ದಾವಣಗೆರೆ ದಕ್ಷಿಣಕ್ಕೆ ʼಕೈʼ ಕೊಟ್ಟ ಮುಸ್ಲಿಮರು, ʼಷಡ್ಯಂತ್ರ್ಯʼ ಬಯಲು ಮಾಡಿತೇ ಆಂತರಿಕ ವರದಿ?
x
ಅಲ್ಪಸಂಖ್ಯಾತ ನಾಯಕರ ತಲೆದಂಡ

ದಾವಣಗೆರೆ ದಕ್ಷಿಣಕ್ಕೆ ʼಕೈʼ ಕೊಟ್ಟ ಮುಸ್ಲಿಮರು, ʼಷಡ್ಯಂತ್ರ್ಯʼ ಬಯಲು ಮಾಡಿತೇ ಆಂತರಿಕ ವರದಿ?

ಜಮೀರ್ ಕೊನೆ ಕ್ಷಣದ ಅತಿಥಿಯಂತೆ ಬಂದು ಹೋದರು. ಪೂರ್ಣ ಪ್ರಮಾಣದಲ್ಲಿ ಸಮುದಾಯವನ್ನು ಒಗ್ಗೂಡಿಸಲಿಲ್ಲ, ನಸೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಜತೆ ಸೇರಿ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ರೇರೇಪಿಸಿದ್ದರು ಎಂದು ದೂರಲಾಗಿದೆ.


ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸೋಲಿನ ಭೀತಿ ಎದುರಾಗಿದೆ. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಣೆ, ಅಲ್ಪಸಂಖ್ಯಾತರ ಬಂಡಾಯ, ಎಸ್‌ಡಿಪಿಐ ಅಭ್ಯರ್ಥಿ ಸ್ಪರ್ಧೆಯಿಂದ ಸಮುದಾಯದ ಮತಗಳು ವಿಭಜನೆಯಾಗಿವೆ. ಇದರ ಜತೆಗೆ ಸಮುದಾಯದ ಕೆಲ ನಾಯಕರೇ ಪಕ್ಷ ವಿರೋಧಿ ಚಟುವಟಿಕೆಯಿಂದಲೇ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಆತಂಕವಿದೆ ಎಂಬ ಕಾಂಗ್ರೆಸ್‌ ಪಕ್ಷದ ಆಂತರಿಕ ವರದಿ, ಕಾಂಗ್ರೆಸ್‌ ಪಾಳಯದಲ್ಲಿ ನಡುಕ ಹುಟ್ಟಿಸಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣಾ ಪ್ರಚಾರದಿಂದ ಸಚಿವ ಜಮೀರ್ ಅಹಮದ್ ಖಾನ್, ವಿಧಾನ ಪರಿಷತ್‌ ಸದಸ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ಹಾಗೂ ಟಿಕೆಟ್‌ ಆಕಾಂಕ್ಷಿ ಅಬ್ದುಲ್‌ ಜಬ್ಬಾರ್‌ ದೂರ ಉಳಿದ ಹಿನ್ನೆಲೆ ಪಕ್ಷದ ಅಲ್ಪಸಂಖ್ಯಾತರ ಘಟಕದಲ್ಲಿ ಭಿನ್ನಮತ ಭುಗಿಲೆದ್ದಿತ್ತು. ಸಮುದಾಯದ ಅಸಮಾಧಾನ ಶಮನ ಹಾಗೂ ಸಮುದಾಯದ ಮತ ಹಾಕಿಸುವ ಜವಾಬ್ದಾರಿ ಹೊತ್ತಿದ್ದ ಶಾಸಕ ರಿಜ್ವಾನ್‌ ಅರ್ಷದ್, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್‌ ಅವರು ಮತದಾನದ ನಂತರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಮುದಾಯದ ನಾಯಕರಿಂದ ಷಡ್ಯಂತ್ರ್ಯ ನಡೆದಿರುವ ಆರೋಪ ಮಾಡಿದ್ದರು.

