ಡ್ರೋನ್ ಯುದ್ಧಕ್ಕೆ ಶಕ್ತಿ ತುಂಬಿದ CSIR-NAL ನ ಮೂರು ಹೊಸ ಎಂಜಿನ್‌ಗಳು
x

ಡ್ರೋನ್ ಯುದ್ಧಕ್ಕೆ ಶಕ್ತಿ ತುಂಬಿದ CSIR-NAL ನ ಮೂರು ಹೊಸ ಎಂಜಿನ್‌ಗಳು

ಆಪರೇಷನ್ ಸಿಂಧೂರ್‌ನಂತಹ ಕಾರ್ಯಾಚರಣೆಗಳ ಅನುಭವ, ಆಧುನಿಕ ಯುದ್ಧತಂತ್ರದಲ್ಲಿ ಡ್ರೋನ್‌ಗಳ ಅನಿವಾರ್ಯತೆಯನ್ನು ಮನಗಂಡಿರುವ ಭಾರತ, ಇದೀಗ ಸ್ವದೇಶಿ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿದೆ.


Click the Play button to hear this message in audio format

ದೇಶದ ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತದ ಕನಸು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಇತ್ತೀಚಿನ ‘ಆಪರೇಷನ್ ಸಿಂಧೂರ್’ನಂತಹ ಕಾರ್ಯಾಚರಣೆಗಳ ಅನುಭವ ಮತ್ತು ಆಧುನಿಕ ಯುದ್ಧತಂತ್ರದಲ್ಲಿ ಡ್ರೋನ್‌ಗಳ ಅನಿವಾರ್ಯತೆಯನ್ನು ಮನಗಂಡಿರುವ ಭಾರತ, ಇದೀಗ ಸ್ವದೇಶಿ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿದೆ. ಬೆಂಗಳೂರಿನ ಸಿಎಸ್‌ಐಆರ್‌-ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯವು ಅತ್ಯಾಧುನಿಕವಾದ ಮೂರು ಮೈಕ್ರೋ ಮತ್ತು ಸ್ಮಾಲ್ ಗ್ಯಾಸ್ ಟರ್ಬೈನ್ ಎಂಜಿನ್‌ಗಳನ್ನು ಅನಾವರಣಗೊಳಿಸಿದ್ದು, ಇದು ಭಾರತದ ಭದ್ರತೆಯನ್ನು ಇನ್ನಷ್ಟು ಬಲಪಡಿಸಲಿದೆ.

ಇಲ್ಲಿಯವರೆಗೆ ಭಾರತವು ತನ್ನ ನಿರ್ಭಯ ಕ್ರೂಸ್ ಕ್ಷಿಪಣಿಗಳು, ರುಸ್ತುಮ್ ಯುಎವಿ ಸೇರಿದಂತೆ ಹಲವು ರಕ್ಷಣಾ ಉಪಕರಣಗಳಿಗೆ ಸಣ್ಣ ಗಾತ್ರದ ಎಂಜಿನ್‌ಗಳಿಗಾಗಿ ಅಮೆರಿಕ ಅಥವಾ ಫ್ರಾನ್ಸ್‌ನಂತಹ ವಿದೇಶಗಳ ಮೇಲೆ ಅವಲಂಬಿತವಾಗಿತ್ತು. ಯುದ್ಧದಂತಹ ತುರ್ತು ಸಂದರ್ಭಗಳಲ್ಲಿ ವಿದೇಶಗಳು ಬಿಡಿಭಾಗಗಳ ಪೂರೈಕೆಯನ್ನು ನಿಲ್ಲಿಸಿದರೆ, ನಮ್ಮ ಇಡೀ ರಕ್ಷಣಾ ಯೋಜನೆಗಳು ಅರ್ಧಕ್ಕೆ ನಿಲ್ಲುವ ಆತಂಕವಿತ್ತು. ಆದರೆ, ಈಗ ಸಿಎಸ್‌ಐಆರ್-ಎನ್‌ಎಎಲ್‌ ಅಭಿವೃದ್ಧಿಪಡಿಸಿರುವ ಈ ಎಂಜಿನ್‌ಗಳು ಆ ಅವಲಂಬನೆಯನ್ನು ಸಂಪೂರ್ಣವಾಗಿ ತೊಡೆದುಹಾಕಲಿವೆ.

