x

ಮೇಕೆದಾಟು ಖುಷಿ ಬೆನ್ನಲ್ಲೇ ಕಾವೇರಿ ಶಾಕ್‌, ದೆಹಲಿಯಲ್ಲಿ ಡಿಕೆಶಿ ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್, ಗ್ಲ್ಯಾಸ್ಗೋದಲ್ಲಿ ಕನ್ನಡತಿಯ ಕೀರ್ತಿ ಪತಾಕೆ

ತಮಿಳುನಾಡಿಗೆ ದಿನಕ್ಕೆ 3,500 ಕ್ಯೂಸೆಕ್ ಕಾವೇರಿ ನೀರು; 18 ಮಂದಿಗೆ ಸಚಿವಗಿರಿ ಸಾಧ್ಯತೆ; ಗ್ಲಾಸ್ಗೋದಲ್ಲಿ ಕನ್ನಡ ಪತಾಕೆ ಹಾರಿಸಿದ ಮೈಸೂರು ಯುವತಿ


Click the Play button to hear this message in audio format

ಒಂದೆಡೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಇತರೆ ರಾಜ್ಯಗಳ ಅನುಮತಿ ಬೇಕಿಲ್ಲ ಎಂದು ಕೇಂದ್ರ ಹೇಳಿಕೆಯು ರಾಜ್ಯಕ್ಕೆ ಸಂತಸ ಮೂಡಿಸಿದ ಬೆನ್ನಲ್ಲೇ ತಮಿಳುನಾಡಿಗೆ ನೀರು ಬಿಡುವ ಕುರಿತು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಕರ್ನಾಟಕಕ್ಕೆ ಶಾಕ್‌ನೀಡಿದೆ. ಪ್ರತಿನಿತ್ಯ ಮುಂದಿನ 15 ದಿನಗಳ ಕಾಲ 3,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಿದೆ. ಬರ ಪರಿಸ್ಥಿತಿಯ ನಡುವೆಯೇ ರಾಜ್ಯಕ್ಕೆ ಆಘಾತವನ್ನುಂಟು ಮಾಡಿದೆ.

ದೆಹಲಿಯಲ್ಲಿ ನಡೆದ ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ನೀರು ಹರಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ. ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಗಳು ಭಾಗವಹಿಸಿದ್ದರು. ಪ್ರತಿದಿನ 3,500 ಕ್ಯೂಸೆಕ್‌ನಂತೆ 15 ದಿನಗಳ ಕಾಲ ಒಟ್ಟು 4 ಟಿಎಂಸಿಗಳಷ್ಟು ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಹೇಳಿದೆ. ಇದರ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯೂಎಂಎ) ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.

ಸಭೆಯಲ್ಲಿ ಕರ್ನಾಟಕಕ್ಕೆ ಶಾಕ್‌ನೀಡುವಂತಹ ಆದೇಶ ನೀಡಿದೆ. ತಮಿಳುನಾಡಿನ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡ ಸಮಿತಿಯು, ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಿದೆ. ಸಿಡಬ್ಲ್ಯೂಆರ್‌ಸಿ ಸೂಚನೆ ಮೇರೆಗೆ ದಿನವೊಂದಕ್ಕೆ 3,500 ಕ್ಯೂಸೆಕ್ ನೀರನ್ನು ಒಟ್ಟು 15 ದಿನಗಳ ಕಾಲಾವಧಿಯಲ್ಲಿ ಒಟ್ಟಾರೆ ಸುಮಾರು 4 ಟಿಎಂಸಿ ನೀರು ತಮಿಳುನಾಡಿಗೆ ಹರಿಯಲಿದೆ.

18 ಸಚಿವರ ಪಟ್ಟಿ ಅಂತಿಮ ಸಾಧ್ಯತೆ

ಬೆಂಗಳೂರಿನಿಂದ ದೆಹಲಿಗೆ ಸ್ಥಳಾಂತರಗೊಂಡಿರುವ ಕರ್ನಾಟಕ ರಾಜಕೀಯದ ಚದುರಂಗದಾಟದಲ್ಲಿ, ಸದ್ಯ ಸಚಿವ ಸಂಪುಟ ವಿಸ್ತರಣೆ ವಿಷಯ ಕೇಂದ್ರಬಿಂದುವಾಗಿದೆ. ರಾಜ್ಯ ಸರ್ಕಾರದ ಕಾರ್ಯವೈಖರಿ, ಆಡಳಿತಾತ್ಮಕ ದಕ್ಷತೆ ಮತ್ತು ಪಕ್ಷದೊಳಗಿನ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೈಕಮಾಂಡ್‌ನೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಸೇರಿದಂತೆ ಪ್ರಮುಖ ನಾಯಕರು ದೆಹಲಿಯಲ್ಲಿದ್ದಾರೆ.

