
ಕೇಂದ್ರದ ಎಸ್‌ಐಆರ್‌ಗೆ ಕಾಂಗ್ರೆಸ್ ಸರ್ಕಾರದ ಪ್ರತಿತಂತ್ರ? ಮನೆ ಬಾಗಿಲಿಗೆ ಜಾತಿ ಪ್ರಮಾಣ ಪತ್ರ, ಪಿಆರ್ಸಿ ಸೇವೆಗೆ ಚಾಲನೆ
ಕಂದಾಯ ಇಲಾಖೆಯ ಪ್ರಕಟಣೆ ಪ್ರಕಾರ, ಸುಮಾರು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರಗಳನ್ನು ಗ್ರಾಮವಾರು ವಿಂಗಡಿಸಿ ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದೆ
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ದೇಶಾದ್ಯಂತ ರಾಜಕೀಯ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರ ರಾಜ್ಯದಾದ್ಯಂತ ಮನೆ ಬಾಗಿಲಿಗೆ ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ವಿತರಿಸುವ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿದೆ. ಇದರ ಜತೆಗೆ ಮೊದಲ ಬಾರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಯನ್ನೂ ಜಾರಿಗೆ ತಂದಿದ್ದು, ಈ ಎರಡೂ ಕ್ರಮಗಳು ಎಸ್‌ಐಆರ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಪ್ರತಿತಂತ್ರ ಎಂಬ ರಾಜಕೀಯ ಚರ್ಚೆಗೆ ಕಾರಣವಾಗಿವೆ.
ರಾಜ್ಯ ಸರ್ಕಾರದ ಅಧಿಕೃತ ನಿಲುವಿನ ಪ್ರಕಾರ, ದಾಖಲೆಗಳ ಕೊರತೆಯಿಂದ ಅರ್ಹ ನಾಗರಿಕರು ಯಾವುದೇ ಸರ್ಕಾರಿ ಸೇವೆ ಅಥವಾ ಮತದಾರರ ಪಟ್ಟಿಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ. ಆದರೆ ಬಿಜೆಪಿ, ಎಸ್‌ಐಆರ್ ನಡೆಯುತ್ತಿರುವ ಸಂದರ್ಭದಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದು, ಇದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆರೋಪಿಸಿದೆ.
4.85 ಕೋಟಿ ಜಾತಿ ಪ್ರಮಾಣ ಪತ್ರಗಳ ಮನೆ-ಮನೆ ವಿತರಣೆ
ಕಂದಾಯ ಇಲಾಖೆಯ ಪ್ರಕಟಣೆ ಪ್ರಕಾರ, ಸುಮಾರು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರಗಳನ್ನು ಗ್ರಾಮವಾರು ವಿಂಗಡಿಸಿ ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದೆ. ಅವುಗಳನ್ನು ಮುದ್ರಿಸಿ ಫಲಾನುಭವಿಗಳ ಮನೆಗಳಿಗೆ ತಲುಪಿಸುವ ಕಾರ್ಯ ಆರಂಭವಾಗಿದೆ.
ಪ್ರಮಾಣ ಪತ್ರ ವಿತರಿಸಿದ ಬಳಿಕ ಫಲಾನುಭವಿಯ ಮೊಬೈಲ್ ಸಂಖ್ಯೆಯನ್ನು ದಾಖಲಿಸಿ, ವಿಶೇಷ ಮೊಬೈಲ್ ಆಪ್ ಮೂಲಕ ವಿತರಣೆಯ ವಿವರಗಳನ್ನು ದಾಖಲಿಸಲಾಗುತ್ತದೆ.
ನಾಲ್ಕು ವಿಧಾನಗಳಲ್ಲಿ ಸಾರ್ವಜನಿಕರಿಗೆ ಲಭ್ಯ
ಜಾತಿ ಪ್ರಮಾಣ ಪತ್ರವನ್ನು ಸಾರ್ವಜನಿಕರು ನಾಲ್ಕು ವಿಧಾನಗಳಲ್ಲಿ ಪಡೆಯಬಹುದಾಗಿದೆ. ಮನೆ-ಮನೆ ವಿತರಣೆ: ಮುದ್ರಿತ ಪ್ರಮಾಣ ಪತ್ರಗಳನ್ನು ನೇರವಾಗಿ ಮನೆಗಳಿಗೆ ತಲುಪಿಸಲಾಗುತ್ತದೆ. ವೆಬ್‌ಸೈಟ್ ಮೂಲಕ ಡೌನ್‌ಲೋಡ್: ಆರ್.ಡಿ. ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ವಿಶೇಷ ಪೋರ್ಟಲ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದು.
