ಚು.ಆಯೋಗಕ್ಕೆ ತಪ್ಪು ಆಸ್ತಿ ವಿವರ ಸಲ್ಲಿಕೆ ಆರೋಪ: ಪ್ರೀತಂ ಗೌಡ ವಿರುದ್ಧ ತನಿಖೆಗೆ ಆದೇಶ
x

ಚು.ಆಯೋಗಕ್ಕೆ ತಪ್ಪು ಆಸ್ತಿ ವಿವರ ಸಲ್ಲಿಕೆ ಆರೋಪ: ಪ್ರೀತಂ ಗೌಡ ವಿರುದ್ಧ ತನಿಖೆಗೆ ಆದೇಶ

2018, 2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರೀತಂ ಗೌಡ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ವಾಸ್ತವಿಕ ಆಸ್ತಿಯ ವಿವರದಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸಿ ಖಾಸಗಿ ದೂರು ದಾಖಲಿಸಿದ್ದಾರೆ.


Click the Play button to hear this message in audio format

ಹಾಸನದ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಪ್ರೀತಂ ಜೆ. ಗೌಡ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಹಾಸನ ಲೋಕಾಯುಕ್ತ ಎಸ್‌ಪಿ ಅವರಿಗೆ ನಿರ್ದೇಶನ ನೀಡಿದೆ. ಚುನಾವಣಾ ಪ್ರಮಾಣಪತ್ರದಲ್ಲಿ ಆಸ್ತಿ ವಿವರಗಳನ್ನು ಮರೆಮಾಚಿದ್ದಾರೆ ಮತ್ತು ಅಧಿಕಾರದಲ್ಲಿದ್ದ ಅವಧಿಯಲ್ಲಿ ಆದಾಯಕ್ಕಿಂತ ಮೀರಿದ ಆಸ್ತಿಯನ್ನು ಗಳಿಸಿದ್ದಾರೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಮಹತ್ವದ ಆದೇಶ ಹೊರಡಿಸಿದೆ.

2018 ಮತ್ತು 2023ರ ವಿಧಾನಸಭಾ ಚುನಾವಣೆಗಳಲ್ಲಿ ಪ್ರೀತಂ ಜೆ. ಗೌಡ ಅವರು ಸಲ್ಲಿಸಿದ್ದ ಚುನಾವಣಾ ಆಯೋಗದ ಪ್ರಮಾಣಪತ್ರಗಳಲ್ಲಿನ ಮಾಹಿತಿ ಹಾಗೂ ಅವರ ವಾಸ್ತವಿಕ ಆಸ್ತಿಯ ವಿವರಗಳ ನಡುವೆ ಭಾರೀ ವ್ಯತ್ಯಾಸವಿದೆ ಎಂದು ಆರೋಪಿಸಿ ಸಂದೀಪ್ ಬಿ.ಪಿ. ಎಂಬುವವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಶಾಸಕರಾಗಿದ್ದ ಅವಧಿಯಲ್ಲಿ ಪ್ರೀತಂ ಗೌಡ ಮತ್ತು ಅವರ ಕುಟುಂಬದ ಆಸ್ತಿಯಲ್ಲಿ ಅಸಹಜ ಏರಿಕೆಯಾಗಿದೆ ಎಂದು ದೂರುದಾರರು ಬಲವಾಗಿ ಪ್ರತಿಪಾದಿಸಿದ್ದರು.

ನ್ಯಾಯಾಲಯದ ಗಂಭೀರ ಅವಲೋಕನ

ಈ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪ್ರಸಾದ್ ಕೆ.ಬಿ., ಈ ಹಿಂದೆ ಹಾಸನ ಲೋಕಾಯುಕ್ತ ಡಿವೈಎಸ್‌ಪಿ ಸಲ್ಲಿಸಿದ್ದ ಪ್ರಾಥಮಿಕ ತನಿಖಾ ವರದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಲ್ಲಿಸಲಾದ ವರದಿಯು ಅಪೂರ್ಣವಾಗಿದೆ ಮತ್ತು ಸತ್ಯಾಂಶಗಳನ್ನು ಮರೆಮಾಚುವ ಪ್ರಯತ್ನ ನಡೆದಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಪ್ರೀತಂ ಗೌಡ ಮತ್ತು ಅವರ ಪತ್ನಿ ಕಾವ್ಯಾ ಎಚ್.ಜಿ. ಅವರು 2018 ರಿಂದ 2023ರ ಅವಧಿಯಲ್ಲಿ ಗಳಿಸಿರುವ ಆಸ್ತಿಗಳನ್ನು ಅವರ ಅಧಿಕೃತ ಆದಾಯದ ಮೂಲಗಳೊಂದಿಗೆ ಹೋಲಿಸಿದಾಗ, ಅವು ಹೊಂದಾಣಿಕೆಯಾಗುತ್ತಿಲ್ಲ ಎಂದು ನ್ಯಾಯಾಲಯ ಪ್ರಾಥಮಿಕವಾಗಿ ಅಭಿಪ್ರಾಯಪಟ್ಟಿದೆ. ಒಬ್ಬ ಜನಪ್ರತಿನಿಧಿಯಾಗಿ ಅವರು ಕಾನೂನುಬಾಹಿರವಾಗಿ ಶ್ರೀಮಂತರಾಗಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಕ್ರಿಮಿನಲ್ ದುಷ್ಕೃತ್ಯಗಳು ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ನ್ಯಾಯಾಲಯ ಎಚ್ಚರಿಸಿದೆ.

