
ಇದು ಇಪ್ಪತ್ತು ವರ್ಷಗಳ ಹಿಂದೆ, ಬದ್ನಪಳ್ಳಿಯ ದಲಿತ ಮಹಿಳೆ ಚೀಮಳ ಪೆಡಕ್ಕ, MGNREGA ಅಡಿಯಲ್ಲಿ ಮೊದಲ ಉದ್ಯೋಗ ಕಾರ್ಡ್ ಹೊಂದಿರುವವರಾದಾಗ ತೆಗೆದ ಫೋಟೋ.
'ನರೇಗಾ' ಕ್ರಾಂತಿಕಾರಿ; ಕೇಂದ್ರದ ಹೊಸ ಯೋಜನೆ 'ದೋಷಪೂರಿತ': ಕಾಂಗ್ರೆಸ್ ವಾಗ್ದಾಳಿ
ಹೊಸ ಕಾಯ್ದೆಯು ಸಂಪೂರ್ಣವಾಗಿ ದೆಹಲಿಯ ಕೇಂದ್ರೀಕೃತ ವ್ಯವಸ್ಥೆಯನ್ನು ಖಾತ್ರಿಪಡಿಸುತ್ತದೆ. ಯಾವ ಜಿಲ್ಲೆಯಲ್ಲಿ ಕೆಲಸ ನೀಡಬೇಕು ಎಂಬುದನ್ನು ಮೋದಿ ಸರ್ಕಾರವೇ ನಿರ್ಧರಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಗೆ (MGNREGA) ಬರೋಬ್ಬರಿ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದ ಹೊಸ ಗ್ರಾಮೀಣ ಉದ್ಯೋಗ ಯೋಜನೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ನರೇಗಾ ಒಂದು 'ಪರಿವರ್ತನಾತ್ಮಕ ಕಾನೂನು' ಆಗಿದ್ದರೆ, ಅದನ್ನು ಬದಲಿಸಿ ಕೇಂದ್ರ ಜಾರಿಗೆ ತಂದಿರುವ ಹೊಸ ಯೋಜನೆಯು ಕೇವಲ ಒಂದು 'ದೋಷಪೂರಿತ' ಕ್ರಮ ಎಂದು ಕಾಂಗ್ರೆಸ್ ಜರಿದಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಈ ಕುರಿತು ಎಕ್ಸ್ (ಟ್ವಿಟರ್) ತಾಣದಲ್ಲಿ ಪೋಸ್ಟ್ ಮಾಡಿದ್ದು, "ಬರೋಬ್ಬರಿ 20 ವರ್ಷಗಳ ಹಿಂದೆ ಇದೇ ದಿನ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬದ್ನಪಲ್ಲಿ ಗ್ರಾಮದಲ್ಲಿ ನರೇಗಾ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ, ಈಗ ಕೇಂದ್ರ ಸರ್ಕಾರ ಅದನ್ನು ಬುಲ್ಡೋಜರ್ ಮೂಲಕ ಹೊಸಕಿ ಹಾಕಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನರೇಗಾ vs ವಿಬಿ-ಜಿ ರಾಮ್ ಜಿ : ಕಾಂಗ್ರೆಸ್ ಆಕ್ಷೇಪಗಳೇನು?
ಕೇಂದ್ರ ಸರ್ಕಾರ ಜಾರಿಗೆ ತಂದಿರುವ 'ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಔರ್ ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆ-2025' (VB-G RAM G) ವಿರುದ್ಧ ಜೈರಾಮ್ ರಮೇಶ್ ಪ್ರಮುಖವಾಗಿ ಐದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ನರೇಗಾವು ಸಂವಿಧಾನದ 41ನೇ ವಿಧಿಯ ಪ್ರಕಾರ ಜನರಿಗೆ ಸಿಕ್ಕ 'ಕಾನೂನುಬದ್ಧ ಹಕ್ಕು' ಮತ್ತು ಬೇಡಿಕೆ ಆಧಾರಿತವಾಗಿತ್ತು. ಆದರೆ, ಹೊಸ ಯೋಜನೆಯಲ್ಲಿ ಜನರ ಬೇಡಿಕೆಗಿಂತ ಸರ್ಕಾರದ ಬಜೆಟ್ ಹಂಚಿಕೆಯೇ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
ಹೊಸ ಕಾಯ್ದೆಯು ಸಂಪೂರ್ಣವಾಗಿ ದೆಹಲಿಯ ಕೇಂದ್ರೀಕೃತ ವ್ಯವಸ್ಥೆಯನ್ನು ಖಾತ್ರಿಪಡಿಸುತ್ತದೆ. ಯಾವ ಜಿಲ್ಲೆಯಲ್ಲಿ ಕೆಲಸ ನೀಡಬೇಕು ಎಂಬುದನ್ನು ಮೋದಿ ಸರ್ಕಾರವೇ ನಿರ್ಧರಿಸುತ್ತದೆ ಎಂದು ನುಡಿದಿದ್ದಾರೆ.