ಇದೇ ವೇಳೆ ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ಅಭಿಷೇಕ್ ದತ್ತಾ ಅವರು ಹೈಕಮಾಂಡ್‌ಗೆ ಸಲ್ಲಿಸಿದ್ದ ಆಂತರಿಕ ವರದಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ನಾಯಕರ ಪಕ್ಷ ವಿರೋಧಿ ಚಟುವಟಿಕೆಗಳ ಕುರಿತು ಉಲ್ಲೇಖಿಸಿದ್ದರು. ಅಲ್ಲದೇ, ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ ಮಲ್ಲಿಕಾರ್ಜುನ್‌ ಸೋಲಿನ ಭೀತಿ ಇದೆ ಎಂದು ತಿಳಿಸಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ಖಚಿತಪಡಿಸಿವೆ.

ಟಿಕೆಟ್‌ ಸಿಗದ ಅಸಮಾಧಾನದಿಂದ ಮತ ವಿಭಜನೆ

ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಮೊಮ್ಮಗ ಸಮರ್ಥ್ ಅವರನ್ನೇ ಹೈಕಮಾಂಡ್‌ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಅನುಕಂಪದ ಅಲೆಯಲ್ಲಿ ಸುಲಭವಾಗಿ ಗೆಲುವು ದಕ್ಕಲಿದೆ ಎಂಬುದು ವರಿಷ್ಠರ ಲೆಕ್ಕಾಚಾರವಾಗಿತ್ತು. ಆದರೆ, ಸಚಿವ ಜಮೀರ್‌ ಅಹಮದ್‌ ಅವರು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ತಮಗೇ ಟಿಕೆಟ್‌ ನೀಡುವಂತೆ ಒತ್ತಾಯಿಸಿದ್ದರು. ಕೊನೆ ಕ್ಷಣದಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಮುಸ್ಲಿಂ ಸಮುದಾಯದ ಮುಖಂಡರ ಜತೆ ಸಭೆ ನಡೆಸಿ, ಹೈಕಮಾಂಡ್‌ಗೆ ವರದಿ ನೀಡಿದ್ದರು. ಅದರ ಆಧಾರದ ಮೇಲೆ ಸಮರ್ಥ್‌ ಅವರಿಗೆ ಟಿಕೆಟ್‌ ನೀಡಲಾಗಿತ್ತು.

2023 ರ ಚುನಾವಣೆಯಲ್ಲೇ ಶಾಮನೂರು ಶಿವಶಂಕರಪ್ಪ ಅವರು ಮುಂದಿನ ಚುನಾವಣೆಯಲ್ಲಿ ಮುಸ್ಲಿಮರಿಗೇ ಟಿಕೆಟ್‌ ನೀಡುವ ಭರವಸೆ ನೀಡಿದ್ದರು. ಈಗ ಅವರ ಕುಟುಂಬದ ಕುಡಿಗೆ ಟಿಕೆಟ್‌ ನೀಡುವ ಮೂಲಕ ಸಮುದಾಯವನ್ನು ರಾಜಕೀಯ ಪ್ರಾತಿನಿಧ್ಯದಿಂದ ವಂಚಿಸಲಾಗಿದೆ ಎಂದು ಹೇಳಿ ಪ್ರಚಾರದಿಂದ ಹಲವು ನಾಯಕರು ದೂರ ಉಳಿದಿದ್ದರು. ಅಲ್ಲದೇ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್‌ ವಿರುದ್ಧ ಎಸ್‌ಡಿಪಿಐ ಹಾಗೂ ಇತರೆ 14 ಮಂದಿ ಮುಸ್ಲಿಂ ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆಗೆ ಹಣಕಾಸು ನೆರವು ನೀಡಿದ್ದರು ಎಂಬ ಗಂಭೀರ ಆರೋಪಗಳು ವರದಿಯಲ್ಲಿವೆ ಎನ್ನಲಾಗಿದೆ.

ತಲೆದಂಡಕ್ಕೆ ಹೈಕಮಾಂಡ್ ತಾಕೀತು

ಕಾಂಗ್ರೆಸ್‌ ಆಂತರಿಕ ವರದಿಯಿಂದ ಎಚ್ಚೆತ್ತ ಹೈಕಮಾಂಡ್‌, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಅಲ್ಪಸಂಖ್ಯಾತರ ನಾಯಕರ ತಲೆದಂಡ ಮಾಡಿದೆ.

ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್‌ ಜಬ್ಬಾರ್‌ ರಾಜೀನಾಮೆ ಬಳಿಕ ಇಡೀ ಘಟಕವನ್ನೇ ವಿಸರ್ಜಿಸಲಾಯಿತು. ಆ ಬಳಿಕ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವದಿಂದ ಜಬ್ಬಾರ್‌ ಅವರನ್ನು ಕಿತ್ತೊಗೆಯಲಾಯಿತು. ದಾವಣರೆಗೆ ಉಪಚುನಾವಣಾ ಪ್ರಚಾರಕ್ಕೆ ಬಾರದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್‌ ಅವರಿಗೆ ರಾಜೀನಾಮೆ ನೀಡಲು ಸೂಚಿಸಿತ್ತು. ಆದರೆ, ರಾಜೀನಾಮೆ ನೀಡಲು ವಿಳಂಬ ಮಾಡಿದ ಹಿನ್ನೆಲೆ ಅವರನ್ನು ಸ್ಥಾನದಿಂದ ವಜಾಗೊಳಿಸಲಾಗಿತ್ತು.

ಈ ಮಧ್ಯೆ, ಸಚಿವ ಜಮೀರ್‌ ಅಹಮದ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡು, ಹೈಕಮಾಂಡ್‌ ಪ್ರಶ್ನೆಗಳಿಗೆ ನೀವೇ ಸಮಜಾಯಿಷಿ ನೀಡಿ ಎಂದು ಕಿಡಿಕಾರಿದ್ದರು. ದಾವಣಗೆರೆ ದಕ್ಷಿಣದಲ್ಲಿ ಪಕ್ಷದ ಅಭ್ಯರ್ಥಿ ಒಂದು ವೇಳೆ ಸೋತರೆ ಜಮೀರ್‌ ಅವರನ್ನೇ ಹೊಣೆಯಾಗಿಸಿ ಸಚಿವ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗಿದೆ.

ವಜಾಗೂ ಮುನ್ನ ರಾಜೀನಾಮೆ ನೀಡುವ ಇಂಗಿತ

ಸಚಿವ ಜಮೀರ್‌ ಅಹಮದ್ ಅವರನ್ನು ಸಂಪುಟದಿಂದ ಕೈಬಿಡುವ ವದಂತಿಗಳ ಬೆನ್ನಲ್ಲೇ ಕಳಂಕದಿಂದ ತಪ್ಪಿಸಿಕೊಳ್ಳಲು ತಾವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ನಸೀರ್‌ ಅಹಮದ್ ಹಾಗೂ ಅಬ್ದುಲ್‌ ಜಬ್ಬಾರ್‌ ತಲೆದಂಡದ ಬಳಿಕ ಜಮೀರ್ ಅವರ ವಿರುದ್ಧವೂ ಶಿಸ್ತುಕ್ರಮ ಜರುಗಿಸುವ ಸಾಧ್ಯತೆ ಇದೆ ಎಂಬ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ. ಪಕ್ಷದ ಅಭ್ಯರ್ಥಿ ಸೋಲಿನ ಹೊಣೆ ಹೊರಿಸುವ ಮೂಲಕ ಸಂಪುಟದಿಂದ ಕೈ ಬಿಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಅಭಿಷೇಕ್ ದತ್ತಾ ವರದಿಯಲ್ಲಿ ಏನಿದೆ?

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳು ಎಸ್ಡಿಪಿಐ ಮತ್ತು ಪಕ್ಷೇತರ ಅಭ್ಯರ್ಥಿಗಳ ಕಡೆಗೆ ವಾಲಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಮೇಲೆ ಪರಿಣಾಮ ಬೀರಬಹುದು. ಪಕ್ಷದ ಪ್ರಮುಖ ಮುಸ್ಲಿಂ ನಾಯಕರು ಹಾಗೂ ಸ್ಥಳೀಯ ಮುಖಂಡರು ಸಮುದಾಯಕ್ಕೆ ಟಿಕೆಟ್‌ ನೀಡದ ಕಾಂಗ್ರೆಸ್‌ ನಾಯಕರಿಗೆ ಪಾಠ ಕಲಿಸುವ ಸಲುವಾಗಿಯೇ ಸಮರ್ಥ್ ವಿರುದ್ಧ ಷಡ್ಯಂತ್ರ್ಯ ನಡೆಸಿದರು. ಕೆಲ ನಾಯಕರು ಪರೋಕ್ಷವಾಗಿ ವಿರೋಧ ಪಕ್ಷದ ಅಭ್ಯರ್ಥಿ ಹಾಗೂ ಸ್ವತಂತ್ರ ಅಭ್ಯರ್ಥಿಗಳಿಗೆ ಬೆಂಬಲ ನೀಡಿರುವ ಆರೋಪಗಳು ಕೇಳಿ ಬಂದಿವೆ ಎಂದು ಉಲ್ಲೇಖಿಸಲಾಗಿದೆ.

