
Congress Conflict| ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಅಬ್ದುಲ್ ಜಬ್ಬಾರ್ ಅಮಾನತು
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ವಿರುದ್ಧ ಅಬ್ದುಲ್ ಜಬ್ಬಾರ್ ಅವರು ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಕಾರ್ಯ ನಿರ್ವಹಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತು ಮಾಡಲಾಗಿದೆ.
ವಿಧಾನ ಪರಿಷತ್ ಸದಸ್ಯರಾಗಿರುವ ಅಬ್ದುಲ್ ಜಬ್ಬಾರ್ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ವಿರುದ್ಧ ಅಬ್ದುಲ್ ಜಬ್ಬಾರ್ ಅವರು ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಕೆಪಿಸಿಸಿ ಕೈಗೊಂಡ ಆಂತರಿಕ ತನಿಖೆಯಲ್ಲೂ ಅಬ್ದುಲ್ ಜಬ್ಬಾರ್ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ಅಂಶ ಬೆಳಕಿಗೆ ಬಂದಿದ್ದರಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿಯಿಂದ ಶಿಸ್ತು ಕ್ರಮ
ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಇದೀಗ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತುಗೊಳಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಕ್ಷದ ಹಿತಾಸಕ್ತಿಗಿಂತ ಯಾರೂ ಮಿಗಿಲಲ್ಲ. ಯಾರು ಪಕ್ಷ ವಿರೋಧಿ ಕೆಲಸ ಮಾಡುತ್ತಾರೋ ಅವರಿಗೆ ಕಾಂಗ್ರೆಸ್‌ನಲ್ಲಿ ಸ್ಥಾನವಿಲ್ಲ ಎಂಬ ಸಂದೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವಾನಿಸಿದ್ದಾರೆ.
ರಾಜಕೀಯ ಸಂಚಲನ
ಕಳೆದ ಕೆಲವು ದಿನಗಳಿಂದ ದಾವಣಗೆರೆ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆಯಾಡುತ್ತಿತ್ತು. ವಿಶೇಷವಾಗಿ ಅಲ್ಪಸಂಖ್ಯಾತ ನಾಯಕರು ಪಕ್ಷದ ಅಧಿಕೃತ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹಮ್ಮದ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜಬ್ಬಾರ್ ಅಮಾನತುಗೊಂಡಿರುವುದು ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳಾಗುವ ಸಾಧ್ಯತೆಯಿದೆ.
ವಿಧಾನ ಪರಿಷತ್ ಸ್ಥಾನ ಅಭಾದಿತ
ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಆಗಿದ್ದರೂ, ವಿಧಾನ ಪರಿಷತ್ ಸದಸ್ಯತ್ವ ಸ್ಥಾನ ಕಳೆದುಕೊಳ್ಳದೇ ಮುಂದುವರೆಯಲಿದ್ದಾರೆ. ಅಬ್ದುಲ್ ಜಬ್ಬಾರ್ ಅವರು ಮೂರನೇ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಜೂ. 14, 2022 ರಂದು ಅಧಿಕಾರ ವಹಿಸಿಕೊಂಡಿದ್ದರು. ಜೂ. 13, 2028 ರವರೆಗೆ ಅವರ ಅಧಿಕಾರ ಅವಧಿ ಇದ್ದು, ಮುಂದಿನ ದಿನಗಳಲ್ಲಿ ಅವರು ವಿಧಾನ ಪರಿಷತ್‌ನಲ್ಲಿ ಸ್ವತಂತ್ರ ಸದಸ್ಯರಾಗಿ ಮುಂದುವರೆಯಲಿದ್ದಾರೆ.
ಮತ್ತಷ್ಟು ನಾಯಕರಿಂದ ರಾಜೀನಾಮೆ ?
ದಾವಣಗೆರೆ ದಕ್ಷಿಣ ಉಪಚುನಾವಣೆಯ ಪ್ರಚಾರದಲ್ಲಿ ಕೆಲವು ನಾಯಕರು ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ನಿರ್ವಹಿಸದ ಹಿನ್ನೆಲೆ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಲ್ಪಸಂಖ್ಯಾತ ಸಮುದಾಯದ ನಾಯಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ದಾವಣಗೆರೆ ಉಪಚುನಾವಣೆ ಸಂಬಂಧ ಸಲೀಂ ಅಹಮದ್ ಹಾಗೂ ಶಾಸಕ ರಿಜ್ವಾನ್ ಅರ್ಷದ್ ಅವರು ಹೈಕಮಾಂಡ್‌ಗೆ ವರದಿ ಕೊಡುವ ಮುನ್ನವೇ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದರು.
ರಾಜೀನಾಮೆ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇಡೀ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿ, ಆಮೂಲಾಗ್ರ ಬದಲಾವಣೆಯ ಮುನ್ಸೂಚನೆ ನೀಡಿದ್ದರು. ಸೋಮವಾರವಷ್ಟೇ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಸೀರ್ ಅಹಮದ್ ಅವರನ್ನು ವಜಾಗೊಳಿಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಮತ್ತಷ್ಟು ನಾಯಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

