ಡಿಕೆಶಿ, ಸಿದ್ದರಾಮಯ್ಯ ಸಂಪುಟ ಕಸರತ್ತಿಗೆ ದೆಹಲಿಯಲ್ಲಿ ತಡೆ, ಎಂ.ಕೆ.ಪ್ರಾಣೇಶ್‌ಗೆ ಸುಪ್ರೀಂಕೋರ್ಟ್ ಶಾಕ್, ಎಚ್‌ಎಂಟಿ ಭೂ-ಒತ್ತುವರಿಗೆ ಡಿಕೆಶಿಯೇ ಕಾರಣ
AICC ಆಧ್ಯಕ್ಷ ಸಿಗದ ಕಾರಣ ನಾಯಕರು ವಾಪಸ್?, ಮೇಲ್ಮನೆ ಸದಸ್ಯತ್ವ ಅಸಿಂಧುಗೊಳಿಸಿದ ನ್ಯಾಯಾಲಯ, HMT ವಿವಾದ ಎಚ್‌ಡಿಕೆ ಗಂಭೀರ ಆರೋಪ
ರಾಜ್ಯ ರಾಜಕೀಯ ಅಖಾಡದಲ್ಲಿ ಇದೀಗ ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಕಗ್ಗಂಟು ಮುಂದುವರಿದಿದೆ. ಆಡಳಿತರೂಢ ಕಾಂಗ್ರೆಸ್ ಸರ್ಕಾರದಲ್ಲಿ ಖಾಲಿಯಿರುವ 20 ಸಚಿವ ಸ್ಥಾನಗಳ ಭರ್ತಿ ಮಾಡುವ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದ ಕಾಂಗ್ರೆಸ್‌ನಾಯಕರು ಸಚಿವ ಸಂಪುಟ ವಿಸ್ತರಣೆ ಸಂಬಂಧ ಯಾವುದೇ ತೀರ್ಮಾನ ಕೈಗೊಂಡಿಲ್ಲ. ದೆಹಲಿಯ ಹೈಕಮಾಂಡ್ ಮಟ್ಟದಲ್ಲಿ ನಡೆದ ಸರಣಿ ಚರ್ಚೆಗಳು, ಪ್ರಸ್ತುತ ಯಾವುದೇ ಒಮ್ಮತ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ಇಲ್ಲದ ಕಾರಣ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿದೆ.
ಖಾಲಿ ಇರುವ 20 ಸ್ಥಾನಗಳಿಗಾಗಿ ಈಗಾಗಲೇ 70ಕ್ಕೂ ಹೆಚ್ಚು ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿದ್ದು, ಇದು ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಾಜ್ಯ ಕಾಂಗ್ರೆಸ್‌ಉಸ್ತುವಾರಿ ರಣದೀಪ್‌ಸಿಂಗ್‌ಸುರ್ಜೆವಾಲ್, ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್‌ಜತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಸೇರಿದಂತೆ ಇತರೆ ಮುಖಂಡರು ಸಭೆ ನಡೆಸಿದ್ದಾರೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರನ್ನು ರಾಜ್ಯ ನಾಯಕರು ಭೇಟಿಯಾಗಿದ್ದರೂ, ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ನಡೆಸಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ಇಲ್ಲದ ಕಾರಣ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಸಚಿವ ಸಂಪುಟ ವಿಸ್ತರಣೆಯ ಪಟ್ಟಿ ಅಂತಿಮಗೊಳ್ಳಲಿದೆ. ಸಚಿವರ ಪಟ್ಟಿ ಅಂತಿಮಗೊಂಡ ಬಳಿಕವಷ್ಟೇ ಸಚಿವ ಸಂಪುಟ ವಿಸ್ತರಣೆ ಕಾರ್ಯ ನಡೆಯಲಿದೆ.
ಪ್ರಾಣೇಶ್ ಸದಸ್ಯತ್ವ ಅಸಿಂಧು
ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮತ್ತು ಸುದೀರ್ಘಕಾಲದ ಕಾನೂನು ಸಮರವಾಗಿದ್ದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಮೇಲ್ಮನೆ ಉಪಸಭಾಪತಿಯಾಗಿದ್ದ ಎಂ.ಕೆ. ಪ್ರಾಣೇಶ್ ಅವರಿಗೆ ಸುಪ್ರೀಂಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದ್ದು, ಅವರ ವಿಧಾನ ಪರಿಷತ್ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ.