ಖಾಲಿ ಇರುವ 20 ಸ್ಥಾನಗಳ ಪೈಕಿ 18 ಸಚಿವರ ಪಟ್ಟಿಯನ್ನು ಮಾತ್ರ ಅಂತಿಮಗೊಳಿಸಿ, ಎರಡು ಸ್ಥಾನಗಳನ್ನು ಖಾಲಿ ಇಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇಂದು ಸಚಿವ ಸಂಪುಟ ವಿಸ್ತರಣೆಯ ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ. ಪಕ್ಷದಲ್ಲಿ ಹಲವು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಅವರ ನಿರೀಕ್ಷೆಗಳನ್ನು ಪೂರೈಸುವ ಮತ್ತು ಅಸಮಾಧಾನವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಹೈಕಮಾಂಡ್‌ನ ಮಾರ್ಗದರ್ಶನ ಪಡೆಯುವ ಕೆಲಸವು ನಡೆಯುತ್ತಿವೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ನಡುವೆ, ದೆಹಲಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿಕ ಕಾರ್ಯದಿಂದಾಗಿ ರಾಜ್ಯಕ್ಕೆ ಆಗಮಿಸಿದ್ದು, ಅದನ್ನು ಮುಗಿಸಿಕೊಂಡು ಪುನಃ ದೆಹಲಿಗೆ ಹಿಂತಿರುಗಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ಅವರು ತಮ್ಮದೇ ಬೆಂಬಲಿಗರ ಪಟ್ಟಿಯನ್ನು ಮಾಡಿಕೊಂಡಿದ್ದು, ಹೈಕಮಾಂಡ್‌ಮುಂದೆ ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ವರಿಷ್ಠ ರಾಹುಲ್‌ಗಾಂಧಿ ಸೇರಿದಂತೆ ಇತರೆ ಮುಖಂಡರು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಹೊಸ ಮುಖಗಳಿಗೂ ಅವಕಾಶ ನೀಡಲಾಗುವುದು.

ಆಗಸ್ಟ್‌ತಿಂಗಳ ಎರಡನೇ ವಾರದಲ್ಲಿ ಮುಂಗಾರು ಅಧಿವೇಶನ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಇದೇ ವಾರ ಅಥವಾ ಮುಂದಿನ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಕಾರ್ಯ ನಡೆಯಲಿದೆ. ಸಚಿವ ಸಂಪುಟದಲ್ಲಿ ಹೊಸಬರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ.

ಇತಿಹಾಸ ನಿರ್ಮಿಸಿದ ಕನ್ನಡತಿ

ಸ್ಕಾಟ್‌ಲೆಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಹೊಸ ಇತಿಹಾಸವನ್ನು ನಿರ್ಮಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ, ಕರ್ನಾಟಕದ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಕಂಚುಗಾರಕೊಪ್ಪಲಿನ ಹೆಮ್ಮೆಯ ಪುತ್ರಿ ಕೆ.ಎಸ್. ಶಿಲ್ಪಾ ಅವರು ಪ್ಯಾರಾ ಅಥ್ಲೆಟಿಕ್ಸ್ ಶಾಟ್‌ಪುಟ್‌ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಮಹಿಳೆಯರ ಎಫ್-57 ವಿಭಾಗದ ಶಾಟ್‌ಪುಟ್‌ಸ್ಪರ್ಧೆಯಲ್ಲಿ ಶಿಲ್ಪಾ ಅವರು 7.26 ಮೀಟರ್‌ದೂರಕ್ಕೆ ಶಾಟ್ ಪುಟ್‌ಎಸೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಆರಂಭದಲ್ಲಿ ಈ ಪ್ರಯತ್ನ ಅವರಿಗೆ ನಾಲ್ಕನೇ ಸ್ಥಾನವನ್ನು ತಂದುಕೊಟ್ಟಿತ್ತು. ಪದಕದ ಆಸೆಯಲ್ಲಿದ್ದ ಶಿಲ್ಪಾ ಅವರಿಗೆ ಆರಂಭದಲ್ಲಿ ಕೊಂಚ ನಿರಾಸೆಯಾದರೂ, ಅದೃಷ್ಟ ಅವರ ಬೆನ್ನಿಗಿತ್ತು. ಸ್ಪರ್ಧೆಯ ನಂತರ ನಡೆದ ಅಧಿಕೃತ ಪರಿಶೀಲನೆಯಲ್ಲಿ ನೈಜೀರಿಯಾದ ಕ್ರೀಡಾಪಟು ಯೂಚೇರಿಯಾ ಇಯಾಜಿ ಅವರ ಎಸೆತದಲ್ಲಿ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂತು. ಪರಿಣಾಮವಾಗಿ, ನೈಜೀರಿಯಾದ ಆಟಗಾರ್ತಿಯನ್ನು ಅನರ್ಹಗೊಳಿಸಲಾಯಿತು. ಈ ಅಧಿಕೃತ ಬದಲಾವಣೆಯ ನಂತರ ಶಿಲ್ಪಾ ಅವರು ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದರು, ಹೀಗೆ ಅವರಿಗೆ ಕಂಚಿನ ಪದಕ ಖಚಿತವಾಯಿತು.

Read More
Next Story