ಮೂರು ಎಂಜಿನ್‌ಗಳು - ಅವುಗಳ ಸಾಮರ್ಥ್ಯ

ವಿಜ್ಞಾನಿ ಆರ್. ಪ್ರತಾಪನಾಯಕ ನೇತೃತ್ವದ ವಿಜ್ಞಾನಿಗಳ ತಂಡವು, ಹೈ-ಆರ್‌ಪಿಎಂ ಟರ್ಬೊಮೆಷಿನರಿ ಮತ್ತು ಹೈ-ಟೆಂಪರೇಚರ್ ಕಂಬಶ್ಚನ್ ತಂತ್ರಜ್ಞಾನವನ್ನು ಬಳಸಿ ಈ ಎಂಜಿನ್‌ಗಳನ್ನು ಸಿದ್ಧಪಡಿಸಿದೆ. NJ-05 (5 ಕೆಜಿ ಥ್ರಸ್ಟ್) - ಇದು ಅತ್ಯಂತ ಚಿಕ್ಕದಾದ ಎಂಜಿನ್. ಕೈಯಲ್ಲಿ ಹಿಡಿಯುವಷ್ಟು ಪುಟ್ಟದಾದರೂ, ಇದು 50 ಸಾವಿರ ಆರ್‌ಪಿಎಂ (ನಿಮಿಷಕ್ಕೆ 50 ಸಾವಿರ ಸುತ್ತುಗಳು) ಗಿಂತ ಹೆಚ್ಚಿನ ವೇಗದಲ್ಲಿ ತಿರುಗಬಲ್ಲದು. ಇದನ್ನು ಸಣ್ಣ ಟ್ಯಾಕ್ಟಿಕಲ್ ಡ್ರೋನ್‌ಗಳು, ಶತ್ರುಗಳ ಮೇಲೆ ಅಪ್ಪಳಿಸುವ ‘ಕಾಮಿಕೇಜ್’ ಡ್ರೋನ್‌ಗಳು ಮತ್ತು ಅಭ್ಯಾಸಕ್ಕಾಗಿ ಬಳಸುವ ಟಾರ್ಗೆಟ್ ಡ್ರೋನ್‌ಗಳಲ್ಲಿ ಅಳವಡಿಸಬಹುದು. NJ-50 (50 ಕೆಜಿ ಥ್ರಸ್ಟ್) - ಇದು ಮಧ್ಯಮ ಗಾತ್ರದ ಎಂಜಿನ್. ಶತ್ರುಗಳ ಡ್ರೋನ್‌ಗಳನ್ನು ಆಕಾಶದಲ್ಲೇ ಗುರುತಿಸಿ ಹೊಡೆದುರುಳಿಸುವ ‘ಇಂಟರ್‌ಸೆಪ್ಟರ್’ ಡ್ರೋನ್‌ಗಳು ಹಾಗೂ ಸುದೀರ್ಘ ಸಮಯ ಆಕಾಶದಲ್ಲಿ ಹಾರಾಡಿ ದಾಳಿ ನಡೆಸುವ ಲಾಯಿಟರಿಂಗ್ ಮ್ಯುನಿಷನ್‌ಗಳಿಗೆ ಇದು ಅತ್ಯುತ್ತಮ ಆಯ್ಕೆ. NJ-100 (100 ಕೆಜಿ ಥ್ರಸ್ಟ್) - ಇದು ಈ ಸರಣಿಯ ಅತ್ಯಂತ ಶಕ್ತಿಶಾಲಿ ಎಂಜಿನ್. ಕಾಂಪ್ಯಾಕ್ಟ್ ಕ್ರೂಸ್ ಕ್ಷಿಪಣಿಗಳು ಮತ್ತು ದೂರಗಾಮಿ ಡ್ರೋನ್‌ಗಳಿಗೆ ಇದು ಜೀವನಾಡಿಯಾಗಿದೆ. ಈ ವರ್ಗದ ಎಂಜಿನ್‌ಗಳಿಗಾಗಿ ಭಾರತ ಈ ಹಿಂದೆ ಕೋಟಿಗಟ್ಟಲೆ ಹಣವನ್ನು ವಿದೇಶಗಳಿಗೆ ನೀಡುತ್ತಿತ್ತು, ಈಗ ಅದು ಉಳಿತಾಯವಾಗಲಿದೆ.

ಈ ತಂತ್ರಜ್ಞಾನ ಯಾಕೆ ವಿಶೇಷ?