ಸಚಿವ ಜಮೀರ್ ಅಹ್ಮದ್ ಖಾನ್ ಅವರು ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರ ಪ್ರಚಾರಕ್ಕೆ ಆರ್ಥಿಕ ನೆರವು ಒದಗಿಸುವ ಮೂಲಕ ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.

ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನಿರಾಕರಿಸಿದ್ದರಿಂದ ಅಸಮಾಧಾನಗೊಂಡ ಜಮೀರ್ ಹಾಗೂ ಅವರ ತಂಡವು ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ತಂತ್ರ ರೂಪಿಸಿದ್ದರು. ಅಲ್ಪಸಂಖ್ಯಾತ ಮತಗಳನ್ನು ಎಸ್‌ಡಿಪಿಐ ಕಡೆಗೆ ತಿರುಗಿಸುವ ಮೂಲಕ ಕಾಂಗ್ರೆಸ್ನ ಮತಬ್ಯಾಂಕ್‌ಗೆ ಕನ್ನ ಹಾಕಿದ್ದರು ಎಂದು ದೂರಲಾಗಿದೆ.

ಜಮೀರ್ ಅವರು ಕೊನೆ ಕ್ಷಣದ ಅತಿಥಿಯಂತೆ ಬಂದು ಹೋದರು. ಪೂರ್ಣ ಪ್ರಮಾಣದಲ್ಲಿ ಸಮುದಾಯವನ್ನು ಒಗ್ಗೂಡಿಸಲು ಕೆಲಸ ಮಾಡಿಲ್ಲ, ನಸೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅವರೊಂದಿಗೆ ಸೇರಿ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ರೇರೇಪಿಸಿದ್ದರು ಎಂಬ ಅಂಶ ವರದಿಯಲ್ಲಿದೆ ಎಂದು ತಿಳಿದು ಬಂದಿದೆ.

ಕುತೂಹಲ ಮೂಡಿಸಿದ ಜಮೀರ್ ನಡೆ

ತಮ್ಮ ವಿರುದ್ಧದ ಆರೋಪಗಳನ್ನು ಸಚಿವ ಜಮೀರ್‌ ಅಹಮದ್‌ ತಳ್ಳಿಹಾಕಿದ್ದು, ಅವರ ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಪಗಳ ಕುರಿತು ಸ್ಪಷ್ಟನೆ ನೀಡಿದ್ದರು.

"ನಾನು ಬಹಿರಂಗವಾಗಿಯೇ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೇಳಿದ್ದು ನಿಜ. ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಚುನಾವಣೆಯ ಕೊನೆಯ ದಿನಗಳಲ್ಲಿ ನಾನು ದಾವಣಗೆರೆಯಲ್ಲಿ ಪ್ರಚಾರ ನಡೆಸಿದ್ದೆʼʼ ಎಂದು ಸಮರ್ಥಿಸಿಕೊಂಡರೂ ಸಿಎಂ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಾದ ಬಳಿಕ ಏ.15 (ಮಂಗಳವಾರ) ರಂದು ನಸೀರ್‌ ಅಹಮದ್‌ ನಿವಾಸಕ್ಕೆ ಭೇಟಿ ನೀಡಿ ಗೌಪ್ಯ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಈ ಮಧ್ಯೆ, ಹೈಕಮಾಂಡ್‌ನಿಂದ ಶಿಸ್ತುಕ್ರಮಕ್ಕೆ ಒಳಗಾದರೆ ಸಚಿವ ಜಮೀರ್ ಅಹಮದ್ ಖಾನ್ ಅವರು ಪಕ್ಷಾಂತರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ತಮ್ಮ ಪರಮಾಪ್ತರಾದ ನಸೀರ್ ಅಹಮದ್ ಮತ್ತು ಅಬ್ದುಲ್ ಜಬ್ಬಾರ್ ಮೇಲೆ ಕಾಂಗ್ರೆಸ್ ವರಿಷ್ಠರು ಶಿಸ್ತುಕ್ರಮ ಜರುಗಿಸಿರುವುದು ಜಮೀರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದು ತಮ್ಮನ್ನು ಹಾಗೂ ತಮ್ಮ ಬೆಂಬಲಿಗರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ತಂತ್ರ ಇರಬಹುದು ಎಂದು ಭಾವಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಅಂತ ಪರಿಸ್ಥಿತಿ ಎದುರಾದರೆ ಜೆಡಿಎಸ್ ಪಕ್ಷಕ್ಕೆ ಮರಳುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ಗೆ ಆಗುವ ನಷ್ಟವೇನು?

