x

ಸದ್ಯಕ್ಕೆ ತಮಿಳುನಾಡಿಗಿಲ್ಲ ಕಾವೇರಿ ನೀರು, "ರೆಡ್ ಝೋನ್" ಆದೇಶ ಕೊಟ್ಟಿದ್ದೇ ಎಚ್‌ಡಿಕೆ, ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಗುಡ್‌ ನ್ಯೂಸ್

ಕುಡಿಯುವ ನೀರಿಗೆ ತತ್ವಾರ ಇರುವಾಗ ತಮಿಳುನಾಡಿಗೆ ನೀರು ಬಿಡುವುದು ಅಸಾಧ್ಯ ಎಂದು CWRC ಸಭೆಯಲ್ಲಿ ಕರ್ನಾಟಕ ಸ್ಪಷ್ಟವಾಗಿ ಹೇಳಿದೆ. ಬಿಡದಿ ಟೌನ್‌ಶಿಪ್ ಯೋಜನೆ ಈಗ ರಾಜಕೀಯದ ಜಿದ್ದಾಜಿದ್ದಿಗೆ ಕಾರಣವಾಗಿದೆ.


Click the Play button to hear this message in audio format

ಮುಂಗಾರು ಮಳೆಯ ಅಭಾವದಿಂದಾಗಿ ರಾಜ್ಯವು ಭೀಕರ ಬರಗಾಲದ ಅಂಚಿನಲ್ಲಿರುವ ಸಂದರ್ಭದಲ್ಲಿಯೇ ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ ) ಮಹತ್ವದ ಸಭೆ ನಡೆಯಿತು. ರಾಜ್ಯದ ಜಲಾಶಯಗಳಲ್ಲಿ ಕುಡಿಯುವ ನೀರಿಗೇ ಹಾಹಾಕಾರ ಉಂಟಾಗಿರುವಾಗ, ತಮಿಳುನಾಡು ತನ್ನ ಪಾಲಿನ ನೀರು ಹರಿಸಬೇಕೆಂದು ಪಟ್ಟು ಹಿಡಿದಿದೆ. ಆದರೆ, ಕರ್ನಾಟಕದ ಅಧಿಕಾರಿಗಳು ಕುಡಿಯಲೂ ನೀರಿಲ್ಲ, ಕೃಷಿಗೆ ನೀರು ಬಿಡುವುದು ಅಸಾಧ್ಯ ಎಂದು ಖಡಕ್ ಆಗಿ ಉತ್ತರಿಸುವ ಮೂಲಕ ರಾಜ್ಯದ ಹಿತಾಸಕ್ತಿಯನ್ನು ಸಮರ್ಥಿಸಿಕೊಂಡಿದ್ದಾರೆ.

ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯಲ್ಲಿ, ಕರ್ನಾಟಕದ ಜಲಾನಯನ ಪ್ರದೇಶಗಳ ದುಸ್ಥಿತಿಯನ್ನು ಅಧಿಕಾರಿಗಳು ತೆರೆದಿಟ್ಟರು. ಜೂನ್ ತಿಂಗಳಲ್ಲಿ ರಾಜ್ಯದ ಜಲಾಶಯಗಳಿಗೆ ಒಳಹರಿವು ಬಹುತೇಕ ಶೂನ್ಯವಾಗಿತ್ತು. ಜುಲೈನಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದ್ದರೂ, ಅದು ಜಲಾಶಯಗಳನ್ನು ತುಂಬಿಸಲು ಸಾಕಾಗುವುದಿಲ್ಲ. ಇತ್ತ ರಾಜ್ಯದಲ್ಲಿ ಮುಂಗಾರು ಮಳೆಯು ಆಶಾದಾಯಕವಾಗಿಲ್ಲ ಮತ್ತು ಮುಂದಿನ ದಿನಗಳಲ್ಲಿ ಮಳೆ ಚುರುಕು ಪಡೆಯುವ ಯಾವುದೇ ಹವಾಮಾನ ಮುನ್ಸೂಚನೆ ಇಲ್ಲದ ಕಾರಣ, ಲಭ್ಯವಿರುವ ನೀರನ್ನು ಮುಂದಿನ ಹಲವು ತಿಂಗಳುಗಳ ಕಾಲ ಕುಡಿಯುವ ಉದ್ದೇಶಕ್ಕೆ ಮಾತ್ರ ಮೀಸಲಿಡುವ ಅನಿವಾರ್ಯತೆ ಇದೆ ಎಂಬುದನ್ನು ಸಮಿತಿಯ ಮುಂದಿಡಲಾಯಿತು. ಕರ್ನಾಟಕದ ಪಾಲಿಗೆ ಇದು ಬದುಕಿನ ಪ್ರಶ್ನೆಯಾಗಿದೆ. "ನಮಗೆ ಇಲ್ಲಿ ಕುಡಿಯುವ ನೀರಿಗೇ ತತ್ವಾರವಿದೆ, ಇನ್ನು ತಮಿಳುನಾಡಿಗೆ ಹೇಗೆ ಬಿಡಲು ಸಾಧ್ಯ?" ಎಂದು ಕರ್ನಾಟಕವು ಸ್ಪಷ್ಟವಾಗಿ ತಿಳಿಸಿದೆ.

