ತಿರುಪತಿಯ ಮೊದಲ ಆರತಿಯ ವಿವಾದ- ಮೈಸೂರು ರಾಜರಿಗೆ ಸಿಗುವ ಗೌರವ ರಾಜಕಾರಣಿಗಳಿಗೂ ಸಿಗುತ್ತಾ?
ತಿರುಪತಿಯ ಮೊದಲ ಆರತಿ ಗೌರವವನ್ನು ಸಚಿವರು, ಶಾಸಕರಿಗೂ ವಿಸ್ತರಿಸುವ ಡಿಕೆ ಶಿವಕುಮಾರ್ ಪ್ರಸ್ತಾಪಕ್ಕೆ ಟಿಟಿಡಿ ವಿರೋಧ ವ್ಯಕ್ತಪಡಿಸಿದೆ. ಮೈಸೂರು ಮಹಾರಾಜರ ಗೌರವ ಬದಲಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ಮುಂಜಾನೆ ಸುಪ್ರಭಾತ ಸೇವೆಯ ಬಳಿಕ ನಡೆಯುವ ಮೊದಲ ಆರತಿ ಅತ್ಯಂತ ಪವಿತ್ರ ಆಚರಣೆಗಳಲ್ಲಿ ಒಂದಾಗಿದೆ. ಈ ವೇಳೆ ಗರ್ಭಗುಡಿಯ ಸಮೀಪದಲ್ಲಿ ಕೆಲವೇ ಮಂದಿಗೆ ಮಾತ್ರ ಉಪಸ್ಥಿತರಿರುವ ಅವಕಾಶ ಸಿಗುತ್ತದೆ. ಸಾಮಾನ್ಯ ಭಕ್ತರಿಗೆ ಈ ಅವಕಾಶ ಇರುವುದಿಲ್ಲ. ಈ ಗೌರವವನ್ನು ಐತಿಹಾಸಿಕ ಸಂಪ್ರದಾಯದ ಭಾಗವಾಗಿ ನಿರ್ದಿಷ್ಟ ಪ್ರತಿನಿಧಿಗಳಿಗೆ ಮಾತ್ರ ನೀಡಲಾಗುತ್ತಿದೆ.
ಡಿಕೆ ಶಿವಕುಮಾರ್ ಪ್ರಸ್ತಾಪವೇನು?
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಕರ್ನಾಟಕ ಸರ್ಕಾರದ ಪರವಾಗಿ ಈವರೆಗೆ ವಿಶೇಷ ಅಧಿಕಾರಿಯೊಬ್ಬರು ಸ್ವೀಕರಿಸುತ್ತಿದ್ದ ಮೊದಲ ಆರತಿಯ ಗೌರವವನ್ನು ಇನ್ನು ಮುಂದೆ ರಾಜ್ಯದ ಸಚಿವರು, ಶಾಸಕರು, ಹಿರಿಯ ಐಎಎಸ್ ಅಧಿಕಾರಿಗಳು ಹಾಗೂ ಇತರ ಗಣ್ಯರಿಗೂ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿರುವುದಾಗಿ ಹೇಳಿದ್ದಾರೆ. ರಾಜ್ಯದ ಪರವಾಗಿ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡುವ ಅವಕಾಶ ಜನಪ್ರತಿನಿಧಿಗಳಿಗೂ ದೊರಕಬೇಕು ಎಂಬುದು ಅವರ ವಾದ.
ಕರ್ನಾಟಕ–ತಿರುಪತಿ ಐತಿಹಾಸಿಕ ನಂಟು
ತಿರುಪತಿ ದೇವಸ್ಥಾನ ಮತ್ತು ಕರ್ನಾಟಕದ ನಡುವೆ ಶತಮಾನಗಳ ಹಳೆಯ ಸಂಬಂಧವಿದೆ. ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀಕೃಷ್ಣದೇವರಾಯರು ದೇವಸ್ಥಾನಕ್ಕೆ ಅಪಾರ ದೇಣಿಗೆ ನೀಡಿದ್ದು, ಅದರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಜೊತೆಗೆ ಮೈಸೂರು ಒಡೆಯರು ಪ್ರತಿದಿನ ದೇವಾಲಯದ ಪವಿತ್ರ ದೀಪಗಳಿಗೆ ಬೇಕಾದ ತುಪ್ಪವನ್ನು ಒದಗಿಸುವ ಸಂಪ್ರದಾಯವನ್ನು ಆರಂಭಿಸಿದ್ದರು. ಈ ಕೊಡುಗೆಗಳ ಗೌರವಾರ್ಥವೇ ಮೈಸೂರು ಸಂಸ್ಥಾನಕ್ಕೆ ಮೊದಲ ಆರತಿಯ ವಿಶೇಷ ಗೌರವ ನೀಡಲಾಗಿದೆ ಎಂದು ಇತಿಹಾಸ ಹೇಳುತ್ತದೆ.
ಟಿಟಿಡಿ ಸ್ಪಷ್ಟನೆ
ಡಿಕೆ ಶಿವಕುಮಾರ್ ಅವರ ಹೇಳಿಕೆಯ ಬಳಿಕ ಟಿಟಿಡಿ ಸದಸ್ಯ ಜಿ. ಭಾನುಪ್ರಕಾಶ್ ರೆಡ್ಡಿ ಸ್ಪಷ್ಟನೆ ನೀಡಿ, ಮೊದಲ ಆರತಿಯ ಗೌರವವು ಮೈಸೂರು ಮಹಾರಾಜರ ದಾನ, ಧರ್ಮ ಮತ್ತು ಸೇವೆಗೆ ನೀಡಿದ ಐತಿಹಾಸಿಕ ಗೌರವವಾಗಿದೆ ಎಂದು ಹೇಳಿದ್ದಾರೆ. ಈ ಸಂಪ್ರದಾಯವನ್ನು ರಾಜಕೀಯ ನಾಯಕರು ಅಥವಾ ಇತರರಿಗೆ ವಿಸ್ತರಿಸಲು ಸಾಧ್ಯವಿಲ್ಲ ಎಂದು ಅವರು ಖಡಕ್ ನಿಲುವು ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಸಂಪ್ರದಾಯಗಳನ್ನು ಆಡಳಿತಾತ್ಮಕ ಆದೇಶಗಳಿಂದ ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನೂ ಅವರು ಒತ್ತಿ ಹೇಳಿದ್ದಾರೆ.
ವಿವಾದದ ಕೇಂದ್ರಬಿಂದು
ಈ ಬೆಳವಣಿಗೆಯಿಂದ ಎರಡು ಪ್ರಮುಖ ಪ್ರಶ್ನೆಗಳು ಮೂಡಿವೆ. ಮೈಸೂರು ಮಹಾರಾಜರಿಗೆ ನೀಡಲಾಗಿರುವ ಐತಿಹಾಸಿಕ ಗೌರವವನ್ನು ಇಂದಿನ ಜನಪ್ರತಿನಿಧಿಗಳಿಗೂ ವಿಸ್ತರಿಸಬೇಕೇ? ಅಥವಾ ಶತಮಾನಗಳಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯವನ್ನು ಹಾಗೆಯೇ ಉಳಿಸಬೇಕೇ? ಈ ಕುರಿತು ಟಿಟಿಡಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

