

ತಂತ್ರಜ್ಞಾನ - ಎಂಜಿನಿಯರಿಂಗ್ ಪಾಲುದಾರಿಕೆ

ಝೆಕ್ ಗಣರಾಜ್ಯದ ಎಂಜಿನಿಯರಿಂಗ್, ಯಂತ್ರೋಪಕರಣಗಳು ಮತ್ತು ಸಾರಿಗೆ ತಂತ್ರಜ್ಞಾನದ ಸಾಮರ್ಥ್ಯವು ಕರ್ನಾಟಕದ ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಿಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು. "ಬೆಂಗಳೂರು ಭಾರತದ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್‌ಗಳ ಕೇಂದ್ರವಾಗಿದೆ. ಇಲ್ಲಿನ ಮಾನವ ಸಂಪನ್ಮೂಲ ಮತ್ತು ಕೈಗಾರಿಕಾ ವಾತಾವರಣವು ಝೆಕ್ ಕಂಪನಿಗಳ ವಿಸ್ತರಣೆಗೆ ಬಲವಾದ ವೇದಿಕೆಯನ್ನು ಒದಗಿಸುತ್ತದೆ" ಎಂದರು. ಈಗಾಗಲೇ ಭಾರತದಲ್ಲಿ ನೆಲೆ ಕಂಡುಕೊಂಡಿರುವ ಸ್ಕೋಡಾ ಮತ್ತು ಬಾಟಾ ಕಂಪನಿಗಳ ಯಶಸ್ಸನ್ನು ಉದಾಹರಿಸುತ್ತಾ, ಟಾಟಾ ಆಟೋಕಾಂಪ್ ಮತ್ತು ಸ್ಕೋಡಾ ಗ್ರೂಪ್ ಮಾದರಿಯ ಪಾಲುದಾರಿಕೆಗಳು ಮುಂದಿನ ದಿನಗಳಲ್ಲಿ ಕರ್ನಾಟಕದ ಕಂಪನಿಗಳೊಂದಿಗೆ ನಡೆಯಬೇಕು ಎಂದು ಆಶಿಸಿದರು.

ಏಕ ಗವಾಕ್ಷಿ ವ್ಯವಸ್ಥೆ, ಸರ್ಕಾರದ ಬೆಂಬಲ

ಹೂಡಿಕೆದಾರರಿಗೆ ಯಾವುದೇ ತೊಡಕಿಲ್ಲದ ವ್ಯವಸ್ಥೆ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಮುಖ್ಯಮಂತ್ರಿಗಳು, "ಇನ್ವೆಸ್ಟ್ ಕರ್ನಾಟಕ, ಕರ್ನಾಟಕ ಉದ್ಯೋಗ ಮಿತ್ರ ಮತ್ತು ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ಕಂಪನಿಗಳಿಗೆ ಸ್ಥಳದ ಆಯ್ಕೆ, ಅನುಮೋದನೆ ಮತ್ತು ಸಂಪರ್ಕ ಸಾಧಿಸಲು ಸರ್ಕಾರ ಸಂಪೂರ್ಣ ನೆರವು ನೀಡುತ್ತದೆ. ತಂತ್ರಜ್ಞಾನ ವರ್ಗಾವಣೆ, ಸ್ಥಳೀಯ ಉದ್ಯಮ ಬಲವರ್ಧನೆ ಮತ್ತು ಗುಣಮಟ್ಟದ ಉದ್ಯೋಗ ಸೃಷ್ಟಿ ನಮ್ಮ ಮುಖ್ಯ ಉದ್ದೇಶ" ಎಂದರು. ಈ ಬಾಂಧವ್ಯವು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ಉನ್ನತ ಶಿಕ್ಷಣದ ಹಂತಕ್ಕೂ ವಿಸ್ತರಿಸಬೇಕು. ಝೆಕ್‌ನ ತಾಂತ್ರಿಕ ವಿಶ್ವವಿದ್ಯಾನಿಲಯಗಳು ಮತ್ತು ಕರ್ನಾಟಕದ ಸಂಸ್ಥೆಗಳ ನಡುವಿನ ಪಾಲುದಾರಿಕೆಯು ಕೌಶಲ್ಯ ಅಭಿವೃದ್ಧಿ ಮತ್ತು ಅನ್ವಯಿಕ ಸಂಶೋಧನೆಗೆ ಹೊಸ ದಾರಿ ತೆರೆಯಲಿದೆ. ಜನವರಿ 2024ರಲ್ಲಿ ಭಾರತ ಮತ್ತು ಝೆಕ್ ಗಣರಾಜ್ಯದ ನಡುವೆ ಸಹಿ ಹಾಕಲಾದ ಇನ್ನೋವೇಶನ್‌ನಲ್ಲಿ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದವು ಈ ಸಹಕಾರಕ್ಕೆ ಭದ್ರ ಬುನಾದಿಯಾಗಿದೆ ಎಂದು ಅವರು ಸ್ಮರಿಸಿದರು.

ಸಂಪರ್ಕ ಸೇತುವಾಗಿ ಝೆಕ್ ಟ್ರೇಡ್

ಸಭೆಯಲ್ಲಿ ಭಾಗವಹಿಸಿದ್ದ ಝೆಕ್ ನಿಯೋಗವು ರಾಜ್ಯದ ಕೈಗಾರಿಕಾ ಸ್ನೇಹಿ ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ಝೆಕ್ ಬಿಸಿನೆಸ್ ಇಂಕ್ಯುಬೇಟರ್ ಮತ್ತು ಝೆಕ್ ಟ್ರೇಡ್‌ನ ಬೆಂಗಳೂರು ಕಚೇರಿಗಳು ಎರಡೂ ದೇಶಗಳ ಕೈಗಾರಿಕಾ ಸಂಬಂಧಗಳನ್ನು ಬಲಪಡಿಸಲು ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ಉಭಯ ದೇಶಗಳ ಕೈಗಾರಿಕಾ ವಲಯದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲಿವೆ. ಈ ಉನ್ನತ ಮಟ್ಟದ ನಿಯೋಗದ ಭೇಟಿಯು ಕರ್ನಾಟಕದ ಉತ್ಪಾದನಾ ಸಾಮರ್ಥ್ಯವನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವ ಮತ್ತು ರಾಜ್ಯದ ಆರ್ಥಿಕತೆಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Read More
Next Story