ಕಂಪನಿಗಳು ಮತ್ತು ಬೇನಾಮಿ ವಹಿವಾಟುಗಳ ಸಂಶಯ

ತನಿಖೆಯ ಸಂದರ್ಭದಲ್ಲಿ ಪ್ರಕುಲ್ ಗ್ರಾನೈಟ್ಸ್, ಪ್ರಕುಲ್ ಸರ್ವೀಸಸ್ ಮತ್ತು ಅಕಾನಿ ಮಿನರಲ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗಳ ಹೆಸರುಗಳು ಮುನ್ನೆಲೆಗೆ ಬಂದಿವೆ. ಈ ಕಂಪನಿಗಳ ಮೂಲಕವೇ ಅಕ್ರಮ ಆಸ್ತಿ ಸಂಪಾದನೆ ನಡೆದಿದೆ ಎಂಬುದು ದೂರುದಾರರ ಆರೋಪ. ಆದರೆ, ಲೋಕಾಯುಕ್ತ ಪೊಲೀಸರ ಹಿಂದಿನ ವರದಿಯು ಈ ಆಸ್ತಿಗಳೆಲ್ಲವೂ ಕಂಪನಿಗಳ ಲಾಭದಿಂದ ಬಂದಿದ್ದಾಗಿದೆ, ಶಾಸಕರ ಆದಾಯಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಕ್ಲೀನ್ ಚಿಟ್ ನೀಡುವ ರೀತಿಯಲ್ಲಿತ್ತು. ಇದನ್ನು ನ್ಯಾಯಾಲಯವು ಸ್ಪಷ್ಟವಾಗಿ ತಿರಸ್ಕರಿಸಿದೆ. ಅಲ್ಲದೆ, ಆರೋಪಿತ ಬೇನಾಮಿ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳು ಇತರ ವ್ಯಕ್ತಿಗಳ ಹೆಸರಿನಲ್ಲಿವೆ ಎಂಬುದನ್ನು ಕೋರ್ಟ್ ಗಮನಿಸಿದೆ. ಈ ಬೇನಾಮಿ ವಹಿವಾಟುಗಳ ಹಿಂದೆ ಪ್ರೀತಂ ಗೌಡ ಅವರ ಪ್ರಭಾವ ಮತ್ತು ಅವರ ಕುಟುಂಬದ ನಂಟು ಇದೆಯೇ ಎಂಬ ಬಗ್ಗೆ ಆಳವಾದ ತನಿಖೆ ಅಗತ್ಯವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಎಸ್‌ಪಿಗೆ ಕಟ್ಟುನಿಟ್ಟಿನ ಸೂಚನೆ

ನ್ಯಾಯಾಲಯವು ಹಾಸನ ಲೋಕಾಯುಕ್ತ ಎಸ್‌ಪಿ ಅವರಿಗೆ ಕೆಲವು ನಿರ್ದೇಶನಗಳನ್ನು ನೀಡಿದೆ. ಮಾಜಿ ಶಾಸಕ ಪ್ರೀತಂ ಜೆ. ಗೌಡ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಬೇಕು. 2018 ರಿಂದ 2023ರವರೆಗಿನ ಅವಧಿಯಲ್ಲಿನ ಅವರ ಸಂಪೂರ್ಣ ಆಸ್ತಿಯ ವಿವರಗಳನ್ನು ಪರಿಶೀಲಿಸಬೇಕು. ಅವರ ಆದಾಯದ ಮೂಲಗಳು ಮತ್ತು ಅವರ ಹೆಸರಿನಲ್ಲಿರುವ ಸ್ಥಿರ-ಚರಾಸ್ತಿಗಳ ನಡುವೆ ತಾಳೆ ನೋಡಿ, ಅಕ್ರಮ ಆಸ್ತಿ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚಬೇಕು ಮತ್ತು ಸಂಪೂರ್ಣ ತನಿಖಾ ವರದಿಯನ್ನು ಅಕ್ಟೋಬರ್ 22ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ. ಈ ಆದೇಶವು ಹಾಸನದ ಬಿಜೆಪಿ ವಲಯದಲ್ಲಿ ತಲ್ಲಣ ಉಂಟುಮಾಡಿದೆ. ಮುಂದಿನ ದಿನಗಳಲ್ಲಿ ತನಿಖೆ ಯಾವ ಹಾದಿ ಹಿಡಿಯಲಿದೆ ಮತ್ತು ಪ್ರೀತಂ ಗೌಡ ಅವರಿಗೆ ಎಂತಹ ಕಾನೂನು ತೊಡಕುಗಳು ಎದುರಾಗಲಿವೆ ಎಂಬುದು ಕುತೂಹಲ ಮೂಡಿಸಿದೆ.

Read More
Next Story