
ಯಕ್ಷಗಾನ ಕಲಾವಿದರಿಗೆ ನಿಂದನೆ; ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಎಫ್ಐಆರ್
ಏ.11ರಂದು ಹಾಸ್ಯ ಕಲಾವಿದ ಪ್ರಜ್ವಲ್ ಗುರುನಾಯನಕೆರೆ ಅವರಿಗೆ ಕರೆ ಮಾಡಿದ್ದ ತಿಮರೋಡಿ ಅವರು ಕಲಾವಿದರಾದ ದಿನೇಶ್ ಶೆಟ್ಟಿಗಾರ್ ಮತ್ತು ಚಿತ್ರನಟ ಮಂದಾರ ಸುಂದರ ರೈ ಅವರ ವಿರುದ್ಧ ಕೆಂಡಕಾರಿದ್ದಾರೆ ಎಂದು ಆರೋಪಿಸಲಾಗಿದೆ.
ಯಕ್ಷಗಾನ ಕಲಾವಿದರನ್ನು ನಿಂದಿಸಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ಧರ್ಮಸ್ಥಳದ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಎರಡು ಎಫ್‌ಐಆರ್ ದಾಖಲಾಗಿವೆ.
ಬುರುಡೆ ಗ್ಯಾಂಗ್ ಹೆಸರಿನ ಯಕ್ಷಗಾನ ಪ್ರಸಂಗದ ವಿಚಾರವಾಗಿ ಕಲಾವಿದರನ್ನು ನಿಂದಿಸಿದ ಕಾರಣ ತಿಮರೋಡಿ ವಿರುದ್ಧ ಪುತ್ತೂರಿನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಬುರುಡೆ ಗ್ಯಾಂಗ್ ಎಂಬ ಯಕ್ಷಗಾನ ಪ್ರಸಂಗ ಸಿದ್ಧವಾಗಿತ್ತು. ಈ ಪ್ರಸಂಗದ ಕಥೆಯು ಧರ್ಮಸ್ಥಳದಲ್ಲಿ ನಡೆದಿದ್ದ ವಿವಾದಾತ್ಮಕ ಘಟನೆಗಳನ್ನು ಹೋಲುವಂತಿದೆ ಎಂಬ ಕಾರಣಕ್ಕೆ ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಏ.11ರಂದು ಹಾಸ್ಯ ಕಲಾವಿದ ಪ್ರಜ್ವಲ್ ಗುರುನಾಯನಕೆರೆ ಅವರಿಗೆ ಕರೆ ಮಾಡಿದ್ದ ತಿಮರೋಡಿ, ಈ ಪ್ರಸಂಗದಲ್ಲಿ ಭಾಗಿಯಾಗಿರುವ ಕಲಾವಿದರಾದ ದಿನೇಶ್ ಶೆಟ್ಟಿಗಾರ್ ಮತ್ತು ಚಿತ್ರನಟ ಮಂದಾರ ಸುಂದರ ರೈ ಅವರ ವಿರುದ್ಧ ಕೆಂಡಕಾರಿದ್ದಾರೆ ಎಂದು ಆರೋಪಿಸಲಾಗಿದೆ.
ಆಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ಆಡಿಯೋದಲ್ಲಿ ತಿಮರೋಡಿ ಅವರು ಕಲಾವಿದರ ತಾಯಂದಿರ ಚಾರಿತ್ರ್ಯದ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
"ಒಂದು ಮಗುವಿಗೆ ಅನ್ಯಾಯವಾದಾಗ ನಾವು ಹೋರಾಟ ಮಾಡುತ್ತಿದ್ದೇವೆ. ಇವರು ಅದನ್ನು ಹಾಸ್ಯ ಮಾಡುತ್ತಾರೆ, ಕಥೆ ಬರೆಯುತ್ತಾರೆ. ಹೊಟ್ಟೆಪಾಡಿಗೆ ಯಕ್ಷಗಾನ ಮಾಡಲಿ, ಆದರೆ, ಇಂತಹ ಕಥೆಗಳು ಯಾಕೆ?, ಯಕ್ಷಗಾನಕ್ಕೊಂದು ಮರ್ಯಾದೆ ಇಲ್ವಾ?" ಎಂದು ಪ್ರಶ್ನಿಸುತ್ತಲೇ ಕಲಾವಿದರಿಗೆ ಎಚ್ಚರಿಕೆ ಸಂದೇಶ ನೀಡಿರುವುದು ವಿಡಿಯೋದಲ್ಲಿದೆ.
ಕಾನೂನು ಕ್ರಮಕ್ಕೆ ಒತ್ತಾಯ
ನಟ ಮಂದಾರ ಸುಂದರ ರೈ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ತಿಮರೋಡಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನೊಂದೆಡೆ ಕಲಾವಿದ ದಿನೇಶ್ ಶೆಟ್ಟಿಗಾರ್ ಅವರ ತಾಯಿ ಲೀಲಾವತಿ ಶೆಟ್ಟಿಗಾರ್ ಅವರು ನೀಡಿದ ದೂರಿನನ್ವಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಈ ಘಟನೆಯು ಕರಾವಳಿಯ ಯಕ್ಷಗಾನ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕಲಾವಿದರ ಮೇಲಿನ ವೈಯಕ್ತಿಕ ನಿಂದನೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