ಅತ್ತ ತಮಿಳುನಾಡು ಸರ್ಕಾರವು ತನ್ನ ಪಾಲು ನೀರು ಬೇಕೇ ಬೇಕು ಎಂದು ತನ್ನ ಹಳೆಯ ವಾದವನ್ನು ಮಂಡಿಸಿದೆ. ಕಾವೇರಿ ನದಿ ನೀರಿನ ಹಂಚಿಕೆಯ ತೀರ್ಪಿನ ಅನ್ವಯ ತಮಗೆ ಹಕ್ಕಿನ ನೀರು ಸಿಗಬೇಕು ಎಂದು ಹೇಳಿದೆ. ಆದರೆ, ಪ್ರಸ್ತುತ ಉಂಟಾಗಿರುವ ನೈಸರ್ಗಿಕ ವಿಕೋಪದ ಪರಿಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳಲು ತಮಿಳುನಾಡು ನಿರಾಕರಿಸುತ್ತಿರುವುದು ಕರ್ನಾಟಕದ ಅಸಮಾಧಾನಕ್ಕೆ ಕಾರಣವಾಗಿದೆ.

ಎಚ್‌ಡಿಕೆ ವಿರುದ್ಧ ಸಿಎಂ ಟೀಕಾಪ್ರಹಾರ

ಬಿಡದಿ ಟೌನ್‌ಶಿಪ್ ಯೋಜನೆ ಆಡಳಿತ ಮತ್ತು ಪ್ರತಿಪಕ್ಷದ ನಡುವಿನ ವಾಕ್ಸಮರದ ಅಖಾಡವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ದಾಖಲೆಗಳೊಂದಿಗೆ ದಾಳಿ ನಡೆಸುವ ಮೂಲಕ, ಈ ಯೋಜನೆಯ ಹಿಂದಿರುವ ರಾಜಕೀಯ ಇತಿಹಾಸವನ್ನು ಬಯಲಿಗೆಳೆದಿದ್ದಾರೆ.

"ನಾನು ಈ ಯೋಜನೆಯ ಪಿತಾಮಹನಲ್ಲ, ನಾನೇನೂ ಇದಕ್ಕೆ ಮುನ್ನುಡಿ ಬರೆದಿಲ್ಲ. ನೀವು ಅಧಿಕಾರದಲ್ಲಿದ್ದಾಗ ರೂಪಿಸಿದ ಯೋಜನೆಗಳನ್ನು ಇಂದಿನ ಸರ್ಕಾರ ಜಾರಿಗೊಳಿಸುತ್ತಿದೆ ಅಷ್ಟೇ. ಅದಕ್ಕೆ ನನ್ನನ್ನು ಗುರಿ ಮಾಡುವುದು ತಪ್ಪು" ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ತಾನು ರೈತನ ಮಗನಾಗಿರುವುದರಿಂದ ರೈತರ ನೋವು ತನಗೆ ಅರಿವಿದೆ, ಆದರೆ ರಾಜಕೀಯಕ್ಕಾಗಿ ಅಧಿಕಾರಿಗಳನ್ನು ಬಲಿಪಶು ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು. ನಾನು ಯಾರ ಜಮೀನನ್ನೂ ಬಲವಂತವಾಗಿ ಕಿತ್ತುಕೊಳ್ಳುವುದಿಲ್ಲ. ರೈತರಿಗೆ ಪರಿಹಾರ ಇಷ್ಟವಿದ್ದರೆ ಪಡೆಯಲಿ, ಬೇಡವಾದರೆ ಜಮೀನು ಅವರೇ ಇಟ್ಟುಕೊಳ್ಳಲಿ. ಯೋಜನೆ ಒಪ್ಪಿದರೆ ಮಾತ್ರ ಮುಂದುವರೆಯುತ್ತದೆ. ರೈತರ ಕಷ್ಟ-ಸುಖ ಮತ್ತು ಕಾನೂನು ತೊಡಕುಗಳನ್ನು ಪರಿಶೀಲಿಸಲು ಮುಂದಿನ 2-3 ತಿಂಗಳಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗುವುದು. ಅಲ್ಲಿಯವರೆಗೆ ಕುಮಾರಸ್ವಾಮಿ ಅವರೇ ಮಾಡಿದ್ದ 'ರೆಡ್ ಝೋನ್' ಆದೇಶವನ್ನು ಸದ್ಯಕ್ಕೆ ಮುಟ್ಟುವುದಿಲ್ಲ ಎಂದು ಹೇಳಿದರು.