ಹೋಬಳಿ ಮಟ್ಟದ ಸಹಾಯ ಕೇಂದ್ರಗಳು: ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದ್ದು, ಅಲ್ಲಿ ಉಚಿತವಾಗಿ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಹಾಗೂ ಮುದ್ರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ವಾಟ್ಸ್ಆ್ಯಪ್ ಮತ್ತು ಎಸ್‌ಎಂಎಸ್: ಸುಮಾರು 85 ಲಕ್ಷ ಫಲಾನುಭವಿಗಳಿಗೆ ಈಗಾಗಲೇ ವಾಟ್ಸ್ಆ್ಯಪ್ ಅಥವಾ ಎಸ್‌ಎಂಎಸ್ ಮೂಲಕ ಡೌನ್‌ಲೋಡ್ ಲಿಂಕ್ ಕಳುಹಿಸಲಾಗಿದೆ.
ಹೊಸದಾಗಿ ಪಿಆರ್ಸಿ ಸೇವೆಗೆ ಚಾಲನೆ
ಜಾತಿ ಪ್ರಮಾಣ ಪತ್ರ ವಿತರಣೆಯ ಜೊತೆಗೆ ಸರ್ಕಾರ ಶಾಶ್ವತ ನಿವಾಸ ಪ್ರಮಾಣ ಪತ್ರ (PRC) ಸೇವೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಿದೆ. ನಾಗರಿಕರು ನಾಡಕಚೇರಿ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಸಿಎಸ್‌ಸಿ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಸೇವೆಯ ಉದ್ದೇಶ ರಾಜ್ಯದಲ್ಲಿ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡಲು ಏಕರೂಪದ, ಪಾರದರ್ಶಕ ಹಾಗೂ ಕಾನೂನುಬದ್ಧ ಕಾರ್ಯವಿಧಾನ ರೂಪಿಸುವುದಾಗಿದೆ ಎಂದು ಸರ್ಕಾರ ಹೇಳಿದೆ.
ಯಾರಿಗೆ ಸಿಗಲಿದೆ ಪಿಆರ್ಸಿ?
ತಹಶೀಲ್ದಾರ್ (ಗ್ರೇಡ್-2) ಅಗತ್ಯ ಪರಿಶೀಲನೆಯ ಬಳಿಕ ಅರ್ಜಿದಾರರು ಕರ್ನಾಟಕದ ನಿಜವಾದ ಮತ್ತು ಶಾಶ್ವತ ನಿವಾಸಿ ಎಂಬುದನ್ನು ಖಚಿತಪಡಿಸಿಕೊಂಡು ಪ್ರಮಾಣ ಪತ್ರ ನೀಡಲಿದ್ದಾರೆ.
ಅರ್ಹತೆ ಪರಿಶೀಲಿಸುವಾಗ ಈ ಅಂಶಗಳನ್ನು ಪರಿಗಣಿಸಲಾಗುತ್ತದೆ. ಕರ್ನಾಟಕದಲ್ಲಿ ಜನನವಾಗಿರಬೇಕು. ಅರ್ಜಿದಾರರು ಅಥವಾ ಅವರ ತಂದೆ-ತಾಯಿ ಅಥವಾ ಕಾನೂನುಬದ್ಧ ಪಾಲಕರು ಕನಿಷ್ಠ 10 ವರ್ಷಗಳ ಕಾಲ ಕರ್ನಾಟಕದಲ್ಲಿ ವಾಸವಾಗಿರಬೇಕು. ಕರ್ನಾಟಕದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ 10 ಶೈಕ್ಷಣಿಕ ವರ್ಷಗಳವರೆಗೆ ವ್ಯಾಸಂಗ ಮಾಡಿರಬೇಕು. ತಂದೆ-ತಾಯಿ, ಕಾನೂನುಬದ್ಧ ಪಾಲಕರು ಅಥವಾ ಪತಿ/ಪತ್ನಿ ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು. ಕರ್ನಾಟಕದಲ್ಲಿ ವಸತಿ ಅಥವಾ ಇತರೆ ಸ್ಥಿರಾಸ್ತಿಯ ಮಾಲೀಕತ್ವ ಅಥವಾ ಕಾನೂನುಬದ್ಧ ವಾರಸುದಾರರಾಗಿರಬೇಕು ಅಥವಾ ಆಸ್ತಿಯನ್ನು ಬಳಸುತ್ತಿರಬೇಕು ಎಂಬ ನಿಯಮಗಳನ್ನು ಕೊಡಲಾಗಿದೆ.
ಅಧಿಕಾರ ಯಾರಿಗೆ?
ತಹಶೀಲ್ದಾರ್ (ಗ್ರೇಡ್-2) ಪ್ರಮಾಣ ಪತ್ರ ನೀಡುವ ಪ್ರಾಧಿಕಾರವಾಗಿರುತ್ತಾರೆ. ಸಹಾಯಕ ಆಯುಕ್ತರು ಮೇಲ್ಮನವಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು ಪುನರ್ ಪರಿಶೀಲನಾ ಪ್ರಾಧಿಕಾರರಾಗಿರುತ್ತಾರೆ.