ಒಂದು ವೇಳೆ ಜಮೀರ್ ಅಹ್ಮದ್ ಖಾನ್ ಪ್ರತ್ಯೇಕ ಪಕ್ಷ ಸ್ಥಾಪಿಸಿದರೆ ಅಥವಾ ಕಾಂಗ್ರೆಸ್ನಿಂದ ಹೊರಬಂದರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ. ಬೆಂಗಳೂರು, ದಾವಣಗೆರೆ ಮತ್ತು ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್‌ ಪಕ್ಷದಿಂದ ದೂರ ಉಳಿಯಬಹುದು ಎಂದು ವಿಶ್ಲೇಷಿಸಲಾಗಿದೆ.

ಜಮೀರ್ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಜಮೀರ್ ಅವರು ಪಕ್ಷದಿಂದ ಹೊರ ಹೋದರೆ ಸಿದ್ದರಾಮಯ್ಯ ಅವರ ಬಣದ ಶಕ್ತಿ ಕುಂದಬಹುದು ಎನ್ನಲಾಗಿದೆ.

ಮತವಿಭಜನೆಯಿಂದ ಬಿಜೆಪಿಗೆ ಲಾಭ?

ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರ ನಡುವಿನ ಆಂತರಿಕ ಬಿಕ್ಕಟ್ಟು ಬಿಜೆಪಿ ಅಭ್ಯರ್ಥಿ ಟಿ. ಶ್ರೀನಿವಾಸ್ ಅವರಿಗೆ ಅನುಕೂಲವಾಗಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಾಂಗ್ರೆಸ್‌ ಮತ ಬ್ಯಾಂಕ್‌ ಆಗಿದ್ದ ಮುಸ್ಲಿಂ ಸಮುದಾಯದಲ್ಲಿ ಮತ ವಿಭಜನೆಯಾಗಿರುವ ಕಾರಣ ಅದು ಶ್ರೀನಿವಾಸ್ ಅವರಿಗೆ ಲಾಭವಾಗಿದೆ. ಮುಸ್ಲಿಂ ಮತಗಳು ಎಸ್ಡಿಪಿಐ ಹಾಗೂ ಬಿಜೆಪಿ ಅಭ್ಯರ್ಥಿ ಪಾಲಾಗಿವೆ. ಇದರಿಂದ ಬಿಜೆಪಿ ಅಭ್ಯರ್ಥಿಯ ಗೆಲುವು ಸುಲಭವಾಗಲಿದೆ ಎಂಬ ಲೆಕ್ಕಾಚಾರ ಬಿಜೆಪಿ ಪಾಳಯದಲ್ಲಿ ನಡೆಯುತ್ತಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಈ ರಾಜಕೀಯ ಹಗ್ಗಜಗ್ಗಾಟವು ಕೇವಲ ಒಂದು ಕ್ಷೇತ್ರದ ಸೋಲು-ಗೆಲುವಿನ ಪ್ರಶ್ನೆಯಾಗದೇ ಅಲ್ಪಸಂಖ್ಯಾತ ಸಮುದಾಯದ ರಾಜಕೀಯ ಭವಿಷ್ಯಕ್ಕೂ ಹಿಡಿದ ಕನ್ನಡಿಯಂತಿದೆ.

Read More
Next Story