2021ರ ಡಿಸೆಂಬರ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯು ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿತ್ತು. ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ.ಕೆ. ಪ್ರಾಣೇಶ್ ಮತ್ತು ಗಾಯತ್ರಿ ಶಾಂತೇಗೌಡ ಅವರ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿತ್ತು. ಚುನಾವಣೆಯಲ್ಲಿ ಒಟ್ಟು 2,410 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ 39 ಮತಗಳು ಅಸಿಂಧುವಾಗಿದ್ದವು. ಫಲಿತಾಂಶ ಪ್ರಕಟವಾದಾಗ, ಎಂ.ಕೆ. ಪ್ರಾಣೇಶ್ ಅವರು 1,188 ಮತಗಳನ್ನು ಪಡೆದು ವಿಜೇತರಾಗಿದ್ದರೆ, ಗಾಯತ್ರಿ ಶಾಂತೇಗೌಡ ಅವರು 1,182 ಮತಗಳನ್ನು ಪಡೆದಿದ್ದರು. ಕೇವಲ 6 ಮತಗಳ ಅಂತರದಿಂದ ಪ್ರಾಣೇಶ್ ಗೆಲುವು ಸಾಧಿಸಿದ್ದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂಬ ವಾದವನ್ನು ಮುಂದಿಟ್ಟು ಗಾಯತ್ರಿ ಶಾಂತೇಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದರು. ನಾಮನಿರ್ದೇಶಿತ ಸದಸ್ಯರು ಚಲಾಯಿಸಿದ ಮತಗಳನ್ನು ಪ್ರತ್ಯೇಕಿಸಿ, ಮರು ಮತಎಣಿಕೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಎಂ.ಕೆ. ಪ್ರಾಣೇಶ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ವಿಚಾರಣೆಯ ಹಂತದಲ್ಲಿ, ಚುನಾವಣಾ ಆಯೋಗದಿಂದ ಅಗತ್ಯ ಮಾಹಿತಿಗಳನ್ನು ಪಡೆದು ಮುಚ್ಚಿದ ಲಕೋಟೆಯಲ್ಲಿ ಮರು ಮತಎಣಿಕೆಯ ಫಲಿತಾಂಶವನ್ನು ಸಲ್ಲಿಸುವಂತೆ ನಿರ್ದೇಶಿಸಿತ್ತು. ಸುದೀರ್ಘ ವಿಚಾರಣೆಯ ನಂತರ, ಸುಪ್ರೀಂಕೋರ್ಟ್ ಇದೀಗ ಎಂ.ಕೆ. ಪ್ರಾಣೇಶ್ ಅರ್ಜಿಯನ್ನು ವಜಾಗೊಳಿಸಿದೆ. ಈ ಬೆಳವಣಿಗೆಯಿಂದ ಗಾಯತ್ರಿ ಶಾಂತೇಗೌಡ ಅವರಿಗೆ ದೊಡ್ಡ ಜಯ ದೊರೆತಂತಾಗಿದೆ.
ಪರಿಶೀಲನೆ ಸ್ವಾಗತಾರ್ಹ - ಖಂಡ್ರೆ
ಬೆಂಗಳೂರಿನ ಹೃದಯಭಾಗದಲ್ಲಿರುವ ಎಚ್‌ಎಂಟಿ ಸಂಸ್ಥೆಗೆ ಸೇರಿದ ನೂರಾರು ಎಕರೆ ಭೂಮಿಯು ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಕೈಗಾರಿಕಾ ಉದ್ದೇಶಕ್ಕಾಗಿ ದಶಕಗಳ ಹಿಂದೆ ಸ್ವಾಧೀನಪಡಿಸಿಕೊಂಡಿದ್ದ ಈ ಭೂಮಿಯ ಬಳಕೆ, ಅರಣ್ಯ ಪ್ರದೇಶದ ಸಂರಕ್ಷಣೆ ಮತ್ತು ಒತ್ತುವರಿ ಆರೋಪಗಳ ಸುತ್ತ ಈಶ್ವರ ಖಂಡ್ರೆ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ನಡುವೆ ವಾಕ್ಸಮರ ತಾರಕಕ್ಕೇರಿದೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಚ್‌ಎಂಟಿ ಪ್ರದೇಶಕ್ಕೆ ಭೇಟಿ ನೀಡಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದ ಕಾಲಘಟ್ಟದಲ್ಲೇ ಎಚ್‌ಎಂಟಿ ಭೂಮಿಯ ಒತ್ತುವರಿ ಮತ್ತು ಕಟ್ಟಡಗಳ ನಿರ್ಮಾಣಕ್ಕೆ ಅಡಿಪಾಯ ಬಿದ್ದಿದೆ ಎಂದು ಆರೋಪಿಸಿದರು.
ಈ ನಡುವೆ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದನ್ನು ಸ್ವಾಗತಿಸುತ್ತೇನೆ. ಕುಮಾರಸ್ವಾಮಿ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳೂ ಆಗಿದ್ದಾರೆ. ರಾಜ್ಯದ 7 ಕೋಟಿ ಜನರ ಆಸ್ತಿಯಾದ ಈ ಬೆಲೆಬಾಳುವ ಪ್ರದೇಶವನ್ನು ಬೆಂಗಳೂರು ಉತ್ತರದ ನಿವಾಸಿಗಳಿಗೆ ಉತ್ತಮ ಶ್ವಾಸತಾಣವಾಗಿ ಉಳಿಸಬೇಕು. ಭೂಮಿಯನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕು ಎಂದು ತಿಳಿಸಿದರು.