PRC ಎಂದರೆ ಪೌರತ್ವ ಪ್ರಮಾಣ ಪತ್ರವಲ್ಲ
ಸರ್ಕಾರ ಸ್ಪಷ್ಟಪಡಿಸಿರುವಂತೆ, PRC ಭಾರತೀಯ ಪೌರತ್ವವನ್ನು ನೀಡುವ ದಾಖಲೆ ಅಲ್ಲ. ಇದು ಕರ್ನಾಟಕದಲ್ಲಿ ಶಾಶ್ವತವಾಗಿ ವಾಸಿಸುತ್ತಿರುವುದನ್ನು ದೃಢೀಕರಿಸುವ ಆಡಳಿತಾತ್ಮಕ ದಾಖಲೆ ಮಾತ್ರ. ಶಿಕ್ಷಣ, ಸರ್ಕಾರಿ ಉದ್ಯೋಗ, ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ಉದ್ದೇಶಗಳಿಗೆ ಇದನ್ನು ಬಳಸಬಹುದು. ಭಾರತ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂದರ್ಭದಲ್ಲಿ ಮತದಾರರು ತಮ್ಮ ಹೆಸರು ಉಳಿಸಿಕೊಳ್ಳಲು ವಿವಿಧ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಸಮರ್ಥ ರಾಜ್ಯ ಪ್ರಾಧಿಕಾರ ನೀಡಿರುವ ಕಾಯಂ ನಿವಾಸ ಪ್ರಮಾಣಪತ್ರಗಳನ್ನು ಪರಿಗಣಿಸಬಹುದು.
ಈ ಹಿನ್ನೆಲೆಯಲ್ಲಿ ದಾಖಲೆಗಳಿಲ್ಲದ ಅರ್ಹ ನಾಗರಿಕರಿಗೆ ಅಗತ್ಯ ದಾಖಲೆಗಳನ್ನು ಸುಲಭವಾಗಿ ಒದಗಿಸಲು ಸರ್ಕಾರ ಈ ಅಭಿಯಾನ ಆರಂಭಿಸಿದೆ ಎಂದು ಕಂದಾಯ ಇಲಾಖೆ ಹೇಳಿದೆ.
ಬಿಜೆಪಿ ಆಕ್ಷೇಪವೇನು?
ಬಿಜೆಪಿ ನಾಯಕರು ಎಸ್‌ಐಆರ್ ನಡೆಯುತ್ತಿರುವ ಸಂದರ್ಭದಲ್ಲೇ ಪಿಆರ್ಸಿ ವಸೇವೆ ಆರಂಭಿಸಿರುವುದರ ಸಮಯವನ್ನು ಪ್ರಶ್ನಿಸಿದ್ದಾರೆ. ಸಂವಿಧಾನದಲ್ಲಿ ''ಕಾಯ ನಿವಾಸ ಪ್ರಮಾಣಪತ್ರ " ಎಂಬ ಪ್ರತ್ಯೇಕ ವರ್ಗವನ್ನು ರಾಜ್ಯ ಸರ್ಕಾರ ಸೃಷ್ಟಿಸಲು ಸಾಧ್ಯವಿಲ್ಲ, ಈ ಪ್ರಮಾಣ ಪತ್ರವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಹಾಗೂ ಅಕ್ರಮ ವಲಸಿಗರಿಗೂ ಅನುಕೂಲವಾಗಬಹುದು ಎಂದು ಆರೋಪಿಸಿದ್ದಾರೆ.
ಸರ್ಕಾರದದ ಉತ್ತರವೇನು?
ರಾಜ್ಯ ಸರ್ಕಾರ ಈ ಆರೋಪಗಳನ್ನು ತಳ್ಳಿಹಾಕಿದೆ. ಪಿಆರ್ಸಿ ಹೊಸ ಪೌರತ್ವ ದಾಖಲೆ ಅಲ್ಲ, ರಾಜ್ಯದಲ್ಲಿ ದೀರ್ಘಕಾಲದಿಂದ ನೀಡಲಾಗುತ್ತಿರುವ ನಿವಾಸ ಪ್ರಮಾಣ ಪತ್ರ ವ್ಯವಸ್ಥೆಯನ್ನು ಇನ್ನಷ್ಟು ವ್ಯವಸ್ಥಿತಗೊಳಿಸಿ, ಏಕರೂಪಗೊಳಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜಾತಿ ಪ್ರಮಾಣ ಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುವುದು ಹಾಗೂ ಪಿಆರ್ಸಿ ಸೇವೆಯನ್ನು ಆರಂಭಿಸುವುದರ ಉದ್ದೇಶ ನಾಗರಿಕರಿಗೆ ದಾಖಲೆಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದೇ ಹೊರತು ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಸರ್ಕಾರ ಹೇಳಿದೆ.