ಈ ನಡುವೆ, ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಬಿಡದಿ ಹೋಬಳಿಯ ಪ್ರಮುಖ ಮೂರು ಗ್ರಾಮಗಳ ಒಟ್ಟು 2,550 ಎಕರೆ ಜಮೀನನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಭೂಸ್ವಾಧೀನಕ್ಕೊಳಪಟ್ಟ ಗ್ರಾಮಗಳು ಮತ್ತು ವಿಸ್ತೀರ್ಣದ ವಿವರ ಮಾಹಿತಿ ನೋಡುವುದಾದರೆ ಕೆಜಿ ಗೊಲ್ಲರಪಾಳ್ಯ ಗ್ರಾಮದಲ್ಲಿ ಒಟ್ಟು 315 ಎಕರೆ, ಬನ್ನಿಗಿರಿ ಗ್ರಾಮದಲ್ಲಿ ಒಟ್ಟು 775 ಎಕರೆ 6 ಗುಂಟೆ ಮತ್ತು ಅರಳಾಳುಸಂದ್ರ ಗ್ರಾಮದಲ್ಲಿ ಒಟ್ಟು 1,460 ಎಕರೆ 21 ಗುಂಟೆ ಇದೆ.

ಅಪಾರ್ಟ್‌ಮೆಂಟ್‌ ನಿವಾಸಿಗಳ ಅನುಕೂಲಕ್ಕಾಗಿ ವಿಧೇಯಕ

ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಳೆದ ಎರಡು ದಶಕಗಳಿಂದ ಅಪಾರ್ಟ್‌ಮೆಂಟ್ ಸಂಸ್ಕೃತಿ ತೀವ್ರವಾಗಿ ಬೆಳೆದಿದೆ. ಸಾವಿರಾರು ಕುಟುಂಬಗಳು ಇಂದು ಫ್ಲ್ಯಾಟ್‌ಗಳಲ್ಲಿ ವಾಸಿಸುತ್ತಿವೆ. ಆದರೆ, ಈ ಸಂಕೀರ್ಣ ಜೀವನಶೈಲಿಯೊಂದಿಗೆ ಸಮಸ್ಯೆಗಳೂ ಬೆಳೆದುನಿಂತಿವೆ. ಬಿಲ್ಡರ್‌ಗಳು ಮತ್ತು ನಿವಾಸಿಗಳ ನಡುವಿನ ಸಮರ, ನಿರ್ವಹಣಾ ವೆಚ್ಚದ ದುರುಪಯೋಗ, ಕಾಮನ್ ಏರಿಯಾಗಳ ಒತ್ತುವರಿ ಹಾಗೂ ಆಡಳಿತ ಹಸ್ತಾಂತರದ ವಿಳಂಬ – ಇವೆಲ್ಲವೂ ನಿವಾಸಿಗಳ ಪಾಲಿಗೆ ನಿತ್ಯದ ತಲೆನೋವಾಗಿತ್ತು. ಈ ದೀರ್ಘಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ರಾಜ್ಯ ಸರ್ಕಾರವು ‘ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಹಾಗೂ ನಿರ್ವಹಣೆ) ವಿಧೇಯಕ 2026’ ಅನ್ನು ಸಿದ್ಧಪಡಿಸಿದೆ. ಈ ಹೊಸ ಕಾನೂನು ರಾಜ್ಯದ ವಸತಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಭರವಸೆ ಮೂಡಿಸಿದೆ.

ಮುಂಗಾರು ಅಧಿವೇಶನದಲ್ಲಿ ಇದನ್ನು ಮಂಡನೆ ಮಾಡುವ ನಿಟ್ಟಿನಲ್ಲಿ ಸಿದ್ದತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗ್ರೇಟರ್‌ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅಪಾರ್ಟ್ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಸಂಘಗಳ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

Read More
Next Story