ನರೇಗಾದಲ್ಲಿ ರಾಜ್ಯ ಸರ್ಕಾರಗಳು ಕೇವಲ ಶೇ. 10ರಷ್ಟು ವೆಚ್ಚ ಭರಿಸಬೇಕಿತ್ತು. ಆದರೆ, ಹೊಸ ಯೋಜನೆಯಡಿ ಶೇ. 40ರಷ್ಟು ವೆಚ್ಚವನ್ನು ರಾಜ್ಯಗಳೇ ಭರಿಸಬೇಕಾಗುತ್ತದೆ. ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯಗಳಿಗೆ ಇದು ಸಾಧ್ಯವಾಗದೇ, ಕೆಲಸ ನೀಡುವುದನ್ನೇ ನಿಲ್ಲಿಸುವ ಅಪಾಯವಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಗ್ರಾಮ ಪಂಚಾಯಿತಿಗಳೇ ಯೋಜನೆಗಳನ್ನು ನಿರ್ಧರಿಸುತ್ತಿದ್ದವು. ಈಗ ಪಂಚಾಯಿತಿಗಳನ್ನು ಮೂಲೆಗುಂಪು ಮಾಡಲಾಗಿದ್ದು, ಮೋದಿ ಸರ್ಕಾರದ ಆದ್ಯತೆಗಳಿಗೆ ಅನುಗುಣವಾಗಿ ಯೋಜನೆಗಳು ನಿರ್ಧಾರವಾಗುತ್ತವೆ ಎಂದು ಆರೋಪಿಸಿದ್ದಾರೆ.
ಕೃಷಿ ಚಟುವಟಿಕೆಗಳು ಹೆಚ್ಚಿರುವ ಸಮಯದಲ್ಲಿ ವರ್ಷಕ್ಕೆ ಎರಡು ತಿಂಗಳು ಈ ಯೋಜನೆ ಸ್ಥಗಿತಗೊಳ್ಳಲಿದೆ. ಇದರಿಂದ ಕೃಷಿ ಕೂಲಿಗಾಗಿ ಹೆಚ್ಚಿನ ವೇತನ ಕೇಳುವ ಕಾರ್ಮಿಕರ ಖರೀದಿ ಶಕ್ತಿ ಕುಂದಲಿದೆ ಎಂದು ಹೇಳಿದ್ದಾರೆ.
ನರೇಗಾ ಯೋಜನೆಯಡಿ ಕಳೆದ 20 ವರ್ಷಗಳಲ್ಲಿ 180 ಕೋಟಿ ದಿನಗಳ ಕೆಲಸವನ್ನು ನೀಡಲಾಗಿದೆ ಮತ್ತು 10 ಕೋಟಿಗೂ ಹೆಚ್ಚು ಸಮುದಾಯ ಆಸ್ತಿಗಳನ್ನು ಸೃಷ್ಟಿಸಲಾಗಿದೆ ಎಂದು ರಮೇಶ್ ಸ್ಮರಿಸಿದ್ದಾರೆ. 2025ರ ಡಿಸೆಂಬರ್‌ನಲ್ಲಿ ರಾಷ್ಟ್ರಪತಿಗಳ ಅಂಕಿತ ಪಡೆದ ಹೊಸ ಕಾಯ್ದೆಯು, ನರೇಗಾವನ್ನು ರದ್ದುಗೊಳಿಸಿ ಜಾರಿಗೆ ಬಂದಿದೆ.

