
ನಿನ್ನೆ ಸಂಜೆ ಚಾರ್ಮಾಡಿ ಘಾಟಿಯ ಮಲಯ ಮಾರುತ ಪ್ರವಾಸಿ ತಾಣದಿಂದ ಅಣ್ಣಪ್ಪಸ್ವಾಮಿ ದೇವಸ್ಥಾನದವರೆಗಿನ ಗುಡ್ಡಗಾಡು ಪ್ರದೇಶದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ.
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ಬೆಂಕಿ ನಂದಿಸಲು ಹರಸಾಹಸ
ಬೇಸಿಗೆಯ ಬಿಸಿಲಿನ ತಾಪ ಹಾಗೂ ಜೋರಾಗಿ ಬೀಸುತ್ತಿರುವ ಗಾಳಿಯ ಪರಿಣಾಮವಾಗಿ, ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಮಾತ್ರದಲ್ಲಿ ದೈತ್ಯಾಕಾರವಾಗಿ ಬೆಳೆದು ಅರಣ್ಯದ ಒಳಭಾಗಕ್ಕೆ ವ್ಯಾಪಿಸಿದೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಹಾಗೂ ಜೀವವೈವಿಧ್ಯದ ತಾಣವಾಗಿರುವ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಭಾರಿ ಪ್ರಮಾಣದ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಮುಗಿಲೆತ್ತರದ ಬೆಟ್ಟ-ಗುಡ್ಡಗಳಿಂದ ಆವೃತ್ತವಾಗಿರುವ ಅರಣ್ಯ ಪ್ರದೇಶದಲ್ಲಿ ಬೆಂಕಿ ವೇಗವಾಗಿ ಹಬ್ಬುತ್ತಿದ್ದು, ಅಪಾರ ಪ್ರಮಾಣದ ವನಸಂಪತ್ತು ಬೆಂಕಿಗಾಹುತಿಯಾಗುತ್ತಿರುವ ಆತಂಕಕಾರಿ ಘಟನೆ ನಡೆದಿದೆ.
ನಿನ್ನೆ ಸಂಜೆ ಚಾರ್ಮಾಡಿ ಘಾಟಿಯ ಮಲಯ ಮಾರುತ ಪ್ರವಾಸಿ ತಾಣದಿಂದ ಅಣ್ಣಪ್ಪಸ್ವಾಮಿ ದೇವಸ್ಥಾನದವರೆಗಿನ ಗುಡ್ಡಗಾಡು ಪ್ರದೇಶದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಬೇಸಿಗೆಯ ಬಿಸಿಲಿನ ತಾಪ ಹಾಗೂ ಜೋರಾಗಿ ಬೀಸುತ್ತಿರುವ ಗಾಳಿಯ ಪರಿಣಾಮವಾಗಿ, ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಮಾತ್ರದಲ್ಲಿ ದೈತ್ಯಾಕಾರವಾಗಿ ಬೆಳೆದು ಅರಣ್ಯದ ಒಳಭಾಗಕ್ಕೆ ವ್ಯಾಪಿಸಿದೆ. ಇದರಿಂದಾಗಿ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರವಲಯದಲ್ಲಿನ ಅಪರೂಪದ ಸಸ್ಯರಾಶಿಗಳು ಸುಟ್ಟು ಕರಕಲಾಗುತ್ತಿವೆ.
ವಿಷಯ ತಿಳಿದ ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ, ಬೆಂಕಿ ಬಿದ್ದಿರುವ ಪ್ರದೇಶವು ಕಡಿದಾದ ಬೆಟ್ಟಗಳು ಮತ್ತು ಪ್ರಪಾತಗಳಿಂದ ಕೂಡಿದ್ದು, ಅಗ್ನಿಶಾಮಕ ವಾಹನಗಳು ಅಲ್ಲಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಬ್ಬಂದಿ ನಡೆದುಕೊಂಡೇ ತೆರಳಿ, ಸಾಂಪ್ರದಾಯಿಕ ವಿಧಾನಗಳ ಮೂಲಕ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸದ್ಯಕ್ಕೆ ಬೆಂಕಿ ನಿಯಂತ್ರಣಕ್ಕೆ ಬಾರದೆ ಉರಿಯುತ್ತಿದ್ದು, ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಮುಂದುವರಿಸಿದೆ.

