
ಭೂಸ್ವಾಧೀನ ವಿರೋಧಿಸಿ ಹೋರಾಟ ನಿರತರಾಗಿರುವ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದ ಆರ್. ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ.
ಕರುನಾಡ ಕನ್ನಡಿ| ಪರಿಷತ್ ಚುನಾವಣೆ, ಬಿಡದಿ ಟೌನ್‌ಶಿಪ್ ಮತ್ತು ಪ್ರಕಾಶ್ ರಾಜ್ ವಿವಾದ...
ಕರ್ನಾಟಕ ವಿಧಾನ ಪರಿಷತ್ ಚುನಾವಣೆ ರೆಸಾರ್ಟ್ ರಾಜಕಾರಣ, ಬಿಡದಿ ಟೌನ್‌ಶಿಪ್ ಭೂಸ್ವಾಧೀನದ ರೈತರ ಪ್ರತಿಭಟನೆ ಮತ್ತು ನಟ ಪ್ರಕಾಶ್ ರಾಜ್ ಮಾಧ್ಯಮ ವಾಗ್ದಾಳಿ ಕುರಿತ ಸಮಗ್ರ ದಿನದ ಪ್ರಮುಖ ಸುದ್ದಿಗಳು.
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ ಒಟ್ಟು ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಅತ್ಯಂತ ಪ್ರತಿಷ್ಠಿತ ವಿಷಯವಾಗಿದೆ. ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದು, ಕುದುರೆ ವ್ಯಾಪಾರ ಹಾಗೂ ರಾಜಕೀಯ ತಂತ್ರ-ಪ್ರತಿತಂತ್ರಗಳ ಭೀತಿಯಿಂದಾಗಿ ಕಾಂಗ್ರೆಸ್ ತನ್ನ 134 ಶಾಸಕರನ್ನು ಬಿಡದಿಯ ವಂಡರ್ಲಾ ರೆಸಾರ್ಟ್‌ಗೆ ಶಿಫ್ಟ್ ಮಾಡಿದೆ. ಕಾಂಗ್ರೆಸ್ ಸುಲಭವಾಗಿ ನಾಲ್ಕು ಸ್ಥಾನಗಳನ್ನು ಗೆಲ್ಲಬಹುದಾಗಿದ್ದರೂ, ಐದನೇ ಸ್ಥಾನಕ್ಕೆ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿರುವುದು ತೀವ್ರ ಕುತೂಹಲ ಮೂಡಿಸಿದೆ. ಐದನೇ ಅಭ್ಯರ್ಥಿಯ ಗೆಲುವಿಗೆ ಇನ್ನು 8 ಮತಗಳ ಅಗತ್ಯವಿದ್ದು, ಇದಕ್ಕಾಗಿ ಕಾಂಗ್ರೆಸ್ ನಾಯಕರು ಬಿಜೆಪಿ ಮತ್ತು ಜೆಡಿಎಸ್‌ನ ಅತೃಪ್ತ ನಾಯಕರನ್ನು ಸಂಪರ್ಕಿಸುತ್ತಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ಜೆಡಿಎಸ್ ಕೂಡ ಮುನ್ನೆಚ್ಚರಿಕೆಯಾಗಿ ತನ್ನ 18 ಶಾಸಕರನ್ನು ದೇವನಹಳ್ಳಿಯ ಖಾಸಗಿ ರೆಸಾರ್ಟ್‌ಗೆ ಸ್ಥಳಾಂತರಿಸಿದೆ. ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಹೆಚ್ಚುವರಿ ನಾಲ್ಕು ಮತಗಳ ಅಗತ್ಯವಿದ್ದು, ಈ ಚುನಾವಣೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಅಗ್ನಿಪರೀಕ್ಷೆಯಾಗಿದೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು,
"ನಮ್ಮದು ಒಂದು ಸಣ್ಣ ಪಕ್ಷ, ನಮ್ಮ ಪಕ್ಷದಲ್ಲಿ ಏನಿದೆ ಮಾಡೋಕೆ? ನಮ್ಮ ಕೈಯಲ್ಲಿ ತಾನೇ ಏನಾಗುತ್ತದೆ? ಸರ್ಕಾರ ಅವರ ಕೈಯಲ್ಲಿದೆ, ಮ್ಯಾನ್‌ಪವರ್, ಮಸಲ್ ಪವರ್, ಹಣದ ಪವರ್ ಎಲ್ಲಾ ಇಟ್ಟುಕೊಂಡಿದ್ದಾರೆ. ಅವರ ಮುಂದೆ ನಾವು ಫೈಟ್ ಮಾಡೋಕೆ ಆಗುತ್ತಾ? ನಮ್ಮ ಪಕ್ಷದ ಮತಗಳು ಚಲಾಪಿಲಿ ಆಗಬಾರದು, ನಮ್ಮ ಪಕ್ಷದ ಮತ ಒಟ್ಟಾಗಿರಬೇಕು ಅನ್ನೋದಕ್ಕೆ ಕ್ಯಾಂಡಿಡೇಟ್ ಹಾಕಿದ್ದೀವಿ. ನಾವೇನು ಗೆದ್ದೇ ಬಿಡಬೇಕು, ಏನಾದ್ರೂ ಮಾಡಿ ಕುತಂತ್ರದ ಮುಖಾಂತರ ಅನ್ನೋ ಪ್ರಶ್ನೆ ಇಲ್ಲ."
ಬಿಡದಿ ಟೌನ್‌ಶಿಪ್ ಅಧಿಸೂಚನೆ ಮತ್ತು ಪೋಸ್ಟರ್ ವಿವಾದ
ಬಿಡದಿಯ ಟೌನ್‌ಶಿಪ್‌ಗಾಗಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ರೈತರು ಮತ್ತು ಪ್ರತಿಪಕ್ಷಗಳು ಹೋರಾಟ ಕೈಗೊಂಡಿವೆ. ಇಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ನಾಯಕರ ನಿಯೋಗ ಬಿಡದಿಯ ಗ್ರಾಮಗಳಿಗೆ ಭೇಟಿ ನೀಡಿ ರೈತರ ಅಹವಾಲುಗಳನ್ನು ಸ್ವೀಕರಿಸಿತು. ಇದೇ ವೇಳೆ ಬಿಡದಿಗೆ ತೆರಳುವ ರಸ್ತೆ ಮಾರ್ಗದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ವ್ಯಂಗ್ಯಭರಿತ ಪೋಸ್ಟರ್‌ಗಳು ಪ್ರತ್ಯಕ್ಷವಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪೋಸ್ಟರ್ ಅಭಿಯಾನದ ಬೆದರಿಕೆಗೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು,
"ನಮ್ಮನ್ನು ಕಾಂಗ್ರೆಸ್ ಪಕ್ಷದ ಶಾಸಕರು ಅಂತ ಹೇಳಿ ಮುಖ್ಯಮಂತ್ರಿಗಳು ಭಾವಿಸಿದಂತೆ ಕಾಣುತ್ತಿದೆ. ನನ್ನ ವಿರುದ್ಧ, ಭಾರತೀಯ ಜನತಾ ಪಾರ್ಟಿ ನಾಯಕರುಗಳ ವಿರುದ್ಧ, ವಿಪಕ್ಷ ನಾಯಕರ ವಿರುದ್ಧ ಪೋಸ್ಟರ್ ಆಂದೋಲನವನ್ನು ಶುರು ಮಾಡಿದ್ದಾರೆ. ಬೆದರಿಕೊಳ್ಳತಕ್ಕಂತ ಪ್ರಶ್ನೆಯೇ ಇಲ್ಲ. ನಿಮ್ಮ ಗೊಡ್ಡು ಬೆದರಿಕೆಗೆ ಹೆದರಿಕೊಳ್ಳತಕ್ಕಂತದ್ದಕ್ಕೆ ನಾವೇನು ಕಾಂಗ್ರೆಸ್ಸಿನ ಶಾಸಕರು ಕೂಡ ಅಲ್ಲ."
ಈ ಪೋಸ್ಟರ್‌ಗಳಲ್ಲಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸೇರಿದ ಜಮೀನಿನ ಬಗ್ಗೆ ಅಪಪ್ರಚಾರ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಎಚ್.ಡಿ. ಕುಮಾರಸ್ವಾಮಿ ಅವರು,
"ಮಂತ್ರಿಗಳಾದ ಮೇಲಾದರೂ ಇದೆಂತಾ ಬ್ಲೂ ಫಿಲಂ ಮಾಡಿಸೋದು, ಪೋಸ್ಟ್ ಅಂಟಿಸೋದು... ಇದೆಲ್ಲಾ ಬಿಡುತ್ತಾರೆ ಅಂದುಕೊಂಡಿದ್ದೆ, ಆ ಕಯಾಲಿ ಇನ್ನು ಹೋಗಿಲ್ಲ. ನನ್ನ ಹೆಂಡತಿದು ಫೋಟೋ ಹಾಕಿದ್ದಾರೆ, ನಂದು 100 ಎಕರೆ ಅಂತ... 46 ಎಕರೆ 40 ವರ್ಷದ ಹಿಂದೆ ಕಷ್ಟಪಟ್ಟು ಸಂಪಾದನೆ ಮಾಡಿರೋ ಜಮೀನು ಅದು. ಅದನ್ನು ಬಿಟ್ಟು ನನ್ನ ಹೆಸರಲ್ಲಿ ಇನ್ಯಾವ ಜಮೀನಿದೆ?"
ಇದೇ ವಿಷಯವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರು ಈ ಯೋಜನೆಯನ್ನು ಸಮರ್ಥಿಸಿಕೊಂಡು, "ಅವರು ಸಹಿಸಿಕೊಳ್ಳೋಕೆ ಆಗ್ತಾ ಇಲ್ಲ, ಒಳ್ಳೆ ಕೆಲಸ ಆಗ್ತಾ ಇದೆ. ರೈತರಿಗೆ ಅನುಕೂಲ ಆಗಿಬಿಡುತ್ತದೆ, ರೈತರೆಲ್ಲಾ ಶ್ರೀಮಂತರಾಗಿಬಿಡುತ್ತಾರೆ ಅಂತ. ಅವರ ಲೆಕ್ಕಾಚಾರ ಏನಂದರೆ ರೈತರು ರೈತರಾಗಿಯೇ ಇರಬೇಕು, ಬಡವರು ಬಡವರಾಗಿಯೇ ಇರಬೇಕು, ಅವರು ಶ್ರೀಮಂತರಾಗಬಾರದು."
ಧರ್ಮಸ್ಥಳ ಪ್ರಕರಣ ಮತ್ತು ನಟ ಪ್ರಕಾಶ್ ರಾಜ್ ವಾಗ್ದಾಳಿ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಟ್ ಅರ್ಜಿಯಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ನಟ ಪ್ರಕಾಶ್ ರಾಜ್ ಬುಧವಾರ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿದರು. ಈ ವೇಳೆ ಅವರು ಸಾಮಾಜಿಕ ಜಾಲತಾಣದಲ್ಲಿ "ಮಾರಿಕೊಂಡ ಮಾಧ್ಯಮಗಳಿಗೆ ವಿಶೇಷ ಆಹ್ವಾನ" ಎಂದು ಬರೆದುಕೊಂಡಿದ್ದ ಪದದ ಕುರಿತು ಮಾಧ್ಯಮ ಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಆದರೆ ಕ್ಷಮೆ ಕೇಳಲು ನಿರಾಕರಿಸಿದ ಪ್ರಕಾಶ್ ರಾಜ್,
"ನಾನು ನಿಮಗೆ ನೀಡಿದ ಆಹ್ವಾನದಲ್ಲಿ ಯಾವುದೇ ರೀತಿಯಾದಂತಹ ಈ ತರಹದ ಲೈನ್ ಇರಲಿಲ್ಲ. ಆದರೆ ನಾನು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಒಂದು ಪದವನ್ನು ಬಳಕೆ ಮಾಡಿದ್ದೇನೆ. ಮಾರಿಕೊಂಡವರು ಅಂದರೆ ಯಾರು ಅಂತ ನನಗೆ ಚೆನ್ನಾಗಿ ಗೊತ್ತು. ಕ್ಷಮೆ ಕೇಳಲು ನಾನೇನು ಸಾವರ್ಕರ್ ಅಲ್ಲ."
ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡುತ್ತಾ, ತಾವು ಎಂದಿಗೂ ಧರ್ಮಸ್ಥಳಕ್ಕೆ ಹೋಗಿಲ್ಲ ಮತ್ತು ಸೌಜನ್ಯ ಕೊಲೆ ಪ್ರಕರಣದ ತನಿಖೆ ಸರಿಯಾಗಿ ನಡೆಯಬೇಕೆಂಬ ಆತಂಕ ಹೊಂದಿದ್ದಾಗಿ ಅವರು ತಿಳಿಸಿದರು.
ಇದೇ ಪ್ರಕರಣದ ಕುರಿತು ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯ ಪರವಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಅವರು, ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿರುವುದು ಈಗ ಬಯಲಾಗಿದೆ ಎಂದು ಆರೋಪಿಸಿದರು. ಈ ಕುರಿತು ಅವರು,"ಇವತ್ತು ಈ ಷಡ್ಯಂತ್ರ ಹೆಂಗೆ ಹೊರಗೆ ಬಂದಿದೆ ಅಂತಂದ್ರೆ, ಒಂದು ಕಡೆ ಚಿನ್ನಯ್ಯನೇ ತುಂಬಾ ಸ್ಪಷ್ಟವಾಗಿ ಹೇಳ್ತಾನೆ; ನನ್ನನ್ನು ಕರ್ಕೊಂಡು ಹೋಗಿದ್ರು, ರೆಸಾರ್ಟ್‌ನಲ್ಲಿ ಇಟ್ಕೊಂಡಿದ್ರು... ಇನ್ನು ಏನಾದ್ರೂ ವೀರೇಂದ್ರ ಹೆಗ್ಗಡೆಯವರನ್ನು ಜೈಲಿಗೆ ಕಳಿಸಿದರೆ ಹಾಗಾದರೆ 50 ಲಕ್ಷ ರೂಪಾಯಿ ಕೊಡ್ತೀನಿ ಅಂತ ಹೇಳಿದ್ರು ಎಂದು ಅವರು ತಿಳಿಸಿದ್ದಾರೆ.

