ಧಾರವಾಡ ಪ್ರವೇಶಕ್ಕೆ ವಿನಯ್ ಕುಲಕರ್ಣಿಗೆ ಷರತ್ತುಬದ್ಧ ಅನುಮತಿ ನೀಡಿದ ನ್ಯಾಯಾಲಯ
x

ಧಾರವಾಡ ಪ್ರವೇಶಕ್ಕೆ ವಿನಯ್ ಕುಲಕರ್ಣಿಗೆ ಷರತ್ತುಬದ್ಧ ಅನುಮತಿ ನೀಡಿದ ನ್ಯಾಯಾಲಯ

ಧಾರವಾಡ ಪ್ರವೇಶದ ಸಂದರ್ಭದಲ್ಲಿ ಯಾವುದೇ ಬಗೆಯ ಮೆರವಣಿಗೆ, ಸಾರ್ವಜನಿಕ ಆಚರಣೆ ಅಥವಾ ವಿಜಯೋತ್ಸವಗಳನ್ನು ನಡೆಸುವಂತಿಲ್ಲ ಎಂದು ನ್ಯಾಯಾಲಯ ವಿನಯ್‌ ಕುಲಕರ್ಣಿಗೆ ಷರತ್ತು ವಿಧಿಸಿದೆ.


Click the Play button to hear this message in audio format

ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೀವಾವಧಿ ಶಿಕ್ಷೆಯ ತೀರ್ಪಿನ ನಂತರ ಹೈಕೋರ್ಟ್‌ನಿಂದ ಜಾಮೀನು ಪಡೆದಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ, ಧಾರವಾಡ ಪ್ರವೇಶಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತುಬದ್ಧ ಅನುಮತಿ ನೀಡಿದೆ. ಈ ಮೂಲಕ ವಿನಯ್ ಕುಲಕರ್ಣಿ ಅವರು ತಮ್ಮ ಕ್ಷೇತ್ರಕ್ಕೆ ಮರಳಲು ದಶಕದ ನಂತರ ದಾರಿ ಸುಗಮವಾಗಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿನಯ್ ಕುಲಕರ್ಣಿ ಅವರ ಅರ್ಜಿಯನ್ನು ಪುರಸ್ಕರಿಸಿ ಈ ಆದೇಶವನ್ನು ಹೊರಡಿಸಿದೆ. ಧಾರವಾಡ ಪ್ರವೇಶಕ್ಕೆ ಅವಕಾಶ ನೀಡಿದರೂ, ನ್ಯಾಯಾಲಯವು ಸ್ಪಷ್ಟವಾದ ಷರತ್ತುಗಳನ್ನು ವಿಧಿಸಿದೆ. ಧಾರವಾಡ ಪ್ರವೇಶದ ಸಂದರ್ಭದಲ್ಲಿ ಯಾವುದೇ ಬಗೆಯ ಮೆರವಣಿಗೆ, ಸಾರ್ವಜನಿಕ ಆಚರಣೆ ಅಥವಾ ವಿಜಯೋತ್ಸವಗಳನ್ನು ನಡೆಸುವಂತಿಲ್ಲ. ಈ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನನ್ನು ತಕ್ಷಣವೇ ರದ್ದುಗೊಳಿಸುವುದಾಗಿ ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಕೋರ್ಟ್‌ನಲ್ಲಿ ವಾದ ಮಂಡನೆ

ವಿನಯ್ ಕುಲಕರ್ಣಿ ಪರ ವಕೀಲರು ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದೆ. ಹೈಕೋರ್ಟ್ ಈಗಾಗಲೇ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಿದೆ. ಈ ಹಂತದಲ್ಲಿ ಧಾರವಾಡಕ್ಕೆ ಪ್ರವೇಶಿಸುವುದರಿಂದ ಸಾಕ್ಷ್ಯ ನಾಶವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಾದಿಸಿದರು. ವಾದವನ್ನು ಆಲಿಸಿದ ನ್ಯಾಯಾಧೀಶರು, ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಷರತ್ತುಬದ್ಧ ಅನುಮತಿಯನ್ನು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ

ಯೋಗೇಶ್ ಗೌಡ ಕೊಲೆ ಪ್ರಕರಣವು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. 2016ರಲ್ಲಿ ನಡೆದ ಈ ದುರ್ಘಟನೆಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳು ವರ್ಷಗಳ ಕಾಲ ನಡೆದವು. 2026ರ ಏಪ್ರಿಲ್ 15ರಂದು ಜನಪ್ರತಿನಿಧಿಗಳ ಸೆಷನ್ಸ್ ನ್ಯಾಯಾಲಯವು ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿತು. ಏಪ್ರಿಲ್ 17ರಂದು ವಿನಯ್ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಲಾಗಿತ್ತು. ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು, ಜಾಮೀನು ಮಂಜೂರು ಮಾಡಿತ್ತು. ಇದೀಗ ಆ ಜಾಮೀನಿನ ಭಾಗವಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿದೆ.

ಶಾಸಕ ವಿನಯ್‌ ಕುಲಕರ್ಣಿ ಪ್ರತಿಕ್ರಿಯೆ

ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆಯೇ, ವಿನಯ್ ಕುಲಕರ್ಣಿ ಅವರು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟು, ತಾಳ್ಮೆಯಿಂದ ಬೆಂಬಲಿಸಿದ ಧಾರವಾಡ ಜಿಲ್ಲೆಯ ಜನತೆಗೆ ನಾನು ಸದಾ ಋಣಿಯಾಗಿದ್ದೇನೆ. ಮತ್ತೊಮ್ಮೆ ಮುಂಚೂಣಿಗೆ ಬಂದು, ನನ್ನ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ, ಇನ್ನಷ್ಟು ಶಕ್ತಿ ಮತ್ತು ಬದ್ಧತೆಯಿಂದ ಧಾರವಾಡದ ಜನರ ಸೇವೆ ಮಾಡಲು ಸಿದ್ಧನಿದ್ದೇನೆ ಎಂದಿದ್ದಾರೆ. ವಿನಯ್ ಕುಲಕರ್ಣಿ ಅವರ ಧಾರವಾಡ ಪ್ರವೇಶವು ಜಿಲ್ಲೆಯ ರಾಜಕೀಯ ಸಮೀಕರಣಗಳಲ್ಲಿ ಮಹತ್ವದ ಬದಲಾವಣೆ ತರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಶಿಕ್ಷೆಗೊಳಗಾದ ನಂತರ ಶಾಸಕ ಸ್ಥಾನದ ವಿಚಾರದಲ್ಲಿ ಹಲವು ಚರ್ಚೆಗಳು ನಡೆದಿದ್ದವು. ಇದೀಗ ಅವರು ತಮ್ಮ ಕ್ಷೇತ್ರಕ್ಕೆ ಮರಳುತ್ತಿರುವುದರಿಂದ, ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಲಿವೆ.

Read More
Next Story