ಈ ಎಂಜಿನ್‌ಗಳು 1200 ಡಿಗ್ರಿ ಸೆಲ್ಸಿಯಸ್ ಶಾಖವನ್ನೂ ತಡೆದುಕೊಳ್ಳುವ ವಿಶೇಷ ಲೋಹದಿಂದ ತಯಾರಿಸಲ್ಪಟ್ಟಿವೆ. ಇಷ್ಟೊಂದು ತಾಪಮಾನದಲ್ಲಿ ಸಾಮಾನ್ಯ ಲೋಹಗಳು ಕರಗಿ ಹೋಗುತ್ತವೆ, ಆದರೆ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಟರ್ಬೈನ್ ಬ್ಲೇಡ್‌ಗಳು ಇಷ್ಟು ಶಾಖದಲ್ಲೂ ಸಕ್ರಿಯವಾಗಿರುತ್ತವೆ. ಇದರಿಂದ ಎಂಜಿನ್ ದೀರ್ಘಕಾಲದವರೆಗೆ ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ಕೆಲಸ ಮಾಡುತ್ತದೆ. ಸಿಎಸ್‌ಐಆರ್‌-ಎನ್‌ಎಎಲ್‌ ಈ ಎಂಜಿನ್‌ಗಳ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮುಂದಿನ ಹಂತದಲ್ಲಿ, ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲು ಬೆಂಗಳೂರಿನ ನ್ಯೂಸ್ಪೇಸ್‌ (NewSpace) ಮತ್ತು ರಾಫೆ ಎಂಫಿಬರ್ (Raphe mPhibr) ನಂತಹ ಏರೋಸ್ಪೇಸ್ ಸ್ಟಾರ್ಟ್‌ಅಪ್‌ಗಳಿಗೆ ಅವಕಾಶ ನೀಡಲಾಗುತ್ತದೆ. ಇದು ದೇಶದಲ್ಲಿ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.

ತಜ್ಞರ ಅಭಿಪ್ರಾಯಗಳು

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಈ ಸಾಧನೆಯನ್ನು ಶ್ಲಾಘಿಸಿದ್ದಾರೆ. ಸಿಎಸ್‌ಐಆರ್‌-ಎನ್‌ಎಎಲ್‌ ನಿರ್ದೇಶಕ ಡಾ. ಅಭಯ್ ಎ. ಪಶಿಲ್ಕರ್, ಭಾರತದ ಡ್ರೋನ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನಾವೊಂದು ಕೇಂದ್ರಬಿಂದುವಾಗಿ ಕೆಲಸ ಮಾಡುತ್ತಿದ್ದೇವೆ. ಉದ್ಯಮ ವಲಯವು ಈ ಎಂಜಿನ್‌ಗಳನ್ನು ಸಮೂಹ ಉತ್ಪಾದನೆಗೆ ಒಳಪಡಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ. ಸಿಎಸ್‌ಐಆರ್‌ ಡಿಜಿ ಡಾ. ಎನ್. ಕಲೈಸೆಲ್ವಿ, ಏರೋಸ್ಪೇಸ್ ರಂಗದಲ್ಲಿ ಸ್ವಾವಲಂಬನೆ ಸಾಧಿಸಲು ಇದು ಒಂದು ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.

ಸಿಎಸ್‌ಐಆರ್‌-ಎನ್‌ಎಎಲ್‌ ನ ಈ ಎನ್‌ಜೆ ಸರಣಿಯು ಕೇವಲ ಎಂಜಿನ್ ತಯಾರಿಕೆಯಲ್ಲ, ಇದು ಭಾರತದಲ್ಲಿ ಒಂದು ಹೊಸ ಕೈಗಾರಿಕಾ ಸಂಸ್ಕೃತಿಯನ್ನು ಆರಂಭಿಸಿದೆ. ಇನ್ನು ಮುಂದೆ ಸಣ್ಣಪುಟ್ಟ ಭಾಗಗಳಿಗಾಗಿ ದೇಶವು ವಿದೇಶಗಳತ್ತ ಕೈಚಾಚುವ ಅಗತ್ಯವಿಲ್ಲ. ಈ ತಂತ್ರಜ್ಞಾನದ ಬಳಕೆಯು ನಮ್ಮ ಸೇನೆಯು ಅತ್ಯಂತ ಆಧುನಿಕ ಮತ್ತು ಕಡಿಮೆ ವೆಚ್ಚದ ಡ್ರೋನ್‌ಗಳನ್ನು ಸ್ವದೇಶದಲ್ಲೇ ನಿರ್ಮಿಸಲು ಸಹಾಯ ಮಾಡುತ್ತದೆ.

Read More
Next Story